ಕರ್ನಾಟಕ

karnataka

'ಹತ್ಯೆಯಾದ ಫಾಜಿಲ್ ಕುಟುಂಬಕ್ಕೂ ಪರಿಹಾರ ಸಿಗಬೇಕಿತ್ತು': ಬಿಜೆಪಿ ಶಾಸಕ ಭರತ್ ಶೆಟ್ಟಿ

By

Published : Feb 1, 2023, 7:08 AM IST

ಹತ್ಯೆಗೀಡಾದ ಫಾಜಿಲ್​ ಕುಟುಂಬಕ್ಕೆ ಪರಿಹಾರ ನೀಡಬೇಕಿತ್ತು - ಬಿಜೆಪಿ ಶಾಸಕ ಡಾ.ಭರತ್​ ಶೆಟ್ಟಿ ಆಗ್ರಹ - ಶರಣ್​ ಪಂಪೆವೆಲ್​ ಹೇಳಿಕೆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದ ಶಾಸಕ

mangalore
ಬಿಜೆಪಿ ಶಾಸಕ ಭರತ್ ಶೆಟ್ಟಿ

ಮಂಗಳೂರು(ದಕ್ಷಿಣ ಕನ್ನಡ):ಸುರತ್ಕಲ್‌ನಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಫಾಜಿಲ್ ಕುಟುಂಬಕ್ಕೂ ಪರಿಹಾರ ಸಿಗಬೇಕಾಗಿತ್ತು ಎಂದು ಬಿಜೆಪಿ ಶಾಸಕ ಡಾ.ಭರತ್ ಶೆಟ್ಟಿ ಆಗ್ರಹಿಸಿದ್ದಾರೆ. ಮಂಗಳೂರು ಪ್ರೆಸ್​ಕ್ಲಬ್​ನಲ್ಲಿ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಲಾದ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಅವರು, "ಜಿಲ್ಲೆಯಲ್ಲಿ ಹತ್ಯೆಗೀಡಾದ ಬೇರೆ ಪ್ರಕರಣಗಳ ಸಂತ್ರಸ್ತ ಕುಟುಂಬಗಳಿಗೆ ಸಿಕ್ಕಿದ ಪರಿಹಾರವು ಮೃತ ಫಾಜಿಲ್​ ಕುಟುಂಬಕ್ಕೂ ಸಿಗಬೇಕಾಗಿತ್ತು. ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಹೋದ ಪ್ರಸ್ತಾವನೆಯಲ್ಲಿ ಫಾಜಿಲ್​ ಕುಟುಂಬದ ಹೆಸರು ಉಲ್ಲೇಖವಾಗಿತ್ತು" ಎಂದು ಹೇಳಿದರು.

ಫಾಜಿಲ್​ ಹತ್ಯೆಯ ನಂತರ ಅವರ ಮನೆಗೆ ನೀವು ಭೇಟಿ ನೀಡಿರಲಿಲ್ಲ. ಇದಕ್ಕೆ ಕಾರಣವೇನು? ಎಂಬ ಮಾಧ್ಯಮದ ಪ್ರಶ್ನೆಗೆ ಉ್ತತರಿಸಿದ ಅವರು, "ಆಗ ಪರಿಸ್ಥಿತಿ ಉದ್ವಿಗ್ನವಾಗಿತ್ತು. ನಾನು ಹೋಗಿ ಇನ್ನೂ ಜಾಸ್ತಿ ಗಲಾಟೆಯಾಗುವುದು ಬೇಡ ಎಂಬ ಸದುದ್ದೇಶದಿಂದ ಹೋಗಿಲ್ಲವಷ್ಟೇ" ಎಂದು ಹೇಳಿದರು. ಬಳಿಕ ಪ್ರವೀಣ್​ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ಫಾಜಿಲ್​ ಕೊಲೆ ನಡೆದಿದೆ ಎಂಬ ಶರಣ್​ ಪಂಪವೆಲ್​ ಹೇಳಿಕೆಯ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಅವರ ಹೇಳಿಕೆ ಬಗ್ಗೆ ನನಗೆ ತಿಳಿದಿಲ್ಲ ಮತ್ತು ಅವರ ಮಾತನ್ನು ನಾನು ಕೇಳಿಯೇ ಇಲ್ಲ" ಎಂದರು.

ಅಭಿವೃದ್ಧಿ ಕಾಮಗಾರಿಗಳ ಆರಂಭ:ಪ್ರವಾಸೋದ್ಯಮಕ್ಕೆ ಉತ್ತೇಜನೆ ನೀಡಲು ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ನಾಯರ್‌ಕುದ್ರು ದ್ವೀಪವನ್ನು 42 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಟೆಂಡರ್ ಕರೆಯಲಾಗಿದೆ. ಅಲ್ಲದೇ ಪಿಡಬ್ಲ್ಯುಡಿ ಮೂಲಕ 1.5 ಕೋಟಿ ರೂ. ವೆಚ್ಚದಲ್ಲಿ ತಣ್ಣೀರುಬಾವಿಯಿಂದ ದ್ವೀಪಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯನ್ನು ನಿರ್ಮಾಣ ಮಾಡುತ್ತಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭವಾಗಲಿದೆ.

ಜೊತೆಗೆ ಕೊಟ್ಟಾರಚೌಕಿ, ಹೊನ್ನಕಟ್ಟೆ, ಸುರತ್ಕಲ್​ ಜಂಕ್ಷನ್​ ಅಭಿವೃದ್ಧಿಪಡಿಸಲಾಗುತ್ತಿದೆ. ಕೊಟ್ಟಾರಚೌಕಿಯಲ್ಲಿ ಅಮರ್ ಜವಾನ್ ಸ್ಮಾರಕ ನಿರ್ಮಿಸಲಾಗುವುದು. ಸುರತ್ಕಲ್‌ನಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಸರ್ವಿಸ್ ರಸ್ತೆ ವಿಸ್ತರಣೆ ಕಾಮಗಾರಿ ಆರಂಭವಾಗಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ 24/7 ಕುಡಿಯುವ ನೀರು ಒದಗಿಸುವ ಯೋಜನೆ ಕ್ಷೇತ್ರಾದ್ಯಂತ ಕಾರ್ಯಗತಗೊಳ್ಳುತ್ತಿದೆ ಎಂದರು.

ಇದನ್ನೂ ಓದಿ:ಫಾಝಿಲ್ ಹತ್ಯೆ ಸಮರ್ಥಿಸಿದ ಶರಣ್ ಪಂಪ್‌ವೆಲ್ ಬಂಧಿಸಿ: ಎಸ್‌ಡಿಪಿಐ

ಸುರತ್ಕಲ್ ಮಾರುಕಟ್ಟೆ ಕಾಮಗಾರಿ ಹಿಂದಿನ ಸರ್ಕಾರದ ಲೋಪದಿಂದ ಸ್ಥಗಿತಗೊಂಡಿದೆ. ಶೀಘ್ರ ಅದರ ಕೆಲಸ ಆರಂಭವಾಗಲಿದೆ. ಅಡ್ಯಾರ್ ಮತ್ತು ಅರ್ಕುಳ ಗ್ರಾಮಗಳನ್ನು ಗುರುಪುರ ಹೋಬಳಿಯಿಂದ ಮಂಗಳೂರು ಹೋಬಳಿಗೆ ಸೇರ್ಪಡೆಗೊಳಿಸಲಾಗಿದೆ. ಕಾವೂರಿನಲ್ಲಿ ಇನ್‌ಕ್ಯುಬೇಶನ್ ಸೆಂಟರ್ ಆರಂಭಿಸಲು 40 ಎಕರೆ ಜಾಗದ ಅವಶ್ಯಕತೆ ಇದೆ. ಪ್ರಸ್ತುತ 6 ಎಕರೆ ಜಾಗ ಲಭ್ಯವಿದೆ. ಇನ್ನೂ ಸುರತ್ಕಲ್ ಲೈಟ್‌ಹೌಸ್ ಬೀಚ್‌ನ್ನು ಮುಡಾದಿಂದ 15 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಬೀಚ್‌ಗಳಲ್ಲಿ ಪ್ರವಾಸಿಗರಿಗೆ ಸುರಕ್ಷತೆಯ ಭಾವನೆ ಮೂಡಿಸಬೇಕಿದೆ. ಬೀಚ್‌ಗಳಲ್ಲಿ ಸಮಯ ಮಿತಿ ಹೆಚ್ಚಳಗೊಳಿಸುವ ಚಿಂತನೆಯಿದೆ ಎಂದು ವಿವರಿಸಿದರು.

ಸ್ಮಾರ್ಟ್ ಸಿಟಿ ಯೋಜನೆ ಅನುದಾನ ಮಂಗಳೂರು ಉತ್ತರ ಕ್ಷೇತ್ರದ ವ್ಯಾಪ್ತಿಗೆ ಸಿಗದಿದ್ದರೂ, ಅಧಿಕಾರಗಳ ಜತೆ ಮಾತುಕತೆ ನಡೆಸಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ 50 ಕೋಟಿ ರೂ. ಪಡೆಯಲಾಗಿದೆ. 9 ಕೋಟಿ ರೂ. ವೆಚ್ಚದಲ್ಲಿ ತಣ್ಣೀರುಬಾವಿ ಬೀಚ್ ಅಭಿವೃದ್ಧಿಯ ಕೆಲಸ ಆರಂಭಗೊಂಡಿದೆ. ತಣ್ಣೀರುಬಾವಿ ಬೀಚ್ ಬ್ಲೂ ಫ್ಲಾಗ್​ಗೆ ಆಯ್ಕೆಯಾಗಿದ್ದು, ಕೇಂದ್ರ ಸರ್ಕಾರದಿಂದ 8 ಕೋಟಿ ರೂ. ದೊರೆತಿದೆ ಎಂದು ಮಾಹಿತಿ ನೀಡಿದರು.

ಫಾಜಿಲ್​ ಹತ್ಯೆ ಪ್ರಕರಣವೇನು..?:2022ರಜುಲೈ 28 ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸುರತ್ಕಲ್​ ಎಂಬಲ್ಲಿ ಫಾಝಿಲ್​ ಎಂಬ ಯುವಕನನ್ನು ಹತ್ಯೆ ಮಾಡಲಾಗಿತ್ತು. ಬೆಳ್ಳಾರೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯ ಬೆನ್ನಲ್ಲೇ ಮಂಗಳೂರಿನಲ್ಲಿ ಯುವಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಲೆ ಮಾಡಲಾಗಿತ್ತು. ಸಾಮಾನ್ಯ ಜನರ ಓಡಾಟದ ಮಧ್ಯೆಯೇ ದುಷ್ಕರ್ಮಿಗಳು ದಾಳಿ ನಡೆಸಿದ್ದರು. ಫಾಜಿಲ್​ ಸುರತ್ಕಲ್​ನಲ್ಲಿ ಜವಳಿ ಅಂಗಡಿಯ ಮುಂಭಾಗದಲ್ಲಿ ನಿಂತುಕೊಂಡಿದ್ದ ವೇಳೆ ದುಷ್ಕರ್ಮಿಗಳು ಕಾರಿನಲ್ಲಿ ಬಂದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಫಾಝಿಲ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದರು.

ಇದನ್ನೂ ಓದಿ:ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ಸುರತ್ಕಲ್​​ ಘಟನೆ ನಡೆದಿದೆ​​ ಎಂದ ಶರಣ್​: ಪಂಪ್​ವೆಲ್ ವಿರುದ್ಧ ಪೊಲೀಸರಿಗೆ ದೂರು ನೀಡಿದ ಫಾಜಿಲ್ ತಂದೆ

ABOUT THE AUTHOR

...view details