ಕರ್ನಾಟಕ

karnataka

ಬಳ್ಳಾರಿಯಲ್ಲಿ ಭಾರಿ ಮಳೆ: ಮನೆಗಳಿಗೆ ನುಗ್ಗಿದ ನೀರು, ಜನಜೀವನ ಅಸ್ತವ್ಯಸ್ತ

By

Published : Aug 2, 2022, 10:53 PM IST

ಮಳೆನೀರು
ಮಳೆನೀರು

ಜಿಲ್ಲೆಯ ಹಲವೆಡೆ ಜಮೀನುಗಳಿಗೆ ನೀರು ನುಗ್ಗಿದ್ದರಿಂದ ಬೆಳೆ ಸಂಪೂರ್ಣ ಹಾಳಾಗಿದೆ. ಮಳೆ ಹಾನಿಪೀಡಿತ ಸ್ಥಳಗಳಿಗೆ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳ್ಳಾರಿ: ಜಿಲ್ಲಾದ್ಯಂತ ಕಳೆದ ರಾತ್ರಿ ಮತ್ತು ಬೆಳಗಿನ ಜಾವ ಸುರಿದ ಭಾರಿ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ತಾಲೂಕಿನ ಹೊಸ ಮೋಕ, ಚಾಗನೂರು ಗ್ರಾಮಗಳ ಮನೆಗಳು ನೀರಿನಲ್ಲಿ ಜಲಾವೃತವಾಗಿವೆ. ಮನೆಯಲ್ಲಿನ ಸಾಮಗ್ರಿಗಳೆಲ್ಲ ನೀರುಪಾಲಾಗಿದ್ದು, ಮನೆಯೊಳಗಿನ ನೀರು ಹೊರಹಾಕಲು ಗ್ರಾಮಸ್ಥರು ಹರಸಾಹಸ ಪಟ್ಟಿದ್ದಾರೆ.

ಬಳ್ಳಾರಿಯಲ್ಲಿ ಭಾರಿ ಮಳೆಯಿಂದ ಅನಾಹುತ ಸಂಭವಿಸಿರುವುದು

ಮೋಕ ಗ್ರಾಮದಲ್ಲಿರುವ 110 ಕೆವಿ ವಿದ್ಯುತ್ ವಿತರಣಾ ಕೇಂದ್ರ ಜಲಾವೃತವಾಗಿದ್ದು, ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗಿದೆ. ಮಳೆಯ ನೀರು ವಿದ್ಯುತ್ ಕೇಂದ್ರಕ್ಕೆ ನುಗ್ಗಿದೆ. ಇದರಿಂದ ಸುಮಾರು 4 ಅಡಿಯಷ್ಟು ನೀರು ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿಂತಿದ್ದು, ಹೈವೊಲ್ಟೇಜ್ ಟ್ರಾನ್ಸ್ ಫಾರ್ಮರ್‌ಗಳು ನೀರಿನಲ್ಲಿ ಮುಳುಗಿವೆ. ಪರಿಣಾಮ ವಿದ್ಯುತ್ ವಿತರಣೆ ಸ್ಥಗಿತಗೊಳಿಸಲಾಗಿದೆ.

ಜಮೀನುಗಳಿಗೆ ನೀರು ನುಗ್ಗಿದ್ದರಿಂದ ಬೆಳೆ ಸಂಪೂರ್ಣ ಹಾಳಾಗಿದೆ. ಮಳೆ ಹಾನಿ ಪೀಡಿತ ಸ್ಥಳಗಳಿಗೆ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿದ ಶಾಸಕರು, ಮಳೆಯಿಂದಾಗಿ ಮನೆಗಳ ಗೋಡೆಗಳು ಬಿರುಕುಬಿಟ್ಟಿವೆ. ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಕೊಚ್ಚಿಹೋಗಿದೆ. ಬೆಳೆ ಕಳೆದುಕೊಂಡವರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು.

ಸಿರುಗುಪ್ಪ ತಾಲೂಕಿನ ಬಾಗೇವಾಡಿ ಗ್ರಾಮದ ಅಂಗನವಾಡಿ ಕೇಂದ್ರವು ಇದೀಗ ಸಂಪೂರ್ಣ ಜಲಾವೃತಗೊಂಡಿದೆ. ಶಾಲೆಯ ಸಮೀಪದಲ್ಲಿಯೇ ಮುಚ್ಚಲಾಗಿರುವ ಮತ್ತು ಬಳಕೆಯಲ್ಲಿ ಇಲ್ಲದ ಶುದ್ಧ ಕುಡಿಯುವ ನೀರಿನ ಘಟಕವು ಸುಮಾರು ವರ್ಷಗಳಿಂದ ಅದೇ ಸ್ಥಿತಿಯಲ್ಲಿದೆ. ಇಲ್ಲಿ ರಂಗಮಂದಿರವಿದ್ದು, ಇದರ ಎದುರಿನ ಅಂಗನವಾಡಿ ಕೇಂದ್ರ ಮತ್ತು ಗ್ರಾಮ ಪಂಚಾಯಿತಿ ಪಕ್ಕದಲ್ಲಿ ದೊಡ್ಡ ಗುಂಡಿ ಬಿದ್ದಿವೆ.

ಅವ್ಯವಸ್ಥೆ ಸರಿಪಡಿಸುವಂತೆ ಆಗ್ರಹ: ಇದರಿಂದ ಸಾರ್ವಜನಿಕರಿಗೆ ಹಾಗೂ ಚಿಕ್ಕ ಮಕ್ಕಳಿಗೆ ತಿರುಗಾಡಲು ಆಗುತ್ತಿಲ್ಲ. ಇದರ ಬಗ್ಗೆ ಪಿಡಿಒ ಗಮನಕ್ಕೆ ತಂದರೂ ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಅವ್ಯವಸ್ಥೆಯನ್ನು ಸರಿಪಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಬಸವನಪುರ ಬಳಿ ಅಂಡರ್ ಪಾಸ್​​ನಲ್ಲಿ ನಿಂತ ಮಳೆ ನೀರು: ವಾಹನ‌ ಸಂಚಾರದಲ್ಲಿ ವ್ಯತ್ಯಯ

ABOUT THE AUTHOR

...view details