ETV Bharat / state

ಬಿ ಕೆ ಹರಿಪ್ರಸಾದ್​​, ಸಿ ಟಿ ರವಿ ನಡುವೆ ಟಾಕ್ ವಾರ್: 'ಕುಡುಕ', 'ಅಕ್ರಮ ಆಸ್ತಿ'ಯ ಏಟು - ತಿರುಗೇಟು

author img

By

Published : Dec 26, 2022, 1:27 PM IST

ಬೆಳಗಾವಿಯ ಸುವರ್ಣಸೌಧದಲ್ಲಿ ಬಿ ಕೆ ಹರಿಪ್ರಸಾದ್​, ಸಿ ಟಿ ರವಿ ನಡುವೆ ಟಾಕ್​ ವಾರ್ ​​- ಗುಜರಾತ್​ ಮಾದರಿಯಲ್ಲಿ ಪಾನ ನಿಷೇಧ ಮಾಡಿ ಎಂದು ಹರಿಪ್ರಸಾದ್​ ಸವಾಲ್

ಬಿ ಕೆ ಹರಿಪ್ರಸಾದ್​ಗೆ ಸಿ ಟಿ ರವಿ ತಿರುಗೇಟು
ಬಿ ಕೆ ಹರಿಪ್ರಸಾದ್​ಗೆ ಸಿ ಟಿ ರವಿ ತಿರುಗೇಟು

ಬೆಂಗಳೂರು/ಬೆಳಗಾವಿ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹಾಗೂ ಮೇಲ್ಮನೆ ಪ್ರತಿಪಕ್ಷದ ನಾಯಕ ಬಿ ಕೆ ಹರಿಪ್ರಸಾದ್ ನಡುವೆ ಟಾಕ್ ವಾರ್ ಜೋರಾಗಿದೆ. ಉಭಯ ನಾಯಕರು ಕುಡುಕ ವಿಚಾರವಾಗಿ ಏಟು ಎದುರೇಟು ನೀಡಿದ್ದಾರೆ. ಸುವರ್ಣಸೌಧದಲ್ಲಿ ಮಾತನಾಡಿದ ಬಿ ಕೆ ಹರಿಪ್ರಸಾದ್, ಮೂರು ಲಕ್ಷ ಟನ್ ನಷ್ಟು ಮೊಲಾಸಿಸ್ ಅನ್ನು ಗೋವಾ ಮೂಲಕ ಮಹಾರಾಷ್ಟ್ರಕ್ಕೆ ಕಳುಹಿಸಲಾಗ್ತಿದೆ. ಇದರಲ್ಲಿ ಭಾರಿ ಹಗರಣ ನಡೆದಿದೆ. ಇದನ್ನು ನಾವು ಬಹಿರಂಗ ಗೊಳಿಸ್ತೀವೆ. ಇದರಲ್ಲಿ ಕಳ್ಳಭಟ್ಟಿ ಸಾರಾಯಿ ಮಾಡ್ತಾರೆ. ಸಿ ಟಿ ರವಿ ಅವರು ಹೆಂಡ ಮಾರುವವರು, ಕೊಲೆಗಡುಕರು ಎಂದಿದ್ದಾರೆ.

ಪಾನ ನಿಷೇಧ ಮಾಡಿ ಎಂದು ಹರಿಪ್ರಸಾದ್​ ಸವಾಲ್​: ಇವರ ಗುರು ಬಿಎಸ್​ವೈ ಇದ್ದಾಗ ಸಾರಾಯಿ ಬಂದ್ ಮಾಡಿಸಿದ್ರು. ಇದರಿಂದ ಸಾವಿರಾರು ಜನ ರಸ್ತೆ ಪಾಲಾದ್ರು. ಇವಾಗ ಹೆಂಡದ ಮೇಲೆ ಕಣ್ಣಿದೆ. 24 ಸಾವಿರ ಕೋಟಿ ಆದಾಯ ಹೆಂಡದ ತೆರಿಗೆ ಮೂಲಕ ಬರುತ್ತದೆ.‌ ಗುಜರಾತ್ ಮಾದರಿಯಲ್ಲಿ ಪಾನ ನಿಷೇಧ ಮಾಡಿ ಎಂದು‌ ಸವಾಲು ಹಾಕಿದರು.

ಆ ಕಸುಬು ನಡೆಸುತ್ತಿರುವವರನ್ನ ಕೊಲೆಗಡುಕರು ಎಂದು ಹೇಳೋದು ಸರಿಯಲ್ಲ. ಸಿ ಟಿ ರವಿ ಅವರಿಗೆ ಎಳ್ಳಾಮಾವಾಸ್ಯೆಯಂದು ಸಾರಾಯಿ, ಹೆಂಡ ಸಿಕ್ಕಿರಲಿಲ್ಲ. ಅದಕ್ಕೆ ಕಳ್ಳಬಟ್ಟಿ ಕುಡಿದು ಮಾತಾಡಿದ್ದಾರೆ. ನನ್ನ ಹಿನ್ನೆಲೆ ಇಡೀ ದೇಶಕ್ಕೆ ಗೊತ್ತಿದೆ. ಇವರು ಸಣ್ಣ ಹುಡುಗರಿದ್ದಾಗಲೇ ನಾನು ಚಿಕ್ಕಮಗಳೂರಿನಲ್ಲಿ ಇಂದಿರಾ ಗಾಂಧಿ ಚುನಾವಣೆ ನೋಡಿದ್ದೇನೆ. ನಮ್ಮ ಆಸ್ತಿ ಸಂಪಾದನೆ ಬಗ್ಗೆ ಅವರು ಆರೋಪ ಮಾಡಿದರೆ, ದೇಶದಲ್ಲಿ ಅವರದ್ದೇ ಸರ್ಕಾರ ಇದೆ. ಒಂದಾದರೂ ಎಫ್​​ಐಆರ್ ನನ್ನ ವಿರುದ್ಧ ತೋರಿಸಲಿ, ನಾನು ರಾಜಕೀಯ ಬಿಡ್ತೀನಿ. ಇಲ್ಲ ಅವರ ಮೇಲೆ ಎಫ್​​ಐ ಆರ್ ಎಷ್ಟಿದೆ ತೋರಿಸಲಿ ಎಂದರು.

ಸಂಪಾದನೆ ಬಗ್ಗೆ ತನಿಖೆ ಆಗಲಿ: ದನದ ಮಾಂಸ ಮಾರಾಟಗಾರರಿಂದ ಎಷ್ಟು ಹಪ್ತಾ ವಸೂಲಿ ಮಾಡಿದ್ದಾರೆ. ಕಳ್ಳಬಟ್ಟಿಗೆ ಪ್ರೋತ್ಸಾಹ ಕೊಟ್ಟಿದ್ದಾರೆ ಎಲ್ಲವೂ ಬಹಿರಂಗವಾಗಬೇಕು. ಇಷ್ಟೊಂದು ಹಣ ಶಾಸಕರಿಗೆ ಮಾಡೋದಕ್ಕೆ ಸಾಧ್ಯ ಇಲ್ಲ. ನನ್ನ ಸಂಪಾದನೆ ಹಾಗೂ ಅವರ ಸಂಪಾದನೆ ಬಗ್ಗೆ ತನಿಖೆ ಆಗಲಿ. ಐಟಿ, ಇಡಿ, ದಾಳಿ ನಡೆಯಲಿ. ಸಿಟಿ ರವಿ ಚಿಕ್ಕಮಗಳೂರಿಂದ ಬೆಂಗಳೂರಿಗೆ ಬರಬೇಕಾದರೆ ಯಾರದರೂ ಲಿಫ್ಟ್ ಕೊಡಬೇಕಿತ್ತು. ಆದರೆ ಈಗ ಐಶಾರಾಮಿ ಕಾರಿನಲ್ಲಿ ಓಡಾಡುತ್ತಿದ್ದಾರೆ. ಸಿಟಿ ರವಿ ಮೂರು ಸಾವಿರ ಕೋಟಿ ಆಸ್ತಿ ಹೊಂದಿದ್ದಾರೆ ಅಂತ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಆರೋಪ ಮಾಡಿದ್ದಾರೆ. ಅದಕ್ಕೆ ತಲೆ ಕೆಡಿಸಿಕೊಂಡು ಕಳ್ಳಭಟ್ಟಿ ಕುಡಿದು ಈ ರೀತಿ ಮಾತಾಡ್ತಾರೆ ಎಂದು ಕಿಡಿಕಾರಿದರು.

ಬಿ ಕೆ ಹರಿಪ್ರಸಾದ್​ಗೆ ಸಿ ಟಿ ರವಿ ತಿರುಗೇಟು: ಬಿ ಕೆ ಹರಿಪ್ರಸಾದ್ ಹೇಳಿಕೆಗೆ ತಿರುಗೇಟು ನೀಡಿದ ಸಿ ಟಿ ರವಿ, ಪ್ರತೀ ವರ್ಷ ನಾನು ಆಸ್ತಿ ಘೋಷಣೆ ಮಾಡ್ತಾ ಇದ್ದೇನೆ. ಲೋಕಾಯುಕ್ತ ರದ್ದು ಮಾಡಿರುವವರು ನನ್ನನ್ನು ಪ್ರಶ್ನೆ ಮಾಡುತ್ತಿದ್ದಾರೆ. ನಾನು ಮಧ್ಯಮ ವರ್ಗದ ರೈತನ ಮಗ. ರಾಜಕೀಯಕ್ಕೆ ಬರೋದಕ್ಕೂ ಮುನ್ನವೂ ಆಸ್ತಿ ವಿವರ ಸಲ್ಲಿಸಿದ್ದೇನೆ. ಅನುಮಾನ ಇರೋರು ಲೋಕಾಯುಕ್ತಕ್ಕೆ ಹೋಗಲಿ ಎಂದರು.

ಬೇನಾಮಿ ಆಸ್ತಿ ಮಾಡೋದಕ್ಕೆ ನಮ್ಮಪ್ಪ ಮುಖ್ಯಮಂತ್ರಿ ಆಗಿರಲಿಲ್ಲ. ನ್ಯಾಯವಾಗಿ ದುಡಿಯೋ ಸಂಸ್ಕಾರ ಕಲಿಸಿಕೊಟ್ಟಿದ್ದಾರೆ.‌ ನನ್ನ ಆಸ್ತಿಯೇನು 800 ಪಟ್ಟು ಹೆಚ್ಚಿಗೆ ಆಗಿಲ್ಲ. ಒಂದ್ಕಡೆ ಆಲೂ ಹಾಕಿ ಮತ್ತೊಂದು ಕಡೆ ಚಿನ್ನ ತೆಗೆಯೋರು ಅವರು. ಅಕ್ರಮ ಆಸ್ತಿ ಇರೋದು ದೃಢಪಡಿಸಲಿ. ನಾನು ಕೊತ್ವಾಲ್ ರಾಮಚಂದ್ರ ಶಿಷ್ಯ ಅಲ್ಲ. ಗ್ಯಾಂಗ್ ಕಟ್ಟಿಕೊಂಡು ಓಡಾಡಿಲ್ಲ ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ: ಭಯೋತ್ಪಾದಕರಿಗೆ ಬೆಂಬಲ ಕೊಡುವ ಪಕ್ಷ ಬಿಜೆಪಿ: ಬಿ.ಕೆ.ಹರಿಪ್ರಸಾದ್

ಕುಡಿದು ಮಾತಾಡ್ತೀನಿ ಅಂತಾ ನನ್ನ ಬಗ್ಗೆ ಮಾತಾಡಿದ್ದಾರೆ. ನನ್ನ ಬ್ಲಡ್​ನಲ್ಲಿ ಗಾಂಜಾ, ಮದ್ಯಪಾನ ಮಾಡಿರೋದು ಏನಾದ್ರೂ ಸಿಕ್ಕಿದ್ರೆ ಮಾತಾಡಲಿ. ನನ್ನ ಜೊತೆ ಕಾಂಪಿಟೇಶನ್​ಗೆ ಅವರು ಯಾರು ಬೇಕಾದರೂ ಬರಲಿ. ಬೆಳಗಾವಿ ತನಕ ಓಡಿ ತೋರಿಸ್ತೇನೆ. ಅವರ ಕೈಯಲ್ಲಿ ಓಡೋದಕ್ಕೆ ಆಗುತ್ತಾ ಎಂದು ತೋರಿಸಲಿ. ಕುಡಿದು ಓಡಾಡೋಕ್ಕೆ ಆಗದೇ ಇರೋರು ಯಾರು ಅಂತಾ ಎಲ್ಲರಿಗೂ ಗೊತ್ತು ಎಂದು ತಿರುಗೇಟು ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.