ಕರ್ನಾಟಕ

karnataka

ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ವಿಡಿಯೋ ತಡೆಗೆ ಜನರ ಬೆಂಬಲವೂ ಬೇಕು: ಸಚಿವ ಆರಗ

By

Published : Dec 26, 2022, 3:59 PM IST

ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ವಿಡಿಯೋ ಪ್ರಸಾರದ ಕುರಿತು ಇಂದು ವಿಧಾನ ಪರಿಷತ್‌ನಲ್ಲಿ ಚರ್ಚೆಯಾಯಿತು. ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿದರು.

peoples-support-is-needed-to-avoid-obscene-videos-on-social-media-says-araga-jnanendra
ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ವಿಡಿಯೋ ತಡೆಗೆ ಜನರ ಬೆಂಬಲವೂ ಬೇಕು : ಆರಗ ಜ್ಞಾನೇಂದ್ರ

ಬೆಂಗಳೂರು :ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಚಿತ್ರ ಮತ್ತು ದೃಶ್ಯ ಪ್ರಸಾರ ನಿಯಂತ್ರಣ ಕುರಿತು ಕಾನೂನು ಚೌಕಟ್ಟಿನಲ್ಲಿ ಏನೆಲ್ಲ ಮಾಡಬಹುದೋ ಆ ಎಲ್ಲಾ ಪ್ರಯತ್ನವನ್ನು ಸರ್ಕಾರ ಮಾಡಲಿದೆ. ಆದರೆ ಈ ವಿಚಾರದಲ್ಲಿ ಸಾಮಾಜಿಕ ಜಾಗೃತಿಯೂ ಬೇಕು. ಪೋಷಕರು, ಶಿಕ್ಷಕರು, ಸಾರ್ವಜನಿಕರು ಬೆಂಬಲಿಸಿದ್ದಲ್ಲಿ ಮಾತ್ರ ನಿಯಂತ್ರಿಸಲು ಸಾಧ್ಯ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಇದೇ ವೇಳೆ ಸಚಿವರು, ಕಾನೂನಿನಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುವ ಅಶ್ಲೀಲ ಚಿತ್ರ ಪ್ರಸರಣಕ್ಕೆ ತಡೆ ಕಷ್ಟ ಎನ್ನುವುದನ್ನೂ ಪರೋಕ್ಷವಾಗಿ ಒಪ್ಪಿಕೊಂಡರು.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲ ಚಿತ್ರ, ದೃಶ್ಯ ಪ್ರಸಾರ ನಿಯಂತ್ರಣ ಕುರಿತು ಕಾಂಗ್ರೆಸ್ ಸದಸ್ಯ ಪಿ.ಆರ್.ರಮೇಶ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇಂದು ಶಾಲಾ ಮಕ್ಕಳು, ಯುವಕರ ಕೈಯಲ್ಲಿ ಮೊಬೈಲ್ ಇದೆ. ಕೆಲವರು ರಾತ್ರಿಯೆಲ್ಲಾ ನಿದ್ದೆಬಿಟ್ಟು ಅಶ್ಲೀಲ ದೃಶ್ಯ ವೀಕ್ಷಣೆ ಮಾಡುತ್ತಿದ್ದಾರೆ. ಇದು ಸಾಮಾಜಿಕ ಪಿಡುಗು. ದೇಶದ ಸಂಸ್ಕೃತಿ, ಹಿಂದೂ ಸಂಸ್ಕೃತಿ ನಾಶವಾಗುತ್ತದೆ. ಟೂಲ್ ಕಿಟ್ ಆಗಿ ಇದನ್ನು ಕೆಲ ರಾಜಕೀಯ ವ್ಯಕ್ತಿಗಳು ಬಳಸುತ್ತಿದ್ದಾರೆ. ದೇಶದ ಸ್ಥಿತಿಗತಿ ಬಗ್ಗೆ ಮಕ್ಕಳಿಗೆ ಸರಿಯಾದ ಮಾಹಿತಿ ಹೋಗದ ಹಿನ್ನೆಲೆಯಲ್ಲಿ ಕಾಮ ಪ್ರಚೋದನೆಗೆ ಪ್ರೋತ್ಸಾಹ ಕೊಡುವ ಕೆಲಸವಾಗುತ್ತಿದೆ. ಇದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎನ್ನುವ ಕಳಕಳಿಯನ್ನು ಸದಸ್ಯರು ವ್ಯಕ್ತಪಡಿಸಿದ್ದಾರೆ. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ ಎಂದರು.

ಸೈಬರ್​ ಕ್ರೈಂ ನಿಯಂತ್ರಣಕ್ಕೆ ಸರ್ಕಾರದಿಂದ ಕ್ರಮ: ಈ ಬಾರಿ ಸೈಬರ್ ಠಾಣೆಗೆ 80,376 ದೂರುಗಳು ಬಂದಿವೆ. ಮಕ್ಕಳು ವ್ಯಾಸಂಗ ಬಿಟ್ಟು ಬೇರೆ ಕಡೆ ಗಮನ ಹರಿಸುತ್ತಿದ್ದಾರೆ. ಸರ್ಕಾರ ಈ ಬಗ್ಗೆ ಗಮನ ಹರಿಸುತ್ತಿದೆ. ಪ್ರತಿ ಜಿಲ್ಲೆಯಲ್ಲೂ ಸೈಬರ್​ ಕ್ರೈಂ ವಿಭಾಗ ಮಾಡಲಾಗಿದೆ. ಕೆಲ ಕೇಸ್‌ಗಳಲ್ಲಿ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ತಜ್ಞರ ಘಟಕ ರಚಿಸಲಾಗಿದೆ. ಸಿಐಡಿಯಲ್ಲಿ ತರಬೇತಿ ಕೊಡುವ ಕೆಲಸವಾಗಿದೆ. ಅಹಮದಾಬಾದ್ ಎಫ್ಎಸ್ಎಲ್ ಜೊತೆ ಒಪ್ಪಂದ ಮಾಡಿಕೊಂಡು ನಮ್ಮ ಸಿಐಡಿ ಅಧಿಕಾರಿಗಳಿಗೆ ತರಬೇತಿ ಕೊಡಿಸಲಾಗುತ್ತಿದೆ. ಸೈಬರ್ ಕ್ರೈಂ ತಡೆ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಅಶ್ಲೀಲ ದೃಶ್ಯ ಹಾಕುವುದು, ಹಣಕಾಸು ಲಪಟಾಯಿಸುವುದು ಎರಡನ್ನೂ ಪರಿಶೀಲಿಸಲಾಗುತ್ತಿದೆ. ತಲೆ ಒಡೆದು ಹಣ ಮಾಡುವುದು ಹಳೆಯದು, ಈಗ ಸೈಬರ್ ಮೂಲಕ ಹಣ ಲಪಟಾಯಿಸಲಾಗುತ್ತಿದೆ. 70 ಕೋಟಿ ರೂ ಫ್ರೀಸ್ ಮಾಡಿ ನಮ್ಮ ಪೊಲೀಸರು ಕೈತಪ್ಪಿ ಹೋಗುತ್ತಿದ್ದ ಹಣ ನಿಲ್ಲಿಸಿದ್ದಾರೆ. ಎಲ್ಲಿಂದ ಈ ಅಶ್ಲೀಲ ಪೋಸ್ಟ್‌ಗಳು ಆಗುತ್ತಿವೆ ಎನ್ನುವುದನ್ನು ಪತ್ತೆ ಮಾಡಿ ಶಿಕ್ಷೆ ಕೊಡುವ ಕೆಲಸವನ್ನು ನಮ್ಮ ಪೊಲೀಸರು ಮಾಡುತ್ತಿದ್ದಾರೆ. ನಮ್ಮ ಪೊಲೀಸರಲ್ಲಿ ಯಾರು ಸೈಬರ್ ವಿಷಯದ ಮೇಲೆ ತಜ್ಞರಿದ್ದಾರೋ ಅವರನ್ನೇ ನೇಮಕ ಮಾಡುತ್ತಿದ್ದೇವೆ. ಇದಕ್ಕೆ ಕೇವಲ ಪೊಲೀಸರು, ಕಾಯ್ದೆ ಸಾಕಾಗುವುದಿಲ್ಲ. ಸಾಮಾಜಿಕ ಜಾಗೃತಿಯೂ ಬೇಕು, ಪೋಷಕರು, ಶಿಕ್ಷಕರು, ಸಾರ್ವಜನಿಕರು ಬೆಂಬಲಿಸಿದಲ್ಲಿ ಮಾತ್ರ ಇದನ್ನು ನಿಯಂತ್ರಿಸಲು ಸಾಧ್ಯ ಎಂದು ತಿಳಿಸಿದರು.

ಸೈಬಲ್ ಸೆಲ್ ಬಲಕ್ಕೆ ಕ್ರಮ: ಭಯೋತ್ದಾದಕ ಕೃತ್ಯಗಳಿಗೆ ಬೇಕಾದ ಸ್ಪೋಟಕ ತಯಾರಿಕಾ ವಿಧಾನಗಳ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸಿಗುತ್ತಿರುವ ಮಾಹಿತಿಗಳಿಗೆ ಕಡಿವಾಣ ಹಾಕಲು ಬೇಕಾದ ಕ್ರಮ ಕೈಗೊಳ್ಳಲಾಗುತ್ತದೆ. ಕುಕ್ಕರ್ ಬಾಂಬ್ ಸ್ಟೋಟದ ಆರೋಪಿಯಿಂದ ಇನ್ನಷ್ಟು ಮಾಹಿತಿ ಪಡೆದು ಸೋಷಿಯಲ್ ಮೀಡಿಯಾದಲ್ಲಿನ ವೀಡಿಯೋಗಳ ನಿರ್ಬಂಧಕ್ಕೆ ಮುಂದಾಗುತ್ತೇವೆ ಎಂದು ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಕಲಾಪದಲ್ಲಿ ಜೆಡಿಎಸ್ ಸದಸ್ಯ ಟಿ.ಎ.ಶರವಣ ಪೊಲೀಸ್ ಸೈಬರ್ ಸೆಲ್ ಅನ್ನು ಆಧುನೀಕರಣಗೊಳಿಸುವ ಮತ್ತು ಸೈಬರ್​ ಕ್ರೈಂಗೆ ಪ್ರತ್ಯೇಕ ಸಹಾಯವಾಣಿ ಆರಂಭಿಸುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಸೈಬರ್ ಕ್ರೈಂಗೆ ನಾವು ಒಳ್ಳೆಯ ಅಧಿಕಾರಿಗಳ ನೇಮಕ ಮಾಡಿದ್ದೇವೆ. ಎಲ್ಲ ರೀತಿಯಲ್ಲಿಯೂ ಇದನ್ನು ನಿಯಂತ್ರಿಸಲು ಕ್ರಮ ವಹಿಸುತ್ತೇವೆ. ಅಡ್ವಾನ್ಸ್ ಸೈನ್ಸ್ ಬಳಕೆ ಎಷ್ಟು ಒಳ್ಳೆಯದಿದೆಯೋ ಅದನ್ನೂ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಯಾರು ಯಾವುದಕ್ಕೆ ದುರ್ಬಳಕೆ ಬಳಕೆ ಮಾಡಿಕೊಳ್ಳುತ್ತಾರೆ ಎನ್ನುವುದು ಮುಖ್ಯ. ಸರ್ಕಾರ ಸೈಬರ್ ಸೆಲ್ ಬಲಕ್ಕೆ ಬದ್ದವಾಗಿದೆ ಎಂದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಕುಕ್ಕರ್ ಬ್ಲಾಸ್ಟ್ ಬಗ್ಗೆಯೂ ಶರವಣ ಪ್ರಸ್ತಾಪಿಸಿದ್ದಾರೆ. ಆ ಆರೋಪಿಯನ್ನು ಪೊಲೀಸರು ಹಿಡಿದಿದ್ದಲ್ಲ. ಜನರು ಹಿಡಿದಿದ್ದು, ಇದರಲ್ಲಿ ಇಂಟಲಿಜೆನ್ಸಿ ಸಂಪೂರ್ಣ ವಿಫಲವಾಗಿದೆ. ಒಳ್ಳೆಯ ಅಧಿಕಾರಿ ಹಾಕಿದ್ದೇವೆ ಎನ್ನುತ್ತೀರಾ, ನಾನೇ ಎರಡು ದೂರು ಕೊಟ್ಟಿದ್ದೇನೆ. ಎಲ್ಲಿ ಹಿಡಿಯೋದು ಸರ್ ಎನ್ನುತ್ತಾರೆ ಎಂದು ಸರ್ಕಾರದ ಕಾಲೆಳೆದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಆರಗ ಜ್ಞಾನೇಂದ್ರ, ಕುಕ್ಕರ್ ಬಾಂಬ್ ಬ್ಲಾಸ್ಟ್ ಒಂದು ಭಾಗ. ಇದನ್ನು ಸೈಬರ್ ನಿಂದ ಆತ ಕಲಿತ ಎನ್ನುವ ವಿಷಯ ಇಲ್ಲಿ ಪ್ರಸ್ತಾಪಿಸಿದ್ದಾರೆ. ಇಂತಹದ್ದು ಕಲಿಯಲು ಅವಕಾಶವಿದೆ ಆತನಿಂದ ಇನ್ನು ಬಾಯಿ ಬಿಡಿಸಬೇಕಿದೆ. ಈ ರೀತಿಯ ವಿಡಿಯೋಗಳನ್ನು ಬ್ಲಾಕ್ ಮಾಡಲು ಬೇಕಾದ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ಮಕ್ಕಳು, ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ ಕ್ರಮ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ ಪೋಕ್ಸೊ ಕಾಯ್ದೆ ಬಲವಾದ ಅಸ್ತ್ರವಾಗಿದ್ದು ಇದರಿಂದ ಆರೋಪಿಗಳು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಪರಿಚಿತರಿಂದಲೇ ಮಕ್ಕಳ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದು, ಈ ಬಗ್ಗೆ ಜಾಗೃತಿ ಅಗತ್ಯ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.

ಬಿಜೆಪಿ ಸದಸ್ಯ ಛಲವಾದಿ ನಾರಾಯಣಸ್ವಾಮಿ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯ ತಡೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಮಕ್ಕಳು, ಮಹಿಳೆಯರ ರಕ್ಷಣೆಗೆ ಮಹಿಳಾ ಮತ್ತು ಮಕ್ಕಳ ಸಹಾಯವಾಣಿ ಇದೆ. ಸ್ಪಂದನ ಸಹಾಯವಾಣಿ ಇದೆ. 24 ಗಂಟೆ ಮಕ್ಕಳ, ಮಹಿಳೆಯರ ರಕ್ಷಣೆಗಾಗಿ ಪಿಂಕ್ ಹೊಯ್ಸಳ ಮಾಡಲಾಗಿದೆ. ಎಲ್ಲಾ ಜಿಲ್ಲೆಗಳಲ್ಲಿಯೂ ಪೋಕ್ಸೋ ಕೋರ್ಟ್ ಗಳ ನೇಮಿಸಲಾಗಿದೆ. ಎಫ್ಐಆರ್ ಹಾಕಿ ಆರೋಪಪಟ್ಟಿ ಸಲ್ಲಿಕೆಗೆ ವಿಳಂಬ ಮಾಡದೆ ಬೇಗ ಸಲ್ಲಿಸಲು ಸೂಚಿಸಲಾಗಿದೆ. ಮಹಿಳೆಯರಿಗೆ ಕರಾಟೆ ತರಬೇತಿ ನೀಡಲಾಗುತ್ತಿದೆ. ಚನ್ನಮ್ಮ ಪಡೆ, ಓಬವ್ವ ಪಡೆ, ಶರಾವತಿ ಓಬವ್ವ ಪಡೆ, ರಾಣಿ ಚನ್ನಮ್ಮ ಪಡೆ ವಾಹನ ಜನನಿಬಿಡ ಪ್ರದೇಶ, ಶಾಲಾ-ಕಾಲೇಜು ವ್ಯಾಪ್ತಿಯಲ್ಲಿ ಗಸ್ತು ಸುತ್ತುತ್ತಿದೆ. ಕಾಲೇಜುಗಳಲ್ಲಿ ಸಿಸಿಟಿವಿ ಹಾಕಲಾಗುತ್ತಿದೆ ಎಂದರು.

ಪೋಕ್ಸೊ ಕಾಯ್ದೆಯಡಿ ಬೇಲ್​ ಸಿಗಲ್ಲ. ಅಷ್ಟು ಸುಲಭವಾಗಿ ಈ ಕೇಸ್ ಗಳಿಂದ ಬಿಡುಗಡೆಯಾಗಲ್ಲ. ಬಹುತೇಕ ಕೇಸ್‌ನಲ್ಲಿ ಶಿಕ್ಷೆಯಾಗಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪರಿಚಿತರಿಂದಲೇ ಆಗುತ್ತಿದೆ. ಹಾಗಾಗಿ ಈ ವಿಚಾರದಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಇದನ್ನೂ ಪೊಲೀಸ್ ಇಲಾಖೆ ಮಾಡಲಿದೆ. ಏನೆಲ್ಲಾ ಮುಂಜಾಗ್ರತಾ ಕ್ರಮ ವಹಿಸಬೇಕೋ ಅದನ್ನು ಮಾಡಲಾಗುತ್ತದೆ ಎಂದರು.

ಇದನ್ನೂ ಓದಿ :ಬಿ ಕೆ ಹರಿಪ್ರಸಾದ್​​, ಸಿ ಟಿ ರವಿ ನಡುವೆ ಟಾಕ್ ವಾರ್: 'ಕುಡುಕ', 'ಅಕ್ರಮ ಆಸ್ತಿ'ಯ ಏಟು - ತಿರುಗೇಟು

ABOUT THE AUTHOR

...view details