ಕರ್ನಾಟಕ

karnataka

ಪಕ್ಷವನ್ನು ಗೆಲ್ಲಿಸಲಾಗಿಲ್ಲ, ಜೊತೆಗೆ ನಾನು ಗೆಲ್ಲಲೂ ಸಾಧ್ಯವಾಗಿಲ್ಲ : ಕಾರ್ಯಕರ್ತರಲ್ಲಿ ಕ್ಷಮೆಯಾಚಿಸಿದ ಸಿ ಟಿ ರವಿ

By ETV Bharat Karnataka Team

Published : Sep 10, 2023, 7:33 PM IST

Updated : Sep 10, 2023, 10:45 PM IST

ಕಳೆದ ವಿಧಾನಸಭೆಯಲ್ಲಿ ಬಿಜೆಪಿ ಸೋಲಿನ ಹೊಣೆ ಹೊತ್ತ ಮಾಜಿ ಸಚಿವ ಸಿ ಟಿ ರವಿ ಕಾರ್ಯಕರ್ತರಲ್ಲಿ ಕ್ಷಮೆಯಾಚಿಸಿದ್ದಾರೆ.

former-minister-ct-ravi-apologized-to-the-bjp-karyakarthas
ಪಕ್ಷವನ್ನು ಗೆಲ್ಲಿಸಲಾಗಿಲ್ಲ, ಜೊತೆಗೆ ನಾನು ಗೆಲ್ಲಲೂ ಸಾಧ್ಯವಾಗಿಲ್ಲ : ಕಾರ್ಯಕರ್ತರಲ್ಲಿ ಕ್ಷಮೆಯಾಚಿಸಿದ ಸಿಟಿ ರವಿ

ಕಾರ್ಯಕರ್ತರಲ್ಲಿ ಕ್ಷಮೆಯಾಚಿಸಿದ ಸಿ ಟಿ ರವಿ

ಶಿವಮೊಗ್ಗ: ರಾಜ್ಯದಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಜವಾಬ್ದಾರಿಯನ್ನು ನೀಡಲಾಗಿತ್ತು. ಆದರೆ ಗೆಲ್ಲಿಸಲು ಸಾಧ್ಯವಾಗಿಲ್ಲ. ಜೊತೆಗೆ ನಾನು ಗೆಲ್ಲಲೂ ಸಾಧ್ಯವಾಗಿಲ್ಲ. ಈ ಹೊಣೆಯನ್ನು ಸಮರ್ಥವಾಗಿ ನಿಭಾಯಿಸದ ಕಾರಣಕ್ಕಾಗಿ ನಾನು ಕಾರ್ಯಕರ್ತರಲ್ಲಿ ಕ್ಷಮೆ ಯಾಚಿಸುತ್ತೇನೆ ಎಂದು ಮಾಜಿ ಸಚಿವ ಸಿ ಟಿ ರವಿ ಹೇಳಿದ್ದಾರೆ.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ನೈಋತ್ಯ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣಾ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಕ್ಷವನ್ನು ಗೆಲ್ಲಿಸಿಲು ಹೊಣೆಯನ್ನು ನೀಡಲಾಗಿತ್ತು. ನಿಮ್ಮೆಲ್ಲ ಪ್ರಯತ್ನಗಳ ನಡುವೆ ಬಿಜೆಪಿ ಕಾರ್ಯಕರ್ತರಿಗೆ ನಿರಾಸೆ ಉಂಟುಮಾಡಿದ್ದೇವೆ. ಪಕ್ಷದ ಸೋಲಿಗೆ ಕಾರಣ ಏನೇ ಇರಬಹುದು. ಆದರೆ ಹೊಣೆ ನಮ್ಮದೇ. ಆ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಲು ಆಗದೇ ಇರುವ ಕಾರಣ ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ‌ ಎಂದರು.

ಭಾರತ ಜಿ20ಯ ಅಧ್ಯಕ್ಷತೆ ವಹಿಸಿ ತನ್ನ ಪ್ರಾಚೀನತೆಯನ್ನು ಪ್ರದರ್ಶನ ಮಾಡಿದೆ. ಅಷ್ಟೇ ಅಲ್ಲ, ವರ್ತಮಾನದ ನಾಯಕತ್ವವನ್ನು ಜಗತ್ತಿಗೆ ಪರಿಚಯಿಸಿದೆ. ಚರಿತ್ರೆ ತಿಳಿಸುವದಷ್ಟೇ ಅಲ್ಲ. ವಿಶ್ವದ ಭವಿಷ್ಯದ ಭೂಮಿಕೆ ಏನಿರಬೇಕೆಂದು ಪ್ರಸ್ತಾವನೆ ಹಾಕಿಕೊಟ್ಟಿದೆ. ಇದರ ಜೊತೆಗೆ ಜಗತ್ತಿನ ಅತ್ಯಂತ ಬಲಾಢ್ಯ ರಾಷ್ಟ್ರಗಳು ಎಂದು ಪರಿಭಾವಿಸುವ ರಾಷ್ಟ್ರಗಳ ನಾಯಕರೂ ಕೂಡ ನರೇಂದ್ರ ಮೋದಿ ಅವರ ನಾಯಕತ್ವವನ್ನು ಮುಕ್ತ ಕಂಠದಿಂದ ಹೊಗಳಿದ್ದಾರೆ. ತನ್ಮೂಲಕ ಪ್ರಭಾವಿ ನಾಯಕತ್ವವನ್ನು ಪ್ರಧಾನಿ ಮೋದಿ ತೋರಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.

ಮೋದಿ ಪ್ರಧಾನಿ ಆಗುವ ಮುಂಚೆ ಭಾರತ ಹತ್ತನೇ ಆರ್ಥಿಕ ಶಕ್ತಿಯಾಗಿತ್ತು. ಆದರೆ ಈಗ ಜಗತ್ತಿನ ಅತ್ಯಂತ ಐದನೇ ಆರ್ಥಿಕ ಶಕ್ತಿ ಹೊಂದಿರುವ ದೇಶವಾಗಿದೆ. ಯಾರು ತಮ್ಮನ್ನು ತಾವು ಸೂರ್ಯ ಮುಳುಗದ ಸಾಮ್ರಾಜ್ಯ ಅಂತ ಭಾವಿಸಿದ್ದಾರೋ ಹಾಗೂ ಎರಡು ಶತಮಾನಕ್ಕೂ ಹೆಚ್ಚು ಕಾಲ ಇಲ್ಲಿ ಆಡಳಿತ ನಡೆಸಿದ್ದರೋ ಅವರನ್ನು ಹಿಂದಿಕ್ಕಿ ನಾವು ಐದನೇ ಸ್ಥಾನಕ್ಕೆ ಬಂದಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೆಲವರು ಹಿಂದಕ್ಕೆ ಎಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಆ ಜನರಿಗೆ ಮೆಕಾಲೆಯೇ ಅತ್ಯಂತ ದೊಡ್ಡ ಶಿಕ್ಷಣ ತಜ್ಞನಂತೆ ಕಾಣುತ್ತಾನೆ. ಇನ್ನು ಕೆಲವರು ಭಾರತದ ಹೆಸರಿನ ಬಗ್ಗೆ ಅನುಮಾನ ಅಪನಂಬಿಕೆ ವ್ಯಕ್ತಪಡಿಸುತ್ತಾರೆ. ಇದನ್ನು ನೋಡಿದಾಗ ಅವರಿನ್ನೂ ಗುಲಾಮಿ ಮಾನಸಿಕತೆಯಿಂದ ಹೊರ ಬಂದಿಲ್ಲ ಎಂದು ದುಃಖ ಆಗುತ್ತದೆ. ಅವರನ್ನು ಆ ಮಾನಸಿಕತೆಯಿಂದ ಹೊರ ತರುವ ಜವಾಬ್ದಾರಿಯೂ ನಮಗೆ ಇದೆ. ಅಂತಹ ಮಾನಸಿಕತೆ ದೇಶಕ್ಕೂ ಒಳ್ಳೆಯದಲ್ಲ. ಅದರಿಂದ ಹೊರ ತರುವುದಕ್ಕಾಗಿ ಎನ್‌ಇಪಿ(NEP) ಜಾರಿ ಮಾಡಲಾಗಿತ್ತು. ಆದರೆ ಅದೇ ಗುಲಾಮಿ ಮಾನಸಿಕತೆ ಇರಬೇಕು ಎಂಬ ಇಚ್ಛೆ ಕೆಲವರಿಗೆ ಇದೆ. ಅಂಥವರಿಗೆ ಭಾರತ ಅಂದಾಕ್ಷಣ ದಿಗಿಲು ಶುರುವಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ತೊಲಗಿಸಲು ಮೈತ್ರಿ ಒಳ್ಳೆಯದು.. ಆರಗ ಜ್ಞಾನೇಂದ್ರ : ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ತೊಲಗಿಸಲು ಮೈತ್ರಿ ಒಳ್ಳೆಯದು ಎಂದು ಮಾಜಿ ಗೃಹ ಸಚಿವ ಹಾಗೂ ಹಾಲಿ ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಇನ್ನೂ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ನಮ್ಮ ನಾಯಕರು ಇದರ ಬಗ್ಗೆ ಮಾತನಾಡುತ್ತಾರೆ. ಭ್ರಷ್ಟ ಹಾಗೂ ಕೆಟ್ಟ ಕಾಂಗ್ರೆಸ್​ಅನ್ನು ದೂರ ಮಾಡಲು ಮೈತ್ರಿ ಆದರೆ ಒಳ್ಳೆಯದು ಎಂದು ಹೇಳಿದರು.

ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿ ದೇಶವನ್ನು ಟೀಕೆ ಮಾಡುತ್ತಿದ್ದಾರೆ. ದೇಶ ವಿರೋಧಿ ಮಾತುಗಳನ್ನು ಅಲ್ಲಿ ಆಡುತ್ತಿದ್ದಾರೆ. ಇಂಥವರು ಒಂದು ದಿನ ಅಧಿಕಾರದಲ್ಲಿರುವುದು ಕೂಡ ಅಪಾಯ. ಒಂದು ಕಡೆ ಪ್ರಧಾನಿ ಮೋದಿ ದೇಶಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಭಾರತ ಎಷ್ಟು ಬಲಿಷ್ಠ ಎಂದು ಜಗತ್ತಿಗೆ ತೋರಿಸುತ್ತಿದ್ದಾರೆ. ಇದರ ನಡುವೆ ಆಗಾಗ ವಿದೇಶಕ್ಕೆ ಹೋಗಿ ಭಾರತದ ವಿರುದ್ಧ ಮಾತನಾಡುವ ಕೆಲಸವನ್ನು ರಾಹುಲ್ ಗಾಂಧಿ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲೆ ಪ್ರಹಾರ ಆಗುತ್ತಿದೆ ಎಂದು ಹೇಳುತ್ತಿದ್ದಾರೆ. ಇವರಿಂದಲೇ ದೇಶದ ಏಕತೆ, ಸಮಗ್ರತೆ, ಕೀರ್ತಿಗೆ ಭಂಗ ಉಂಟಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಬಿ ಕೆ ಹರಿಪ್ರಸಾದ್ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿರುವ ಬಗ್ಗೆ ಮಾತನಾಡಿ, ಕಾಂಗ್ರೆಸ್​ನಲ್ಲಿ ಭೂಕಂಪದ ಎಲ್ಲಾ ಮುನ್ಸೂಚನೆ ಕಾಣುತ್ತಿದೆ. ಕಾಂಗ್ರೆಸ್ಸಿಗರೇ ಈ ರೀತಿ ನಿಜ ಹೊರ ತರುತ್ತಿದ್ದಾರೆ. ಇದರಿಂದಲೇ ಮುಂದೆ ನಡೆಯುವುದನ್ನು ನಾವು ಈಗಲೇ ಕಲ್ಪನೆ ಮಾಡಬಹುದು. ಹರಿಪ್ರಸಾದ್ ಅವರು ಚೆನ್ನಾಗಿ ಮಾತನಾಡಿದ್ದಾರೆ. ಹರಿಪ್ರಸಾದ್ ಇಂದಿರಾಗಾಂಧಿ ಕುಟುಂಬಕ್ಕೆ ಅತ್ಯಂತ ಆಪ್ತರಾಗಿದ್ದವರು. ಅವರು ಇದೀಗ ಒಳಬೇಗುದಿಯನ್ನು ತೋಡಿಕೊಂಡಿದ್ದಾರೆ. ಅವರ ಪಕ್ಷ ಹಳ್ಳ ಹಿಡಿಯುವ ಸೂಚನೆಗಳು ಅವರ ಬಾಯಿಂದಲೇ ಬರುತ್ತಿವೆ. ಸಿದ್ದರಾಮಯ್ಯ ನಡವಳಿಕೆಯಿಂದ ಪಕ್ಷ ಯಾವ ಕಡೆ ಹೋಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ :BJP and JDS alliance: ಬಿಬಿಎಂಪಿ, ಜಿಪಂ, ತಾಪಂ ಚುನಾವಣೆಯಲ್ಲಿಯೂ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ - ಜಿ ಟಿ ದೇವೇಗೌಡ

Last Updated :Sep 10, 2023, 10:45 PM IST

ABOUT THE AUTHOR

...view details