ಕರ್ನಾಟಕ

karnataka

ಚಾಮರಾಜನಗರ: ವಿದ್ಯುತ್ ಪ್ರವಹಿಸಿ 12 ವರ್ಷದ ಬಾಲಕಿ ಸಾವು, ಈಜಲು ಹೋಗಿ ನೀರಲ್ಲಿ ಮುಳುಗಿದ ಯುವಕ

By

Published : Jun 5, 2023, 6:57 AM IST

ಪ್ರತ್ಯೇಕ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.

ಪ್ರತ್ಯೇಕ ಘಟನೆ
ಪ್ರತ್ಯೇಕ ಘಟನೆ

ಚಾಮರಾಜನಗರ: ಜಿಲ್ಲೆಯಲ್ಲಿ ನಿನ್ನೆ ದುರಂತ ಘಟನೆಗಳು ಸಂಭವಿಸಿವೆ. ಒಂದು ಪ್ರಕರಣದಲ್ಲಿ ಬಾಲಕಿಗೆ ವಿದ್ಯುತ್​ ಪ್ರವಹಿಸಿ ಸಾವನ್ನಪ್ಪಿದರೆ, ಇನ್ನೊಂದು ಪ್ರಕರಣದಲ್ಲಿ ಯುವಕನೊಬ್ಬ ನೀರುಪಾಲಾಗಿರುವ ಘಟನೆ ಬೆಳಕಿಗೆ ಬಂದಿದೆ.

ಮಗಳು ಸಾವು, ಮುಗಿಲು ಮುಟ್ಟಿದ ಪೋಷಕರ ಆಕ್ರಂದನ: ವಿದ್ಯುತ್ ಪ್ರವಹಿಸಿ 12 ವರ್ಷದ ಬಾಲಕಿ ಮೃತಪಟ್ಟಿರುವ ದಾರುಣ ಘಟನೆ ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಡಹಳ್ಳಿ ಗ್ರಾಮದ ವಿದ್ಯಾ(12) ಮೃತ ದುರ್ದೈವಿ. ಮನೆಯಲ್ಲಿದ್ದ ನೀರಿನ ಪಂಪ್ ಸ್ವಿಚ್ಡ್​​ ಆಫ್ ಮಾಡಲು ತೆರಳಿದ್ದ ವೇಳೆ ವಿದ್ಯುತ್ ಪ್ರವಹಿಸಿದೆ ಎಂದು ತಿಳಿದು ಬಂದಿದೆ. ಒದ್ದೆ ಬಟ್ಟೆ ಧರಿಸಿದ್ದರಿಂದ ವಿದ್ಯುತ್ ಶಾಕ್​ನ ಪರಿಣಾಮ ಹೆಚ್ಚು ಬೀರಿದೆ. ಘಟನೆಯ ತಕ್ಷಣವೇ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅದಾಗಲೇ ಬಾಲಕಿ ಮೃತಪಟ್ಟಿದ್ದಳು. ಬಾಲಕಿ ತಂದೆ ಚಾಮರಾಜನಗರ ತಾಲೂಕಿನ ಕುಮಚಹಳ್ಳಿಯ ನಿವಾಸಿ ಆಗಿದ್ದು, ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮದ ತಾತನ ಮನೆಗೆ ತೆರಳಿದ್ದಾಗ ಈ ಘಟನೆ ಸಂಭವಿಸಿದೆ. ಮಗಳ ಸಾವನ್ನಪ್ಪಿದ್ದ ಸುದ್ದಿ ತಿಳಿದ ಪೋಷಕರ ಆಕ್ರಂದನ ಮುಗಿಲು ಮುಟ್ಟಿತು. ಈ ಘಟನೆ ಗುಂಡ್ಲುಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ‌.

ಇದನ್ನೂ ಓದಿ:ರಾಯಚೂರು : ದುರಸ್ತಿ ವೇಳೆ ವಿದ್ಯುತ್‌ ಪ್ರವಹಿಸಿ ಕಂಬದ ಮೇಲೆ ಲೈನ್‌ಮ್ಯಾನ್ ಸಾವು

ಈಜಲು ಹೋಗಿ ನೀರಲ್ಲಿ ಮುಳುಗಿದ ಯುವಕ: ಸ್ನೇಹಿತರೊಟ್ಟಿಗೆ ಈಜಲು ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ಎಣ್ಣೆಹೊಳೆ ಕೆರೆಯಲ್ಲಿ ನಡೆದಿದೆ. ಮೃತರು ಚಾಮರಾಜನಗರ ತಾಲೂಕಿನ ವೆಂಕಟಯ್ಯನ ಛತ್ರದ ಸಿದ್ದರಾಜು (19) ಎಂದು ಗುರುತಿಸಲಾಗಿದೆ. ಈತ ನಾಲ್ವರು ಸ್ನೇಹಿತರೊಟ್ಟಿಗೆ ಭಾನುವಾರ ಈಜಲು ತೆರಳಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಮೇಲೆ ಬರಲಾರದೇ ಅಸುನೀಗಿದ್ದಾನೆ ಎನ್ನಲಾಗ್ತಿದೆ. ಸಿದ್ದರಾಜು ಇತ್ತೀಚೆಗಷ್ಟೇ ಮೈಸೂರಿನ ಕಾಲೇಜೊಂದಕ್ಕೆ ಬಿಎ ಪದವಿಗಾಗಿ ಪ್ರವೇಶ ಪಡೆದಿದ್ದರು ಎಂದು ತಿಳಿದುಬಂದಿದೆ. ಚಾಮರಾಜನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸಿಮ್ಸ್​ಗೆ ರವಾನೆ ಮಾಡಲಾಗಿದೆ.

ಇದನ್ನೂ ಓದಿ: ಹುಬ್ಬಳ್ಳಿ : ತಾಯಿ ಕೆಲಸಕ್ಕೆ ಹೋದಾಗ ಆತ್ಮಹತ್ಯೆ ಶರಣಾದ ಸಹೋದರಿಯರು

ಕಾರು ಪಲ್ಟಿಯಾಗಿ ನಾಲ್ವರಿಗೆ ಗಾಯ:ಕಾರೊಂದು ಪಲ್ಟಿಯಾಗಿ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಹನೂರು ತಾಲೂಕಿನ ರಾಮಾಪುರ ಸಮೀಪದ ನಾಲ್ ರೋಡ್ ಬಳಿ ನಡೆದಿದೆ. ತಮಿಳುನಾಡಿನಿಂದ ಕೊಳ್ಳೇಗಾಲದ ಕಡೆಗೆ ಮಳವಳ್ಳಿ ಮೂಲದ 9 ಮಂದಿ ಕಾರಲ್ಲಿ ತೆರಳುತ್ತಿದ್ದಾಗ ನಾಲ್ ರೋಡ್ ಬಳಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಇದರಲ್ಲಿ ನಾಲ್ವರು ಗಾಯಗೊಂಡಿದ್ದು, ಎಲ್ಲರಿಗೂ ಕೊಳ್ಳೇಗಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ:ಒಡಿಶಾ ರೈಲು ದುರಂತ.. ಸಿಬಿಐ ತನಿಖೆಗೆ ಶಿಫಾರಸು ಮಾಡಿದ ರೈಲ್ವೆ ಮಂಡಳಿ

ಇದನ್ನೂ ಓದಿ:ಬಸ್​ ಕಾರು ಮುಖಾಮುಖಿ ಡಿಕ್ಕಿ: ಐವರ ದುರ್ಮರಣ

ABOUT THE AUTHOR

...view details