ಕರ್ನಾಟಕ

karnataka

40 ಮೂರ್ತಿಗಳಿಂದ ಶುರುವಾದ ಕಸುಬು...ಈಗ 3 ಲಕ್ಷ ಮೂರ್ತಿಗಳ ತಯಾರಿಕೆ ವರಿಗೂ ಸಾಗಿದ ಕಾಯಕ.. ಇದು ಕುಂಬಾರ ಕುಟುಂಬದ ಯಶೋಗಾಥೆ!

By ETV Bharat Karnataka Team

Published : Sep 16, 2023, 9:32 AM IST

Updated : Sep 16, 2023, 3:08 PM IST

ಬೆಳಗಾವಿಯ ಕುಂಬಾರ ಕುಟುಂಬವೊಂದು ಆರು ದಶಕಗಳಿಂದ ಗಣೇಶ ಮೂರ್ತಿ ತಯಾರಿಸುತ್ತಿದ್ದು ಈ ಬಾರಿ ಬರೊಬ್ಬರಿ 3 ಲಕ್ಷಕ್ಕೂ ಅಧಿಕ ಗಣಪತಿ ಮೂರ್ತಿಗಳನ್ನು ತಯಾರಿಸಿದ್ದಾರೆ. ಯಾವುದು ಆ ಊರು..? ಏನವರ ಹಿನ್ನೆಲೆ..? ಹೇಗೆ ಮೂರ್ತಿ ತಯಾರಿಸುತ್ತಾರೆ..? ಎಂಬ ವಿವರ ಈಟಿವಿ ಭಾರತ್​ನ ವಿಶೇಷ ವರದಿಯಲ್ಲಿ ನೋಡಿ.

ಕುಂಬಾರ ಕುಟುಂಬದಿಂದ ಗಣೇಶ ಮೂರ್ತಿ ತಯಾರಿಕೆ
ಕುಂಬಾರ ಕುಟುಂಬದಿಂದ ಗಣೇಶ ಮೂರ್ತಿ ತಯಾರಿಕೆ

ಕುಂಬಾರ ಕುಟುಂಬದಿಂದ 3 ಲಕ್ಷಕ್ಕೂ‌ ಅಧಿಕ ಗಣೇಶ ಮೂರ್ತಿ ತಯಾರಿಕೆ

ಬೆಳಗಾವಿ:ಆ ಕುಂಬಾರ ಕುಟುಂಬ ತಮ್ಮ ಅಜ್ಜನಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಆರು ದಶಕಗಳಿಂದ ಗಣೇಶ ಮೂರ್ತಿ ತಯಾರಿಸುವುದನ್ನೇ ಕುಲ‌ ಕಸುಬನ್ನಾಗಿ ಮಾಡಿಕೊಂಡಿದೆ. ವರ್ಷಪೂರ್ತಿ ಅದೇ ಕಾಯಕದಲ್ಲಿ ತೊಡಗುವ ಇವರು, ಈ ಬಾರಿ ಬರೊಬ್ಬರಿ 3 ಲಕ್ಷಕ್ಕೂ ಅಧಿಕ ಮೂರ್ತಿಗಳನ್ನು ತಯಾರಿಸಿ ದಾಖಲೆ ಮೆರೆದಿದ್ದಾರೆ. ಅದು ಪರಿಸರ ಸ್ನೇಹಿ ಮಣ್ಣಿನ ಗಣಪತಿಗಳೇ ಎನ್ನುವುದು ಮತ್ತೊಂದು ವಿಶೇಷತೆ.

ರಾಶಿ ರಾಶಿ ಸುಂದರ ಗಣಪತಿಗಳು, ಬೃಹದಾಕಾರದ ಗೋದಾಮುಗಳು, ಮೂರ್ತಿ ತಯಾರಿಕೆಯಲ್ಲಿ ತೊಡಗಿರುವ ಕಾರ್ಮಿಕರು. ಹೌದು ಈ ಎಲ್ಲ ದೃಶ್ಯಗಳು ಕಂಡು ಬರುವುದು ಗೋಕಾಕ್ ತಾಲೂಕಿನ ಕೊಣ್ಣುರು ಎನ್ನುವ ಪಟ್ಟಣದಲ್ಲಿ. ಇಲ್ಲಿನ ಶಂಕರಪ್ಪ ಮಲ್ಲಪ್ಪ ಕುಂಬಾರ ಕುಟುಂಬವೇ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ಇಡೀ ದೇಶದಲ್ಲೇ ಪ್ರಖ್ಯಾತಿ ಪಡೆದಿದೆ. ಕೇವಲ 40 ಮೂರ್ತಿಗಳಿಂದ ಆರಂಭವಾಗಿ, ಇಂದು 3 ಲಕ್ಷಕ್ಕೂ ಅಧಿಕ ಮೂರ್ತಿಗಳ ತಯಾರಿಸುವಷ್ಟು ಹೆಮ್ಮರವಾಗಿ ಇವರ ಉದ್ಯಮ ಬೆಳೆದು ನಿಂತಿದೆ.

1962ರಲ್ಲಿ ದಿ. ಶಂಕರಪ್ಪ ಮಲ್ಲಪ್ಪ ಕುಂಬಾರ ಅವರು, ತಮ್ಮ ಅಳಿಯ ದಿ. ಸಿದ್ದಪ್ಪ ಕೆಂಚಪ್ಪ ಕುಂಬಾರ ಮತ್ತು ಕುಟುಂಬಸ್ಥರನ್ನು ಸೇರಿಸಿಕೊಂಡು ಶ್ರೀ ಕಾಡಸಿದ್ದೇಶ್ವರ ಇಟ್ಟಂಗಿ ಮತ್ತು ಕುಂಬಾರಿಕೆ ಸಾಮಾನುಗಳ ಉತ್ಪಾದಕರ ಸಹಕಾರಿ ಸಂಘವನ್ನು ಸ್ಥಾಪಿಸುತ್ತಾರೆ. ಈ ಸಂಘದ ಮೂಲಕ ತಮ್ಮ ಕುಂಬಾರಿಕೆ ಕಾಯಕ ಆರಂಭಿಸಿದ ದಿ. ಶಂಕರಪ್ಪ ಅವರು ತಮ್ಮ ಆರು ಮಕ್ಕಳಿಗೆ ಆರು ವಿಭಾಗಗಳಲ್ಲಿ ಗಣೇಶ ಮೂರ್ತಿ ತಯಾರಿಸಲು ಸೂಚಿಸುತ್ತಾರೆ. ತಂದೆಯ ಮಾತನ್ನು ಚಾಚು ತಪ್ಪದೇ ಪಾಲಿಸಿದ ಮಕ್ಕಳು ತಮ್ಮ ಕುಲಕಸುಬು ಮುಂದುವರಿಸುತ್ತಾರೆ.

ಬಳಿಕ ಹಂತ ಹಂತವಾಗಿ ಪ್ರಗತಿ ಕಂಡ ಕುಂಬಾರ ಕುಟುಂಬ ಬೃಹದಾಕಾರದ ಆರು ಘಟಕಗಳನ್ನು ನಿರ್ಮಿಸಿ ಸಂಘದಡಿ ಪ್ರತ್ಯೇಕವಾಗಿ ಮೂರ್ತಿ ತಯಾರಿಸಿ ಪಕ್ಕದ ಮಹಾರಾಷ್ಟ್ರ, ಗೋವಾ ರಾಜ್ಯಗಳು ಹಾಗೂ ರಾಜ್ಯದ ಬೆಂಗಳೂರು, ಬೀದರ, ಚಾಮರಾಜನಗರ, ಮೈಸೂರು, ಹಾಸನ, ಹುಬ್ಬಳ್ಳಿ, ಧಾರವಾಡ ಸೇರಿ ನಾಡಿನ ಮೂಲೆ ಮೂಲೆಗಳಿಗೆ ಮೂರ್ತಿ ಮಾರಾಟ ಮಾಡುತ್ತಿದ್ದಾರೆ. ಉದ್ಯಮ ಬೆಳೆದಂತೆ ಕುಂಬಾರ ಕುಟುಂಬ ಕೂಡ ಬೆಳೆದಿದ್ದು, ಆರು ಮಕ್ಕಳ ಸಂಸಾರ ಇಂದು 60 ಸದಸ್ಯರನ್ನು ಹೊಂದಿದೆ. ಇವರೆಲ್ಲರೂ ಈ ಸಂಘದ ಷೇರುದಾರರಾಗಿದ್ದಾರೆ. ಇನ್ನು ವರ್ಷಪೂರ್ತಿ ಇಲ್ಲಿ ಮೂರ್ತಿ ತಯಾರಿಕೆ ನಡೆಯುವುದು ಇಲ್ಲಿನ ಮತ್ತೊಂದು ವಿಶೇಷತೆ.

ಕುಂಬಾರ ಕುಟುಂಬದಿಂದ 3 ಲಕ್ಷಕ್ಕೂ‌ ಅಧಿಕ ಗಣೇಶ ಮೂರ್ತಿ ತಯಾರಿಕೆ

ಮೂರ್ತಿ ತಯಾರಿಕೆ ಹೇಗೆ?:ಗೋಕಾಕ್​ ತಾಲೂಕಿನ ಪಾಶ್ಚಾಪುರ ಹತ್ತಿರದ ರಾಮಗಾನಟ್ಟಿ, ಹಟ್ಟಿ ಆಲೂರ, ಗುಡಕೇತರ ಸೇರಿ ಇನ್ನಿತರ ಹಳ್ಳಿಗಳಿಂದ ತಂದ ಗುಡ್ಡದ ಕೆಂಪು ಮಣ್ಣನ್ನು ಒಂದು ವರ್ಷ ಹೊರಗಡೆ ಬಿಸಿಲು, ಗಾಳಿಯಲ್ಲಿ ಬಿಡುತ್ತಾರೆ. ನಂತರ ಮಣ್ಣು ಸಣ್ಣಗೆ ಮಾಡಿ ಕಲ್ಲುಗಳನ್ನು ಬೇರ್ಪಡಿಸಿ, ಪಲ್ವರೈಸರ್ ಯಂತ್ರದಲ್ಲಿ ಹಾಕಿ ಮಣ್ಣಿನ ಪೌಡರ್ ಮಾಡುತ್ತಾರೆ. ಆ ಪೌಡರ್ ಅ​ನ್ನು ಚೌಕಾಕಾರದ ಕಟ್ಟೆಗೆ ಹಾಕಿ 24 ಗಂಟೆ ನೀರು ಊಣಿಸುತ್ತಾರೆ. ಇದಾದ ಬಳಿಕ ಮಣ್ಣನ್ನು ಕಾಲಿನಿಂದ ತುಳಿದು ಹದ ಮಾಡಿ, ನೆರಳಿನಲ್ಲಿ ಒಣಗಿಸುತ್ತಾರೆ‌‌. ಇದೇ ವೇಳೆ, ಹತ್ತಿಯನ್ನು ಮಿಶ್ರಣ ಮಾಡಲಾಗುತ್ತದೆ. ಮಾರನೇ ದಿನ ಪಗ್ ಮಿಲ್ ಯಂತ್ರದಲ್ಲಿ ಸರಿಯಾಗಿ ಮಿಶ್ರಣ ಮಾಡಿದ ನಂತರ ಹದವಾಗಿ ಬಂದ ಮಣ್ಣನ್ನು ಆಯಾ ಗಾತ್ರದ ಅಚ್ಚುಗಳಿಗೆ ಹಾಕಿ ಗಣೇಶ ಮೂರ್ತಿಗಳನ್ನು ತಯಾರಿಸಲಾಗುತ್ತದೆ.

ನೈಸರ್ಗಿಕ ಬಣ್ಣ ಬಳಕೆ:ಪರಿಸರಕ್ಕೆ ಮಾರಕವಾದ ಬಣ್ಣವನ್ನು ಕೊಣ್ಣುರು ಕುಂಬಾರರು ಬಳಸೋದಿಲ್ಲ. ಮೂರ್ತಿಗಳು ತಯಾರಾಗಿ, ಅಂತಿಮ‌ ರೂಪ ಕೊಟ್ಟ ಬಳಿಕ ಅವುಗಳನ್ನು 15 ದಿನ ಚೆನ್ನಾಗಿ ಒಣಗಿಸುತ್ತಾರೆ. ಆ ಮೇಲೆ ಪಾಲೀಶ್ ಮಾಡಲಾಗುತ್ತದೆ. ನಂತರ ನೈಸರ್ಗಿಕ ಬಿಳಿ ಬಣ್ಣ ಬಳಿದು, ಮೂರ್ತಿಗೆ ತಕ್ಕುದಾದ ವಸ್ತ್ರ- ದೋತರ, ಆಭರಣ, ಕಿರೀಟಗಳನ್ನು ವಿವಿಧ ಬಣ್ಣಗಳಿಂದ ಅಲಂಕರಿಸಲಾಗುತ್ತದೆ. ಮತ್ತೊಮ್ಮೆ ಒಣಗಿಸಿ ಪ್ಯಾಕಿಂಗ್ ಮಾಡಿ, ಕೊನೆಗೆ ತಮ್ಮದೇ ವಾಹ‌ನಗಳ ಮೂಲಕ ಆರ್ಡರ್ ಕೊಟ್ಟ ಗ್ರಾಹಕರಿಗೆ ಮೂರ್ತಿಗಳನ್ನು ತಲುಪಿಸಲಾಗುತ್ತದೆ. ಇಲ್ಲಿಗೆ ಬಂದು ಒಯ್ಯುವವರಿಗೂ ಮೂರ್ತಿ ಕೊಡುತ್ತಾರೆ.

ಪದವಿ ಪಡೆದರೂ ಕುಲಕಸುಬು ಬಿಡಲ್ಲ:ಮೂರ್ತಿ ತಯಾರಕ ಸುರೇಶ ಮಲ್ಲಪ್ಪ ಕುಂಬಾರ ಈಟಿವಿ ಭಾರತ ಜೊತೆಗೆ ಮಾತನಾಡಿ, ನಾನು ಕೂಡ ಬಿಎಸ್ಸಿ ಪದವಿಧರ. ಅಲ್ಲದೇ ಬಿಇ ಮೆಕ್ಯಾನಿಕಲ್, ಎಎಂಜಿಡಿ, ಬಿಇಎಡ್, ಬಿಕಾಂ, ಬಿಇಎಂಎಸ್ ಕಲಿತ ನಮ್ಮ ಸಹೋದರರು ಯಾರೂ ಕೂಡ ಹೊರಗಡೆ ಕೆಲಸಕ್ಕೆ ಹೋಗುವುದಿಲ್ಲ. ಕಲಿತು ನೌಕರಿ ಅರಸಿ ಬೇರೆಡೆ ಹೋಗದೇ ಇಲ್ಲಿಯೇ ನಾಲ್ಕು ಜನರಿಗೆ ಉದ್ಯೋಗ ಕೊಡುವಂತೆ ಆಗಬೇಕು ಎಂಬ ನಮ್ಮ ಅಜ್ಜನವರ ಆಶಯದೊಂದಿಗೆ ಎಲ್ಲರೂ ಇದೇ ಕಾಯಕ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಅಲ್ಲದೇ ಸುಮಾರು 400 ಜನರಿಗೆ ಉದ್ಯೋಗ ಕೂಡ ಕೊಟ್ಟಿದ್ದೇವೆ ಎಂದರು.

ಮೂರ್ತಿ ತಯಾರಿಕೆಗೆ ಮುಸ್ಲಿಮರೂ ಸಾಥ್:ಸಂಘದ ಅಧ್ಯಕ್ಷ ಶಂಕರ ಅಪ್ಪಣ್ಣ ಕುಂಬಾರ ಮಾತನಾಡಿ, ಮಹಿಳೆಯರು, ಯುವಕರಿಂದ ಹಿಡಿದು ವೃದ್ಧರವರೆಗೂ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ನೀಡುತ್ತೇವೆ. ಅಂಗವಿಕಲರಿಗೂ ಅವಕಾಶ ಕೊಟ್ಟಿದ್ದೇವೆ. ನಾವು ಯಾವುದೇ ಜಾತಿ, ಧರ್ಮಗಳ ಭೇದ ಮಾಡುವುದಿಲ್ಲ. ಮುಸ್ಲಿಮರೂ ಕೂಡ ಶ್ರದ್ಧೆಯಿಂದ ನಮ್ಮ ಜೊತೆ ಕೆಲಸ ಮಾಡುತ್ತಾರೆ. 40 ರೂ.ದಿಂದ 5 ಸಾವಿರ ರೂ.ವರೆಗೆ ಇಲ್ಲಿ ಮೂರ್ತಿ ಮಾರಾಟಕ್ಕಿವೆ. ಇನ್ನು 6 ಇಂಚಿನಿಂದ 4.5 ಅಡಿವರೆಗಿನ ಗಾತ್ರದ ಮೂರ್ತಿಗಳನ್ನು ಇಲ್ಲಿ ತಯಾರಿಸಲಾಗುತ್ತದೆ ಎಂದು ತಿಳಿಸಿದರು.

ಕಾರ್ಮಿಕರಾದ ಚನ್ನಬಸಪ್ಪ ತಿರಕನ್ನವರ ಹಾಗೂ ಸುವರ್ಣಾ ಮಾವಿನಕಟ್ಟಿ ಮಾತನಾಡಿ, ಗಣೇಶ ಮೂರ್ತಿ ತಯಾರಿಸುವುದರಿಂದ ನಮಗೆ ಒಳ್ಳೆಯದೇ ಆಗಿದೆ. ಇದು ನಮಗೆ ಅನ್ನ ಹಾಕುತ್ತಿದೆ. ಮಾಲೀಕರು ತಮ್ಮ ಕುಟುಂಬಸ್ಥರಂತೆ ನೋಡಿಕೊಳ್ಳುತ್ತಾರೆ.‌ ತುಂಬಾ ಕರುಣಾಮಯಿ ಇದ್ದು, ದೇವರು ಅವರಿಗೆ ಮತ್ತಷ್ಟು ಶಕ್ತಿ ಕೊಡಲಿ ಎಂದು ಹಾರೈಸಿದರು. ಒಟ್ಟಾರೆ ಕಲಿತು ನಗರಗಳಿಗೆ ವಲಸೆ ಹೋಗುವ ಜನರ ಮಧ್ಯ, ಗ್ರಾಮೀಣ ಕರಕುಶಲ ಕಲೆಗಳು ನಶಿಸಿ ಹೋಗುತ್ತಿರುವ ಕಾಲಘಟ್ಟದಲ್ಲಿ ತಮ್ಮ ಊರಲ್ಲೆ ಇದ್ದುಕೊಂಡು, ಕುಟುಂಬದ ಕಸುಬಿನಲ್ಲೆ ದೊಡ್ಡ ಉದ್ಯಮ ಕಟ್ಟಿಕೊಂಡಿರುವ ಕೊಣ್ಣುರು ಕುಂಬಾರರ ಯಶೋಗಾಥೆ ಎಂತವರಿಗೂ ಪ್ರೇರಣಾದಾಯಿ.

ಇದನ್ನೂ ಓದಿ:ಇಸ್ರೋದ ಚಂದ್ರಯಾನದ 3ರ ಯಶಸ್ಸನ್ನು ಬಿಂಬಿಸಲು ತಯಾರಾಗಿ ನಿಂತ ಗಣಪ

Last Updated : Sep 16, 2023, 3:08 PM IST

ABOUT THE AUTHOR

...view details