ಕರ್ನಾಟಕ

karnataka

ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರಿಗೆ ಹಾವು ಕಡಿತ

By ETV Bharat Karnataka Team

Published : Nov 17, 2023, 10:51 AM IST

ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಅವರಿಗೆ ಹಾವು ಕಡಿದಿದ್ದು, ಚಿಕಿತ್ಸೆ ಪಡೆದಿದ್ದಾರೆ.

sanjeeva matandoor-
ಸಂಜೀವ ಮಠಂದೂರು

ಮಂಗಳೂರು: ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಅವರಿಗೆ ಹಾವು ಕಚ್ಚಿರುವ ಘಟನೆ ನಡೆದಿದೆ. ನಿನ್ನೆ ಸಂಜೆ ಏಳು ಗಂಟೆಯ ಹೊತ್ತಿಗೆ ಉಪ್ಪಿನಂಗಡಿ ಹೊರವಲಯದ ಹಿರೇಬಂಡಾಡಿಯ ತಮ್ಮ ಮನೆಯ ಅಂಗಳದಲ್ಲಿ ವಾಕಿಂಗ್ ಮಾಡುತ್ತಿದ್ದಾಗ ಹಾವು ಕಚ್ಚಿದೆ.

ಮಠಂದೂರು ಪಾದದ ಅಡಿ ಭಾಗಕ್ಕೆ ಏನೋ ಚುಚ್ಚಿದ ಅನುಭವವಾದ ತಕ್ಷಣ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದು, ಹಾವು ಹರಿದು ಹೋಗುತ್ತಿರುವುದನ್ನು ಗಮನಿಸಿದ್ದಾರೆ. ಕೂಡಲೇ ಮನೆಯವರಿಗೆ ವಿಷಯ ತಿಳಿಸಿದ್ದು, ಪುತ್ತೂರಿನ ಮಹಾವೀರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆದಿದ್ದಾರೆ.

ಈ ಬಗ್ಗೆ 'ಈಟಿವಿ ಭಾರತ'ದ ಜೊತೆ ಮಾತನಾಡಿದ ಪುತ್ತೂರು ಬಿಜೆಪಿ ನಗರ ಮಂಡಲ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, "ಸಂಜೀವ ಮಠಂದೂರು ಅವರಿಗೆ ನಿನ್ನೆ ಸಂಜೆ ಹಾವು ಕಡಿದಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಆದರೂ ಎಚ್ಚರಿಕೆ ವಹಿಸುವ ಉದ್ದೇಶದಿಂದ ರಾತ್ರಿ ತುರ್ತು ನಿಗಾ ವಿಭಾಗದಲ್ಲಿ ಇರಿಸಲಾಗಿತ್ತು. ಇಂದು ಬೆಳಿಗ್ಗೆ ವಾರ್ಡ್​ಗೆ ಶಿಫ್ಟ್ ಮಾಡಲಾಗಿದೆ. ಸಂಜೀವ ಮಠಂದೂರು ಆರೋಗ್ಯವಾಗಿದ್ದು, ಯಾರು ಗಾಬರಿಯಾಗುವ ಅಗತ್ಯವಿಲ್ಲ" ಎಂದು ತಿಳಿಸಿದರು.

ಇದನ್ನೂ ಓದಿ:ಹಾವು ಕಚ್ಚಿದರೆ ಮೊದಲು ಏನು ಮಾಡಬೇಕು? ಚಿಕಿತ್ಸೆ ಹೇಗೆ? ಸಂಪೂರ್ಣ ಮಾಹಿತಿಯ ಮೊಬೈಲ್ ಆ್ಯಪ್

ಹಾವು ಕಚ್ಚಿದರೆ ಮೊದಲು ಏನು ಮಾಡಬೇಕು?:ಹಾವು ಕಚ್ಚಿದರೆ ಏನು ಮಾಡಬೇಕೆಂದು ತಕ್ಷಣಕ್ಕೆ ಹಲವರಿಗೆ ತಿಳಿಯುವುದಿಲ್ಲ. ಹೀಗಾಗಿ ಅಪಾಯ ಕಡಿಮೆ ಮಾಡಲು ಇದೀಗ ಪಶ್ಚಿಮ ಬಂಗಾಳ ಸರ್ಕಾರ ವಿನೂತನ ತಂತ್ರ ಅನುಸರಿಸಿದೆ. ಹಾವು ಕಡಿತಕ್ಕೆ ಬಲಿಯಾದ ಜನರಿಗೆ ಸುಲಭವಾಗಿ ನೆರವಿಗೆ ಧಾವಿಸುವ ಸಲುವಾಗಿ ಮೊಬೈಲ್ ಫೋನ್ ಅಪ್ಲಿಕೇಶನ್ ಪರಿಚಯಿಸಿದೆ. ಈ ಆ್ಯಪ್​ನ ಮೂಲಕ ಸಂತ್ರಸ್ತರು ತಮ್ಮ ಜೀವ ಉಳಿಸಲು ಪೂರಕವಾದ ನೆರವು ಪಡೆದುಕೊಳ್ಳಬಹುದು.

ನಿಮ್ಮ ಫೋನ್‌ನಲ್ಲಿರುವ ಗೂಗಲ್​ ಪ್ಲೇ ಸ್ಟೋರ್​ನಿಂದ Snakebite Prevention and Rescue ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಿ. ಹಾವು ಕಡಿತಕ್ಕೆ ಒಳಗಾದ ನಂತರ ಏನು ಮಾಡಬೇಕು ಎಂಬ ಮಾಹಿತಿಯನ್ನು ಈ ಆ್ಯಪ್ ತಿಳಿಸುತ್ತದೆ. ಪ್ರಥಮ ಚಿಕಿತ್ಸೆ ಎಂದರೇನು?, ಹತ್ತಿರದ ಆಸ್ಪತ್ರೆಗೆ ಹೋದರೆ ಆ್ಯಂಟಿವೆನಮ್ ಇಂಜೆಕ್ಷನ್ ಪಡೆಯುವ ಕುರಿತು ಮಾಹಿತಿ ಒದಗಿಸುತ್ತದೆ. ಮೊಬೈಲ್ ಅಪ್ಲಿಕೇಶನ್​ ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸೂಚನೆಗಳನ್ನು ನೀಡುತ್ತದೆ. ಹಾವಿನ ಚಿತ್ರ ತೆಗೆದು ಆ್ಯಪ್​ಗೆ ಅಪ್ಲೋಡ್​ ಮಾಡಿದರೆ, ಅದರ ಜಾತಿ ಮತ್ತು ಅದು ಕಚ್ಚಿದರೆ ಏನೆಲ್ಲಾ ಆಗಬಹುದು ಎಂಬುದನ್ನು ಇದು ಹೇಳುತ್ತದೆ.

ಇದನ್ನೂ ಓದಿ:ರಾಯಚೂರು : ಮೂರ್ಛೆ ಹೋದ ನಾಗರಹಾವಿಗೆ ಕೃತಕ ಆಮ್ಲಜನಕ ಪೂರೈಸಿ ರಕ್ಷಣೆ

ABOUT THE AUTHOR

...view details