ಕರ್ನಾಟಕ

karnataka

ವರ್ಷದ ಹಿಂದೆಯೇ ತಿರುಪತಿಗೆ ತುಪ್ಪ ಪೂರೈಕೆ ಸ್ಥಗಿತ, ಹಿಂದೂ ವಿರೋಧಿ ಬಿಜೆಪಿ ಸರ್ಕಾರವೋ, ಬೊಮ್ಮಾಯಿಯೋ?: ಸಿಎಂ ಸಿದ್ದರಾಮಯ್ಯ ಪ್ರಶ್ನೆ

By

Published : Aug 1, 2023, 1:50 PM IST

ಹಿಂದಿನ ಸರ್ಕಾರದ ಅವಧಿಯಲ್ಲೇ ತಿರುಪತಿ ತಿರುಮಲ ದೇವಸ್ಥಾನಕ್ಕೆ ನಂದಿನಿ ತುಪ್ಪ ಪೂರೈಕೆ ಸ್ಥಗಿತಗೊಳಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಟ್ವೀಟ್​
ಸಿಎಂ ಸಿದ್ದರಾಮಯ್ಯ ಟ್ವೀಟ್​

ಬೆಂಗಳೂರು: ಆಂಧ್ರಪ್ರದೇಶದ ತಿರುಪತಿಗೆ ನಂದಿನಿ ತುಪ್ಪ ಪೂರೈಕೆ ಸ್ಥಗಿತಗೊಂಡಿರುವುದು ಇಂದು, ನಿನ್ನೆಯ ವಿಚಾರವಲ್ಲ. ಕಳೆದ ಒಂದೂವರೆ ವರ್ಷದ ಹಿಂದೆಯೇ ಬಿಜೆಪಿ ಸರ್ಕಾರದ ಅವಧಿಯಲ್ಲಿ ತಿರುಪತಿಗೆ ತುಪ್ಪ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಸಂಸದ ನಳಿನ್ ಕುಮಾರ್ ಕಟೀಲ್ ಅವರೇ ಈಗ ಹೇಳಿ, ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಹಿಂದೂ ಧಾರ್ಮಿಕ ಶ್ರದ್ಧಾ ಭಕ್ತಿಯ ವಿರೋಧಿಯೋ? ಅಥವಾ ಮುಖ್ಯಮಂತ್ರಿಯಾಗಿದ್ದ ಬಸವರಾಜ್ ಬೊಮ್ಮಾಯಿ ಅವರು ಮಾತ್ರ ಹಿಂದೂ ವಿರೋಧಿಯೋ? ಎಂದು ಪ್ರಶ್ನಿಸಿದ್ದಾರೆ.

ನಮಗೆ ಜನರ ಧಾರ್ಮಿಕ ನಂಬಿಕೆಯ ಜೊತೆಗೆ ಹೈನುಗಾರರ ಬದುಕು ಮುಖ್ಯ. ಹೀಗಾಗಿ ನಾಡಿನ ರೈತರ ಹಿತದೃಷ್ಟಿಯಿಂದ ನಾವು ಕೇಳುವ ದರ ನೀಡಲು ತಿರುಪತಿ ದೇವಾಲಯದವರು ಒಪ್ಪುವುದಾದರೆ ತುಪ್ಪ ಪೂರೈಸಲು ನಮಗೆ ಯಾವ ಸಮಸ್ಯೆಗಳೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಈ ಸಂಬಂಧ ನಿನ್ನೆ ಟ್ವೀಟ್ ಮಾಡಿ ’’ದೇವಸ್ಥಾನ ಹಾಗೂ ಹಿಂದೂಗಳ ಶ್ರದ್ಧೆ- ಭಕ್ತಿಯ ವಿಚಾರದಲ್ಲಿ ಅಸಡ್ಡೆ ತೋರುವ ಕಾಂಗ್ರೆಸ್ ನೀತಿಯಿಂದಾಗಿ ತಿರುಪತಿ ಲಡ್ಡುವಿಗೆ ನಂದಿನಿ ತುಪ್ಪ ಸರಬರಾಜು ಸ್ಥಗಿತಗೊಂಡಿದೆ. ತಿರುಪತಿಯೊಂದಿಗಿನ 50 ವರ್ಷಗಳ ಪರಂಪರೆಗೆ ಎಳ್ಳು ನೀರು ಬಿಡಲಾಗಿದ್ದು, ಹಿಂದೂಗಳೆಡಗಿನ ಸಿದ್ದರಾಮಯ್ಯರವರ ತಾತ್ಸಾರ ನೀತಿ ರುಜುವಾತಾಗಿದೆ‘‘ ಎಂದು ಟೀಕಿಸಿದ್ದರು.

ನಳಿಕ್ ಕುಮಾರ್ ಕಟೀಲ್ ಪೋಸ್ಟ್​​ನ್ನು ಟ್ಯಾಗ್ ಮಾಡಿ ತಿರುಗೇಟು ನೀಡಿರುವ ಸಿಎಂ ಸಿದ್ದರಾಮಯ್ಯ, ಆಂಧ್ರಪ್ರದೇಶದ ತಿರುಪತಿಗೆ ನಂದಿನಿ ತುಪ್ಪ ಪೂರೈಕೆ ಸ್ಥಗಿತಗೊಂಡಿರುವುದು ಇಂದು, ನಿನ್ನೆಯ ವಿಚಾರವಲ್ಲ. ಕಳೆದ ಒಂದೂವರೆ ವರ್ಷದ ಹಿಂದೆಯೇ ಬಿಜೆಪಿ ಸರ್ಕಾರದ ಅವಧಿಯಲ್ಲಿ ತಿರುಪತಿಗೆ ತುಪ್ಪ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ನಿನ್ನೆ ಈ ಸಂಬಂಧ ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ ಪ್ರತಿಕ್ರಿಯಿಸುತ್ತಾ, ನಮ್ಮಲ್ಲಿ ಸ್ಥಳೀಯರಿಗೇ ತುಪ್ಪ ಸಾಲುತ್ತಿಲ್ಲ. ನಮಗೇ ತುಪ್ಪದ ಕೊರತೆ ಇದೆ. ಹಾಗಾಗಿ ತಿರುಪತಿಗೆ ಪೂರೈಕೆ ಮಾಡಲು ಆಗ್ತಿಲ್ಲ. ಮುಂದೆ ನೋಡೋಣ ಎಂದು ತಿಳಿಸಿದ್ದರು.

ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟನೆ:ನಂದಿನಿ ತುಪ್ಪ ಉತ್ಕೃಷ್ಟ ಗುಣಮಟ್ಟದ ತುಪ್ಪವಾಗಿದ್ದು, ಸ್ಪರ್ಧಾತ್ಮಕ ಬೆಲೆಯಲ್ಲಿ ಪೂರೈಕೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ತಿರುಪತಿ ತಿರುಮಲ ಟ್ರಸ್ಟ್​ನ ಟೆಂಡರ್​ನಲ್ಲಿ ನಾವು ಭಾಗವಹಿಸಿಲ್ಲ. ತಿರುಪತಿ ದೇವಸ್ಥಾನಕ್ಕೆ ತುಪ್ಪ ಸರಬರಾಜು ಮಾಡುವುದಿಲ್ಲ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ನಿನ್ನೆ ಮಾಹಿತಿ ನೀಡಿದ್ದರು.

ಇದನ್ನೂ ಓದಿ:ಟಿಟಿಡಿ ಟೆಂಡರ್ ನಿಂದ ದೂರ ಉಳಿದ ಕೆಎಂಎಫ್.. ತಿರುಪತಿ ಲಡ್ಡುಗಿಲ್ಲ ನಂದಿನಿ ತುಪ್ಪ

ABOUT THE AUTHOR

...view details