ಕರ್ನಾಟಕ

karnataka

ವಿಶ್ವ ಜೂನಿಯರ್ ಈಜು ಚಾಂಪಿಯನ್‌ಶಿಪ್‌.. ಭಾರತ ಪ್ರತಿನಿಧಿಸಲಿರುವ ಕರ್ನಾಟಕದ ಸುಹಾನ

By

Published : Sep 10, 2022, 6:52 AM IST

Updated : Sep 10, 2022, 7:01 AM IST

world-junior-swimming-championships
ವಿಶ್ವ ಜೂನಿಯರ್ ಈಜು ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಕರ್ನಾಟಕದ ಸುಹಾನ ()

ಚನ್ನಪಟ್ಟಣದ ಚಕ್ಕೆರೆಯ ಸಭಾ ಸುಹಾನ ಅಂತಾರಾಷ್ಟ್ರೀಯ ವಿಶ್ವ ಜೂನಿಯರ್ ಈಜು ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.

ರಾಮನಗರ :ಆರ್‌ ಟಿ ನಗರದಲ್ಲಿನ ಫ್ಲೋರೆನ್ಸ್ ಪಬ್ಲಿಕ್ ಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ಸಭಾ ಸುಹಾನ, ಅಂತಾರಾಷ್ಟ್ರೀಯ ವಿಶ್ವ ಜೂನಿಯರ್ ಈಜು ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.

4ನೇ ತರಗತಿಯಿಂದಲೇ ಈಜು ಕಲಿಕೆ.. ಮೂಲತಃ ಚನ್ನಪಟ್ಟಣದ ಚಕ್ಕೆರೆಯಲ್ಲಿ 2008 ಆಗಸ್ಟ್ 7ರಂದು ಜನಿಸಿದ ಸಭಾ ಸುಹಾನ 4ನೇ ತರಗತಿ ಇರುವಾಗಲೇ ಈಜು ಕಲಿಕೆ ಶುರು ಮಾಡಿ ಕಠಿಣ ಅಭ್ಯಾಸ ಹಾಗೂ ಶ್ರದ್ಧೆಯಿಂದ ಹಲವು ಸಾಧನೆಗಳನ್ನು ಮಾಡಿ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.

2018 ಮತ್ತು 2019 ರಲ್ಲಿ ಸಾಧನೆ.. 2018ರಲ್ಲಿ ಪ್ರಥಮ ಬಾರಿಗೆ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಪುಣೆಯಲ್ಲಿ ನಡೆದ 35ನೇ ಸಬ್ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಗಮನಾರ್ಹ ಪ್ರದರ್ಶನ ನೀಡಿದ್ದರು. ನಂತರ 2019ರಲ್ಲಿ ರಾಜ್‌ಕೋಟ್‌ನಲ್ಲಿ ನಡೆದ 36ನೇ ಸಬ್ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಮತ್ತೆ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ವೈಯಕ್ತಿಕ ವಿಭಾಗದಲ್ಲಿ ಕಂಚಿನ ಪದಕ ಹಾಗೂ ರಿಲೇನಲ್ಲಿ ಬೆಳ್ಳಿ ಪದಕ ಪಡೆದು ಕೀರ್ತಿ ತಂದಿದ್ದಾರೆ.

ಸ್ವಿಮ್ಮಿಂಗ್​ ಫೆಡರೇಷನ್ ಆಫ್‌ ಇಂಡಿಯಾ ವತಿಯಿಂದ ಹಮ್ಮಿಕೊಂಡಿದ್ದ ಒಂದು ಕಿ.ಮೀ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ಕಂಚಿನ ಪದಕ ಗೆಲ್ಲುವ ಮೂಲಕ ಹೊಸ ಭರವಸೆ ಮೂಡಿಸಿದ್ದಾರೆ. 2020ರಲ್ಲಿ ಶಿವಮೊಗ್ಗದಲ್ಲಿ ನಡೆದ ಮೂರನೇ ನ್ಯಾಷನಲ್ ಒಪನ್ ಚಾಂಪಿಯನ್‌ಶಿಪ್‌ನಲ್ಲಿ 5 ಕಿ.ಮೀ ಈಜಿ ಮೊದಲ ಸ್ಥಾನ ಪಡೆದು ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ನಂತರ 1.25 ಕಿ.ಮೀ ರಿಲೇನಲ್ಲೂ ಮೊದಲ ಸ್ಥಾನ ಪಡೆದು ಭಾರತ ತಂಡಕ್ಕೆ ಆಯ್ಕೆಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗಬೇಕೆಂದ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಮತ್ತಷ್ಟು ಪರಿಶ್ರಮ ಪಡುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೋವಿಡ್​ನಿಂದ ವಿಶ್ವ ಚಾಂಪಿಯನ್‌ಶಿಪ್ ರದ್ದಾಗಿತ್ತು.

ಪ್ರಸ್ತುತ ಇದೇ ತಿಂಗಳು 16ರಿಂದ 18ವರೆಗೂ ಆಫ್ರಿಕಾದ ಫೀನಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ವರ್ಲ್ಡ್ ಜೂನಿಯರ್-22ರಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದು, 14ರಿಂದ 15 ವರ್ಷದೊಳಗಿನ ವೈಯಕ್ತಿಕ 5ಕಿ.ಮೀ ಈಜಿನ ಸ್ಪರ್ಧೆ ಮತ್ತು 1.25 ಕಿ.ಮೀ ರಿಲೆನಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ನಿಹಾರ್​ ಅಮಿನ್​ ಮಾರ್ಗದರ್ಶನ.. ದ್ರೋಣಾಚಾರ್ಯ ಪ್ರಶಸ್ತಿ ಪಡೆದಿರುವ ನಿಹಾರ್ ಅಮೀನ್ ಅವರ ಮಾರ್ಗದರ್ಶನದಲ್ಲಿ ತರಬೇತುದಾರರ ಮಧುಕುಮಾರ್ ಅವರ ಅಣತಿಯಂತೆ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ.

ಇದನ್ನೂ ಓದಿ :ನೀಟ್ ಪರೀಕ್ಷೆ: ದೇಶಕ್ಕೆ ನಾಲ್ಕನೇ ರ‍್ಯಾಂಕ್​​​ ಪಡೆದ ಬೆಳಗಾವಿಯ ರುಚಾ

Last Updated :Sep 10, 2022, 7:01 AM IST

ABOUT THE AUTHOR

...view details