ಕರ್ನಾಟಕ

karnataka

ಕೋಲಾರದ ಜಿಲ್ಲಾಸ್ಪತ್ರೆಯಲ್ಲಿ ನೀರಿನ ಸಮಸ್ಯೆ.. ಪರದಾಡುತ್ತಿರುವ ರೋಗಿಗಳು

By

Published : Oct 5, 2022, 3:44 PM IST

ಕೋಲಾರದ ಜಿಲ್ಲಾಸ್ಪತ್ರೆ

ಕೋಲಾರದ ಜಿಲ್ಲಾಸ್ಪತ್ರೆಯಲ್ಲಿ ನೀರಿನ ಸಮಸ್ಯೆ ಉಲ್ಬಣವಾಗಿದೆ. ಪರಿಣಾಮ ರೋಗಿಗಳು ಪರದಾಡುವಂತಾಗಿದೆ.

ಕೋಲಾರ:ಇಲ್ಲಿನ ನರಸಿಂಹರಾಜ ಜಿಲ್ಲಾ ಆಸ್ಪತ್ರೆಯಲ್ಲಿ ಬಾಣಂತಿಯರು‌ ಬಿಸಿ‌ ನೀರಿಗಾಗಿ, ರೋಗಿಗಳು ಪರದಾಡುವಂತಾಗಿದೆ. ‌ಹಲವು ದಿನಗಳಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಸರಿಯಾದ ನೀರು ಸರಬರಾಜಾಗುತ್ತಿಲ್ಲ. ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ಬಿಸಿ ನೀರು ಸಿಗುತ್ತಿಲ್ಲ ಅನ್ನೋದು ಒಂದು ಕಡೆಯಾದರೆ, ಇನ್ನೊಂದು ಕಡೆ ಇರುವ ಶೌಚಾಲಯಗಳಲ್ಲಿ ನೀರು ಬರ್ತಿಲ್ಲ. ಪರಿಣಾಮ ಶೌಚಾಲಯ ಕ್ಲೀನ್​ ಇಲ್ಲದೇ ಶೌಚಾಲಯಕ್ಕೆ ಕಾಲಿಡಲಾಗದ ಸ್ಥಿತಿ ನಿರ್ಮಾಣವಾಗಿದೆ.

ಕೋಲಾರದ ಜಿಲ್ಲಾಸ್ಪತ್ರೆಯಲ್ಲಿ ನೀರಿನ ಸಮಸ್ಯೆ ಬಗ್ಗೆ ಬಾಣಂತಿ ವಿವರಿಸುವುದು

ಕಳೆದ ಹತ್ತು ಹದಿನೈದು ದಿನಗಳಿಂದ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಆಸ್ಪತ್ರೆಯಲ್ಲಿ ಸರಿಯಾದ ನೀರಿಲ್ಲದೇ ಶುಚಿತ್ವವಿಲ್ಲದೇ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಗಬ್ಬು ವಾಸನೆ ಬೀರುತ್ತಿದೆ. ಪರಿಣಾಮ ಆಸ್ಪತ್ರೆಯೊಳಗೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಬಾಣಂತಿಯರು ಹಾಗೂ ಮಕ್ಕಳು ಬಳಸಿ ಬಿಸಾಡಿದ ಪ್ಯಾಡ್​ಗಳ ವಾಸನೆ ಹಿಡಿದು ಬರುವ ನಾಯಿಗಳು ಎಲ್ಲಿ ಮಕ್ಕಳನ್ನು ಕಚ್ಚಿಕೊಂಡು ಹೋಗಿಬಿಡುತ್ತವೋ ಅನ್ನೋ ಆತಂಕ ಕೂಡಾ ಆಸ್ಪತ್ರೆಗೆ ಬರುವ ತಾಯಿಯರದ್ದಾಗಿದೆ.

ಇಷ್ಟೊಂದು ಅವ್ಯವಸ್ಥೆ ಇರುವ ಆಸ್ಪತ್ರೆಗೆ ಹೈಟೆಕ್​ ಆಸ್ಪತ್ರೆ ಅಂತ ಕರೆಯುತ್ತಾರೆ. ಯಾವ ಕಡೆಯಿಂದ ಇದು ಹೈಟೆಕ್​ ಆಸ್ಪತ್ರೆ ರೀತಿ ಕಾಣಿಸುತ್ತದೆ ಅನ್ನೋದು ಸದ್ಯ ಮಹಿಳೆಯರ ಪ್ರಶ್ನೆ. ಇನ್ನು ಈ ಆಸ್ಪತ್ರೆಯಲ್ಲಿ ಬಾಣಂತಿಯರು ನೀರಿಲ್ಲದೇ ಅನಿವಾರ್ಯವಾಗಿ ಆಸ್ಪತ್ರೆಗೆ ಹೊಂದಿಕೊಂಡಿರುವ ಖಾಸಗಿ ಶೌಚಾಲಯಕ್ಕೆ 5 ರೂ.ಗಳನ್ನು ಕೊಟ್ಟು ಹೋಗಬೇಕಾಗಿದೆ. ಇಲ್ಲ ಮನೆಯಿಂದಲೇ ಬಿಸಿ ನೀರು ತರಬೇಕಾದ ಸ್ಥಿತಿ ಇದೆ.

ಅಧಿಕಾರಿಗಳ ಬೇಜಾಬ್ದಾರಿತನ: ಇನ್ನು ಜಿಲ್ಲಾಸ್ಪತ್ರೆಯಲ್ಲಿ ಈ‌ ಸಮಸ್ಯೆಗಳು ಹೊಸದೇನಲ್ಲ. ಕೊರೊನಾ‌ ಸಂದರ್ಭದಲ್ಲಿ ಆಕ್ಸಿಜನ್​ ಸರಬರಾಜು ನಿರ್ವಹಣೆಯಲ್ಲಿ ಸಿಬ್ಬಂದಿ ಮಾಡಿದ ಎಡವಟ್ಟಿನಿಂದ ಒಂದೇ ದಿನ ಐದು ಜನ ರೋಗಿಗಳು ಮೃತಪಟ್ಟಿದ್ದರು. ಇತ್ತೀಚಿಗೆ ಡಯಾಲಿಸ್ ಮಿಷನ್​ಗಳು ಕೆಟ್ಟು ಹೋಗಿ ರೋಗಿಗಳು ಪರದಾಡುವಂತಾಗಿತ್ತು. ಒಂದಲ್ಲ ಒಂದು ಎಡವಟ್ಟಿನಿಂದ ಸುದ್ದಿಯಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ಅಧಿಕಾರಿಗಳ ಬೇಜಾಬ್ದಾರಿತನದಿಂದ ರೋಗಿಗಳು ಪರದಾಡುತ್ತಿದ್ದರೂ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ.‌

ಜಿಲ್ಲಾಸ್ಪತ್ರೆಯಲ್ಲಿ ನೀರಿನ ಸಮಸ್ಯೆ: ಇನ್ನು ಕಳೆದ ಹತ್ತು ಹದಿನೈದು ದಿನಗಳಿಂದ ಜಿಲ್ಲಾಸ್ಪತ್ರೆಯಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಆದರೂ ಈವರೆಗೂ ಅದಕ್ಕೆ ಪರಿಹಾರ ಹುಡುಕುವ ಪ್ರಯತ್ನ ಮಾಡಿಲ್ಲ. ಆಸ್ಪತ್ರೆಗೆ ಬರುವ ಬಾಣಂತಿಯರು, ರೋಗಿಗಳು ಮೇಲಿಂದ ಮೇಲೆ ದೂರು ನೀಡಿ ಸಮಸ್ಯೆ ಹೇಳಿಕೊಂಡರೂ ಈವರೆಗೂ ಸಮಸ್ಯೆ ಮುಂದುವರೆಯುತ್ತಲೇ ಇದೆ. ಅಂದರೆ ಇವರ ಬೇಜವಾಬ್ದಾರಿತನ ಎಷ್ಟಿದೆ ಅನ್ನೋದು ತಿಳಿಯುತ್ತದೆ.

ಟ್ಯಾಂಕರ್​ ಮೂಲಕ ನೀರು ಪೂರೈಕೆ: ಇನ್ನು ಈ ಬಗ್ಗೆ ಜಿಲ್ಲಾ ಶಸ್ತ್ರಚಿಕಿತ್ಸಕ ಇಷ್ಟೊಂದು ನೀರಿನ ಸಮಸ್ಯೆ ಇದ್ದರೂ ಸಮಸ್ಯೆ ಇಲ್ಲ ಅನ್ನೋ ಬೇಜವಾಬ್ದಾರಿ ಉತ್ತರ ಕೊಡುತ್ತಿದ್ದಾರೆ. ಅಲ್ಲದೇ ಸಮಸ್ಯೆ ಇಲ್ಲ ಬೋರ್​ವೆಲ್​ ಕೆಟ್ಟು ಹೋಗಿದ್ದು ಟ್ಯಾಂಕರ್​ ಮೂಲಕ ನೀರು ಕೊಡಲಾಗುತ್ತಿದೆ ಎನ್ನುತ್ತಿದ್ದಾರೆ. ಆದರೆ, ಟ್ಯಾಂಕರ್ ನೀರು ಎಲ್ಲಿಗೆ ಹೋಯ್ತು ಅನ್ನೋದು ಮಾತ್ರ ಗೊತ್ತಾಗುತ್ತಿಲ್ಲ. ಹೀಗೆ ಸಮಸ್ಯೆಗಳು ಹತ್ತಾರು ಕಣ್ಣಮುಂದೆಯೇ ಇದ್ದರೂ ಅಧಿಕಾರಿಗಳು ಏನೂ ಸಮಸ್ಯೆ ಇಲ್ಲದಂತೆ ಪೋಸ್​ ಕೊಡುತ್ತಿದ್ದಾರೆ.

ಒಟ್ಟಾರೆ ಬಡ ರೋಗಿಗಳ ಪಾಲಿಗೆ ಸಂಜೀವಿನಿಯಾಗಬೇಕಾಗಿದ್ದ ಮೈಸೂರು ಮಹಾರಾಜರು ನಿರ್ಮಾಣ ಮಾಡಿಸಿದ್ದ ಜಿಲ್ಲಾಸ್ಪತ್ರೆ ಇಂದು ರೋಗಿಗಳ ಪಾಲಿಗೆ ನರಕವಾಗಿದೆ. ಸಂಬಂಧಪಟ್ಟವರು‌ ಈಗಾಲಾದರೂ‌ ಎಚ್ಚೆತ್ತುಕೊಂಡು ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಬಡರೋಗಿಗಳ ಸ್ಥಿತಿ ದುಸ್ಥರವಾಗೋದರಲ್ಲಿ ಅನುಮಾನವಿಲ್ಲ.

ಓದಿ:ಬೆಂಗಳೂರಲ್ಲಿ ಆಸ್ತಿಗಾಗಿ ಹೆತ್ತ ತಾಯಿ ಹತ್ಯೆಗೆ ಯತ್ನ.. ಮಗನನ್ನು ಬಂಧಿಸಿದ ಪೊಲೀಸರು

ABOUT THE AUTHOR

...view details