ಕರ್ನಾಟಕ

karnataka

ಆನೆ ಹೋಗ್ತಿದ್ರೆ ನಾಯಿ ಬೊಗಳ್ತಿರುತ್ತೆ... ಜಮೀರ್ ಆರೋಪಕ್ಕೆ ಕುಮಾರಸ್ವಾಮಿ ತಿರುಗೇಟು

By

Published : Oct 24, 2021, 4:53 PM IST

ಹೆಚ್​.ಡಿ.ಕುಮಾರಸ್ವಾಮಿ
ಹೆಚ್​.ಡಿ.ಕುಮಾರಸ್ವಾಮಿ

ಕಾಂಗ್ರೆಸ್​​ ಜತೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿದ ಪರಿಣಾಮ ನಮ್ಮ ಪಕ್ಷ ನೆಲ ಕಚ್ಚುವಂತಾಯಿತು. ಜೆಡಿಎಸ್ ಮುಳುಗಿಸುತ್ತೇನೆ ಎಂದು ಹೊರಟವರ ಸ್ಥಿತಿ ಇಂದು ಏನಾಗಿದೆ ಅಂತಾ ಇತಿಹಾಸ ಹೇಳುತ್ತೆ ಎಂದು ಕಾಂಗ್ರೆಸ್ ವಿರುದ್ಧ ಹೆಚ್​ಡಿಕೆ ವಾಗ್ದಾಳಿ ನಡೆಸಿದ್ರು.

ಮೈಸೂರು: ಜೆಡಿಎಸ್ ಪಕ್ಷವನ್ನು ಸಿದ್ದರಾಮಯ್ಯ ಜೆಡಿಎಫ್(ಫ್ಯಾಮಿಲಿ) ಪಕ್ಷ ಅಂತಾರೆ. ಹಾಗಿದ್ರೆ ವರುಣಾದಲ್ಲಿ ಸಿದ್ದರಾಮಯ್ಯ ಫ್ಯಾಮಿಲಿನಾ ಎಂದು ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರ ಮಗ ಬಿಟ್ಟರೆ, ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ಕಾರ್ಯಕರ್ತರು ಇರಲಿಲ್ಲವೇ? ಅವರಿಗೆ ಟಿಕೆಟ್ ಕೊಡಿಸಿ, ನಾವು ಕುಟುಂಬ ರಾಜಕಾರಣ ಮಾಡಲ್ಲ ಅಂತಾ ಸಿದ್ದರಾಮಯ್ಯ ತೋರಿಸಬೇಕಾಗಿತ್ತು. ಆದರೆ, ಅವರು ಆ ರೀತಿ ಮಾಡಲಿಲ್ಲ. ಸಿದ್ದರಾಮಯ್ಯನವರಿಗೂ ಗೊತ್ತು ಎಲ್ಲರ ಮನೆ ದೋಸೇನೂ ತೂತು ಎಂದು ಕುಟುಕಿದರು.

‘ಸಮ್ಮಿಶ್ರ ಸರ್ಕಾರ ರಚಿಸಿದ್ದಕ್ಕೆ ನಮ್ಮ ಪಕ್ಷ ನೆಲ ಕಚ್ಚಿತು’

ನಾವೆಲ್ಲಾ ಬೆಂಬಲ ಕೊಟ್ಟಿದ್ದಕ್ಕೆ ಕುಮಾರಸ್ವಾಮಿ ಸಾಲಮನ್ನಾ ಮಾಡಿದ್ರು ಅಂತಾ ಸಿದ್ದರಾಮಯ್ಯ ಹೇಳ್ತಾರೆ. ಆದರೆ, ಸಾಲಮನ್ನಾ ಮಾಡಲು ಅವರು ಸಹಕಾರ ಕೊಡಲಿಲ್ಲ ಎಂದು ಆರೋಪಿಸಿದ್ರು. ಬಿಜೆಪಿಯ ಬಿ ಟೀಂ ಜೆಡಿಎಸ್​ ಎಂದು ಕಾಂಗ್ರೆಸ್ ಟೀಕಿಸುತ್ತಿದೆ. ಜೆಡಿಎಸ್​ ಮುಳುಗೇ ಹೋಯ್ತು ಅಂತಾ ಹೇಳ್ತಾರೆ. ಹಿಂದಿನ ಬೆಳವಣಿಗೆ ನೋಡಿದ್ರೆ, ಜೆಡಿಎಸ್​ ಎಂತಹ ಸವಾಲುಗಳನ್ನು ಎದುರಿಸಿದೆ. ಕಾಂಗ್ರೆಸ್​​ ಜತೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿದ ಪರಿಣಾಮ ನಮ್ಮ ಪಕ್ಷ ನೆಲ ಕಚ್ಚುವಂತಾಯಿತು ಎಂದು ದೂರಿದ್ರು. ಜೆಡಿಎಸ್ ಮುಳುಗಿಸುತ್ತೇನೆ ಎಂದು ಹೊರಟವರ ಸ್ಥಿತಿ ಇಂದು ಏನಾಗಿದೆ ಅಂತಾ ಇತಿಹಾಸ ಹೇಳುತ್ತೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ರು.

ಕಾಂಗ್ರೆಸ್ ಜತೆ ಸೇರಿ ಮೈತ್ರಿ ಸರ್ಕಾರ ರಚಿಸಿದ್ದಕ್ಕೆ ಜೆಡಿಎಸ್​ ನೆಲ ಕಚ್ಚಿದೆ : ಹೆಚ್​.ಡಿ.ಕುಮಾರಸ್ವಾಮಿ

‘ಆರ್​ಎಸ್​ಎಸ್​ ಬಗ್ಗೆ ವಾಸ್ತವ ಹೇಳಿದ್ರೆ ಅದು ತಪ್ಪು’

ಬಿಜೆಪಿಯವರು ಸ್ವಚ್ಚ ಭಾರತ ಅಂತಾರೆ. ಆದ್ರೆ, ಉತ್ತರ ಕರ್ನಾಟಕದಲ್ಲಿ ಜನ ಚೊಂಬು ಹಿಡಿದು ಬಹಿರ್ದೆಸೆಗೆ ಹೋಗೋದು ತಪ್ಪಿಲ್ಲ, ಇದೇ ಸ್ವಚ್ಛ ಭಾರತನಾ? ಎಂದು ಕಿಡಿಕಾರಿದ್ರು. ಆರ್​ಎಸ್​ಎಸ್​ ಬಗ್ಗೆ ವಾಸ್ತವಾಂಶ ಹೇಳಿದ್ರೆ ಅದು ತಪ್ಪು ಎಂದು ಬಿಜೆಪಿಯವರು ಅಪಪ್ರಚಾರ ಮಾಡ್ತಾರೆ ಅಂತಾ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

‘ಕಾರ್ಯಕರ್ತರೇ ನಮಗೆ ಲೀಡರ್​ಗಳು’

ಜೆಡಿಎಸ್‌ನಲ್ಲಿ ದೊಡ್ಡ ಮಟ್ಟದ ಲೀಡರ್​ಗಳಿಲ್ಲ, ಕಾರ್ಯಕರ್ತರೇ ನಮಗೆ ಲೀಡರ್​ಗಳು. 90 ವರ್ಷದ ದೇವೇಗೌಡರು, ನಾನು ಇಬ್ಬರೇ ಹೋರಾಟ ಮಾಡುತ್ತಿದ್ದೇವೆ. ನಾಳೆ ಮತ್ತೆ ಎರಡು ದಿನಗಳ ಕಾಲ ಸಿಂದಗಿ, ಹಾನಗಲ್ ಉಪ ಚುನಾವಣಾ ಪ್ರಚಾರಕ್ಕೆ ಹೋಗ್ತೀನಿ ಎಂದರು.

‘ಆನೆ ಹೋಗ್ತಿದ್ರೆ, ನಾಯಿ ಬೊಗಳ್ತಿರುತ್ತೆ’

ಕುಮಾರಸ್ವಾಮಿ ವಿರುದ್ಧ ಹಣಗಳಿಕೆ ಆರೋಪ ಮಾಡಿರುವ ಶಾಸಕ ಜಮೀರ್ ಅಹ್ಮದ್ ವಿರುದ್ಧ ಮಾತನಾಡಿದ ಅವರು, ಈ ಹಿಂದೆ ನಾನು ಬಿಬಿಎಂಪಿಯ ನಾಲ್ಕು ವಾರ್ಡ್​ಗಳಲ್ಲಿ ಟ್ರ್ಯಾಕ್ಟರ್​ ಮೂಲಕ ಕಸ ಸಂಗ್ರಹಿಸುವ ಗುತ್ತಿಗೆ ಕೆಲಸಗಾರನಾಗಿದ್ದೆ. ಅದರಿಂದ ಬಂದ ಹಣದಿಂದ ವ್ಯಾಸಂಗ ಮಾಡುತ್ತಿದ್ದೆ. ಅಂದಿನ ವಿಪಕ್ಷ ನಾಯಕ ನಾಗೇಗೌಡರು ಈ ವಿಷಯವನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಿದ್ರು. ನಮ್ಮ ತಂದೆ ಕೂಡಲೇ ಬೈದು ಕಸ ಸಂಗ್ರಹ ಗುತ್ತಿಗೆ ಮಾಡದಂತೆ ಹೇಳಿದ್ರು. ಬಳಿಕ ಮೈಸೂರಿಗೆ ಬಂದು ಚಿತ್ರ ವಿತರಕನಾಗಿ ಕೆಲಸ ಆರಂಭಿಸಿದೆ. ಅಂದು ನಾನು ಹಣಗಳಿಸಬಹುದಾಗಿದ್ರೆ, ಎಷ್ಟು ಗಳಿಸಬಹುದಿತ್ತು. ಅದೆಲ್ಲಾ ಬಿಡಿ, ನಾನು ಅವರ ಮಾತಿಗೆ ಉತ್ತರ ಕೊಡಲು ಅವರು(ಜಮೀರ್ ಅಹ್ಮದ್) ಅನ್​ಫಿಟ್​ ಎಂದರು. ಆನೆ ಹೋಗ್ತಿದ್ರೆ, ನಾಯಿ ಬೊಗಳುತ್ತವೆ. ಅವರಿಗೆಲ್ಲಾ ತಲೆ ಕೆಡಿಸಿಕೊಳ್ಳೋಕೆ ಆಗುತ್ತಾ ಎಂದು ಕಿಡಿಕಾರಿದರು.

ಜಿಟಿಡಿ ಪರ ಹೆಚ್​ಡಿಕೆ ಒಲವು

ಪಕ್ಷ ಬಿಡಿ ಅಂತಾ ನಾನು ಯಾರಿಗೂ ಹೇಳಿಲ್ಲ. ನನ್ನ ಮಗ ಹಾಗೂ ಜಿಟಿಡಿ ಮಗ ಚಾಮುಂಡಿ ಬೆಟ್ಟದಲ್ಲಿ ಭೇಟಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಅವರೇ ನಮ್ಮನ್ನು ಒಂದು ಮಾಡಬಹುದು. ಮಕ್ಕಳ ಮಾತನ್ನು ನಾವು ಕೇಳಲೇಬೇಕಲ್ಲವೇ ಎಂದರು.

ABOUT THE AUTHOR

...view details