ಕರ್ನಾಟಕ

karnataka

ರಾಜನೇ ಮರಳಿ ರಾಜನಾಗುವ ಯೋಗ ಇದೆ: ಇದು ಬೊಂಬೆ ಭವಿಷ್ಯ? ಹೀಗೆ ಹೇಳಿರುವುದು ಯಾರ ಬಗ್ಗೆ ಗೊತ್ತಾ? - puppet bhavishya

By ETV Bharat Karnataka Team

Published : Apr 9, 2024, 7:01 PM IST

Updated : Apr 9, 2024, 7:46 PM IST

ರಾಜನೇ ಮರಳಿ ರಾಜನಾಗುವ ಯೋಗ ಇದೆ. ರಾಜಕೀಯ ಭವಿಷ್ಯದಲ್ಲಿ ಮೋದಿಯೇ ಮತ್ತೆ ಪ್ರಧಾನಿ ಆಗುತ್ತಾರೆ ಎಂದು ಇಲಾಳ ಮನೆತನದ ಕುಟುಂಬದವರು ಭವಿಷ್ಯ ನುಡಿದಿದ್ದಾರೆ.

puppet-bhavishya
ಬೊಂಬೆ ಭವಿಷ್ಯ

ಮಲ್ಲಿಕಾರ್ಜುನ ಗೋಬಿ ಬೊಂಬೆ ಭವಿಷ್ಯ ನುಡಿದರು

ಬಾಗಲಕೋಟೆ: ನೇಕಾರರ ನಗರ ಎಂದು ಪ್ರಸಿದ್ದವಾಗಿರುವ ಗುಳೇದಗುಡ್ಡ ಪಟ್ಟಣದಲ್ಲಿ ಪ್ರತಿ ವರ್ಷ ಯುಗಾದಿ ಪಾಡ್ಯ ದಿನದಂದು ವಿಶೇಷ ಭವಿಷ್ಯ ಹೇಳುವ ಮೂಲಕ ಗಮನ ಸೆಳೆಯುತ್ತಾರೆ. ಯುಗಾದಿ ಪಾಡ್ಯ ಬೆಳಗಿನ ಜಾವ 6 ಗಂಟೆಗೆ ಕೆಇಬಿ ಹತ್ತಿರ ಇರುವ ಮಾರವಾಡಿ ಬಗಿಚ ಬಳಿ ಜನ ಸೇರುತ್ತಾರೆ. ಇಲಾಳ ಮನೆತನ ಕುಟುಂಬದವರು ಪಂಚಾಂಗ ಪುಸ್ತಕ ಸಮೇತ ಆಗಮಿಸಿ, ಹಿಂದಿನ ದಿನ ರಾತ್ರಿ ಮಾಡಿದ ಭವಿಷ್ಯ ತಯಾರಿ ಬಗ್ಗೆ ಬೆಳಗ್ಗೆ ವೀಕ್ಷಣೆ ಮಾಡಿ, ಸೇರಿದ ಜನಸ್ತೋಮಕ್ಕೆ ಭವಿಷ್ಯ ನುಡಿಯುತ್ತಾರೆ. ಈಗ ಲೋಕಸಭಾ ಚುನಾವಣೆ ಹಿನ್ನೆಲೆ ಎಲ್ಲರಿಗೂ ಚುನಾವಣೆ ಗುಂಗು ಇರುವುದರಿಂದ ರಾಜಕೀಯ ಭವಿಷ್ಯದ ಬಗ್ಗೆ ಗಮನ ನೀಡಿದ್ದಾರೆ.

ರಾಜನೇ ಮರಳಿ ರಾಜನಾಗುವ ಯೋಗ ಇದೆ. ರಾಜಕೀಯ ಭವಿಷ್ಯದಲ್ಲಿ ಮೋದಿಯೇ ಮತ್ತೆ ಪ್ರಧಾನಿ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ರಾಜ ಬಲಿಷ್ಠನಾಗಿದ್ದಾನೆ. ಹೀಗಾಗಿ ರಾಜನೇ ಮರಳಿ ರಾಜನಾಗುವ ಯೋಗವಿದೆ. ರಾಜ್ಯ, ಪ್ರಜೆಗಳು, ಮಂತ್ರಿಗಳು, ಸೈನ್ಯ ಬಲಿಷ್ಠವಾಗಿದೆ ಎಂದು ಹೇಳುವ ಮೂಲಕ ಮತ್ತೆ‌ ಮೋದಿ ಪ್ರಧಾನಿಯಾಗುತ್ತಾರೆ ಎಂದು ಭವಿಷ್ಯ ಹೇಳಲಾಗಿದೆ.

ಈ ವರ್ಷ ಬಿಳಿಜೋಳ, ಕಡಲೆ, ಗೋದಿ ಉತ್ತಮ ಬೆಳೆ ಇದೆ. ತೊಗರಿ, ಸಜ್ಜೆ ಬೆಳೆಗೆ ಕೀಟ ಬಾದೆ ಜಾಸ್ತಿ ಇದೆ. ಈ ವರ್ಷ ಆಗುವ ಎಲ್ಲಾ ಮಳೆ ಸಮೃದ್ಧವಾಗಿದೆ. ಆದರೆ ನೇಕಾರರಿಗೆ ಸಂಕಷ್ಟ ಇದ್ದು, ನೇಕಾರಿಕೆ ಉದ್ಯೋಗ ಕ್ಷಿಣಿಸುತ್ತದೆ. ಬಟ್ಟೆ ಮಾರಾಟ ವ್ಯಾಪಾರ ಚೆನ್ನಾಗಿ ಆಗಲಿದೆ ಎಂದು ಭವಿಷ್ಯ ಹೇಳಲಾಗಿದೆ.

ನೂರಾರು ವರ್ಷಗಳ ಇತಿಹಾಸ ಇರುವ ಈ ಭವಿಷ್ಯವನ್ನು ಇಲಾಳ ಮನೆತನದವರು ಹೇಳುವ ಸಂಪ್ರದಾಯ ಇದೆ. ಯುಗಾದಿ ಅಮಾವಾಸ್ಯೆ ದಿನ ರಾತ್ರಿ ಸಮಯದಲ್ಲಿ ಈ ಮಾರಾವಾಡಿ ಬಗಿಚ್​ಗೆ ಇಲಾಳ ಮನೆತನದವರು ಆಗಮಿಸಿ, ಮಣ್ಣಿನಿಂದ, ಗೊಂಬೆ, ರಾಜಾ, ರೈತರ ಎತ್ತು ಚಕ್ಕಡಿ ಹಾಗೂ ಬಟ್ಟೆಗಳನ್ನು ಇಟ್ಟಿರುತ್ತಾರೆ. ಎಕ್ಕೆ ಎಳೆದ ಜೊತೆಗೆ ಆಹಾರ ಕಾಳು ದಿನಸುಗಳು ಇಟ್ಟು ಹೋಗಿರುತ್ತಾರೆ. ಮಣ್ಣಿನ ಗಡಿಗೆ ಮೇಲೆ ಆಯಾ ಮಳೆಯ ಹೆಸರು ಬರೆದು ಎಲೆ ಇಟ್ಟು ಸುತ್ತಲೂ ಚೌಕಾರ ಮಾಡಿ, ಪೂಜೆ ಮಾಡಿ ಹೋಗಿರುತ್ತಾರೆ.

ಮಲ್ಲಿಕಾರ್ಜುನ ಗೋಬಿ ಎಂಬುವವರಿಂದ ಭವಿಷ್ಯ: ಪಾಡ್ಯದ ದಿನ ಬೆಳಗಿನ ಜಾವ ಆಗಮಿಸಿ, ಮಳೆ, ಬೆಳೆ, ರಾಜಕೀಯ, ಭವಿಷ್ಯ ಸೇರಿದಂತೆ ವ್ಯಾಪಾರ ಉದ್ಯೋಗದ ಬಗ್ಗೆ ಹೇಳುತ್ತಾರೆ. ಈ ಮೂಲಕ ಇಲ್ಲಿನ ನೇಕಾರರು, ರೈತರು ಹಾಗೂ ವ್ಯಾಪಾರಸ್ಥರು ತಮ್ಮ ಜೀವನದಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾರೆ. ಮಲ್ಲಿಕಾರ್ಜುನ ಗೋಬಿ ಎಂಬುವವರು ಭವಿಷ್ಯ ನುಡಿಯುತ್ತಾರೆ.

ಭವಿಷ್ಯ ಮುಗಿದ ಬಳಿಕ ಇಲ್ಲಿನ ವಸ್ತುಗಳನ್ನು ಸೇರಿದ ಜನರು ತೆಗೆದುಕೊಳ್ಳಲು ನಾ ಮುಂದು ತಾ ಮುಂದು ಎಂದು ನುಗ್ಗುತ್ತಾರೆ. ಇಲ್ಲಿನ ವಸ್ತುಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಪಾಡ್ಯದ ದಿನ ಪೂಜೆ ಮಾಡಿದರೆ, ಸಕಲ ಸಂಪತ್ತು ಸಿಗಲಿದೆ ಎಂಬ ನಂಬಿಕೆ ಇದೆ. ಹೀಗಾಗಿ ಯುಗಾದಿ ಪಾಡ್ಯ ದಿನದಂದು ನಡೆಯುವ ಇಲ್ಲಿನ ಭವಿಷ್ಯವಾಣಿ ವಿಶೇಷವಾಗಿ ಗಮನ ಸೆಳೆಯುವಂತಾಗುತ್ತದೆ.

ರಾಜಕೀಯದಲ್ಲಿ ಯಾವುದೇ ಬದಲಾವಣೆ ಇಲ್ಲ: ಕೇಂದ್ರ ಮತ್ತು ರಾಜ್ಯ ರಾಜಕೀಯದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಧಾರವಾಡದಲ್ಲಿ ಬೊಂಬೆ ಭವಿಷ್ಯ ನುಡಿದಿದೆ. ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮಕ್ಕೆ ಹೊಂದಿಕೊಂಡ ಹನುಮನಕೊಪ್ಪದಲ್ಲಿ ಬೊಂಬೆ ಭವಿಷ್ಯ‌ ನಡೆದುಕೊಂಡು ಬಂದಿದೆ.

ಯುಗಾದಿ ಅಮಾವಾಸ್ಯೆಯಂದು ಹಳ್ಳದಲ್ಲಿ ಫಲ‌ ಕಟ್ಟಲಾಗುತ್ತದೆ. ಮಾರನೆ ದಿನ ಬೆಳಿಗ್ಗೆ ಬಂದು ನೋಡಿದಾಗ ರಾಜಕೀಯ, ಮಳೆ, ಬೆಳೆ ಹಾಗೂ ರೈತರ ಭವಿಷ್ಯ ನಿರ್ಧರಿಸಲಾಗುತ್ತದೆ. ಪ್ರಸಕ್ತ ವರ್ಷ ಕೇಂದ್ರ ಹಾಗೂ ರಾಜ್ಯ ನಾಯಕರ ಮೂರ್ತಿಗೆ ಯಾವುದೇ ಪೆಟ್ಟಾಗಿಲ್ಲ. ಇದರಿಂದ ಯಾವುದೇ ಬದಲಾವಣೆ ಇಲ್ಲ ಎಂಬ ಮುನ್ಸೂಚನೆ ಬೊಂಬೆ ನೀಡಿದೆ. ಮುಂಗಾರು ಮಳೆ ಅಲ್ಪ ಪ್ರಮಾಣದಲ್ಲಿ, ಹಿಂಗಾರು ಮಳೆ ಕೈಕೊಡುತ್ತದೆ ಎಂದು ಮುನ್ಸೂಚನೆ ನೀಡಿದೆ.

ಬೆಳೆಗಳಿಗೆ 11, 12ನೇ ತಿಂಗಳಿನಲ್ಲಿ ಉತ್ತಮ ಬೆಲೆ ಸಿಗುವ ಮುನ್ಸೂಚನೆ ನೀಡಿದೆ. ಕೇಂದ್ರದಲ್ಲಿ ಮತ್ತೊಮ್ಮೆ ಮೋದಿಯೇ ಆಡಳಿತ ನಡೆಸುವ ಮುನ್ಸೂಚನೆ ಸಿಕ್ಕಿದೆ. ಈಶಾನ್ಯ ದಿಕ್ಕಿಗೆ ಇಡಲಾಗಿದ್ದ ರಾಜಕೀಯ ಮೂರ್ತಿಗೆ ಯಾವುದೇ ಪೆಟ್ಟಾಗಿಲ್ಲ. ಇದರಿಂದ ಯಾವುದೇ ಬದಲಾವಣೆಯಾಗದು ಎಂಬ ಮುನ್ಸೂಚನೆ ನೀಡಿದೆ. 1936 ರಿಂದ ಈ ಬೊಂಬೆ ಭವಿಷ್ಯ ನಡೆದುಕೊಂಡು ಬಂದಿದ್ದು, ಹಲವಾರು ನಿಜವಾದ ಉದಾಹರಣೆಗಳಿವೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ :ಯಾರೇ ವಿರೋಧ ಮಾಡಿದರೂ ಬಗ್ಗುವ ಜಾಯಮಾನ ನನ್ನದಲ್ಲ; ಕೇಂದ್ರ ಸಚಿವರಿಗೆ ಎಚ್ಚರಿಕೆ ನೀಡಿದ ದಿಂಗಾಲೇಶ್ವರ ಶ್ರೀ - Dingaleshwar Seer Warned

Last Updated :Apr 9, 2024, 7:46 PM IST

ABOUT THE AUTHOR

...view details