ಕರ್ನಾಟಕ

karnataka

ಟ್ರ್ಯಾಕ್ಟರ್​ದಲ್ಲಿ ಮರಳು ಸಾಗಣೆ ಮಾಡುತ್ತಿದ್ದ ವ್ಯಕ್ತಿಗೆ ಥಳಿತ ಆರೋಪ.. ಪಿಎಸ್​ಐ ವಿರುದ್ಧ ದೂರು ದಾಖಲು

By ETV Bharat Karnataka Team

Published : Sep 24, 2023, 4:22 PM IST

Maski Police Station ಟ್ರಾಕ್ಟರ್‌ನಲ್ಲಿ ಹಳ್ಳದಿಂದ ಮರಳು ಸಾಗಣೆ ಮಾಡುತ್ತಿದ್ದ ವ್ಯಕ್ತಿ ಮೇಲೆ ಮಸ್ಕಿ ಪೊಲೀಸ್ ಠಾಣೆ ಪಿಎಸ್‌ಐ ಮಣಿಕಂಠ ಅವರಿಂದ ತೀವ್ರ ಥಳಿತ ಆರೋಪ: ಮರಳು ಸಾಗಣೆ ವ್ಯಕ್ತಿಯ ಪತ್ನಿಯ ದೂರು ನೀಡಿದ ಆಧಾರದ ಮೇಲೆ ಪಿಎಸ್‌ಐ ಮಣಿಕಂಠ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

Sand transport
ಮರಳು ಸಾಗಣೆ

ರಾಯಚೂರು:ಜಿಲ್ಲೆಯ ಮಸ್ಕಿ ಪೊಲೀಸ್ ಠಾಣೆ ಪಿಎಸ್‌ಐ ಮಣಿಕಂಠ ವಿರುದ್ಧ ಪ್ರಕರಣ ದಾಖಲಾಗಿದೆ. ಸೆ.20 ರಂದು ಟ್ರಾಕ್ಟರ್‌ನಲ್ಲಿ ಹಳ್ಳದಿಂದ ಮರಳು ಸಾಗಣೆ ಮಾಡುತ್ತಿದ್ದ ವ್ಯಕ್ತಿ ನಿರುಪಾದಿ ನಾಯಕ ಮೇಲೆ ಪಿ ಎಸ್‌ ಐ ಮಣಿಕಂಠ ಬಾಸುಂಡೆ ಬರುವಂತೆ‌ ಮನಸೋಯಿಚ್ಛೆ ತೀವ್ರವಾಗಿ ಥಳಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ಪಿಎಸ್ಐನಿಂದ ಥಳಿತದಿಂದ ತೀವ್ರ ಗಾಯಗೊಂಡಿದ್ದ ಟ್ರ್ಯಾಕ್ಟರ್ ಚಾಲಕ ಸಿಂಗನಾಳ ಕ್ಯಾಂಪ್ ನಿವಾಸಿ ನಿರುಪಾದಿ ನಾಯಕನನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಎಫ್‌ಐಆರ್ ದಾಖಲು

''ನಮ್ಮ ಹೊಲದ ಬಳಿ ಒಂದು ಹಳ್ಳವಿದೆ. ಅಲ್ಲಿಂದ ಒಂದು ಟ್ರಿಪ್​ ಮರಳನ್ನು ಸಾಗಿಸಲು ಹೋಗಿದ್ದೆ. ಆ ಸಮಯದಲ್ಲಿ ಮಳೆ ಬರುತ್ತಿತ್ತು. ಆ ವೇಳೆ ಅಲ್ಲಿಗೆ ಪೊಲೀಸ್ ಸಿಬ್ಬಂದಿ ಬಂದು, ನನ್ನನ್ನ ಟ್ರ್ಯಾಕ್ಟರ್​ನಿಂದ ಕೆಳಗೆ ಇಳಿಯಂದರು. ಅಕ್ರಮ ಮರಳು ಸಾಗಣೆ ಆರೋಪದಲ್ಲಿ ಹಿಡಿದು ಪಿಎಸ್​ಐ ಮಣಿಕಂಠ ಅವರು ಮನಸೋಯಿಚ್ಛೆ ಒಂದೂವರೆ ಮಾರು ಉದ್ದದ ಪೈಪ್​ ಮೂಲಕ ಥಳಿಸಿದರು. ಆಗ ನಾನು ಕೂಗಾಡಿದೆ. ಅಲ್ಲಿದ್ದ ಪೊಲೀಸರಿಬ್ಬರು ಬಿಡಿಸಲು ಬಂದರೂ ಕೂಡಾ ಪಿ ಎಸ್ ​ಐ ಬಿಡಲಿಲ್ಲ. ತೀವ್ರವಾಗಿ ನನಗೆ ಹೊಡೆದು ಗಾಯಗೊಳಿಸಿದ್ದಾರೆ'' ಎಂದು ನಿರುಪಾದಿ ನಾಯಕ ಆರೋಪಿಸಿದ್ದ.

ಪಿಎಸ್‌ಐ ದುಂಡಾ ವರ್ತನೆ- ಕುಟುಂಬಸ್ಥರ ಆರೋಪ:ಮಸ್ಕಿ ಪಟ್ಟಣದ ಹಳ್ಳದಿಂದ ನಿರ್ಮಾಣ ಹಂತದಲ್ಲಿರುವ ಸಂಬಂಧಿಕರ ಮನೆಗೆ ಮರಳು ಸಾಗಣೆ ಮಾಡುತ್ತಿದ್ದ ವೇಳೆ ನಿರುಪಾದಿ ನಾಯಕನ ಮೇಲೆ ಸುಖಾಸುಮ್ಮನೆ ಪಿಎಸ್​ಐ ಮಣಿಕಂಠ ಥಳಿಸಿದ್ದಾರೆ. ವ್ಯಕ್ತಿ ನಾಯಕ ಇದರಲ್ಲಿ ಅಕ್ರಮವೆಸಗಿದ್ದರೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳ‌ಬೇಕಿತ್ತು. ಆದ್ರೆ ಹಲ್ಲೆ ನಡೆಸಿ ಪಿಎಸ್‌ಐ ದುಂಡಾ ವರ್ತನೆ ತೋರಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಅಲ್ಲದೇ ನಿರುಪಾದಿ ನಾಯಕ ಪತ್ನಿ ಗಂಡನ ಮೇಲೆ ಅಮಾನುಷ ರೀತಿಯಾಗಿ ಹೊಡೆದಿರುವುದಕ್ಕೆ ಆಕ್ರೋಶ‌ ವ್ಯಕ್ತಪಡಿಸಿ, ಮಸ್ಕಿ ಪೊಲೀಸ್ ಠಾಣೆಗೆ ಪಿಎಸ್‌ಐ ವಿರುದ್ಧ ದೂರು ನೀಡಿದ್ದರು. ಇದೀಗ ದೂರಿನ ಆಧಾರದ ಮೇಲೆ ಪಿಎಸ್‌ಐ ಮಣಿಕಂಠ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಇದನ್ನೂ ಓದಿ:ರಾಯಚೂರು: ಕುಡಿದ ಮತ್ತಿನಲ್ಲಿ ಪತ್ನಿ ಕೊಂದು ಪತಿ ಆತ್ಮಹತ್ಯೆ

ABOUT THE AUTHOR

...view details