ಕರ್ನಾಟಕ

karnataka

ಕಳ್ಳ ಮಾರ್ಗದ ಮೂಲಕ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಪ್ರಯಾಣಿಕರ ಸಾಗಣೆ: ನಾಲ್ವರ ಬಂಧನ

By

Published : Sep 15, 2021, 12:08 PM IST

four arrest

ಚಿಕ್ಕೋಡಿ ಡಿವೈಎಸ್​ಪಿ ಹಾಗೂ ನಿಪ್ಪಾಣಿ ಪೊಲೀಸರ ತಂಡ ದಾಳಿ ನಡೆಸಿ, ಕಳ್ಳ ಮಾರ್ಗದ ಮೂಲಕ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಖಾಸಗಿ ಬಸ್ ಹಾಗೂ ಮ್ಯಾಕ್ಸಿಕೊ ಕ್ಯಾಬ್ ಅನ್ನು ಜಪ್ತಿ ಮಾಡಿಕೊಂಡು, ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಚಿಕ್ಕೋಡಿ:RT-PCR ವರದಿ ಇಲ್ಲದೇ ಕಳ್ಳ ಮಾರ್ಗದ ಮೂಲಕ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಖಾಸಗಿ ವಾಹನಗಳ ಮೇಲೆ ಚಿಕ್ಕೋಡಿ ಡಿವೈಎಸ್​ಪಿ ಹಾಗೂ ನಿಪ್ಪಾಣಿ ಪೊಲೀಸರ ತಂಡ ದಾಳಿ ನಡೆಸಿ ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕೊರೊನಾ ಆತಂಕದ ಹಿನ್ನೆಲೆ ರಾಜ್ಯದ ಗಡಿಯಲ್ಲಿ ಕಟ್ಟೆಚ್ಚರ ಮುಂದುವರೆದಿದೆ. ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರಿಗೆ RT-PCR ವರದಿ ಕಡ್ಡಾಯ ಎಂದು ಸರ್ಕಾರ ಆದೇಶ ಹೊರಡಿಸಿದೆ.

ಅದರಂತೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಹತ್ತಿರದ ಕೋಗನೊಳಿ ಚೆಕ್ ಪೋಸ್ಟ್ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದು, ತಪಾಸಣಾ ಕಾರ್ಯ ನಡೆಯುತ್ತಿದೆ‌. ಒಂದು ವೇಳೆ ರಿಪೋರ್ಟ್ ಇಲ್ಲದೆ ಬಂದವರನ್ನು ವಾಪಸ್​ ಕಳುಹಿಸಲಾಗುತ್ತಿದೆ.

ಪ್ರಯಾಣಿಕರನ್ನು ಸಾಗಿಸುತ್ತಿದ್ದ ಖಾಸಗಿ ವಾಹನಗಳ ಮೇಲೆ ದಾಳಿ ನಡೆಸಿದ ಪೊಲೀಸರು

ಇದನ್ನೇ ಸದುಪಯೋಗ ಮಾಡಿಕೊಂಡ ಸ್ಥಳೀಯ ಖಾಸಗಿ ವಾಹನಗಳು ಕೋವಿಡ್ ರಿಪೋರ್ಟ್ ಇಲ್ಲದೇ ಬಂದ ಮುಗ್ಧ ಪ್ರಯಾಣಿಕರಿಂದ ದುಬಾರಿ ಹಣ ಪಡೆದು ಕಳ್ಳ ಮಾರ್ಗದ ಮೂಲಕ ಕರ್ನಾಟಕ ರಾಜ್ಯಕ್ಕೆ ತಂದು ಬಿಡುತ್ತಿದ್ದಾರೆ‌.

ಮಹಾರಾಷ್ಟ್ರದ ಕಾಗಲ ಪಟ್ಟಣದಿಂದ ಪ್ರಯಾಣಿಕರನ್ನು ಕಳ್ಳ ಮಾರ್ಗದ ಮೂಲಕ ಕರ್ನಾಟಕದ ಮಾಂಗ್ನೂರ ಕ್ರಾಸ್ ಬಳಿ ತಂದು ಬಿಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು.

ಈ ಕುರಿತು ಪಕ್ಕಾ ಮಾಹಿತಿ ಪಡೆದ ಬೆಳಗಾವಿ ಜಿಲ್ಲಾ ಪೊಲೀಸ್ ಇಂತಹ ವಾಹನಗಳ ಮೇಲೆ ನಿಗಾ ಇಡುವಂತೆ ಸೂಚನೆ ನೀಡಿತ್ತು. ಈ ಹಿನ್ನೆಲೆ ಚಿಕ್ಕೋಡಿ ಡಿವೈಎಸ್​ಪಿ ಹಾಗೂ ನಿಪ್ಪಾಣಿ ಪೊಲೀಸರ ನೇತೃತ್ವದ ತಂಡ ದಾಳಿ ನಡೆಸಿ, 4 ಜನರನ್ನು ವಶಕ್ಕೆ ಪಡೆದು, ಒಂದು ಖಾಸಗಿ ಬಸ್ ಹಾಗೂ ಮ್ಯಾಕ್ಸಿಕೊ ಕ್ಯಾಬ್ ಜಪ್ತಿ ಮಾಡಿಕೊಂಡಿದ್ದಾರೆ.

ABOUT THE AUTHOR

...view details