ಕರ್ನಾಟಕ

karnataka

ಕಾಂಗ್ರೆಸ್ ಸರ್ಕಾರ ಇದ್ದಾಗಲೆಲ್ಲ ಭ್ರಷ್ಟಾಚಾರ: ದಾವಣಗೆರೆಯಲ್ಲಿ ಜೆ.ಪಿ.ನಡ್ಡಾ ಆರೋಪ

By

Published : Apr 30, 2023, 4:36 PM IST

ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿಂದು ನಡೆದ ಪ್ರಚಾರ ಸಭೆಯಲ್ಲಿ ಜೆ.ಪಿ.ನಡ್ಡಾ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

jp-nadda-reaction-on-congress-leaders
ಕಾಂಗ್ರೆಸ್ ಸರ್ಕಾರ ಇದ್ದಾಗೆಲ್ಲ ಭ್ರಷ್ಟಾಚಾರ ನಡೆದಿದೆ: ಜೆ ಪಿ ನಡ್ಡಾ ಆರೋಪ

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯನವರು ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಬಿಜೆಪಿ ಸರ್ಕಾರ ಘೋಷಿಸಿರುವ ಮೀಸಲಾತಿ ವಾಪಸ್ ಪಡೆಯುವುದಾಗಿ ಹೇಳುತ್ತಿದ್ದಾರೆ. ಕಾಂಗ್ರೆಸ್​ಗೆ ಮತ ಹಾಕಿದರೆ ಜನ ಪರವಾಗಿ ನೀಡಿರುವ ಮೀಸಲಾತಿಗೆ ಧಕ್ಕೆ ಉಂಟಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.

ನಿಮ್ಮ‌ ಹಾಗು ನಿಮ್ಮ ಮಕ್ಕಳ ಭವಿಷ್ಯ ಈ ಚುನಾವಣೆಯ ಮೇಲೆ ನಿಂತಿದೆ. ಬಿಜೆಪಿಯದ್ದು ಡಬಲ್ ಇಂಜಿನ್ ಸರ್ಕಾರ. ಅಷ್ಟು ಮಾತ್ರವಲ್ಲ, ಇದು ಪವರ್‌ಫುಲ್ ಇಂಜಿನ್ ಇರುವ ಸರ್ಕಾರ. ಪ್ರಧಾನಿ ನರೇಂದ್ರ ಮೋದಿ ಆಡಳಿತದ ಬಳಿಕ ವಿಶ್ವದ ಮುಂದೆ ಭಾರತಕ್ಕೆ ವಿಶೇಷ ಗೌರವ ಸಿಕ್ಕಿದೆ. ದೇಶದ ಆರ್ಥಿಕತೆಯು ಬ್ರಿಟನ್ ಆರ್ಥಿಕ ವ್ಯವಸ್ಥೆಯನ್ನೂ ಮೀರಿಸಿ ಮುನ್ನಡೆಯುತ್ತಿದೆ. ಕರ್ನಾಟಕದಲ್ಲಿ ತುಮಕೂರು ಇಂಡಸ್ಟ್ರಿಯಲ್ ಕಾರಿಡಾರ್, ಹೆಲಿಕಾಪ್ಟರ್ ಉತ್ಪಾದನಾ ಘಟಕ ಸ್ಥಾಪನೆಯಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕರ್ನಾಟಕದ ಆರ್ಥಿಕತೆಯನ್ನು ಬದಲಿಸಿದೆ. ರೈತರು, ಮಕ್ಕಳ ಶಿಕ್ಷಣಕ್ಕೆ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು.

ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ರಾಜ್ಯದ ಫಲಾನುಭವಿಗಳ ಹೆಸರನ್ನು ಕಳುಹಿಸಿ ಕೊಡುತ್ತಿರಲಿಲ್ಲ. ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕೇಂದ್ರ ಸರ್ಕಾರಕ್ಕೆ ಫಲಾನುಭವಿ ರೈತರ ಹೆಸರುಗಳನ್ನು ಕಳುಹಿಸಿ ಕೊಡಲಿಲ್ಲ. ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಡಬಲ್ ಇಂಜಿನ್ ಸರ್ಕಾರ ಬರಬೇಕೆಂದರೆ ಕ್ಷೇತ್ರದಲ್ಲಿ ಎಂ.ಪಿ.ರೇಣುಕಾಚಾರ್ಯರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ನಮ್ಮದು ಬಡವರು, ದಲಿತರಿಗೆ ಸಮರ್ಪಿತ ಸರ್ಕಾರ. ಡಿ.ಕೆ.ಶಿವಕುಮಾರ್​ ಹಾಗೂ ಸಿದ್ದರಾಮಯ್ಯ ಮೀಸಲಾತಿಯನ್ನು ವಾಪಸ್ ಪಡೆಯುವುದಾಗಿ ಹೇಳುತ್ತಿದ್ದಾರೆ. ಎಸ್​ಸಿ, ಎಸ್​ಟಿ ಬಂಧುಗಳಿಗೆ ಮೀಸಲಾತಿ ಹೆಚ್ಚಿಸಿದ್ದೇವೆ. ಒಕ್ಕಲಿಗ ಮತ್ತು ಲಿಂಗಾಯತರಿಗೆ 2 ಪರ್ಸೆಂಟ್ ಮೀಸಲಾತಿ ಹೆಚ್ಚಿಸಿದ್ದೇವೆ ಎಂದರು.

2013ರಲ್ಲಿ ಸಿದ್ದರಾಮಯ್ಯ ಸರ್ಕಾರ ಪಿಎಫ್ಐ ಸಂಘಟನೆಯ ಸದಸ್ಯರ ಮೇಲಿದ್ದ ಕೇಸ್​ಗಳನ್ನು ಹಿಂಪಡೆದಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅದೇ ಪಿಎಫ್​ಐ ಸಂಘಟನೆಯನ್ನು ನಿಷೇಧಿಸಿ ಅದರ ಸದಸ್ಯರನ್ನು ಜೈಲಿಗಟ್ಟುವ ಕೆಲಸ ಮಾಡಿದೆ. ಎರಡು ಸಮುದಾಯಗಳ‌ ಮಧ್ಯೆ ಸಂಘರ್ಷವ ಉಂಟುಮಾಡುವುದು ಕಾಂಗ್ರೆಸ್ ಕೆಲಸ. ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ನಡೆಸಿದ ಸಾಕಷ್ಟು ಉದಾಹರಣೆಗಳಿವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ ಎಂದು ಟೀಕಿಸಿದರು.

ಶಿಕ್ಷಕರ ನೇಮಕಾತಿ ಹಗರಣ, ಸ್ಟೀಲ್ ಬ್ರಿಡ್ಜ್​ ಯೋಜನೆಯಲ್ಲಿಯೂ ಭ್ರಷ್ಟಾಚಾರ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಇದ್ದಾಗೆಲ್ಲ ಭ್ರಷ್ಟಾಚಾರ ನಡೆದಿದೆ. ಡಿ.ಕೆ.ಶಿವಕುಮಾರ್​, ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಎಲ್ಲರೂ ಬೇಲ್ ಮೇಲಿದ್ದಾರೆ. ಡಿ.ಕೆ.ಶಿವಕುಮಾರ್​ ಮನಿ ಲಾಂಡ್ರಿಂಗ್ ಕೇಸ್‌ನಲ್ಲಿ ಬೇಲ್ ಮೇಲೆ ಇದ್ದಾರೆ ಎಂದು ಕಾಂಗ್ರೆಸ್​ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ನಿಮ್ಮ ನಾಯಕರಿಗೆ ಮಾಡಿದ ಅಪಮಾನ ನೆನಪಿಸಿಕೊಳ್ಳಿ: ಮೋದಿ ವಿರುದ್ಧ ಡಿಕೆಶಿ ವಾಕ್ಸಮರ

ABOUT THE AUTHOR

...view details