ಕರ್ನಾಟಕ

karnataka

ಶಿವಮೊಗ್ಗ: ಮೀನಿನ ರಕ್ಷಣೆಗೆ ಅಳಿವಿನಂಚಿನಲ್ಲಿರುವ ಪಕ್ಷಿಗಳಿಗೆ ವಿಷ ಇಟ್ಟ ಕಿರಾತಕರು

By

Published : Jan 5, 2023, 5:32 PM IST

Incident of birds being poisoned and killed
ಪಕ್ಷಿಗಳಿಗೆ ವಿಷ ಹಾಕಿ ಕೊಲ್ಲುತ್ತಿರುವ ಘಟನೆ

ವಿರೂಪಿನಕೊಪ್ಪ ಗ್ರಾಮದ ಕೆರೆಯಲ್ಲಿ ಮೀನುಗಳ ಸಂರಕ್ಷಣೆಗಾಗಿ ಪಕ್ಷಿಗಳಿಗೆ ವಿಷ- ವಿಷಪೂರಿತ ಮೀನು ತಿಂದು ಸಾಯುತ್ತಿರುವ ಪಕ್ಷಿ ಸಂಕುಲ- ಸೂಕ್ತ ಕ್ರಮಕ್ಕೆ ಹುಲಿ ಮತ್ತು ಸಿಂಹಧಾಮದ ವೈದ್ಯರ ಒತ್ತಾಯ

ವಿರೂಪಿನಕೊಪ್ಪ ಗ್ರಾಮದ ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡುತ್ತಿರುವ ಜನರು ತಮ್ಮ‌ ಮೀನುಗಳ ಸಂರಕ್ಷಣೆಗಾಗಿ ಪಕ್ಷಿಗಳಿಗೆ ವಿಷ ಹಾಕಿ ಕೊಲ್ಲುತ್ತಿರುವ ಘಟನೆ

ಶಿವಮೊಗ್ಗ :ಮೀನು ಸಾಕಾಣಿಕೆ ಮಾಡುವವರು ತಮ್ಮ‌ ಮೀನುಗಳ ಸಂರಕ್ಷಣೆಗಾಗಿ ಪಕ್ಷಿಗಳಿಗೆ ವಿಷ ಹಾಕಿ ಕೊಲ್ಲುತ್ತಿರುವ ಘಟನೆ ಬೆಳಕಿಗೆ ಬಂದಿದೆ. ತಮ್ಮ ಸ್ವಾರ್ಥಕ್ಕಾಗಿ ಕೆಲವರು ಇಂದು ಪ್ರಕೃತಿಯನ್ನು ಹಾಳು ಮಾಡುತ್ತಿದ್ದಾರೆ. ಅಂತಹದ್ದೇ ಒಂದು ಘಟನೆ ಶಿವಮೊಗ್ಗ ತಾಲೂಕು ವಿರೂಪಿನಕೊಪ್ಪ ಗ್ರಾಮದ ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡುತ್ತಿರುವ ಜನರು ಮಾಡಿದ್ದಾರೆ. ಕೆರೆಯಲ್ಲಿನ ಮೀನುಗಳನ್ನು ಪಕ್ಷಿಗಳು ತಿನ್ನುತ್ತವೆ ಎಂಬ ಒಂದೇ ಕಾರಣಕ್ಕೆ ಕೆರೆಯ ದಡದ ಮೇಲೆ ವಿಷ ಹಾಕಿರುವ ಮೀನುಗಳನ್ನು ಇಡುತ್ತಿದ್ದಾರೆ. ಈ ಮೀನುಗಳನ್ನು ತಿಂದ ಪಕ್ಷಿಗಳು ಸತ್ತು ಹೋಗುತ್ತಿವೆ. ಈ ರೀತಿ ಮಾಡುವುದರಿಂದ ಅಪರೂಪವಾಗಿರುವ ಹದ್ದುಗಳು ಬಲಿಯಾಗಿರುವುದು ಘಟನೆ ಕಂಡು ಬಂದಿದೆ.

ಶಿವಮೊಗ್ಗ ತಾಲೂಕು ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದ ವೈದ್ಯರಾದ ಮುರುಳಿ ಮನೋಹರ್ ಅವರ ಸ್ನೇಹಿತರು ಕೆರೆಯ ಭಾಗಕ್ಕೆ ಹೋದಾಗ ಕೆರೆ ದಡದ ಮೇಲೆ ಮೀನುಗಳು ಸತ್ತು ಬಿದ್ದಿರುವುದು ಕಂಡು ಬಂದಿದೆ. ನಂತರ ಅಲ್ಲಲ್ಲಿ ಪಕ್ಷಿಗಳ ಪುಕ್ಕಗಳು ಸಹ ಸಿಕ್ಕಿವೆ. ಮರು ದಿನ ಡಾ.ಮುರುಳಿ ಮನೋಹರ್ ಅವರು ಕೆರೆ ಬಳಿ ಹೋದಾಗ ದಡದ ಮೇಲೆ ಇದ್ದ ಮೀನನ್ನು ಕಚ್ಚಿಕೊಂಡು ಹೋದ ರಿವರ್ ಟರ್ನ್ ಪಕ್ಷಿ ಹಾರುತ್ತಲೆ ನೆಲಕ್ಕೆ ಬಿದ್ದು ಸಾವನ್ನಪ್ಪಿದ್ದನ್ನು ಕಂಡಿದ್ದಾರೆ.

ಇನ್ನೂ ಸ್ವಲ್ಪ ದೂರದಲ್ಲಿ ಅಳಿವಿನಂಚಿನಲ್ಲಿರುವ ಹದ್ದು ಸತ್ತು ಬಿದ್ದಿದೆ‌. ಹೀಗೆ ಸತ್ತು ಬಿದ್ದಿದ್ದ ಹದ್ದನ್ನು ತೆಗೆದುಕೊಂಡು ಪೋಸ್ಟ್ ಮಾರ್ಟಮ್ (ಮರಣೋತ್ತರ ಪರೀಕ್ಷೆ) ಮಾಡಿದಾಗ ಹದ್ದು ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದು ಕಂಡು ಬಂದಿದೆ. ಈ ರೀತಿ ಹೊಟ್ಟೆ ಒಳಗೆ ರಕ್ತಸ್ರಾವವಾಗುತ್ತದೆ ಎಂದು ಹದ್ದಿನ ಪೋಸ್ಟ್ ಮಾರ್ಟಮ್ ಮಾಡಿದ ಡಾ.ಮುರುಳಿ ಮನೋಹರ್ ಅವರು ಮಾಹಿತಿ ನೀಡಿದ್ದಾರೆ. ಇದು ಯಾವ ವಿಷದಿಂದ ಸಾವನ್ನಪ್ಪಿದೆ ಎಂಬುದನ್ನು ತಿಳಿಯಲು ಹದ್ದಿನ ಅಂಗಾಂಗಗಳನ್ನು ಲ್ಯಾಬ್​ಗೆ ಕಳುಹಿಸಿದ್ದು, ವರದಿಗಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.

ಹಕ್ಕಿಗಳಿಗೆ ಹಕ್ಕಿಪಿಕ್ಕಿ ಸಮುದಾಯದ ಜನರು ಸಹ ಪಕ್ಷಿಗಳ ಪುಕ್ಕಕ್ಕಾಗಿ ಹಾಗೂ ಹಕ್ಕಿಗಳನ್ನು ಮಾರಾಟ ಮಾಡಲು ವಿಷ ಇಡುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಪಕ್ಷಿಗಳ ರಕ್ಷಣೆಗಾಗಿ ಡಾ.ಮುರುಳಿ‌ ಮನೋಹರ್ ಅವರು ಅರಣ್ಯ ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಹದ್ದುಗಳು ಈಗಾಗಲೇ ಪ್ರಪಂಚದಾದ್ಯಂತ ಕೇವಲ 4 ಲಕ್ಷದಷ್ಟು ಮಾತ್ರ ಇವೆ ಎಂದು ಅಂಕಿ ಅಂಶ ತಿಳಿಸುತ್ತಿದೆ. ಇದರಿಂದ ಇವುಗಳ ಉಳಿವು ಪ್ರಕೃತಿಗೆ ತುಂಬ ಅವಶ್ಯಕವಾಗಿದೆ. ಪ್ರಕೃತಿಯಲ್ಲಿ ಮನುಷ್ಯರಂತೆ ಎಲ್ಲಾ ಪ್ರಾಣಿ ಪಕ್ಷಿಗಳಿಗೂ ಸಹ ಬದುಕುವ ಅವಶ್ಯಕತೆ ಇದೆ. ಇದರಿಂದ ಎಲ್ಲವೂ ಇದ್ದರೆ ಮಾತ್ರ ಪ್ರಕೃತಿ ಸಮತೋಲವಾಗಿರುತ್ತದೆ ಎಂದು ಡಾ. ಮುರುಳಿ‌ ಮನೋಹರ್ ಹೇಳಿದರು. ಹಕ್ಕಿಗಳಿಗೆ ಯಾರು ವಿಷ ಇಟ್ಟಿದ್ದಾರೆ ಎಂಬ ವಿಷಯ ತಿಳಿದು ಬಂದಿಲ್ಲ. ಒಟ್ಟಾರೆ, ಪಕ್ಷಿಗಳಿಗೆ ವಿಷ ಹಾಕಿ‌ ಕೊಲ್ಲುವವರನ್ನು ಹುಡುಕಿ ಅವರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಂಡು ಪಕ್ಷಿಗಳ ಪ್ರಾಣ ಉಳಿಸಬೇಕಿದೆ.

ಪಕ್ಷಿಗಳಿಗೆ ದಯಾಮರಣ : ಈ ಹಿಂದೆಯೂ ಸಹ ಹಕ್ಕಿ ಜ್ವರ ದೃಢಪಟ್ಟ ಹಿನ್ನೆಲೆಯಲ್ಲಿ 6,000 ಕ್ಕೂ ಹೆಚ್ಚು ಪಕ್ಷಿಗಳನ್ನು ನೆರೆ ರಾಜ್ಯ ಕೇರಳದ ಕೊಟ್ಟಾಯಂನ ವ್ಯಾಪ್ತಿಯ ವೇಚೂರು, ನೀಂದೂರ್​ ಮತ್ತು ಅರ್ಪುಕರ ಪಂಚಾಯತಿಯಲ್ಲಿ ಕೊಲ್ಲಲಾಗಿತ್ತು. ವೇಚೂರು ಗ್ರಾಮ ಪಂಚಾಯತಿಯಲ್ಲಿ 133 ಬಾತುಕೋಳಿ ಮತ್ತು 156 ಕೋಳಿಗಳು, ನೀಂಬೂರು ಪಂಚಾಯಿತಿಯಲ್ಲಿ 2,753 ಬಾತುಕೋಳಿಗಳು ಮತ್ತು ಅರ್ಪುಕಾರದಲ್ಲಿ 2,975 ಬಾತುಕೋಳಿ ಸೇರಿ ಒಟ್ಟು 6,017 ಪಕ್ಷಿಗಳಿಗೆ ದಯಾಮರಣ ನೀಡಲಾಗಿದೆ ಎಂದು ಅಲ್ಲಿನ ಜಿಲ್ಲಾಧಿಲಾರಿ ಮಾಹಿತಿ ನೀಡಿದ್ದರು.

ಇದನ್ನೂ :ಕೇರಳದಲ್ಲಿ ಹಕ್ಕಿ ಜ್ವರ ಭೀತಿ: ಕೊಟ್ಟಾಯಂನಲ್ಲಿ 6,000ಕ್ಕೂ ಹೆಚ್ಚು ಪಕ್ಷಿಗಳ ಹತ್ಯೆ

ABOUT THE AUTHOR

...view details