ಕರ್ನಾಟಕ

karnataka

Daughters Day: ಬಾಲ್ಯದಲ್ಲೇ ಚಾಂಪಿಯನ್​.. ಅಮ್ಮನಿಗೆ ಸಾಧನೆಯ ಗಿಫ್ಟ್​ ಕೊಟ್ಟ ಬೆಣ್ಣೆನಗರಿಯ ಪುತ್ರಿ

By

Published : Sep 25, 2022, 11:57 AM IST

Updated : Sep 25, 2022, 1:11 PM IST

Davandere girl got state championship

ದಾವಣಗೆರೆಯ ಈ ಪೋರಿ ಕೇವಲ 7 ನಿಮಿಷದಲ್ಲಿ 150 ಕಠಿಣ ಲೆಕ್ಕಗಳನ್ನು ಬಿಡಿಸಿ ರಾಜ್ಯಕ್ಕೆ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾಳೆ. ಮುಂದಿನ ದಿನಗಳಲ್ಲಿ ಆಕೆ ಗೋವಾದಲ್ಲಿ ನಡೆಯುವ ಅಬ್ಯಾಕಾಸ್ ನ್ಯಾಷನಲ್ ಕಾಂಪಿಟೇಷನ್​​ಗೆ ಆಯ್ಕೆಯಾಗಿದ್ದಾಳೆ‌. ವಿಶ್ವ ಪುತ್ರಿಯರ ದಿನಾಚರಣೆ ಅಂಗವಾಗಿ ಇಲ್ಲೋರ್ವ ಪ್ರತಿಭಾವಂತ ಮಗಳ ಸಾಧನೆ ಬಗ್ಗೆ ತಿಳಿಯೋಣ..

ದಾವಣಗೆರೆ:ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ.. ಅಂದ್ರೆ ಎಲ್ಲಿ ಹೆಣ್ಣುಮಕ್ಕಳು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ಸಂತುಷ್ಟರಾಗಿರುತ್ತಾರೆ. ಈ ಮಾತನ್ನು ನಾವೀಗ ಹೇಳ್ತಿರೋದು ಯಾಕೆ ಅನ್ನೋದಾದರೆ, ಬೆಣ್ಣೆ ನಗರಿಯ ಪುಟ್ಟ ಬಾಲಕಿಯೊಬ್ಬಳು ಜಿಲ್ಲೆ ಮತ್ತು ಹೆತ್ತ ತಾಯಿಗೆ ಕೀರ್ತಿ ತಂದಿದ್ದಾಳೆ. ವಿಶ್ವ ಪುತ್ರಿಯರ ದಿನಾಚರಣೆ ಬೆಣ್ಣೆ ನಗರಿಯ ಬಾಲಕಿಯ ಸಾಧನೆಯ ಬಗ್ಗೆ ತಿಳಿಯೋಣ..

ಹೌದು, ನಗರದ ನಿಟ್ಟುವಳ್ಳಿ ಸೈಯದ್ ಪೀರ್ ಬಡಾವಣೆಯ ನಿವಾಸಿ ಫರ್ಜಾನಾ ಅವರ ಪುತ್ರಿ ಬಿಬಿ ಝೋಹರಾ ಲೆಕ್ಕ ಮಾಡುವಲ್ಲಿ ಎತ್ತಿದ ಕೈ. 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಈ ಬಾಲಕಿ 10ನೇ ತರಗತಿಯ ಲೆಕ್ಕಗಳನ್ನು ಬಿಡಿಸುವಲ್ಲಿ ಯಶಸ್ವಿಯಾಗಿ, ರಾಜ್ಯ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾಳೆ. ಈ ಮೂಲಕ ಹೆತ್ತ ತಾಯಿಗೆ ಹೆಣ್ಣುಮಕ್ಕಳ ದಿನಕ್ಕೆ ವಿಶೇಷ ಗಿಪ್ಟ್​​ ನೀಡಿದ್ದಾಳೆ ಬೆಣ್ಣೆ ನಗರಿಯ ಬಾಲೆ.

ಮ್ಯಾಥಮೆಟಿಕ್ಸ್ ಕಾಂಪಿಟೇಷನ್​: ರಾಜ್ಯ ಚಾಂಪಿಯನ್ ಪಟ್ಟ ಅಲಂಕರಿಸಿದ ದಾವಣಗೆರೆಯ ಬಾಲಕಿ

ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದ ರಾಜ್ಯಮಟ್ಟದ ಅಬ್ಯಾಕಸ್ ಮೆಂಟಲ್ ಹಾಗೂ ಮ್ಯಾಥಮೆಟಿಕ್ಸ್ ಕಾಂಪಿಟೇಷನ್​ನಲ್ಲಿ ಝೋಹರಾ ಕೇವಲ 7 ನಿಮಿಷದಲ್ಲಿ 150 ಕಠಿಣವಾದ ಲೆಕ್ಕಗಳನ್ನು ಬಿಡಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾಳೆ. ಅಲ್ಲದೇ ಮುಂದಿನ ದಿನಗಳಲ್ಲಿ ಝೋಹರಾ ಗೋವಾದಲ್ಲಿ ನಡೆಯುವ ಅಬ್ಯಾಕಾಸ್ ನ್ಯಾಷನಲ್ ಕಾಂಪಿಟೇಷನ್​​ಗೆ ಆಯ್ಕೆಯಾಗಿದ್ದಾಳೆ‌. ಈ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಮಕ್ಕಳು ಭಾಗಿಯಾಗಿದ್ದರು.

ಮಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ತಾಯಿ ಫರ್ಜಾನಾ ಗೋವಾದಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲೂ ಚಾಂಪಿಯನ್ ಪಟ್ಟ ಅಲಂಕರಿಸಲಿ ಎಂದು ಆಶೀರ್ವದಿಸಿದ್ದಾರೆ.

ಗಂಡ ಬಿಟ್ಟು ಹೋದರೂ ಛಲಬಿಡದ ಗಟ್ಟಿಗಿತ್ತಿ:ಹೆಣ್ಣು ಮಗು ಜನಿಸಿದೆ ಎಂದು ಬಿಬಿ ಝೋಹರಾ ತಂದೆ ಬಿಟ್ಟು ಹೋಗಿ 6 ವರ್ಷಗಳೇ ಉರುಳಿವೆ. ಇದರಿಂದ ದೃತಿಗೆಡದೆ ಛಲಬಿಡದ ತಾಯಿ ಫರ್ಜಾನಾ ಹೂ ಕಟ್ಟಿ, ಗಾರ್ಮೆಟ್ಸ್​​ನಲ್ಲಿ ಬಟ್ಟೆ ಹೊಲಿಯುವ ಕೆಲಸ ಮಾಡುತ್ತ ಮಗಳಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ. ತಮ್ಮ ಮಗಳಿಗೆ ಉನ್ನತ ಶಿಕ್ಷಣ ಕೊಡಿಸಿ ಆಕೆಯನ್ನು ಸಾಧಕಿಯಾಗಿಸಬೇಕು. ಈ ದೇಶದ ಹೆಮ್ಮೆಯ ಮಗಳಾಗಿ ಇನ್ನೂ ಎತ್ತರಕ್ಕೆ ಬೆಳೆಸಬೇಕು ಎಂಬುದೇ ಹೆತ್ತಮ್ಮನ ಮಹದಾಸೆಯಾಗಿದೆ.

ರಾಜ್ಯ ಚಾಂಪಿಯನ್ ಪಟ್ಟ ಅಲಂಕರಿಸಿದ ಬಿಬಿ ಝೈನಬ್

ಲೆಕ್ಕ, ಗಣಿತ ವಿಷಯವೆಂದರೆ ಮಕ್ಕಳು ಹಿಂದೇಟು ಹಾಕುವುದು ಸಾಮಾನ್ಯ. ಆದರೆ 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಈ ಪುಟ್ಟ ಬಾಲಕಿ ಮ್ಯಾಥಮೆಟಿಕ್ಸ್ ಕಾಂಪಿಟೇಷನ್​​ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿ ಇತರೆ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾಳೆ‌.

ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎಂಬಂತೆ ಪುಟ್ಟ ಕಂದಮ್ಮ ತನ್ನ ತಾಯಿ ಆಸರೆಯಲ್ಲಿ ಬಡ ಕುಟುಂಬದಲ್ಲಿ ಬೆಳೆಯುತ್ತಿದ್ದಾಳೆ. ಆಕೆಯ ಬುದ್ಧಿಶಕ್ತಿ ಅಗಾಧವಾಗಿದ್ದು, ಅವಳಲ್ಲಿನ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತಿರುವ ಮಹಾತಾಯಿಗೆ ಸಲಾಂ ಹೇಳೋಣ.. ಹಾಗೆಯೇ ಅಮ್ಮನಿಗೆ ತನ್ನ ಸಾಧನೆಯ ಕೊಡುಗೆ ನೀಡಿರುವ ಈ ಪ್ರತಿಭಾವಂತ ಮಗಳಿಗೆ ಆಲ್​ ದಿ ಬೆಸ್ಟ್​ ಹೇಳೋಣ..

ಇದನ್ನೂ ಓದಿ:ವಿಶ್ವದ ಅತಿ ಉದ್ದದ ಕಾರ್ಟೂನ್ ಬಿಡಿಸಿ ಗಿನ್ನೆಸ್ ದಾಖಲೆ ಬರೆದ ಕೇರಳ ಬೆಡಗಿ

Last Updated :Sep 25, 2022, 1:11 PM IST

ABOUT THE AUTHOR

...view details