ನೇಪಾಳ ಪ್ರವಾಹ: 30 ನಿಮಿಷದಲ್ಲಿ ಬದುಕು, ಪ್ರಕೃತಿ ಸೌಂದರ್ಯ ತಾರುಮಾರು, ಕಾಣೆಯಾದವರಿಗಾಗಿ ನಡೆದಿದೆ ಹುಡುಕಾಟ!
ನೇಪಾಳ ಪ್ರವಾಹವು ಕೇವಲ 30 ನಿಮಿಷದಲ್ಲಿ ಬದುಕು, ಪ್ರಕೃತಿ ಸೌಂದರ್ಯ ತಲೆಕೆಳಗು ಮಾಡಿದೆ. ತಮ್ಮವರನ್ನು ಕಳೆದುಕೊಂಡವರಿಗಾಗಿ ಜನರು ಇನ್ನಿಲ್ಲದ ಪ್ರಯತ್ನ ಮುಂದುವರಿಸಿದ್ದಾರೆ.

Published : August 31, 2026 at 5:58 PM IST
ನೇಪಾಳದಲ್ಲಿ ಹಠಾತ್ ಆಗಿ ಉಂಟಾದ ಪ್ರವಾಹವು ಪ್ರಾಣ ಹಾನಿ ಮಾತ್ರವಲ್ಲದೇ, ಬದುಕನ್ನೇ ತಾರುಮಾರು ಮಾಡಿದೆ. ಕೆಲ ದಿನಗಳ ಹಿಂದೆ ನಾನು ನೇಪಾಳದ ಲ್ಯಾಂಗ್ಟಾಂಗ್ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿ ಹಿಂದಿರುಗಿದ್ದೆ. ಇದೀಗ, ವಾಪಸ್ ನೇಪಾಳಕ್ಕೆ ಬಂದು ಕಠ್ಮಂಡುವಿನ ತ್ರಿಭುವನ್ ವಿಶ್ವವಿದ್ಯಾಲಯ ಬೋಧನಾ ಆಸ್ಪತ್ರೆಯ ಹೊರಗೆ ನಿಂತಿದ್ದೆ. ಅಲ್ಲಿ ಹಠಾತ್ ಪ್ರವಾಹ ಮತ್ತು ಭೂಕುಸಿತಗಳಲ್ಲಿ ಗಾಯಗೊಂಡ ಸುಮಾರು 60 ಜನರು ಚಿಕಿತ್ಸೆ ಪಡೆಯುತ್ತಿರುವುದನ್ನು ಕಂಡೆ.
ಅಲ್ಲಿ ನಾನು ಕಲ್ಪನಾ ಮತ್ತು ಕೊಪಿಲಾ ಶ್ರೇಷ್ಠಾ ಎಂಬ ಇಬ್ಬರನ್ನು ಭೇಟಿಯಾದೆ. ಈ ಇಬ್ಬರು ಸಹೋದರಿಯರು ತಮ್ಮ ಕುಟುಂಬದ ಉಳಿದ 10 ಮಂದಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದರು. ದುರಾದೃಷ್ಟವಶಾತ್ ಅವರೆಲ್ಲರೂ ಭೀಕರ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ.
ವಿಜ್ಞಾನಿಗಳು ನಂಬುವಂತೆ, ಹಿಮಾಲಯದ ನೇಪಾಳ - ಟಿಬೆಟ್ ಗಡಿಯ ಬಳಿ ಲ್ಯಾಂಗ್ಟಾಂಗ್ ಲಿರುಂಗ್ ಶಿಖರದಿಂದ ಮುರಿದುಬಿದ್ದ ದೊಡ್ಡ ಮಂಜುಗಡ್ಡೆ ಮತ್ತು ಬಂಡೆಗಳು ಈ ದುರಂತಕ್ಕೆ ಕಾರಣ. ಇದು ಲ್ಯಾಂಗ್ಟಾಂಗ್ ರಾಷ್ಟ್ರೀಯ ಉದ್ಯಾನದ ಭಾಗವೂ ಹೌದು.
ಭಾರಿ ಪ್ರಮಾಣದ ಮಂಜುಗಡ್ಡೆ ಮತ್ತು ಬಂಡೆಗಲ್ಲು ಕೆಳಗಿನ ಕಣಿವೆಗೆ ಅಪ್ಪಳಿಸಿದೆ. ಇದರಿಂದ ಪ್ರವಾಹ ಉಂಟಾಗಿ ನೇಪಾಳ - ಟಿಬೆಟ್ ಗಡಿ ಮತ್ತು ಪಟ್ಟಣಗಳು, ಇತರ ಸ್ಥಳವನ್ನು ಆಪೋಷನ ಪಡೆದುಕೊಂಡಿದೆ.
ನೇಪಾಳ ಮತ್ತು ಚೀನಾದ ಟಿಬೆಟ್‌ನಾದ್ಯಂತ 700ಕ್ಕೂ ಅಧಿಕ ಮಂದಿ ಈ ಪ್ರವಾಹದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. 2,400 ಕ್ಕೂ ಹೆಚ್ಚು ಜನರು ಇನ್ನೂ ಕಾಣೆಯಾಗಿದ್ದಾರೆ. ಕಲ್ಪನಾ ಮತ್ತು ಕೋಪಿಲಾ ಅವರಂತೆ ಆಸ್ಪತ್ರೆಯ ಗೋಡೆಯ ಮೇಲೆ ತಮ್ಮವರ ಫೋಟೋಗಳನ್ನು ಅಂಟಿಸುತ್ತಿದ್ದಾರೆ.

ದುರಂತ ಸಂಭವಿಸಿ ಆರು ದಿನ ಕಳೆದಿದೆ. ಈವರೆಗೂ ತಮ್ಮವರ ಬಗ್ಗೆ ಯಾವುದೇ ಮಾಹಿತಿ ಬಾರದ ಕಾರಣ ಅವರ ಕುಟುಂಬ ಸದಸ್ಯರಲ್ಲಿ ಹತಾಶೆ ಹೆಚ್ಚುತ್ತಿದೆ. ಮಕ್ಕಳು ಮತ್ತು ಹಿರಿಯರ ಮುಖಗಳಲ್ಲಿ ನೋವು ಕಾಣಿಸುತ್ತಿದೆ. ನೇಪಾಳವು ಈ ಹಿಂದೆ ಅನೇಕ ವಿಪತ್ತುಗಳನ್ನು ಕಂಡಿದೆ. ಆದರೆ, ಇದು ಅತ್ಯಂತ ಭೀಕರ. ನಾನು ಕಲ್ಪನಾ ಅವರಿಗೆ ಕಾಣೆಯಾದ ಅವರ ಕುಟುಂಬ ಸದಸ್ಯರ ಫೋಟೋಗಳನ್ನು ಆಸ್ಪತ್ರೆಯ ಗೋಡೆಯ ಮೇಲೆ ಅಂಟಿಸಲು ಸಹಾಯ ಮಾಡಿದೆ.
ಕಾಣೆಯಾದ ನಮ್ಮವರ ಫೋಟೋಗಳನ್ನು ಇಲ್ಲಿ ಮಾತ್ರವಲ್ಲ ಸಾಮಾಜಿಕ ಮಾಧ್ಯಗಳಲ್ಲೂ ಹಂಚುತ್ತಿದ್ದೇವೆ. ಅವರ ಬಗ್ಗೆ ಈವರೆಗೂ ಯಾವುದೇ ಮಾಹಿತಿ ಇಲ್ಲ ಎಂದು ಹೇಳುತ್ತಿದ್ದಾಗ ಅವರ ಮಾತು ಗದ್ಗದಿತವಾದರೆ, ಕೈ ಬೆರಳುಗಳು ನಡುಗುತ್ತಿದ್ದವು.
ಪ್ರವಾಹ ಉಂಟಾಗಿ 24 ಗಂಟೆಗಳ ನಂತರವೇ ರಕ್ಷಣಾ ಪಡೆಗಳು ಬೆತ್ರಾವತಿ ಗ್ರಾಮವನ್ನು ತಲುಪಿದವು. ಕಾಣೆಯಾದವರನ್ನು ಪತ್ತೆಹಚ್ಚಲು ಮತ್ತು ರಕ್ಷಿಸಲು ಸರ್ಕಾರ ಸಾಕಷ್ಟು ಕೆಲಸ ಮಾಡುತ್ತಿಲ್ಲ ಎಂದು" ಎಂದು ಕಲ್ಪನಾ ದೂರಿದರು.
ನುವಕೋಟ್ - ರಸುವ ಗಡಿಯಲ್ಲಿರುವ ಬೆತ್ರಾವತಿಯನ್ನು ಉತ್ತರ ಗಯಾ ಎಂದೂ ಕರೆಯುತ್ತಾರೆ. ಇದು ಕಠ್ಮಂಡುವಿನಿಂದ 60 ಕಿಮೀ ದೂರ ಉತ್ತರ ಭಾಗದಲ್ಲಿದೆ.
"ನಮ್ಮವರು ಜೀವಂತವಾಗಿ ಸಿಗುತ್ತಾರೆಂಬ ನಂಬಿಕೆ ಇಲ್ಲ. ಆದರೂ, ಅವರಿಗಾಗಿ ಮಾಡಬಹುದಾದ ಕನಿಷ್ಠ ಪ್ರಯತ್ನ ಮಾಡುತ್ತಿದ್ದೇವೆ" ಎಂದು ಇನ್ನೊಬ್ಬ ಸಹೋದರಿ ಕೊಪಿಲಾ ಹೇಳಿದರು.
ಆಸ್ಪತ್ರೆಯ ಮುಂಭಾಗ 'ಫೋಟೋ ಗೋಡೆ': ಆಸ್ಪತ್ರೆಯ ಹೊರಗಿನ ಭಾಗದಲ್ಲಿರುವ ಗೋಡೆಗಳ ಮೇಲೆ ಕಾಣೆಯಾದವರ ಫೋಟೋಗಳನ್ನು ಅವರ ಕುಟುಂಬಸ್ಥರು ತಂದು ಅಂಟಿಸುತ್ತಿದ್ದಾರೆ. ಒಂದು ಪೋಸ್ಟರ್‌ನಲ್ಲಿ ಗಡಿಯಲ್ಲಿರುವ ಗೈರಾಂಗ್ ಬಂದರಿನಿಂದ ಕಾಣೆಯಾದ ಇಬ್ಬರು ದಕ್ಷಿಣ ಆಫ್ರಿಕಾದ ಹಿಂದೂಗಳ ಫೋಟೋಗಳನ್ನು ಅಂಟಿಸಲಾಗಿದೆ.
ತಮ್ಮವರನ್ನು ಕಳೆದುಕೊಂಡ ಮಹಿಳೆಯೊಬ್ಬರು ಆ ಗೋಡೆಯ ಮುಂದೆ ಕಣ್ಣೀರು ಸುರಿಸುತ್ತಾ ನಿಂತಿದ್ದಳು. "ವಾಹನ ಚಾಲಕನಾಗಿದ್ದ ನನ್ನ ಸಹೋದರನನ್ನು ಹುಡುಕುತ್ತಿದ್ದೇನೆ. ಟಿಬೆಟ್ ಗಡಿಗೆ ಹೋಗುತ್ತಿದ್ದಾಗ ಆತ ಟ್ರಕ್ ಸಮೇತ ನಾಪತ್ತೆಯಾಗಿದ್ದಾನೆ ಎಂದು ಆಕೆ ತಿಳಿಸಿದರು.
ಇನ್ನಷ್ಟು ಕರುಣಾಜನಕ ಕಥೆಗಳು: ಯಾವುದೇ ಮುನ್ಸೂಚನೆಯಿಲ್ಲದೇ ಹಠಾತ್ತನೆ ಬಂದ ಪ್ರವಾಹದಲ್ಲಿ ನೂರಾರು ಜನರು ಕೊಚ್ಚಿಹೋಗಿದ್ದಾರೆ.
ವೇಗವಾಗಿ ಹರಿಯುತ್ತಿರುವ ಪ್ರವಾಹದ ನೀರಿನಿಂದ ಇಡೀ ಪ್ರದೇಶಗಳು ಮುಳುಗಿರುವುದನ್ನು ವಿಡಿಯೋಗಳಲ್ಲಿ ಕಾಣಬಹುದು. ಮನೆಗಳು, ಕಟ್ಟಡಗಳ ಮೇಲೆ ನೀರು ಹರಿದು ಬಂದಿದ್ದರಿಂದ ಜನರು ತಪ್ಪಿಸಿಕೊಳ್ಳಲೂ ಅವಕಾಶ ಸಿಕ್ಕಿಲ್ಲ.
ಕೆಲವೇ ದಿನಗಳ ಹಿಂದೆ, ನಾನು ನೇಪಾಳದ ಅತ್ಯಂತ ಹೆಚ್ಚು ಹಾನಿಗೊಳಗಾದ ಜಿಲ್ಲೆಗಳಾದ ರಸುವಾ ಮತ್ತು ನುವಕೋಟ್‌ನಿಂದ ಕಠ್ಮಂಡುವಿಗೆ ಮರಳಿದ್ದೆ. ಆ ಸಮಯದಲ್ಲಿ, ಕಠ್ಮಂಡುವಿನ ಉತ್ತರಕ್ಕೆ ಇರುವ ಹಿಮಾಲಯದ ಶಿಖರಗಳು ಮತ್ತು ಕಣಿವೆಗಳ ಅದ್ಭುತ ಸೌಂದರ್ಯವನ್ನು ನೋಡಿ ಅಚ್ಚರಿಗೊಳಿಂಡಿದ್ದೆ.
ಲ್ಯಾಂಗ್ಟಾಂಗ್ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡುವಾಗ ನಾನು ಸಾಮಾನ್ಯವಾಗಿ ಒಬ್ಬಂಟಿಯಾಗಿ ಪ್ರಯಾಣಿಸುವೆ. ಇದು ಮೌಂಟ್ ಲ್ಯಾಂಗ್ಟಾಂಗ್ ಲಿರುಂಗ್ ನಂತಹ ಅದ್ಭುತ ಹಿಮಾಲಯ ಶಿಖರಗಳು ಮತ್ತು ಗೋಸೈನ್‌ಕುಂಡ ಸರೋವರ ಮತ್ತು ಸೂರ್ಯಕುಂಡ ಸರೋವರದಂತಹ ಪ್ರಶಾಂತ ಮತ್ತು ಪವಿತ್ರ ಹಿಮಾಲಯ ಸರೋವರಗಳಿಗೆ ನೆಲೆಯಾಗಿದೆ. ಇವುಗಳನ್ನು ನೇಪಾಳಿ ಹಿಂದೂಗಳು, ಬೌದ್ಧರು ಶಿವ ಅಥವಾ ಗುರು ರಿಂಪೋಚೆ ದೇವತೆಗಳ ವಾಸಸ್ಥಾನಗಳಾಗಿ ಪೂಜಿಸುತ್ತಾರೆ.
ನುವಾಕೋಟ್ ಅಥವಾ ರಸುವಾ, ಭೋಟೆ ಕೋಶಿ ಅಥವಾ ತ್ರಿಶೂಲಿ ನದಿ ಕಣಿವೆಗಳ ಎತ್ತರದ ಪ್ರದೇಶದಿಂದ ಹಚ್ಚ ಹಸಿರಿನ ಬೆಟ್ಟಗಳು ಮತ್ತು ಕಣಿವೆಗಳ ಮೇಲೆ ಮಾನ್ಸೂನ್ ಮಳೆ ಹುಯ್ದಿದೆ. ಇದು ಜನರಲ್ಲಿ ಸಂತೋಷ ಮತ್ತು ಹರ್ಷ ತಂದಿತ್ತು. ಆದರೆ, ನಾಲ್ಕೇ ದಿನಗಳ ಅಂತರದಲ್ಲಿ ಎಲ್ಲವೂ ಉಲ್ಟಾ ಪಲ್ಟಾ. ಸಿನಿಮಾದಲ್ಲಿ ತೋರಿಸುವ ದೃಶ್ಯದಂತೆ ಎಲ್ಲವೂ ವಿನಾಶ.
"ಹಠಾತ್ ಪ್ರವಾಹದ ದಿನ, ನಾನು ಸಯಾಬ್ರು ಬೆನ್ಸಿ ಪಟ್ಟಣದಲ್ಲಿರುವ ಚೆವಾಂಗ್ ಲಾಮಾಗೆ ಕರೆ ಮಾಡಿದೆ. ಆ ಪಟ್ಟಣವು ಸಂಪೂರ್ಣವಾಗಿ ನಾಶವಾಗಿತ್ತು. ನಮ್ಮ ಪೀಸ್‌ಫುಲ್ ಹೋಟೆಲ್ ಮತ್ತು ಇಡೀ ಪಟ್ಟಣವು ಕಣ್ಮರೆಯಾಯಿತು. ನನ್ನ ಹೆಂಡತಿ, ಮಗ ಮತ್ತು ತಾಯಿ ಕೂಡ ಕಾಣೆಯಾಗಿದ್ದಾರೆ.. ಏನೊಂದೂ ಉಳಿದಿಲ್ಲ ಎಂದು ಅವರು ತಿಳಿಸಿದರು.
ಮತ್ತೊಬ್ಬ ಸ್ನೇಹಿತ ಸುಬ್ಬ ತಮಾಂಗ್, ತಮ್ಮ ಅತ್ತಿಗೆ, ಅತ್ತೆ ಮತ್ತು ಇತರ ಸಂಬಂಧಿಕರು ಮತ್ತು ಸ್ನೇಹಿತರು ತಮ್ಮ ಮನೆಗಳೊಂದಿಗೆ ಕೊಚ್ಚಿಹೋದರು ಎಂದು ಹೇಳಿದರು.
ಆಗಸ್ಟ್ 26 ರಂದು ಸಂಭವಿಸಿದ ಹಠಾತ್ ಪ್ರವಾಹವು, ವಿಜ್ಞಾನಿಗಳು ನಂಬುವಂತೆ, ಮೌಂಟ್ ಲ್ಯಾಂಗ್ಟಾಂಗ್‌ನ ಉತ್ತರದ ಮುಖದ ಮೇಲೆ ಸುಮಾರು 7000 ಮೀಟರ್ ಎತ್ತರದ ಹಿಮನದಿ ಕುಸಿತದಿಂದ ಉಂಟಾಯಿತು. ಇದು ಹೊಸ ರೀತಿಯ ಹವಾಮಾನ ವಿಕೋಪಕ್ಕೆ ಕಾರಣವಾಯಿತು.
ಮೌಂಟ್ ಲ್ಯಾಂಗ್ಟಾಂಗ್ ಉತ್ತರದ ಮುಖ ಹಿಮನದಿ ಕುಸಿತ ಮತ್ತು ನಂತರದ ಅಗಾಧ ಪ್ರಮಾಣದ ಮಂಜುಗಡ್ಡೆ ಮತ್ತು ಹಿಮ ಕರಗಿದ ನಂತರ, ಭೋಟೆ ಕೋಶಿಗೆ ಹರಿಯುವ ಸಣ್ಣ ನದಿ - ತ್ರಿಶೂಲಿ, ನಾರಾಯಣಿ ಅಥವಾ ಗಂಡಕಿ ಎಂದು ಕರೆಯಲ್ಪಡುವ ಲ್ಹೆಂಡೆ ಖೋಲಾ - ಉಬ್ಬಲು ಪ್ರಾರಂಭಿಸಿತು. ಇದು ಭೋಟೆ ಕೋಶಿಯಲ್ಲಿ ಬೃಹತ್ ಸುನಾಮಿ ತರಹದ ಹಠಾತ್ ಪ್ರವಾಹಕ್ಕೆ ಕಾರಣವಾಯಿತು.
ಮೊದಲನೆಯದಾಗಿ, ಅದು ನೇಪಾಳ-ಚೀನಾ ಗಡಿಯಲ್ಲಿರುವ ಗೈರಾಂಗ್ ಬಂದರಿನ ಬೃಹತ್ ದ್ವಾರವನ್ನು ನಾಶಪಡಿಸಿತು. ಕೈಲಾಸ ಪರ್ವತಕ್ಕೆ ಹೋಗುವ ದಾರಿಯಲ್ಲಿ ವಿದೇಶಿ ಯಾತ್ರಿಕರು, ಪ್ರವಾಸಿಗರು ಮತ್ತು ಅದರ ಹಾದಿಯಲ್ಲಿ ಬಂದ ಎಲ್ಲವನ್ನೂ ಅಳಿಸಿಹಾಕಿತು.
30 ನಿಮಿಷಗಳಲ್ಲಿ ಎಲ್ಲವೂ ಖತಂ: ಕಳೆದ ವರ್ಷವೂ ಇದೇ ಪ್ರದೇಶದಲ್ಲಿ ಇದೇ ರೀತಿಯ ವಿಪತ್ತು ಸಂಭವಿಸಿ 18 ಜನರು ಸಾವನ್ನಪ್ಪಿದ್ದರು. 2015 ರ ಭೂಕಂಪದ ಸಮಯದಲ್ಲಿ, ಮೌಂಟ್ ಲ್ಯಾಂಗ್ಟಾಂಗ್ ಲಿರುಂಗ್‌ನ ದಕ್ಷಿಣ ಮುಖದಿಂದ ಒಂದು ದೊಡ್ಡ ಹಿಮನದಿ ಕುಸಿದಾಗ ಸುಮಾರು 400 ಜನರಿದ್ದ ಇಡೀ ಹಳ್ಳಿಯೇ ನಾಶವಾಯಿತು.
ಈ ಹಠಾತ್ ಪ್ರವಾಹವು ಹಿಮಾಲಯನ್ ನದಿ ಸುನಾಮಿಯಂತಿದ್ದು, ಬಹಳ ಕಡಿಮೆ ಅವಧಿಯಲ್ಲಿ ವಿನಾಶವನ್ನುಂಟುಮಾಡಿದೆ. ಜಾಗತಿಕ ತಾಪಮಾನ ಏರಿಕೆ ಮತ್ತು ಕರಗುತ್ತಿರುವ ಹಿಮನದಿಗಳ ಮಧ್ಯೆ ದಕ್ಷಿಣ ಏಷ್ಯಾದಾದ್ಯಂತ ಹಿಮಾಲಯನ್ ಸಮುದಾಯಗಳು ಇಂತಹ ಹಠಾತ್ ಪ್ರವಾಹದ ಭಯದಿಂದ ಬದುಕಬೇಕಾಗಬಹುದು. ಈ ಪ್ರವಾಹದ ನಂತರ, ಬೆಟ್ಟಗಳು ಮತ್ತು ಬದುಕು ಮತ್ತೆ ಈ ಮೊದಲಿನಂತೆ ಇರುವುದಿಲ್ಲ!
ಇವುಗಳನ್ನೂ ಓದಿ:

