ಕರ್ನಾಟಕ

karnataka

ಲೋಕಾಯುಕ್ತ ಹೆಸರಿನಲ್ಲಿ ತಹಶೀಲ್ದಾರ್​ಗೆ ಬೆದರಿಕೆ ಕರೆ: ಆರೋಪಿ ಬಂಧಿಸಿದ ನ್ಯಾಮತಿ ಪೊಲೀಸರು

By ETV Bharat Karnataka Team

Published : Dec 17, 2023, 12:59 PM IST

Updated : Dec 17, 2023, 1:14 PM IST

ದಾವಣಗೆರೆಯ ನ್ಯಾಮತಿ ತಾಲೂಕಿನ ತಹಶೀಲ್ದಾರ್​ ಗೋವಿಂದಪ್ಪನವರಿಗೆ ವ್ಯಕ್ತಿಯೊಬ್ಬ ಲೋಕಾಯುಕ್ತ ಹೆಸರಿನಲ್ಲಿ ಕರೆ ಮಾಡಿ ಬೆದರಿಕೆ ಹಾಕಿದ್ದ. ಈತನನ್ನು ನ್ಯಾಮತಿ ಪೊಲೀಸರು ಸೆರೆ ಹಿಡಿದಿದ್ದಾರೆ.

arrest
ಬಂಧನ

ದಾವಣಗೆರೆ:ಜಿಲ್ಲೆಯ ನ್ಯಾಮತಿ ತಾಲೂಕಿನ ತಹಶೀಲ್ದಾರ್ ಹೆಚ್​.ಬಿ. ಗೋವಿಂದಪ್ಪ ಅವರಿಗೆ ಬೆದರಿಕೆ ಹಾಕಿದ್ದ ಆರೋಪಿಯನ್ನು ಹೆಡೆಮುರಿ ಕಟ್ಟುವಲ್ಲಿ ನ್ಯಾಮತಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮುರುಗೇಶ ಕುಂಬಾರ.

ಈತ ತಹಶೀಲ್ದಾರ್​​ ಹೆಚ್​ ಬಿ ಗೋವಿಂದಪ್ಪ ಅವರಿಗೆ ಕೆಲ ದಿನಗಳ ಹಿಂದೆ ಲೋಕಾಯುಕ್ತ ಹೆಸರಿನಲ್ಲಿ ಕರೆ ಮಾಡಿ ಬೆದರಿಕೆ ಹಾಕಿದ್ದ. ಕರೆ ಬೆದರಿಕೆ ಹಿನ್ನೆಲೆ ಗೋವಿಂದಪ್ಪ ನ್ಯಾಮತಿ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿತ್ತು. ತನಿಖೆ ಆರಂಭಿಸಿದ ಪೊಲೀಸರು ಆರೋಪಿಗೆ ಬಲೆ ಬಲೆ ಬೀಸಿದ್ದರು. ಕೊನೆಗೆ ಚುರುಕು ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ಮುರುಗೇಶ್ ಕುಂಬಾರನನ್ನು ನೆರೆಯ ರಾಜ್ಯ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮೀರಜ್‌ನಲ್ಲಿ ಶುಕ್ರವಾರ ಬಂಧಿಸಿದ್ದು, ನ್ಯಾಮತಿ ಪೊಲೀಸ್​ ಠಾಣೆಗೆ ಕರೆತಂದು ವಿಚಾರಣೆಗೆ ಒಳಪಡಿಸಿದ್ದಾರೆ.

ಈ ಕುರಿತು ಈಟಿವಿ ಭಾರತ್​ಗೆ ದೂರವಾಣಿ ಮೂಲಕ ನ್ಯಾಮತಿ ಠಾಣೆಯ ಪಿಐ ಎನ್ ಎಸ್ ರವಿ ಮಾತನಾಡಿ ಮಾಹಿತಿ ನೀಡಿದ್ದಾರೆ. ಆರೋಪಿ ಈ ಹಿಂದೆ ಪೊಲೀಸ್ ಇಲಾಖೆ ನೌಕರನಾಗಿದ್ದನು. ಕರ್ತವ್ಯ ಚ್ಯುತಿ ಆಪಾದನೆಯ ಹಿನ್ನೆಲೆಯಲ್ಲಿ ಮುರುಗೇಶ್ 2002 ರಲ್ಲಿ ಪೊಲೀಸ್​ ಸೇವೆಯಿಂದ ಅಮಾನತುಗೊಂಡಿದ್ದ.

ಸೇವೆಯಿಂದ ಅಮಾನತುಗೊಂಡ ಬಳಿಕ ಆರೋಪಿ ಮುರುಗೇಶ್ ಲೋಕಾಯುಕ್ತ ಸೋಗಿನಲ್ಲಿ ಅಧಿಕಾರಿಗಳಿಗೆ ಕರೆ ಮಾಡುವುದು, ಬೆದರಿಕೆ ಹಾಕುವುದನ್ನು ಕರಗತ ಮಾಡಿಕೊಂಡಿದ್ದನು. ಈಗಾಗಲೇ ಮುರುಗೇಶ್ ಕುಂಬಾರ ವಿರುದ್ಧ ರಾಜ್ಯದ ವಿವಿಧ ಜಿಲ್ಲೆಗಳ ಪೊಲೀಸ್‌ ಠಾಣೆಗಳಲ್ಲಿ ಸರಿ ಸುಮಾರು 30 ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರದ ಸಾಂಗ್ಲಿಯ ಮೀರಜ್​ನಲ್ಲಿ ಆರೋಪಿಯನ್ನು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ಪಿಐ ಎನ್ ಎಸ್ ರವಿ ಮಾಹಿತಿ ನೀಡಿದ್ದಾರೆ.

ಕರೆಯಲ್ಲಿ ಹೇಳಿದ್ದಾರು ಏನು?:ಕರೆ ಮಾಡಿದ್ದ ಆರೋಪಿತಹಶೀಲ್ದಾರ್​ಗೆ 'ತಾನು ಲೋಕಾಯುಕ್ತ ಡಿವೈಎಸ್ಪಿ ಎಂದು ಪರಿಚಯಿಸಿಕೊಂಡು, ತಹಶೀಲ್ದಾರರ ವಿವರ ಪಡೆದಿದ್ದಾನೆ. ನಿಮ್ಮ ವಿರುದ್ಧ ಬೆಂಗಳೂರಿನ ಲೋಕಾಯುಕ್ತ ಕಚೇರಿಯಲ್ಲಿ ಎಫ್ಐಆರ್ ದಾಖಲಾಗಿದೆ. ಲೋಕಾಯುಕ್ತ ಎಸ್‌ಪಿ ಮತ್ತು ಅವರ ಸಿಬ್ಬಂದಿ ಈಗಾಗಲೇ ನೀವು ಕೆಲಸ ಮಾಡುತ್ತಿರುವ ಸ್ಥಳ ಮತ್ತು ವಾಸವಿರುವ ಮನೆಯ ಮೇಲೆ ದಾಳಿ ಮಾಡಲು ತಯಾರಿ ಮಾಡಿಕೊಂಡಿದ್ದಾರೆ ಎಂದು ಫೋನಿನಲ್ಲಿ ನಂಬಿಸಿದ್ದಾ‌ನೆ.

ಬಳಿಕ ನಿಮ್ಮ ಬಗ್ಗೆ ಚೆನ್ನಾಗಿ ವಿಚಾರಿಸಿದ್ದೇನೆ, ನೀವು ಒಳ್ಳೆ ಅಧಿಕಾರಿ. ನಾನೂ ‌ಈ ಲೋಕಾಯುಕ್ತ ದಾಳಿ ಆಗದಂತೆ ನೋಡಿಕೊಳ್ಳುತ್ತೇನೆ. ಅದ್ದರಿಂದ ಆನ್​ಲೈನ್​​ನಲ್ಲಿ ಎರಡು ಲಕ್ಷ ಪೇಮೆಂಟ್ ವರ್ಗಾವಣೆ ಮಾಡುವಂತೆ ಆತನು ತಿಳಿಸಿದ್ದಾನೆ. ‌ಬಳಿಕ ಪದೇ ಪದೇ ಕರೆ ಮಾಡಿ ಹಣ ವರ್ಗಾವಣೆ ಮಾಡಲು ಒತ್ತಾಯಿಸಿದ್ದಾನೆ. ಹಣ ಹಾಕದೇ ಇದ್ದಾಗ, ನಿನಗೆ ಏನ್ ಮಾಡ್ಬೇಕೋ ಮಾಡ್ತಿವಿ ನಮಗೆ ಗೊತ್ತಿದೆ ಎಂದು ತಹಶಿಲ್ದಾರ್​ಗೆ ಆರೋಪಿ ಬೆದರಿಸಿದ್ದಾನೆ.

ಇದನ್ನೂ ಓದಿ:ಪಿಎಂ ಕಚೇರಿಯ ಅಧಿಕಾರಿ ಎಂದು ತಿರುಗಾಡುತ್ತಿದ್ದ ಕಾಶ್ಮೀರಿ ವ್ಯಕ್ತಿ ಬಂಧನ: ಉಗ್ರ ನಂಟಿನ ಗುಮಾನಿ

Last Updated :Dec 17, 2023, 1:14 PM IST

ABOUT THE AUTHOR

...view details