ETV Bharat / state

ಟಿಟಿಡಿ ಟೆಂಡರ್ ನಿಂದ ದೂರ ಉಳಿದ ಕೆಎಂಎಫ್.. ತಿರುಪತಿ ಲಡ್ಡುಗಿಲ್ಲ ನಂದಿನಿ ತುಪ್ಪ

author img

By

Published : Jul 31, 2023, 10:42 PM IST

ಇನ್ನು ಮುಂದೆ ತಿರುಪತಿ ತಿಮ್ಮಪ್ಪನ ಪ್ರಸಾದ ಲಡ್ಡುವಿನಲ್ಲಿ ನಂದಿನಿ ತುಪ್ಪ ಇರುವುದಿಲ್ಲ.

ನಂದಿನಿ ತುಪ್ಪ
ನಂದಿನಿ ತುಪ್ಪ

ಬೆಂಗಳೂರು : ನಂದಿನಿ ತುಪ್ಪ ಉತ್ಕೃಷ್ಟ ಗುಣಮಟ್ಟದ ತುಪ್ಪವಾಗಿದ್ದು, ಸ್ಪರ್ಧಾತ್ಮಕ ಬೆಲೆಯಲ್ಲಿ ಪೂರೈಕೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ತಿರುಪತಿ ತಿರುಮಲ ಟ್ರಸ್ಟ್​ನ ಟೆಂಡರ್​ನಲ್ಲಿ ನಾವು ಭಾಗವಹಿಸಿಲ್ಲ. ತಿರುಪತಿಗೆ ದೇವಸ್ಥಾನಕ್ಕೆ ತುಪ್ಪ ಸರಬರಾಜು ಮಾಡುವುದಿಲ್ಲ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟಪಡಿಸಿದ್ದಾರೆ. ತಿರುಪತಿ ತಿರುಮಲ ದೇವಸ್ಥಾನಕ್ಕೆ ನಂದಿನ ತುಪ್ಪ ಪೂರೈಕೆ ಸ್ಥಗಿತ ಕುರಿತು ಭೀಮಾ ನಾಯ್ಕ್ ಮಾಹಿತಿ ನೀಡಿದ್ದಾರೆ.

ಬಹಳ ವರ್ಷಗಳಿಂದ ಕೆಎಂಎಫ್ ತುಪ್ಪವನ್ನು ತಿರುಪತಿಗೆ ಸರಬರಾಜು ಮಾಡಲಾಗುತ್ತಿತ್ತು. ನಮ್ಮ ನಂದಿನಿ ತುಪ್ಪದಿಂದಲೇ ತಿರುಪತಿ ದೇವಸ್ಥಾನದಲ್ಲಿ ಲಡ್ಡು ತಯಾರಾಗುತ್ತಿತ್ತು. ಆದರೆ ಈಗ ಒಂದು ವರ್ಷದಿಂದ ನಂದಿನಿ ತುಪ್ಪದ ನೇರ ಖರೀದಿ ಬದಲು ತುಪ್ಪ ಖರೀದಿಗೆ ಟೆಂಡರ್ ಕರೆಯುತ್ತಿದ್ದಾರೆ. ಟೆಂಡರ್​ನಲ್ಲಿ ಭಾಗವಹಿಸುವಂತೆ ತಿರುಪತಿ ತಿರುಮಲ ಟ್ರಸ್ಟ್ ನವರು ನಮಗೂ ಆಹ್ವಾನ ನೀಡಿದ್ದರು. ಆದರೆ ನಾವು ಟೆಂಡರ್ ನಲ್ಲಿ ಭಾಗವಹಿಸಲಿಲ್ಲ. ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್​ಗೆ ಈಗ ನಾವು ನಂದಿನಿ ತುಪ್ಪವನ್ನು ಪೂರೈಕೆ ಮಾಡುತ್ತಿಲ್ಲ ಎಂದು ತಿಳಿಸಿದರು.

ಸ್ಪರ್ಧಾತ್ಮಕ ಬೆಲೆಯಲ್ಲಿ ನಾವು ತುಪ್ಪ ಸರಬರಾಜು ಮಾಡಲು ಸಾಧ್ಯವಿಲ್ಲ. ಯಾರು ಕಡಿಮೆ ದರ ನಮೂದು ಮಾಡಿರುತ್ತಾರೋ ಅವರಿಗೆ ಟೆಂಡರ್ ಸಿಗಲಿದೆ. ಹಾಗಾಗಿ ನಮ್ಮದು ಫಿಕ್ಸೆಡ್ ದರ, ಕಡಿಮೆ ದರ ನಮೂದು ಮಾಡಲು ಸಾಧ್ಯವಿಲ್ಲ. ಅದರಿಂದ ನಾವು ಟೆಂಡರ್ ನಲ್ಲಿ ಭಾಗವಹಿಸಲಿಲ್ಲ. ಈಗ ಅವರು ಯಾರಿಗೆ ಟೆಂಡರ್ ಕೊಟ್ಟಿದ್ದಾರೋ, ಯಾರು ತುಪ್ಪ ಸರಬರಾಜು ಮಾಡುತ್ತಿದ್ದಾರೋ ಗೊತ್ತಿಲ್ಲ. ಆದರೆ ನಂದಿನಿ ತುಪ್ಪ ಸರಬರಾಜು ಮಾಡುತ್ತಿಲ್ಲ ಎಂದು ಭೀಮಾನಾಯ್ಕ್ ಸ್ಪಷ್ಟಪಡಿಸಿದ್ದಾರೆ.

ನಮಗಿಂತ ಕಡಿಮೆ ದರಕ್ಕೆ ತುಪ್ಪವನ್ನು ಬೇರೆಯವರು ಪೂರೈಕೆ ಮಾಡುತ್ತಾರೆ. ನಾವು ಅಲ್ಲಿಗೆ ಸರಬರಾಜು ಮಾಡುವುದಿಲ್ಲ. ಒಂದು ವೇಳೆ ನಮಗಿಂತ ಕಡಿಮೆ ದರಕ್ಕೆ ತುಪ್ಪ ನೀಡುತ್ತಾರೆ ಎಂದರೆ ನಮಗಿಂತ ಕಡಿಮೆ ಗುಣಮಟ್ಟದ ತುಪ್ಪ ಸರಬರಾಜು ಮಾಡುತ್ತಾರೆ. ತಿರುಪತಿ ತಿರುಮಲದಲ್ಲಿಯೂ ಲ್ಯಾಬ್ ಇರಲಿದೆ. ಅವರಿಗೂ ಎಲ್ಲ ಗೊತ್ತಿರಲಿದೆ. ಇನ್ನು ಉಳಿದದ್ದು ಅವರಿಗೆ ಬಿಟ್ಟ ನಿರ್ಧಾರ ಎಂದು ತಿಳಿಸಿದರು.

ಬೇಡಿಕೆಯಷ್ಟು ತುಪ್ಪ ಉತ್ಪಾದನೆ ಇಲ್ಲ : ನಮ್ಮ ತುಪ್ಪಕ್ಕೆ ಬಹಳ ಡಿಮ್ಯಾಂಡ್ ಇದೆ. ನಾವು ನಮ್ಮ ಬೇಡಿಕೆಯ ಶೇಕಡ 60ರಷ್ಟು ಮಾತ್ರ ಕೊಡುತ್ತಿದ್ದೇವೆ. ಇನ್ನು ಶೇ.40 ರಷ್ಟು ನಾವು ಫುಲ್​ಫಿಲ್ ಮಾಡಲು ಸಾಧ್ಯವಾಗುತ್ತಿಲ್ಲ. ಆದರಿಂದ ನಾವು ಹಾಲು ಉತ್ಪಾದನೆ ಹೆಚ್ಚು ಮಾಡಬೇಕು. ಬೆಣ್ಣೆಯನ್ನು ದಾಸ್ತಾನು ಇರಿಸಿಕೊಳ್ಳಬೇಕು ಎನ್ನುವ ನಿರ್ಧಾರ ಮಾಡಿದ್ದೇವೆ. ನಮಗೆ ಅಗತ್ಯವಿರುವ ಬೆಣ್ಣೆ ದಾಸ್ತಾನು ಇಲ್ಲ. ಇದರಿಂದ ರೈತರಿಗೆ ಸ್ವಲ್ಪ ಸಹಾಯಧನ ಹೆಚ್ಚು ಕೊಟ್ಟರೆ ಹಾಲು ಉತ್ಪಾದನೆ ಹೆಚ್ಚಾಗಬಹುದು ಎನ್ನುವ ಚಿಂತನೆ ಮಾಡಿದ್ದು, ಈ ಸಂಬಂಧ ನಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಬೇಡಿಕೆ ಇಟ್ಟಿದ್ದೇವೆ. ಸಿಎಂ ಯಾವ ನಿರ್ಧಾರ ಮಾಡುತ್ತಾರೋ ಅದರ ಮೇಲೆ ಸಹಾಯಧನ ಹೆಚ್ಚಳದ ನಿರ್ಧಾರ ಅಂತಿಮಗೊಳ್ಳಲಿದೆ ಎಂದು ಕೆಎಂಎಫ್​ ಅಧ್ಯಕ್ಷರು ಹೇಳಿದರು.

ಇದನ್ನೂ ಓದಿ : ನಾಳೆಯಿಂದ ನಂದಿನಿ ಹಾಲು ಹಾಗೂ ಮೊಸರಿನ ದರದಲ್ಲಿ ಏರಿಕೆ: ಕೆಎಂಎಫ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.