ಕರ್ನಾಟಕ

karnataka

ಐದು ವರ್ಷಗಳಲ್ಲಿ ಗಂಗಾವತಿ ಪ್ಯಾರಿಸ್ ರೀತಿ ಅಭಿವೃದ್ಧಿ : ಶಾಸಕ ಜಿ. ಜನಾರ್ದನ ರೆಡ್ಡಿ

By

Published : Jun 7, 2023, 8:02 PM IST

ಗಂಗಾವತಿ ಅಭಿವೃದ್ಧಿ ಯೋಜನೆಯನ್ನು ಮುಂದಿನ ಐದು ವರ್ಷದೊಳಗೆ ಅನುಷ್ಠಾನ ಮಾಡಲಾಗುವುದು ಎಂದು ಜನಾರ್ದನ ರೆಡ್ಡಿ ಹೇಳಿದರು.

ಶಾಸಕ ಜಿ. ಜನಾರ್ದನ ರೆಡ್ಡಿ
ಶಾಸಕ ಜಿ. ಜನಾರ್ದನ ರೆಡ್ಡಿ

ಗಂಗಾವತಿ ಅಭಿವೃದ್ಧಿ ಯೋಜನೆಯನ್ನು ಮುಂದಿನ ಐದು ವರ್ಷದೊಳಗೆ ಅನುಷ್ಠಾನ

ಗಂಗಾವತಿ (ಕೊಪ್ಪಳ) :ಪ್ಯಾರಿಸ್​ಗೆ ಹೋದರೆ ಏನು ಅನುಭವ ಆಗುತ್ತದೆಯೋ ಆ ಅನುಭವ ಗಂಗಾವತಿಯಲ್ಲಿ ಸಂಚರಿಸಿದಾಗ ಆಗಬೇಕು. ಆ ಮಾದರಿಯ ಅಭಿವೃದ್ಧಿಗೆ ಸಂಕಲ್ಪ ಮಾಡಿದ್ದೇನೆ. ಗಂಗಾವತಿಯನ್ನು ಹೇಗೆ ಅಭಿವೃದ್ಧಿ ಮಾಡ ಬೇಕು ಎಂಬ ಸ್ಪಷ್ಟ ಕಲ್ಪನೆ ನನಗಿದೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಗಂಗಾವತಿ ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು.

ನಗರದ ತಮ್ಮ ನಿವಾಸದಲ್ಲಿ ಈ ಬಗ್ಗೆ ಮಾತನಾಡಿದ ಅವರು, ಮುಂದಿನ ಐದು ವರ್ಷದೊಳಗೆ ಈ ಯೋಜನೆಯನ್ನು ಅನುಷ್ಠಾನ ಮಾಡಲಾಗುವುದು. ಗಂಗಾವತಿ ಅಭಿವೃದ್ದಿ ವಿಚಾರದಲ್ಲಿ ಎರಡು ಅಥವಾ ಮೂರು ತಿಂಗಳಿಗೊಮ್ಮೆ ಸ್ಥಳೀಯ ಸಾಹಿತಿ, ಬರಹಗಾರರು, ಅಭಿವೃದ್ಧಿ ಚಿಂತಕರ ಸಭೆ ಕರೆದು ಸಲಹೆ ಸೂಚನೆ ಸ್ವೀಕರಿಸಲಾಗುವುದು. ಊರು ಸಣ್ಣದಾಗಿದ್ದರೂ ಒಂದು ಸುಂದರ ಸಣ್ಣ ಮಹಾನಗರದಲ್ಲಿರುವ ಅನುಭವ ಉಂಟಾಗಬೇಕು. ಹೀಗೆ ಮಾಡಲು ಐಡೇಕ್ ಎಂಬ ಏಜನ್ಸಿ ಸೇರಿದಂತೆ ಗುಜರಾತ್ ಮೂಲದ ನಾನಾ ಸಂಸ್ಥೆಗಳಿಗೆ ಗಂಗಾವತಿ ಅಭಿವೃದ್ಧಿ ಬಗ್ಗೆ ಮಾಸ್ಟರ್ ಪ್ಲಾನ್ ಮಾಡಲು ನೀಲನಕ್ಷೆ ತಯಾರಿಗೆ ನೀಡಲಾಗಿದೆ ಎಂದು ತಿಳಿಸಿದರು.

ತಿರುಪತಿ ಮಾದರಿಯಲ್ಲಿ ಅಂಜನಾದ್ರಿ :ಅಂಜನಾದ್ರಿಯನ್ನು ತಿರುಪತಿಯಂತೆ ಅಭಿವೃದ್ಧಿ ಪಡಿಸಲಾಗುವುದು. ತಿರುಪತಿ, ಅಯೋಧ್ಯೆಯ ಅಭಿವೃದ್ಧಿ ಮತ್ತು ಕಲಾಕೃತಿಗಳಂತೆ ನಿರ್ಮಾಣಕ್ಕೆ ಯಾವ ಕಲಾವಿದರು ಶ್ರಮಿಸಿದ್ದಾರೋ ಅಂಥವರನ್ನು ಕರೆತಂದು ಅಂಜನಾದ್ರಿ ಅಭಿವೃದ್ಧಿ ಮಾಡಿಸಲಾಗುದು.
ಹಾಗು 26 ರಾಜ್ಯಗಳ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಅಂಜನಾದ್ರಿ ಅಭಿವೃದ್ಧಿಯಲ್ಲಿ ಭಾಗಿಯಾಗುವಂತೆ ಪ್ರೇರೇಪಿಸುತ್ತೇನೆ. ತಿರುಪತಿ ಮಾದರಿಯಲ್ಲಿ ಪ್ರತಿಯೊಂದು ರಾಜ್ಯದ ಹೆಸರಲ್ಲಿ ಭವನ, ಯಾತ್ರಿ ನಿವಾಸ ನಿರ್ಮಾಣಕ್ಕೆ ಅನುದಾನ ಕೋರಲಾಗುವುದು. ಆಯಾ ರಾಜ್ಯದ ಯಾತ್ರಾರ್ಥಿಗಳು ಅಲ್ಲಿಗೆ ಬಂದು ಉಳಿದುಕೊಳ್ಳಬಹದು ಎಂದರು.

ಕೇವಲ ರಾಜ್ಯ ಸರ್ಕಾರದ ಅನುದಾನ ಮಾತ್ರವಲ್ಲ, ದೊಡ್ಡ ಉದ್ಯಮಿಗಳನ್ನು ಕರೆತಂದು ಅವರ ವೈಯಕ್ತಿಕ ನೆರವಿನಿಂದಲೂ ಯಾತ್ರಿ ನಿವಾಸ ನಿರ್ಮಾಣ ಮಾಡಿ ಅಂಜನಾದ್ರಿಗೆ ಬರುವ ಲಕ್ಷಾಂತರ ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಿಕೊಡುವ ಕೆಲಸ ಮಾಡುತ್ತೇನೆ. ಅಂಜನಾದ್ರಿ ಸುತ್ತಲೂ ಯಾವುದೇ ಕಾರಣಕ್ಕೂ ಕಾಂಕ್ರೀಟ್ ಕಾಡು ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ. ಬದಲಿಗೆ 20 ಕಿಲೋ ಮೀಟರ್ ಅಂತರದಲ್ಲಿ ಬೂದಗುಂಪಾ, ಗಂಗಾವತಿಯಂತ ಪ್ರದೇಶದಲ್ಲಿ ಯಾತ್ರಿನಿವಾಸ, ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಿ ಅಂಜನಾದ್ರಿ ಸುತ್ತಲಿನ ಪ್ರಕೃತಿ, ಪರಿಸರಕ್ಕೆ ಹಾನಿಯಾಗದಂತೆ ಮುಂಜಾಗ್ರತೆ ವಹಿಸಲಾಗುವುದು ಎಂದು ಜನಾರ್ದನರೆಡ್ಡಿ ತಾವು ಮಾಡಿರುವ ಪ್ಲಾನ್​ಗಳ ಬಗ್ಗೆ ಮಾಹಿತಿ ನೀಡಿದರು.

ಹೊಸಪೇಟೆಗೆ 200 ಕೋಟಿ :ಐತಿಹಾಸಿಕ ಸ್ಥಳವಾಗಿ ನೋಡುವ ಕಾಲಘಟ್ಟದಲ್ಲಿ ಹೊಸಪೇಟೆ ಹೇಗಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ನನ್ನ ಅವಧಿಯಲ್ಲಿ ಹಂಪೆಗೆ ಬರುವ ಪ್ರವಾಸಿಗರಿಗೆ ಅನುಕೂಲ ಆಗಬೇಕು ಎಂಬ ಕಾರಣಕ್ಕೆ ಹತ್ತಾರು ಯೋಜನೆ ಸಿದ್ಧಪಡಿಸಲಾಗಿತ್ತು. ಹೊಸಪೇಟೆಯ ಸೌಂದರೀಕರಣಕ್ಕೆ 200 ಕೋಟಿ ಹಣ ನೀಡಿದ್ದೆ. ಹಲವು ಕಾರ್ಯಗತವಾಗಿದ್ದು, ಇನ್ನೂ ಕೆಲವು ಅನುಷ್ಠಾನವಾಗಬೇಕಿದೆ ಎಂದು ಮಾಜಿ ಸಚಿವರು ತಿಳಿಸಿದರು.

ಹಂಪೆಯ ಪ್ರವಾಸಕ್ಕೆ ಬರುವ ವಿದೇಶಿಗರಿಗೆ ಮೊದಲು ಸುರಕ್ಷತೆಯ ಭಾವನೆ ಮೂಡಬೇಕು. ಇದಕ್ಕಾಗಿ ರೈಲ್ವೆ, ರಸ್ತೆ, ಲೈಟಿಂಗ್ ವ್ಯವಸ್ಥೆಗೆ ಆದ್ಯತೆ ನೀಡಲಾಗಿತ್ತು. ಬಳ್ಳಾರಿ ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸುವ ಸಂಬಂಧ 900 ಎಕರೆ ಜಮೀನು ಸ್ವಾಧೀನವಾಗಿದ್ದು, ಇನ್ನಷ್ಟು ಆಗಬೇಕಿದೆ. ಈಗಾಗಲೇ ಸರ್ಕಾರ ವಿಮಾನ ನಿಲ್ದಾಣದ ಅಭಿವೃದ್ಧಿಗೆ ಟೆಂಡರ್ ಕರೆದಿದ್ದು, ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಜನಾರ್ದನರೆಡ್ಡಿ ಹೇಳಿದರು.

ಇದನ್ನೂ ಓದಿ :ದಸರಾ ಮಾತ್ರವಲ್ಲ, ಕನ್ನಡ ತಾಯಿ ಭುವನೇಶ್ವರಿ ಮೂಲ ಹಂಪಿ: ಜನಾರ್ದನ ರೆಡ್ಡಿ

ABOUT THE AUTHOR

...view details