ಕರ್ನಾಟಕ

karnataka

ವಿಶ್ವದ ಅತಿ ಉದ್ದದ ಹುಬ್ಬಳ್ಳಿ ರೈಲ್ವೆ ಪ್ಲಾಟ್‌ಫಾರ್ಮ್‌ ವೀಕ್ಷಿಸಿದ ಕೇಂದ್ರ ಸಚಿವ ಪಿಯೂಷ್ ಗೋಯಲ್

By

Published : Mar 19, 2023, 7:28 PM IST

ಹುಬ್ಬಳ್ಳಿ ರೈಲ್ವೆ ಪ್ಲಾಟ್‌ಫಾರ್ಮ್ ನಿರ್ಮಿಸಿದ ನೈಋತ್ಯ ರೈಲ್ವೆಯ ಸಾಧನೆಯನ್ನು ಕೇಂದ್ರ ಸಚಿವ ಪಿಯೂಷ್ ಗೋಯಲ್ ಶ್ಲಾಘಿಸಿದರು.

Hubli Railway Platform
ಹುಬ್ಬಳ್ಳಿ ರೈಲ್ವೆ ಪ್ಲಾಟ್‌ಫಾರ್ಮ್‌

ಹುಬ್ಬಳ್ಳಿ :ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್‌, ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣಕ್ಕೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳು ಮತ್ತು ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಜವಳಿ ಸಚಿವರಾದ ಪಿಯೂಷ್ ಗೋಯಲ್ ಅವರು ಭೇಟಿ ನೀಡಿದ್ದರು. ಸೌತ್ ವೆಸ್ಟರ್ನ್ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಅವರು ಸಚಿವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಕಿಶೋರ್ ಅವರು ಹುಬ್ಬಳ್ಳಿ ಜಂಕ್ಷನ್​ನಲ್ಲಿ ಇತ್ತೀಚಿನ ದಿನಗಳಲ್ಲಿ ಕೈಗೊಂಡ ಪ್ರಮುಖ ಸುಧಾರಣೆಗಳು ಮತ್ತು ಭವಿಷ್ಯದ ಅಭಿವೃದ್ಧಿಯ ಯೋಜನೆಯ ಬಗ್ಗೆ ಸಚಿವರಿಗೆ ವಿವರಿಸಿದರು.

ಗಿನ್ನೆಸ್​ ನುಕ್​ ಸೇರಿದ ಹಬ್ಬಳ್ಳಿ ರೈಲ್ವೆ ಪ್ಲಾಟ್‌ಫಾರ್ಮ್‌ : ಇತ್ತೀಚೆಗೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸೇರಿದ ಹುಬ್ಬಳ್ಳಿಯ 1507 ಮೀ ಉದ್ದದ ಪ್ಲಾಟ್‌ಫಾರ್ಮ್ ಅನ್ನು ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್ ಎಂದು ಗುರುತಿಸಿದೆ ಎಂದು ಕಿಶೋರ್​ ಅವರು ಹೇಳಿದರು. ಮರುರೂಪಿಸಲಾದ ಯಾರ್ಡ್ ಮತ್ತು ಉದ್ದದ ಪ್ಲಾಟ್​ಫಾರ್ಮ್ ಹುಬ್ಬಳ್ಳಿ ನಗರದ ಹೆಚ್ಚುತ್ತಿರುವ ಸಾರಿಗೆ ಅಗತ್ಯಗಳನ್ನು ಪೂರೈಸುತ್ತದೆ ಎಂದು ಕಿಶೋರ್ ಅವರು ಕೇಂದ್ರ ಸಚಿವ ಪಿಯೂಷ್​ ಗೋಯಲ್​ ಅವರಿಗೆ ವಿವರಿಸಿದರು.

ಇನ್ನು ಇದೇ ವೇಳೆ ಮಾತನಾಡಿದ ಸಚಿವ ಗೋಯಲ್ ಅವರು ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್ ಅನ್ನು ನಿರ್ಮಿಸುವಲ್ಲಿ ನೈಋತ್ಯ ರೈಲ್ವೆ ವಹಿಸಿದ ಶ್ರಮ ಮತ್ತು ಸಾಧನೆ ಬಗ್ಗೆ ಶ್ಲಾಘಿಸಿದರು. ಸ್ಥಳೀಯ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವ ಉಬ್ಬುಶಿಲ್ಪಗಳನ್ನು ವೀಕ್ಷಿಸಿ, ನಿಲ್ದಾಣದ ನಿರ್ವಹಣೆ ಮತ್ತು ಸೌಂದರ್ಯೀಕರಣದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾನ್ಯ ಸಚಿವರೊಂದಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್​ ಈರೇಶ್ ಅಂಚಟಗೇರಿ, ರೈಲ್ವೆ ವಿಭಾಗದ ಹೆಚ್ಚುವರಿ ವ್ಯವಸ್ಥಾಪಕ ಎಸ್‌ಎಸ್‌. ವರ್ಮಾ, ಸೀನಿಯರ್ ಡಿ.ಪಿ.ಒ. ಆಸಿಫ್ ಹಫೀಜ್, ಸೀನಿಯರ್ ಡಿ.ಸಿ.ಎಂ ಶ್ರೀಮತಿ ಹರಿತಾ, ಸಿ.ಪಿ.ಆರ್‌.ಒ. ಅನೀಶ್ ಹೆಗಡೆ, ಪಿ.ಆರ್‌.ಒ. ಪ್ರಾಣೇಶ್ ಉಪಸ್ಥಿತರಿದ್ದರು.

ನೈರುತ್ಯ ರೈಲ್ವೆ ಹುಬ್ಬಳ್ಳಿ: ಕೆಲವು ರೈಲು ರದ್ದು, ಮಾರ್ಗ ಬದಲಾವಣೆ :ದೌಂಡ್ - ಮನ್ಮಾಡ್ ವಿಭಾಗದ ಜೋಡಿ ಮಾರ್ಗಕ್ಕೆ ಸಂಬಂಧಿಸಿದಂತೆ ಬೇಲಾಪುರ್, ಚಿತಾಲಿ ಮತ್ತು ಪುತುಂಬಾ ನಿಲ್ದಾಣಗಳ ಮಾರ್ಗದಲ್ಲಿ ಇಂಜಿನಿಯರಿಂಗ್ ಕಾಮಗಾರಿ ನಡೆದಿರುವುದರಿಂದ ಕೆಳಗಿನ ಕೆಲವು ರೈಲುಗಳನ್ನು ನಿನ್ನೆ ರದ್ದುಗೊಳಿಸಿಲಾಗಿತ್ತು. ಜೊತೆಗೆ ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗುತ್ತಿದೆ ಎಂದು ಮಧ್ಯೆ ರೈಲ್ವೆ ವಲಯವು ಸೂಚಿಸಿತ್ತು.

ರದ್ದುಗೊಂಡ ರೈಲುಗಳು :1.ಮಾರ್ಚ್ 27 ರಂದು ಮೈಸೂರಿನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16217 ಮೈಸೂರು - ಸಾಯಿನಗರ ಶಿರಡಿ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲನ್ನು ರದ್ದುಗೊಳಿಸಲಾಗಿದೆ.

2.ಮಾರ್ಚ್ 28 ರಂದು ಸಾಯಿನಗರ ಶಿರಡಿ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16218 ಸಾಯಿನಗರ ಶಿರಡಿ - ಮೈಸೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲನ್ನು ರದ್ದುಗೊಳಿಸಲಾಗಿದೆ.

ರೈಲುಗಳ ಮಾರ್ಗ ಬದಲಾವಣೆ : 1. ಮಾರ್ಚ್ 26 ಮತ್ತು 27 ರಂದು ಕೆ.ಎಸ್‌.ಆರ್ ಬೆಂಗಳೂರು ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 12627 ಕೆ.ಎಸ್‌.ಆರ್ ಬೆಂಗಳೂರು - ನವದೆಹಲಿ ಕರ್ನಾಟಕ ಡೈಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಬದಲಾದ ಮಾರ್ಗ ಪುಣೆ, ಲೋನಾವಾಲ, ವಸಾಯಿ ರೋಡ, ವಡೋದರಾ ಜಂ., ರತ್ಲಾಮ್ ಜಂ. ಮತ್ತು ಸಂತ ಹಿರ್ದರಾಮ್ ನಗರ ನಿಲ್ದಾಣಗಳ ಮೂಲಕ ಸಂಚರಿಸಲಿದೆ.

2.ಮಾರ್ಚ್ 26 ರಂದು ಹಜರತ್ ನಿಜಾಮುದ್ದೀನ್‌ನಿಂದ ಹೊರಡುವ ರೈಲು ಸಂಖ್ಯೆ 20658 ಹಜರತ್ ನಿಜಾಮುದ್ದೀನ್ - ಎಸ್‌.ಎಸ್‌.ಎಸ್ ಹುಬ್ಬಳ್ಳಿ ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಬದಲಾದ ಮಾರ್ಗ ಸಂತ ಹಿರ್ದರಾಮ್ ನಗರ, ರತ್ಲಾಮ್ ಜಂ., ವಡೋದರ ಜಂ., ವಸಾಯಿ ರೋಡ, ಲೋನಾವಾಲ ಮತ್ತು ಪುಣೆ ನಿಲ್ದಾಣಗಳ ಮೂಲಕ ಸಂಚರಿಸಲಿದೆ.

3.ಮಾರ್ಚ್ 26 ಮತ್ತು 27 ರಂದು ಹಜರತ್ ನಿಜಾಮುದ್ದೀನ್‌ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 12780 ಹಜರತ್ ನಿಜಾಮುದ್ದೀನ್ - ವಾಸ್ಕೋ-ಡ-ಗಾಮಾ ಗೋವಾ ಡೈಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಬದಲಾದ ಮಾರ್ಗ ಮನ್ಮಾಡ್ ಜಂಕ್ಷನ್, ಇಗತ್‌ಪುರಿ, ಪನ್ವೆಲ್, ಲೋನಾವಾಲ ಮತ್ತು ಪುಣೆ ನಿಲ್ದಾಣಗಳ ಮೂಲಕ ಚಲಿಸಲಿದೆ.

4.ಮಾರ್ಚ್ 26 ಮತ್ತು 27 ರಂದು ನವದೆಹಲಿಯಿಂದ ಹೊರಡುವ ರೈಲು ಸಂಖ್ಯೆ 12628 ನವದೆಹಲಿ - ಕೆಎಸ್‌ಆರ್ ಬೆಂಗಳೂರು ಕರ್ನಾಟಕ ಡೈಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಬದಲಾದ ಮಾರ್ಗ ಸಂತ ಹಿರ್ದರಾಮ್ ನಗರ, ರತ್ಲಾಮ್ ಜಂ., ವಡೋದರ ಜಂ., ವಸಾಯಿ ರೋಡ, ಲೋನಾವಾಲ ಮತ್ತು ಪುಣೆ ನಿಲ್ದಾಣಗಳ ಮೂಲಕ ಚಲಿಸುತ್ತದೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ :ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಮಾ. 20ರಿಂದ ವಿಶೇಷ ಎಕ್ಸ್​ಪ್ರೆಸ್ ರೈಲುಗಳ ಸಂಚಾರ: ಪ್ರಹ್ಲಾದ್ ಜೋಶಿ

ABOUT THE AUTHOR

...view details