ಕರ್ನಾಟಕ

karnataka

ಶುಕ್ರವಾರ 'ಕಾಂಗರೂ' ಬಿಡುಗಡೆ: ಪ್ರೇಕ್ಷಕರೆದುರು ಬರಲು ಸಜ್ಜಾದ ಆದಿತ್ಯ, ರಂಜನಿ ರಾಘವನ್ - Kangaroo

By ETV Bharat Karnataka Team

Published : Apr 30, 2024, 12:41 PM IST

ಕಿಶೋರ್ ಮೇಗಳಮನೆ ನಿರ್ದೇಶನದ 'ಕಾಂಗರೂ' ಚಿತ್ರ ಮೇ. 3ರಂದು ಬಿಡುಗಡೆಯಾಗಲಿದೆ.

Sandalwood Kangaroo movie
ಶುಕ್ರವಾರ 'ಕಾಂಗರೂ' ಬಿಡುಗಡೆ

ಡೆಡ್ಲಿ ಸೋಮ, ಎದೆಗಾರಿಕೆಯಂತಹ ಚಿತ್ರಗಳ ಮೂಲಕ ಸ್ಯಾಂಡಲ್​ವುಡ್​ನಲ್ಲಿ ತನ್ನದೇ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡಿರುವ ನಟ ಆದಿತ್ಯ. ಇವರ ಮುಂದಿನ ಬಹುನಿರೀಕ್ಷಿತ ಚಿತ್ರ 'ಕಾಂಗರೂ' ಬಿಡುಗಡೆಗೆ ಸಜ್ಜಾಗಿದೆ. ಕಿಶೋರ್ ಮೇಗಳಮನೆ ನಿರ್ದೇಶನವಿರುವ 'ಕಾಂಗರೂ' ಚಿತ್ರದ ಟ್ರೇಲರ್ ಇತ್ತೀಚೆಗೆ ಅನಾವರಣಗೊಂಡಿದೆ. ಟ್ರೇಲರ್ ಸಿನಿಪ್ರಿಯಲ್ಲಿ ಕುತೂಹಲ ಮೂಡಿಸಿದ್ದು, ಸಂಪೂರ್ಣ ಚಿತ್ರ ನೋಡುವ ಕಾತುರ ಹೆಚ್ಚಿಸಿದೆ. ಈವೆಂಟ್​ನಲ್ಲಿ ಚಿತ್ರತಂಡ ತಮ್ಮ ಚಿತ್ರದ ವಿಶೇಷತೆಗಳನ್ನು ಹಂಚಿಕೊಂಡಿದೆ.

ಶುಕ್ರವಾರ 'ಕಾಂಗರೂ' ಬಿಡುಗಡೆ

ನಟ ಆದಿತ್ಯ ಮಾತನಾಡಿ, ''ನಿರ್ಮಾಪಕರೇ ನಮ್ಮ ಅನ್ನದಾತರು. ಹಾಗಾಗಿ ಅವರಿಂದಲೇ ಟ್ರೇಲರ್ ರಿಲೀಸ್ ಮಾಡಿಸಬೇಕೆಂದು ನಾನು ಹಾಗೂ ನಿರ್ದೇಶಕರು ಅಂದುಕೊಂಡೆವು. ಅದರಂತೆ ನಿರ್ಮಾಪಕರೇ ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ಚಿತ್ರದಲ್ಲಿ ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ತಾಯಿ ಹೃದಯದ ಮಮತೆಯಿದೆ. ನೀನೊಂದು ಮುಗಿಯದ ಮೌನದಂಥ ಎವರ್ ಗ್ರೀನ್ ಹಾಡನ್ನು ನನಗೆ ಕೊಟ್ಟವರು ಸಾಧು ಕೋಕಿಲ. ಅವರು ಮತ್ತೊಮ್ಮೆ ನನ್ನ ಚಿತ್ರಕ್ಕೆ ಅದ್ಭುತ ಮ್ಯೂಸಿಕ್ ಮಾಡಿಕೊಟ್ಟಿದ್ದಾರೆ. ಸಂಗೀತದ ನಂತರ ನಮ್ಮ ಚಿತ್ರದ ಮತ್ತೊಂದು ಹೈಲೈಟ್ ಎಂದರೆ ಅದಯು ಕ್ಯಾಮರಾ ವರ್ಕ್. ಉದಯಲೀಲಾ ಅವರು ಅದ್ಭುತವಾಗಿ ಛಾಯಾಗ್ರಹಣ ನಿರ್ವಹಿಸಿದ್ದಾರೆ. ನಾನು ಈ ಚಿತ್ರದಲ್ಲಿ ತನಿಖಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಮೇ 4 ನನ್ನ ಹುಟ್ಟುಹಬ್ಬ. ಮೇ 3ರಂದು ನಮ್ಮ ಚಿತ್ರ ಬಿಡುಗಡೆ ಆಗುತ್ತಿರೋದು ಖುಷಿ ಇದೆ'' ಎಂದು ತಿಳಿಸಿದರು.

ಕಾಂಗರೂ ಚಿತ್ರತಂಡ

ನಿರ್ದೇಶಕ ಕಿಶೋರ್ ಮೇಗಳಮನೆ ಮಾತನಾಡಿ, ''ಸಿನಿಮಾ ಬಹಳ ಚೆನ್ನಾಗಿ ಮೂಡಿ ಬಂದಿದೆ. ಕಥೆಗೆ ತಕ್ಕಂತೆ ಖರ್ಚಾಗಿದೆ. 150 ರಿಂದ 200 ಥಿಯೇಟರ್‌ಗಳಲ್ಲಿ ಚಿತ್ರವನ್ನು ರಿಲೀಸ್ ಮಾಡುತ್ತಿದ್ದೇವೆ. ವಿಶೇಷವಾಗಿ ಫ್ಯಾಮಿಲಿ ಆಡಿಯನ್ಸ್​​ಗಾಗಿ ಮಾಡಿದ ಕಥೆಯಿದು. ಬೆಂಗಳೂರು, ಶೃಂಗೇರಿ, ಚಿಕ್ಕಮಗಳೂರು, ಕೊಪ್ಪ ಹಾಗೂ ಹೊರನಾಡು ಸುತ್ತಮುತ್ತ ಚಿತ್ರೀಕರಿಸಿದ್ದೇವೆ. ಯೂ ಟರ್ನ್ ಚಿತ್ರದ ಇನ್​ಸ್ಪೈರ್​​ನಿಂದ ಈ ಚಿತ್ರ ನಿರ್ದೇಶನ ಮಾಡಿದ್ದೇನೆ. ಒಂದು ಸಣ್ಣ ತಪ್ಪಿನಿಂದ ಮುಂದೆ ಏನೇನೆಲ್ಲಾ ಆಗಬಹುದೆಂದು ಚಿತ್ರದಲ್ಲಿ ತೋರಿಸಿದ್ದೇವೆ'' ಎಂದು ಹೇಳಿದರು.

ಆದಿತ್ಯ ಅವರಿಗೆ ನಾಯಕಿಯಾಗಿ ರಂಜನಿ ರಾಘವನ್ ಅಭಿನಯಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ''ನಾನು ಆದಿತ್ಯ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದವಳು. ಚಿತ್ರದಲ್ಲಿ ಅವರ ಜೊತೆ ಅಭಿನಯಿಸುವ ಅವಕಾಶ ಸಿಕ್ಕಿತು. ಓರ್ವ ಪ್ರೇಕ್ಷಕಳಾಗಿ ನಾನು ಸಿನಿಮಾ ನೋಡಿದ್ದೇನೆ. ನಿರ್ದೇಶಕರು ಪ್ರತಿ ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ತಂದಿದ್ದಾರೆ'' ಎಂದರು.

ಇದನ್ನೂ ಓದಿ:ಪುಷ್ಪಾ 2: ದಿ ರೂಲ್​: ನೀರಿನಾಳದಲ್ಲಿ ಅಲ್ಲು ಅರ್ಜುನ್​ ಶೂಟಿಂಗ್​, ಸೆಟ್​ ಫೋಟೋ ವೈರಲ್​ - Pushpa 2 The Rule Update

ಆರೋಹ ಪ್ರೊಡಕ್ಷನ್ಸ್ ಲಾಂಛನದಲ್ಲಿ ಚೆನ್ನಕೇಶವ ಬಿ.ಸಿ, ನರಸಿಂಹಮೂರ್ತಿ ಚಕ್ರಭಾವಿ, ರಮೇಶ್‌ ಬಂಡೆ, ಸ್ವಾಮಿ ಚಕ್ರಭಾವಿ, ರವಿ ಕೀಲಾರ ಮಂಡ್ಯ ಹಾಗೂ ಕೆ.ಜಿ.ಆರ್ ಗೌಡ ಸೇರಿ ಆರು ಮಂದಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ:'ಧೀರೇನ್ ರಾಮ್ ಕುಮಾರ್' ಇನ್ಮುಂದೆ 'ಧೀರೇನ್​ ಆರ್​ ರಾಜ್​ ಕುಮಾರ್' - Actor Dheeren name changed

ನಿರ್ಮಾಪಕ ರಮೇಶ್ ಬಂಡೆ ಮಾತನಾಡಿ, ನಾವು 6 ಸ್ನೇಹಿತರು ಪೀಣ್ಯದಲ್ಲಿ ಇಂಡಸ್ಟ್ರಿ ನಡೆಸುತ್ತಿದ್ದೇವೆ. ಏನಾದರೂ ಹೊಸತನ್ನು ಮಾಡೋಣ ಅಂತಾ ಈ ಸಿನಿಮಾ ಮಾಡಿದ್ದೇವೆ. ಜನ ಕೊಟ್ಟ ದುಡ್ಡಿಗೆ ನ್ಯಾಯ ಒದಗಿಸುತ್ತೇವೆ ಎಂದು ಹೇಳಿದರು. ಮತ್ತೋರ್ವ ನಿರ್ಮಾಪಕ ರವಿ ಕೀಲಾರ ಮಂಡ್ಯ ಮಾತನಾಡಿ, ನಿರ್ದೇಶಕರು ಅನಿಮೇಶನ್‌ನಲ್ಲೇ ಚಿತ್ರವನ್ನು ನಮಗೆ ತೋರಿಸಿದ್ದರು. ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದು ತಿಳಿಸಿದರು. ನಿರ್ಮಾಪಕ ಚೆನ್ನಕೇಶವ ಮಾತನಾಡಿ, ಕನ್ನಡದ ಜನರಿಗಾಗಿ ಒಳ್ಳೆಯ ಸಿನಿಮಾ ಮಾಡಿರುವ ಖುಷಿಯಿದೆ. ಚಿತ್ರದ ಮೋಷನ್ ಪೋಸ್ಟರ್​ ಅನ್ನು ಶಿವರಾಜ್​​​ಕುಮಾರ್ ರಿಲೀಸ್ ಮಾಡಿಕೊಟ್ಟಿದ್ದರು. ಇನ್ನು ಸಾಧು ಕೋಕಿಲ ಅವರು ಉತ್ತಮ ಮ್ಯೂಸಿಕ್ ಮಾಡಿದ್ದಾರೆ. ನಮ್ಮ ಚಿತ್ರಕ್ಕೆ ಜನ ಬೆಂಬಲ ದೊರೆತರೆ ಮುಂದಿನ ದಿನಗಳಲ್ಲಿ ಹತ್ತಾರು ಸಿನಿಮಾ ಮಾಡುತ್ತೇವೆ ಎಂದರು. ಸದ್ಯ ಟ್ರೇಲರ್​​ನಿಂದಲೇ ಕುತೂಹಲ ಹುಟ್ಟಿಸಿರೋ ಕಾಂಗರೂ ಸಿನಿಮಾ ಇದೇ ಶುಕ್ರವಾರ ಅಂದರೆ ಮೇ 3ರಂದು ಬಿಡುಗಡೆಯಾಗಲಿದೆ.

ABOUT THE AUTHOR

...view details