ಕರ್ನಾಟಕ

karnataka

ಕೂಲಿ ಕಾರ್ಮಿಕನ ಮೇಲೆ ಹುಲಿ ದಾಳಿ; ಚೀರಾಟದಿಂದ ಉಳಿಯಿತು ಬಡ ಜೀವ

By

Published : Feb 1, 2023, 9:56 PM IST

Updated : Feb 1, 2023, 10:27 PM IST

ಕೂಲಿ ಕಾರ್ಮಿಕನಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು
ಕೂಲಿ ಕಾರ್ಮಿಕನಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು

ಹೆಚ್‌.ಡಿ.ಕೋಟೆ ತಾಲ್ಲೂಕಿನ ಮೇಟೆಕುಪ್ಪೆ ಗ್ರಾಮದಲ್ಲಿ ಕೂಲಿ ಕಾರ್ಮಿಕನ ಮೇಲೆ ಹುಲಿ ದಾಳಿ ಮಾಡಿದೆ.

ಹುಲಿ ದಾಳಿಯ ಬಗ್ಗೆ ಕಾರ್ಮಿಕ ನಾಗೇಶ್​ ಅವರು ಮಾತನಾಡಿದರು

ಮೈಸೂರು: ಹುಲಿ ದಾಳಿಯಿಂದ ಕೂಲಿ ಕಾರ್ಮಿಕ ಗಾಯಗೊಂಡಿರುವ ಘಟನೆ ಹೆಚ್‌.ಡಿ.ಕೋಟೆ ತಾಲ್ಲೂಕಿನ ಮೇಟೆಕುಪ್ಪೆ ಗ್ರಾಮದ ಜಮೀನಿನಲ್ಲಿ ನಡೆದಿದೆ. ಹಿರೇಹಳ್ಳಿ ಎ ಕಾಲೋನಿಯ ಮುನೇಶ್ವರ (27) ಗಾಯಗೊಂಡವರು ಎಂದು ತಿಳಿದುಬಂದಿದೆ. ಬಾಳೆಗೊನೆ ಕತ್ತರಿಸಲು ಕೇರಳಿಗರ ಜಮೀನಿಗೆ ಕೂಲಿ ಕೆಲಸಕ್ಕೆ 3 ಮಂದಿ ಕಾರ್ಮಿಕರು ಹೋಗಿದ್ದಾಗ ಪೊದೆಯಿಂದ ಹೊರಬಂದ ಹುಲಿ ದಾಳಿ ನಡೆಸಿದೆ. ಗಾಬರಿಯಿಂದ ಕಾರ್ಮಿಕರು ಚೀರಾಡುತ್ತಿದ್ದಂತೆಯೇ ಹುಲಿ ಕಾಲ್ಕಿತ್ತಿದೆ. ಮುನೇಶ್ವರ ಅವರ ಬಲಭಾಗದ ಕೈ ಬೆರಳುಗಳು ಸೀಳಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೀದಿನಾಯಿಗಳ ದಾಳಿಗೆ ಹಸು-ಕರು ಬಲಿ:ಜಿಲ್ಲೆಯಲ್ಲಿ ಪ್ರತಿನಿತ್ಯ ಚಿರತೆ, ಹುಲಿ ಹಾಗೂ ಆನೆ ದಾಳಿಗೆ ಮನುಷ್ಯರು ಹಾಗೂ ಸಾಕು ಪ್ರಾಣಿಗಳು ಬಲಿ ಎಂಬ ಸುದ್ದಿ ಕೇಳುತ್ತಿದ್ದೇವೆ. ಆದರೆ ನಗರದಲ್ಲಿ ಬೀದಿ ನಾಯಿಗಳ ದಾಳಿಗೆ ಹಸುವಿನ ಕರು ಬಲಿಯಾಗಿರುವ ಘಟನೆ ಭಾನುವಾರ ಮುಂಜಾನೆ ನಡೆದಿದೆ. ಆರಂಭದಲ್ಲಿ ಚಿರತೆ ದಾಳಿ ನಡೆಸಿದೆ ಎಂದು ಶಂಕಿಸಲಾಗಿತ್ತು. ಬಳಿಕ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಬೀದಿ ನಾಯಿಗಳ ದಾಳಿ ಎಂಬ ವಿಚಾರ ಬೆಳಕಿಗೆ ಬಂದಿದೆ.

ಮೈಸೂರಿನ ರಾಮಕೃಷ್ಣ ನಗರದ ಐ ಬ್ಲಾಕ್​​ ಬಳಿ (ಭಾನುವಾರ) ಮುಂಜಾನೆ 4 ಗಂಟೆಯ ಸಮಯದಲ್ಲಿ ರಸ್ತೆ ಬದಿಯಲ್ಲಿ ಮಲಗಿದ್ದ ಕರು ಸಾವನ್ನಪ್ಪಿತ್ತು. ವಿಚಾರ ತಿಳಿದ ಜನರು ಚಿರತೆ ದಾಳಿ ಮಾಡಿ ಕರುವನ್ನು ಕೊಂದಿದೆ ಎಂದು ಶಂಕಿಸಿದ್ದರು. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಕರು ಸತ್ತಿದ್ದ ಸ್ಥಳ ಹಾಗೂ ರಸ್ತೆಯ ಮೇಲ್ಭಾಗದಿಂದ ಕರುವನ್ನು ಎಳೆದುಕೊಂಡು ಹೋಗಿದ್ದ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಸ್ಥಳದಲ್ಲಿ ಪ್ರಾಣಿಗಳ ಹೆಜ್ಜೆ ಗುರುತುಗಳನ್ನು ಪರಿಶೀಲನೆ ನಡೆಸಿದಾಗ, ಅದು ಚಿರತೆಯ ಹೆಜ್ಜೆ ಗುರುತು ಅಲ್ಲ ಎಂಬುದನ್ನು ಖಚಿತವಾಗಿದೆ. ಹತ್ತಿರದಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದಾಗ, ಕರುವನ್ನು ಬೀದಿ ನಾಯಿಗಳು ಸುತ್ತುವರಿದು, ಎಳೆದುಕೊಂಡು ಹೋಗಿ ಕಚ್ಚಿ ಸಾಯಿಸಿರುವುದು ಬೆಳಕಿಗೆ ಬಂದಿದೆ.

ನಗರದಲ್ಲಿ ಚಿರತೆ ಬಂದು ಕರುವನ್ನು ಕೊಂದು ಹಾಕಿದೆ ಎಂಬ ಸುದ್ದಿ ಹಬ್ಬಿದ್ದರಿಂದ ಜನರು ಭಯಭೀತರಾಗಿದ್ದರು. ಆದರೆ ಕರುವಿನ ಮೇಲೆ ದಾಳಿ ಮಾಡಿದ್ದು, ಚಿರತೆ ಅಲ್ಲ ಬೀದಿ ನಾಯಿಗಳ ಗುಂಪು ಎಂಬ ಸುದ್ದಿ ತಿಳಿದ ಮೇಲೆ ಜನ ನಿಟ್ಟುಸಿರು ಬಿಟ್ಟಿದ್ದಾರೆ.

"ಮೈಸೂರು ನಗರದ ಕೆಲವು ಭಾಗಗಳಲ್ಲಿ ಕರುಗಳನ್ನು ಹಸುಗಳ ಜೊತೆ ಬಿಡುತ್ತಾರೆ. ಕೆಲವು ಹಸುಗಳು ಅವುಗಳನ್ನು ಮನೆಗೆ ಕರೆದುಕೊಂಡು ಹೋಗದೆ ಇರುವುದರಿಂದ ಕರುಗಳು ರಸ್ತೆ ಬದಿ ಮಲಗುತ್ತವೆ. ಆಗ ಬೀದಿ ನಾಯಿಗಳು ದಾಳಿ ಮಾಡುತ್ತವೆ' ಎಂದು ಅರಣ್ಯ ಉಪ ಸಂರಕ್ಷಣಾಧಿಕಾರಿ ಡಾ. ಬಸವರಾಜು ಈಟಿವಿ ಭಾರತಕ್ಕೆ ತಿಳಿಸಿದರು. ರಾಮಕೃಷ್ಣ ನಗರದ ಈ ಭಾಗದಲ್ಲಿ ಪಾರ್ಕ್ ಹಾಗೂ ಕಿರು ಅರಣ್ಯ ಪ್ರದೇಶವಿದೆ. ಹಾಗಾಗಿ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಅವರು ಮನವಿ ಮಾಡಿದರು.

ಇದನ್ನೂ ಓದಿ:ಬೀದಿ ನಾಯಿಗಳ ದಾಳಿಗೆ ಹಸುವಿನ ಕರು ಬಲಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

Last Updated :Feb 1, 2023, 10:27 PM IST

ABOUT THE AUTHOR

...view details