ETV Bharat / state

ಗಬ್ಬು ನಾರುತ್ತಿದೆ ಬ್ರಿಟಿಷರ ಕಾಲದ ಬೆಳಗಾವಿಯ ಕರಿ ಕೆರೆ: ಉಳಿಸದಿದ್ದರೆ ಹೋರಾಟದ ಎಚ್ಚರಿಕೆ - Belagavi Kari Lake

author img

By ETV Bharat Karnataka Team

Published : May 23, 2024, 11:53 AM IST

Updated : May 23, 2024, 1:07 PM IST

ಬ್ರಿಟಿಷರ ಕಾಲದಲ್ಲಿ ಬೆಳಗಾವಿಯಲ್ಲಿ ನಿರ್ಮಾಣವಾಗಿದ್ದ ಕರಿ ಕೆರೆ ಈಗ ತ್ಯಾಜ್ಯ ಸೇರಿ ಕೊಳೆತು ಗಬ್ಬು ನಾರುತ್ತಿದೆ.

ತ್ಯಾಜ್ಯದಿಂದ ತುಂಬಿರುವ ಕರಿ ಕೆರೆ
ತ್ಯಾಜ್ಯದಿಂದ ತುಂಬಿರುವ ಕರಿ ಕೆರೆ (ETV Bharat)

ಗಬ್ಬು ನಾರುತ್ತಿದೆ ಬ್ರಿಟಿಷರ ಕಾಲದ ಬೆಳಗಾವಿಯ ಕರಿ ಕೆರೆ: ಪ್ರತಿಕ್ರಿಯೆಗಳು (ETV Bharat)

ಬೆಳಗಾವಿ: ಇದು ಬ್ರಿಟಿಷರ ಕಾಲದಲ್ಲಿ ಕಟ್ಟಿದ ಶತಮಾನದ ಕೆರೆ. ಮೊದಲೆಲ್ಲಾ ಜಾನುವಾರುಗಳ ನೀರಿನ ದಾಹ ತೀರಿಸುವುದರೊಂದಿಗೆ ರೈತರ ಗದ್ದೆಗಳಿಗೂ ನೀರುಣಿಸುತ್ತಿತ್ತು. ಆದರೆ, ಈಗ ಗಬ್ಬೆದ್ದು ನಾರುತ್ತಿದೆ. ರೋಗ-ರುಜಿನ ಹರಡುವ ತಾಣವಾಗಿ ಈ ಕೆರೆ ಮಾರ್ಪಟ್ಟಿದ್ದು ದುರಂತ.

ನೀವಿಲ್ಲೊಮ್ಮೆ ಕಣ್ಣು ಹಾಯಿಸಿದರೆ ಕಸದ ಹೊದಿಕೆ, ಪಾಚಿಯನ್ನಷ್ಟೇ ಕಾಣಬಹುದು. ಕೆಸರು ಗದ್ದೆ, ಸುತ್ತಲೂ ದುರ್ವಾಸನೆ.‌ ಸಾಂಕ್ರಾಮಿಕ ರೋಗಗಳ ಭೀತಿಯಲ್ಲೇ ಜನ ಜೀವನ. ಇದು ಬೆಳಗಾವಿಯ ಅನಗೋಳದ ಝೇರೆಗಲ್ಲಿಯ (ಕಾಲಾ ತಾಲಾಬ್) ಕರಿ ಕೆರೆಯ ದುಸ್ಥಿತಿ.

ಮೂಲ ಸ್ವರೂಪ ಕಳೆದುಕೊಂಡ ಕೆರೆ: 24 ಎಕರೆ ಪ್ರದೇಶದಲ್ಲಿರುವ ಈ ಕೆರೆ ಅನಗೋಳ ಭಾಗದ ಜನರ ಜೀವನಾಡಿಯೇ ಆಗಿತ್ತು. ಇಲ್ಲಿ ಜಾನುವಾರುಗಳಿಗೆ ನೀರು ಕುಡಿಸುವುದು, ಮೈ ತೊಳೆಯುವುದು, ಯುವಕರು ಈಜು ಹೊಡೆಯುವುದು, ಮೀನು ಹಿಡಿಯುವುದು ಸಾಮಾನ್ಯವಾಗಿತ್ತು. ಅಷ್ಟೇ ಅಲ್ಲ, ಸುತ್ತಲ ನೂರಾರು ಎಕರೆ ಜಮೀನಿಗೂ ನೀರಾವರಿ ವ್ಯವಸ್ಥೆ ಈ ಕೆರೆಯಿಂದಲೇ ಆಗುತ್ತಿತ್ತು. ಆದರೆ, ಕಳೆದ 10ಕ್ಕೂ ಹೆಚ್ಚು ವರ್ಷಗಳಿಂದ ಕೆರೆಯ ಸ್ಥಿತಿ ಹೇಳತೀರದಾಗಿದೆ. ಸದ್ಯ ಜಿಲ್ಲಾಡಳಿತ ಮತ್ತು ಪಾಲಿಕೆ ಅಧಿಕಾರಿಗಳು ಹಾಗು ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದ ಕೆರೆ ತನ್ನ ಮೂಲ ಸ್ವರೂಪವನ್ನೇ ಕಳೆದುಕೊಂಡಿದೆ.

ಕಲುಷಿತ ಚರಂಡಿ ನೀರು ಸಂಗ್ರಹವಾಗಿ, ತ್ಯಾಜ್ಯ ಕೊಳೆಯುತ್ತಿದೆ. ಕೆರೆ ಸುತ್ತಲಿನ ಬಡಾವಣೆಗಳ ಜನರಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಆವರಿಸಿದೆ. ಇನ್ನು ಸಾರ್ವಜನಿಕರು ಕೂಡಾ ಇಲ್ಲಿಯೇ ಕಸ ಕಡ್ಡಿ ಎಸೆಯುತ್ತಿದ್ದು, ಕೆರೆ ಮತ್ತಷ್ಟು ಹಾಳಾಗಿದೆ. ಹಿಂದವಾಡಿ, ಟಿಳಕವಾಡಿ, ಚಿದಂಬರ ನಗರ, ಅನಿಗೋಳ, ಭಾಗ್ಯನಗರ, ರಾಣಿಚನ್ನಮ್ಮನಗರ ಹಾಗು ಇತರೆ ಬಡಾವಣೆಗಳ ಗಟಾರು ನೀರು ಬಳ್ಳಾರಿ ನಾಲೆಗೆ ಹೋಗದೇ ಪುನಃ ಇದೇ ಕೆರೆಯೊಡಲು ಸೇರುತ್ತಿದೆ. ಇದರ ಪರಿಣಾಮ ಸ್ವಚ್ಛ, ಸುಂದರವಾಗಿದ್ದ ಕೆರೆ ಸಂಪೂರ್ಣವಾಗಿ ಹದಗೆಟ್ಟಿದೆ.

ಈ ಹಿಂದಿನ‌ ಅವಧಿಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಆಗಿದ್ದ ಶೋಭಾ ಸೋಮನಾಚೆ ಅವರು ಪ್ರತಿನಿಧಿಸುವ ವಾರ್ಡ್ ವ್ಯಾಪ್ತಿಯಲ್ಲಿದೆ ಈ ಕೆರೆ. ಆದರೆ ಅವರೂ ಕೂಡ ಕೆರೆ ಅಭಿವೃದ್ಧಿಗೆ ಯಾವುದೇ ಕ್ರಮವಹಿಸಲಿಲ್ಲ ಎಂಬುದು ಸ್ಥಳೀಯರ ಆರೋಪ.

ಸ್ಥಳೀಯರು ಹೇಳುವುದೇನು?: 'ಈಟಿವಿ ಭಾರತ'ದ ಜೊತೆಗೆ ಮಾತನಾಡಿದ ಸ್ಥಳೀಯರಾದ ಅಶೋಕ ಮುತಗೇಕರ್, "ನಾವು ಸಣ್ಣವರಿದ್ದಾಗ ನೋಡಿದ ಕೆರೆಗೂ ಈಗ ನೋಡುತ್ತಿರುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಮೊದಲು ಸ್ವಚ್ಛ ನೀರಿತ್ತು. ಆಗ ನಾವು ಈಜುತ್ತಿದ್ದೆವು, ಮೀನು ಹಿಡಿಯುತ್ತಿದ್ದೆವು. ಎಮ್ಮೆ, ಆಕಳು, ಎತ್ತುಗಳು ನೀರು ಕುಡಿಯುತ್ತಿದ್ದವು. ಅವುಗಳ ಮೈ ತೊಳೆಯುತ್ತಿದ್ದೆವು. ಈಗ ಕೆರೆ ದುಸ್ಥಿತಿ ನೋಡಿ ತುಂಬಾ ನೋವಾಗುತ್ತಿದೆ. ಶಾಸಕರು ಇತ್ತ ಗಮನಹರಿಸಿ ಕೆರೆ ಸ್ವಚ್ಛಗೊಳಿಸಿ ಮೊದಲಿನಂತೆ ಅಭಿವೃದ್ಧಿಪಡಿಸಿದರೆ ಒಳ್ಳೆಯದು" ಎಂದರು.

ಮತ್ತೋರ್ವ ಸ್ಥಳೀಯರಾದ ಮೋಹನ ಕನ್ನೂಕರ್ ಮಾತನಾಡಿ, "ಈ ಕೆರೆಯಿಂದ ಸುಮಾರು 1,200 ಎಕರೆ ಜಮೀನಿಗೆ ನೀರಾವರಿ ಆಗುತ್ತಿತ್ತು. ಕೆರೆ ಹಾಳಾಗಿದ್ದರಿಂದ ಬೆಳೆ ಬೆಳೆಯಲು ಸಾಕಷ್ಟು ತೊಂದರೆ ಆಗಿದೆ. ಕೆಸರಿನಲ್ಲಿ ಸಿಕ್ಕಿಕೊಂಡು‌ ಅನೇಕ ಜಾನುವಾರುಗಳು ಸಾವನ್ನಪ್ಪಿವೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಅನೇಕ ಬಾರಿ ಮನವಿ ಮಾಡಿದ್ದೇವೆ. ಬರೀ ಆಶ್ವಾಸನೆ ಕೊಡುತ್ತಿದ್ದಾರೆ. ಮುಂದೆ ಕೆರೆ ಉಳಿಸಲು ಹೋರಾಟ ಮಾಡುವ ಅನಿವಾರ್ಯತೆ ಸೃಷ್ಟಿಸಬೇಡಿ" ಎಂದು ಎಚ್ಚರಿಕೆ ನೀಡಿದರು.

ಸಂತೋಷ ಪೂಜಾರಿ ಮಾತನಾಡುತ್ತಾ, "ಈಗ ಕೆರೆಯಲ್ಲಿ ನೀರಿಲ್ಲ. ಬರೀ ಕೆಸರು ತುಂಬಿದೆ. ಹಿಂದೆ ಎರಡು ಬಾರಿ ಸ್ವಚ್ಛಗೊಳಿಸಿದ್ದರು.‌ ಮತ್ತೆ ಅದೇ ರೀತಿ ಹಾಳಾಗಿದೆ. ತಕ್ಷಣವೇ ಶಾಸಕರು ಗಮ‌ನಹರಿಸಿ ಕೆರೆ ಅಭಿವೃದ್ಧಿ ಮಾಡಬೇಕು" ಮನವಿ ಮಾಡಿಕೊಂಡರು.

ಶಾಸಕರ ಪ್ರತಿಕ್ರಿಯೆ: ಸ್ಥಳೀಯ ಶಾಸಕ ಅಭಯ್ ಪಾಟೀಲ ಮಾತನಾಡಿ, "ಕರಿ ಕೆರೆ ಅಭಿವೃದ್ಧಿಗೆ ಈಗಾಗಲೇ ಯೋಜನೆ ತಯಾರಾಗಿದ್ದು, ಅದನ್ನು ಕಾರ್ಯರೂಪಕ್ಕೆ ತರುವ ಕೆಲಸ ಮಾಡುತ್ತೇವೆ. ಕೆಲವೇ ದಿನಗಳಲ್ಲಿ ಯೋಜನೆ ಪ್ರಾರಂಭಿಸುತ್ತೇವೆ" ಎಂದು ಭರವಸೆ ನೀಡಿದರು.

"ಇದೇ ವೇಳೆ ಬಳ್ಳಾರಿ ನಾಲಾ ಯೋಜನೆ ಕುರಿತು ವರದಿ ಸಿದ್ಧಪಡಿಸಿ ಎರಡು ಬಾರಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದೇನೆ. ಬಳ್ಳಾರಿ ನಾಲಾ ಜೊತೆಗೆ ಲೆಂಡಿ ನಾಲಾ, ನಾಕಜೇರಿ‌ ನಾಲಾ, ಜಕ್ಕೇರಿ ನಾಲಾಗಳ ಕಾಂಕ್ರೀಟಿಕರಣಕ್ಕೆ ಬೊಮ್ಮಾಯಿ ಸರ್ಕಾರ 107 ಕೋಟಿ ರೂ. ಮಂಜೂರು ಮಾಡಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಯೋಜನೆ ರದ್ದುಪಡಿಸಿದೆ" ಎಂದು ದೂರಿದರು.

ಇದನ್ನೂ ಓದಿ: ರೋಗಬಾಧೆಯಿಂದ ಕುಮಟಾದ ಸಿಹಿ ಈರುಳ್ಳಿ ಇಳುವರಿ ಕುಸಿತ; ಗಗನಕ್ಕೇರಿದ ಬೆಲೆ - Kumta Sweet Onion

Last Updated : May 23, 2024, 1:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.