ಕರ್ನಾಟಕ

karnataka

ಪಕ್ಷವನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತನ್ನಿ: ಹೆಚ್​ ಡಿ ಕುಮಾರಸ್ವಾಮಿ

By

Published : Sep 18, 2022, 7:56 PM IST

ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ
ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ

ಕೋಲಾರದಲ್ಲಿ ಹೆಚ್ಚಾಗಿ ಅಲ್ಪಸಂಖ್ಯಾತರ ಮತಗಳಿವೆ ಅನ್ನೋದನ್ನ ಅರಿತಿರುವ ಜೆಡಿಎಸ್​ ಪ್ರತ್ಯೇಕವಾಗಿ ಅಲ್ಪಸಂಖ್ಯಾತರಿಗಾಗಿ ಸಮಾವೇಶ ಮಾಡಿತ್ತು.

ಕೋಲಾರ: 2023ರ ಚುನಾವಣೆಯನ್ನು ಟಾರ್ಗೆಟ್​ ಮಾಡಿಕೊಂಡಿರುವ ಜೆಡಿಎಸ್​ ರಾಜ್ಯದಲ್ಲಿ ಸಮಾವೇಶಗಳ ಮೇಲೆ ಸಮಾವೇಶ ಮಾಡಿಕೊಂಡು ಸಂಘಟನೆ ಶುರುಮಾಡಿದೆ. ಈ ನಿಟ್ಟಿನಲ್ಲಿ ದಳಪತಿಗಳು ಕಾಲಿಗೆ ಬಿಡುವಿಲ್ಲದೆ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ.

ಈ ಸಾಲಿಗೆ ಇಂದು ಕೋಲಾರದಿಂದ ಹೊಸದಾಗಿ ಅಲ್ಪಸಂಖ್ಯಾತರ ಸಮಾವೇಶವನ್ನು ಆರಂಭ ಮಾಡಲಾಗಿದೆ. ರಾಜ್ಯದ ಮೂಡಣಬಾಗಿಲು ಕೋಲಾರದಿಂದ ಇದೇ ಮೊದಲ ಬಾರಿಗೆ ಅಲ್ಪಸಂಖ್ಯಾತರ ಸಮಾವೇಶವನ್ನು ಆಯೋಜಿಸಿ ಅಲ್ಪಸಂಖ್ಯಾತರಿಗೆ ತಮ್ಮ ಪಕ್ಷದಿಂದ ಮಾಡಿರುವ ಕಾರ್ಯಕ್ರಮಗಳೇನು?. ತಮ್ಮ ಪಕ್ಷದ ನಿಲುವೇನು? ಅನ್ನೋದನ್ನು ತಿಳಿಸುವ ಮೂಲಕ ಜೆಡಿಎಸ್​ ಅಲ್ಪಸಂಖ್ಯಾತರ ಪರವಾಗಿದೆ ಅನ್ನೋದನ್ನು ಹೇಳೋದಕ್ಕೆ ಪ್ರಯತ್ನ ಮಾಡಲಾಗುತ್ತಿದೆ.

ಇನ್ನು, ಕೋಲಾರದಲ್ಲಿ ಹೆಚ್ಚಾಗಿ ಅಲ್ಪಸಂಖ್ಯಾತರ ಮತಗಳಿವೆ ಅನ್ನೋದನ್ನ ಅರಿತಿರುವ ಜೆಡಿಎಸ್​ ಪ್ರತ್ಯೇಕವಾಗಿ ಅಲ್ಪಸಂಖ್ಯಾತರಿಗಾಗಿ ಸಮಾವೇಶ ಮಾಡಿತ್ತು. ಕಾರ್ಯಕ್ರಮದಲ್ಲಿ ಸಾವಿರಾರು ಜನ ಅಲ್ಪಸಂಖ್ಯಾತ ಸಮುದಾಯದ ಜನರು ಸೇರಿದ್ದರು. ಇದೇ ವೇಳೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಕಾರ್ಯಕ್ರಮದಲ್ಲಿ ಉರ್ದು ಭಾಷೆಯಲ್ಲೇ ಬಾಷಣ ಮಾಡುತ್ತ, ಕಾಂಗ್ರೆಸ್​ ಮತ್ತು ಬಿಜೆಪಿ ವಿರುದ್ಧ ತಮ್ಮದೇ ಶೈಲಿಯಲ್ಲಿ ಟೀಕಾಪ್ರಹಾರ ಮಾಡಿದ್ರು.

ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ಅವರು ಮಾತನಾಡಿದರು

ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಕಾಂಗ್ರೆಸ್​ ಹಾಗೂ ಬಿಜೆಪಿ ಸರ್ಕಾರಗಳ ವಿರುದ್ದ ಹರಿಹಾಯ್ದರು. ರಾಜ್ಯದಲ್ಲಿ ಸುಭದ್ರ ಹಾಗೂ ನಿಮ್ಮ ಕಷ್ಟಗಳನ್ನು ಬಗೆಹರಿಸಬೇಕಾದರೆ ಜೆಡಿಎಸ್​ ಪಕ್ಷವನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತನ್ನಿ ಎಂದರು.

ಇವತ್ತು ಬಿಜೆಪಿ ಸರ್ಕಾರದ ಭ್ರಷ್ಟ ಆಡಳಿತಕ್ಕೆ ಕಾಂಗ್ರೆಸ್​​​ ಸರ್ಕಾರ ಕಾರಣ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್​ನವರು ಜೆಡಿಎಸ್​ ಬಿಜೆಪಿ ಬಿ ಟೀಂ ಎಂದು ಪ್ರಚಾರ ಮಾಡಿ ಅಲ್ಪಸಂಖ್ಯಾತರ ದಿಕ್ಕು ತಪ್ಪಿಸಿದರು ಎಂದು ಹೇಳಿದರು.

ಭರ್ಜರಿ ಧಮ್​ ಬಿರಿಯಾನಿ ತಯಾರು:ಕಳೆದ ಸಮ್ಮಿಶ್ರ ಸರ್ಕಾರ ವಿಫಲವಾಗಲು ಮಾಜಿ ಸ್ಪೀಕರ್ ರಮೇಶ್​ ಕುಮಾರ್ ಕಾರಣ. ಗೋಸುಂಬೆ ಊಸರವಳ್ಳಿ ತರ ಸಿದ್ದರಾಮಯ್ಯ ಜೊತೆ ಸೇರಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ಕಾರಣಕರ್ತರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಭಾನುವಾರವಾಗಿದ್ದ ಕಾರಣ ಸಮಾವೇಶಕ್ಕೆ ಬಂದಿದ್ದ ಸಾವಿರಾರು ಜನ ಕಾರ್ಯಕರ್ತರಿಗಾಗಿ ವಿಶೇಷವಾಗಿ ಚಿಕನ್​ ಬಿರಿಯಾನಿ ತಯಾರು ಮಾಡಲಾಗಿತ್ತು. ಸುಮಾರು 2500 ಕೆಜಿ ಚಿಕನ್​ ಹಾಗೂ 2000 ಕೆಜಿ ಅಕ್ಕಿ ಬಳಸಿ 300 ಜನ ಬಾಣಸಿಗರು ಭರ್ಜರಿ ಧಮ್​ ಬಿರಿಯಾನಿ ತಯಾರಿಸಿದ್ದರು.

ಬಿರಿಯಾನಿ ಹಂಚಿಕೆ: ವೇದಿಕೆ ಪಕ್ಕದಲ್ಲೇ ಕಾರ್ಯಕರ್ತರಿಗೆ ಪ್ರತ್ಯೇಕ ಕೌಂಟರ್​ ಮಾಡಿ ಕಾರ್ಯಕರ್ತರಿಗೆ ಬಿರಿಯಾನಿ ಕೊಡಲಾಯಿತು. ಬಿರಿಯಾನಿಗಾಗಿ ಸಾವಿರಾರು ಕಾರ್ಯಕರ್ತರು ಮುಗಿಬಿದ್ದರು. ಪೊಲೀಸರು ಹರಸಾಹಸ ಪಟ್ಟರೂ ತಡೆಯಲಾಗದಂತೆ ಕಾರ್ಯಕರ್ತರು ಬಿರಿಯಾನಿಗಾಗಿ ಪರದಾಡಿದ್ರು. ಬಿರಿಯಾನಿ ಪಾತ್ರೆ ಖಾಲಿಯಾಗಿ ತಯಾರು ಮಾಡಿದ್ದ ಸ್ಥಳದಿಂದ ಬಿರಿಯಾನಿ ತರುವಷ್ಟರಲ್ಲೇ ಅಲ್ಲಿದ್ದ ಕೆಲವು ಕಾರ್ಯಕರ್ತರು ಬಿರಿಯಾನಿ ಹಂಚಿಕೆ ಮಾಡುತ್ತಿದ್ದವರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಕೂಡಾ ನಡೆಯಿತು. ನಂತರ ಬಿರಿಯಾನಿ ತರಿಸಿ ಎಲ್ಲರಿಗೂ ಬಿರಿಯಾನಿ ಹಂಚಿ ಸಮಾಧಾನ ಮಾಡಲಾಯಿತು.

ಮತಗಳನ್ನು ಸೆಳೆಯಲು ಭರ್ಜರಿ ಪ್ಲಾನ್: ಒಟ್ಟಾರೆ ಕಳೆದ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತಗಳಿಂದಲೇ ಸೋಲು ಕಂಡಿದ್ದು ಅನ್ನೋದನ್ನ ಅರಿತಿರುವ ದಳಪತಿಗಳು ಅಲ್ಪಸಂಖ್ಯಾತರ ಮತಗಳನ್ನು ಸೆಳೆಯಲು ಭರ್ಜರಿ ಪ್ಲಾನ್​ ಮಾಡಿದ್ದು, ಮತದಾರರ ಮನ ಸೆಳೆಯಲು ಒಂದೆಡೆ ಉದ್ದುದ್ದ ಬಾಷಣ ನಡೆಯುತ್ತಿದ್ದರೆ, ಸೇರಿದ್ದ ಜನರು ಮಾತ್ರ ಬಿರಿಯಾನಿಗಾಗಿ ಮುಗಿಬಿದ್ದಿದ್ದಂತು ಸುಳ್ಳಲ್ಲ.

ಓದಿ:75 ಯೂನಿಟ್ ಉಚಿತ ವಿದ್ಯುತ್ ವಿತರಣೆಯ ಯೋಜನೆಯನ್ನು ಹಿಂಪಡೆದಿಲ್ಲ: ಸಿಎಂ

ABOUT THE AUTHOR

...view details