ಕರ್ನಾಟಕ

karnataka

ಆಟೋ-ಮಿನಿ ಬಸ್ ನಡುವೆ ಭೀಕರ ಅಪಘಾತ: ಮೂವರು ಸಾವು, ಹಲವರಿಗೆ ಗಾಯ

By

Published : Feb 13, 2023, 6:55 AM IST

ಎಲ್​ಪಿಜಿ ಆಟೋ ಹಾಗೂ ಮಿನಿ ಬಸ್ ನಡುವೆ ಭೀಕರ ಅಪಘಾತ- ಮೂವರು ಸಾವು, ಹಲವರಿಗೆ ಗಾಯ- ಗದಗ ಜಿಲ್ಲೆಯ ಬೆಟಗೇರಿ ಸಮೀಪ ಘಟನೆ
road accident at Gadag
ಆಟೋ-ಮಿನಿ ಬಸ್ ನಡುವೆ ಭೀಕರ ಅಪಘಾತ

ಗದಗ:ಎಲ್​ಪಿಜಿ ಆಟೋ ಹಾಗೂ ಮಿನಿ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲೇ ಮೂವರು ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ. ಗದಗ ಜಿಲ್ಲೆಯ ಬೆಟಗೇರಿ ಸಮೀಪದ ಗಜೇಂದ್ರಗಡ ರಸ್ತೆಯ ಬಸವೇಶ್ವರ ದೇವಸ್ಥಾನದ ಬಳಿ ಈ ದುರ್ಘಟನೆ ನಡೆದಿದೆ. ಮೃತರನ್ನು ಬೆಟಗೇರಿಯ ನರಸಾಪೂರ ಆಶ್ರಯ ಕಾಲೋನಿಯ ಸಯ್ಯದ್ ಅಲಿ (20), ಪ್ರದೀಪ್ (40) ಹಾಗೂ ಬೆಟಗೇರಿ ನಿವಾಸಿ ಮಂಜುನಾಥ್ ಎಂದು ಗುರುತಿಸಲಾಗಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದ್ದ ಮದುವೆ ಮುಗಿಸಿ ಬೆಟಗೇರಿ ಕಡೆ ಬರುತ್ತಿದ್ದ ಮಿನಿ ಬಸ್, ನರೇಗಲ್ ಕಡೆ ಹೊರಟಿದ್ದ ಎಲ್​ಪಿಜಿ ಆಟೋ ನಡುವೆ ಅಪಘಾತ ನಡೆದಿದೆ. ಗಾಯಗೊಂಡವರು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ. ಆಟೋ ಹಾಗೂ ಮಿನಿ ಬಸ್ ನಡುವೆ ನಡೆದ ಅಪಘಾತದಲ್ಲಿ ಆಟೋ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಲ್ಲದೇ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಅಪಘಾತದ ಸುದ್ದಿ ತಿಳಿದ ಕೂಡಲೇ ಬೆಟಗೇರಿ ಪೊಲೀಸರು ಹಾಗೂ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಪ್ರಕರಣ ದಾಖಲಾಗಿದೆ.

ನವ ವಿವಾಹಿತ ದಂಪತಿ ಸಾವು:ಭೀಕರ ಅಪಘಾತ ಸಂಭವಿಸಿದ್ದು ನವ ದಂಪತಿ ಸ್ಥಳದಲ್ಲೇ ಮೃತಪಟ್ಟ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಳ್ಳಿ ತಾಲೂಕಿನ ಹುಳಿಯಾರ್ ಗೇಟ್ ಬಳಿ ಫೆ.11ರಂದು ನಡೆದಿತ್ತು. ರಘು(35), ಅನುಷಾ (28) ಸ್ಥಳದಲ್ಲೇ ಮೃತಪಟ್ಟ ದಂಪತಿ. ದಂಪತಿ ಚಿಕ್ಕನಾಯಕನಹಳ್ಳಿ ತಾಲೂಕಿನ ತಿಗಳನಹಳ್ಳಿಯಿಂದ ಕಾರಿನಲ್ಲಿ ಬಳ್ಳಾರಿಗೆ ತೆರಳುತ್ತಿದ್ದರು. ಈ ವೇಳೆ, ಚಾಲಕನ ನಿಯಂತ್ರಣ ತಪ್ಪಿದ ದಂಪತಿಯ ಕಾರು, ಲಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿತ್ತು. ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು.

ಮೃತ ದಂಪತಿ ಕೇವಲ ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ದಂಪತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಆದರೆ, ಅಷ್ಟರಲ್ಲೇ ಮೃತಪಟ್ಟಿದ್ದರು. ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಹಾಸನ ಜಿಲ್ಲೆ ಅರಸಿಕೆರೆ ಮೂಲದ ರಘು ಚಿಕ್ಕನಾಯಕನಹಳ್ಳಿ ತಾಲೂಕಿನ ತಿಗಳನಹಳ್ಳಿ ಅನು ಅವರನ್ನು ಕಳೆದ ಒಂದೂವರೆ ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿದ್ದ ದಂಪತಿ, ಸಂಬಂಧಿಕರೊಬ್ಬರ ಮದುವೆಗೆಂದು ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ಲಾರಿಗೆ ಡಿಕ್ಕಿಯಾಗಿ ನವ ದಂಪತಿ ಮೃತಪಟ್ಟಿದ್ದರು.

ಇದನ್ನೂ ಓದಿ:ತುಮಕೂರಲ್ಲಿ ಭೀಕರ ಅಪಘಾತ: ನವ ವಿವಾಹಿತ ದಂಪತಿ ಸಾವು

ಕಾರು-ಟ್ಯಾಂಕರ್‌ ಅಪಘಾತ:ಕಾರು ಮತ್ತು ಟ್ಯಾಂಕರ್ ನಡುವೆ ಭೀಕರ ಅಪಘಾತ ಸಂಭವಿಸಿ ಮೂವರು ಸಾವನ್ನಪ್ಪಿ, ಮೂವರು ಗಾಯಗೊಂಡಿರುವ ಘಟನೆ ಕಲಘಟಗಿ ತಾಲೂಕಿನ ಸಂಗಟಿಕೊಪ್ಪ ಬಳಿ ಇತ್ತೀಚೆಗೆ ಸಂಭವಿಸಿತ್ತು. ಹುಬ್ಬಳ್ಳಿ ನಿವಾಸಿಗಳಾದ ಮೊಹಮ್ಮದ್ ಇಶಾನ್, ಮೊಹಮ್ಮದ್ ಸೈಫ್ ಹಾಗೂ ಇಸ್ಮಾಯಿಲ್ ಮೃತರು. ಉಮರ್ ಕರ್ನೂಲಕರ್, ಫೈಯಾಜ್ ಖಾಲಿಮದರ, ಅಬ್ರಾಜ್‌ ಪದ್ದು ಗಂಭೀರವಾಗಿ ಗಾಯಗೊಂಡಿದ್ದರು. ಇಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದರೆ, ಇಸ್ಮಾಯಿಲ್ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು.

ಇದನ್ನೂ ಓದಿ:ಹುಬ್ಬಳ್ಳಿ: ಕಾರು-ಟ್ಯಾಂಕರ್‌ ಅಪಘಾತ; ಮೂವರು ಸಾವು, ಮೂವರಿಗೆ ಗಾಯ

ABOUT THE AUTHOR

...view details