ಕರ್ನಾಟಕ

karnataka

ಈ ಇಬ್ಬರು ಶಾಸಕರು ಜೆಡಿಎಸ್‌ ಬಿಡ್ತಾರಾ?: ಹಾಸನದಲ್ಲಿ ಇನ್ನೂ ಬಗೆಹರಿಯದ ಟಿಕೆಟ್ ಫೈಟ್

By

Published : Feb 3, 2023, 5:20 PM IST

ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಜೆಡಿಎಸ್‌ನ ಕೆಲ ಶಾಸಕರು ಪಕ್ಷ ಬಿಡುವ ವದಂತಿ ಹಬ್ಬಿದೆ.

jds party symbol
ಜೆಡಿಎಸ್ ಪಕ್ಷದ ಚಿಹ್ನೆ

ಬೆಂಗಳೂರು: ರಾಜ್ಯ ವಿಧಾನಸಭೆಯ ಮುಂದಿನ ಚುನಾವಣೆ ಸನಿಹವಾಗುತ್ತಿದೆ. ಜೆಡಿಎಸ್‌ನ ಕೆಲ ಶಾಸಕರು ಪಕ್ಷ ಬಿಡುವ ಗೊಂದಲದಲ್ಲಿದ್ದಾರೆ. ಹಾಸನ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಟಿಕೆಟ್ ಹಂಚಿಕೆ ಗೊಂದಲ ಮುಂದುವರಿದಿದೆ. ಹೀಗಾಗಿ ಅಭ್ಯರ್ಥಿಗಳ ಆಯ್ಕೆ ವಿಳಂಬವಾಗುವ ಸಾಧ್ಯತೆ ಇದೆ.

ಎರಡನೇ ಹಂತದ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆ ಸಂದರ್ಭದಲ್ಲೂ ಹಾಸನ ಜಿಲ್ಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಹಾಸನ, ಅರಸೀಕರೆ ಹಾಗೂ ಅರಕಲಗೂಡು ವಿಧಾನಸಭಾ ಕ್ಷೇತ್ರಗಳಲ್ಲಿ ಇನ್ನೂ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡಿಲ್ಲ. ಆಯ್ಕೆಗೆ ಸಂಬಂಧಿಸಿದಂತೆ ಬಹಿರಂಗವಾಗಿ ಯಾರೂ ಹೇಳಿಕೆ ನೀಡದಂತೆ ಪಕ್ಷದ ವರಿಷ್ಠರು ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹಾಲಿ ಶಾಸಕರಿಗೆ ಟಿಕೆಟ್ ಖಚಿತ: ಈ ಮೂರು ಕ್ಷೇತ್ರಗಳನ್ನು ಹೊರತುಪಡಿಸಿ ಇನ್ನುಳಿದ ನಾಲ್ಕು ಕ್ಷೇತ್ರಗಳಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ನೀಡುವುದು ಖಚಿತವಾಗಿದೆ. ಗೊಂದಲ ಇಲ್ಲದಿದ್ದರೂ ಮೂರು ಕ್ಷೇತ್ರಗಳಿಂದಾಗಿ ಇಡೀ ಜಿಲ್ಲೆಯ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆ ವಿಳಂಬ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ 93 ಕ್ಷೇತ್ರಗಳ ಅಭ್ಯರ್ಥಿಗಳನ್ನು ಪ್ರಕಟಿಸಿ ವಿಧಾನಸಭೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಲಾಗಿದೆ.

ಅರಸೀಕೆರೆ ಶಾಸಕ ಪಕ್ಷ ಬಿಡ್ತಾರಾ?: ಎರಡನೇ ಹಂತದಲ್ಲಿ ಸುಮಾರು 60 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲು ಸಿದ್ಧತೆ ನಡೆಸಲಾಗಿದೆ. ಆದರೂ ಹಾಸನ ಜಿಲ್ಲೆಯ ಅಭ್ಯರ್ಥಿಗಳ ಪಟ್ಟಿ ಬಜೆಟ್ ಅಧಿವೇಶನದ ಬಳಿಕ ಪ್ರಕಟವಾಗುವ ನಿರೀಕ್ಷೆಗಳಿವೆ. ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡರು ಪಕ್ಷದ ಚಟುವಟಿಕೆಗಳಿಂದ ದೂರ ಸರಿದು ಅಂತರ ಕಾಯ್ದುಕೊಂಡಿದ್ದಾರೆ. ಪಕ್ಷ ತೊರೆದು ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ವದಂತಿಗಳಿವೆ.

ಹಾಲಿ ಶಾಸಕರಿಗೆ ಟಿಕೆಟ್ ನೀಡಬೇಕೇ ಅಥವಾ ಹೊಸಬರಿಗೆ ಅವಕಾಶ ಮಾಡಿಕೊಡಬೇಕೇ? ಎಂಬ ಗೊಂದಲದಲ್ಲಿರುವ ಜೆಡಿಎಸ್ ವರಿಷ್ಠರು, ಹೊಸಬರಿಗೆ ಟಿಕೆಟ್ ನೀಡಿದರೆ ಹಾಲಿ ಶಾಸಕರನ್ನು ಕಡೆಗಣಿಸಿದರು ಎಂಬ ಆರೋಪ ಎದುರಿಸಬೇಕಾಗುತ್ತದೆ. ಅಂತಿಮ ನಿರ್ಧಾರವನ್ನು ಶಿವಲಿಂಗೇಗೌಡರು ಕೈಗೊಳ್ಳುವವರೆಗೂ ಕಾದು ನೋಡುವ ತಂತ್ರವನ್ನು ವರಿಷ್ಠರು ಅನುಸರಿಸುತ್ತಿದ್ದಾರೆ.

ರಾಮಸ್ವಾಮಿ ಸದ್ಯ ತಟಸ್ಥ: ಅರಕಲಗೂಡು ಕ್ಷೇತ್ರದ ಶಾಸಕ ಎ.ಟಿ.ರಾಮಸ್ವಾಮಿ ಅವರು ಸದ್ಯಕ್ಕೆ ತಟಸ್ಥವಾಗಿದ್ದು, ಅವರೂ ಸಹ ಜೆಡಿಎಸ್ ತೊರೆಯಲಿದ್ದಾರೆ ಎಂಬ ಮಾತುಗಳಿವೆ. ಆದರೂ ಇಲ್ಲಿಯವರೆಗೆ ಅವರು ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಈ ಕ್ಷೇತ್ರದಲ್ಲೂ ಹಾಲಿ ಶಾಸಕರಿಗೆ ಕೊಡಬೇಕೇ ಅಥವಾ ಹೊಸಬರಿಗೆ ಮಣೆ ಹಾಕಬೇಕೇ ಎಂಬ ಗೊಂದಲ ನಿವಾರಣೆ ಆಗಿಲ್ಲ.

ಹಾಸನ ಟಿಕೆಟ್​ಗೆ ಪೈಪೋಟಿ: ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಆಕಾಂಕ್ಷಿತರ ಸಂಖ್ಯೆ ಹೆಚ್ಚಾಗಿದೆ. ಮಾಜಿ ಶಾಸಕ ದಿ.ಎಚ್.ಎಸ್.ಪ್ರಕಾಶ್ ಅವರ ಪುತ್ರ ಸ್ವರೂಪ್ ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಬಾಗೂರು ಮಂಜೇಗೌಡ ಸೇರಿದಂತೆ ಹಲವರು ಕೂಡಾ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ದೇವೇಗೌಡರ ನಿರ್ಧಾರ ಅಂತಿಮ: ಈ ಕ್ಷೇತ್ರದ ಅಭ್ಯರ್ಥಿಯಾಗಲು ಭವಾನಿ ರೇವಣ್ಣ ಹಾಗೂ ಸ್ವರೂಪ್ ಅವರ ನಡುವೆ ತೀವ್ರ ಪೈಪೋಟಿ ಇದ್ದು, ಗೊಂದಲ ಸೃಷ್ಟಿಸಿದೆ. ಹೀಗಾಗಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಕ್ಷೇತ್ರದಲ್ಲಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತೆಗೆದುಕೊಳ್ಳುವ ನಿರ್ಧಾರವೇ ಅಂತಿಮವಾಗಲಿದೆ.

ಹಾಸನ ಜಿಲ್ಲೆಗೆ ಸಂಬಂಧಿಸಿದಂತೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಮತ್ತವರ ಕುಟುಂಬವೇ ಬಹುತೇಕ ತೀರ್ಮಾನ ಕೈಗೊಳ್ಳಲಿದೆ. ವಿಧಾನಸಭಾ ಚುನಾವಣೆಗೆ ಹಾಸನ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯನ್ನು ಕಣಕ್ಕಿಳಿಸುವ ವಿಚಾರದಲ್ಲಿ ಭವಾನಿ ರೇವಣ್ಣ ಮತ್ತು ಜೆಡಿಎಸ್‌ ವರಿಷ್ಠ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ವ್ಯತಿರಿಕ್ತವಾಗಿವೆ. ಹೀಗಾಗಿ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿ ಎಂಬುದು ಯಕ್ಷಪ್ರಶ್ನೆ. ಭವಾನಿ ರೇವಣ್ಣ ಅವರು ತಾವೇ ಅಭ್ಯರ್ಥಿ ಎಂದು ಹೇಳಿದರೆ, ಕುಮಾರಸ್ವಾಮಿ ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್‌ ನೀಡಲಾಗುವುದು ಎಂದಿದ್ದಾರೆ.

ಭವಾನಿ ರೇವಣ್ಣ ಮೌನ: ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರು ಹಾಸನದಲ್ಲಿ ಕೆಲ ದಿನಗಳ ಹಿಂದೆ ಹೇಳಿಕೆ ನೀಡಿದ ನಂತರ ಪತ್ನಿ ಭವಾನಿ ರೇವಣ್ಣ ಅವರು ಮೌನಕ್ಕೆ ಶರಣಾಗಿದ್ದಾರೆ. ಇಂದು ಬೆಂಗಳೂರಿನ ಬನಶಂಕರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಅವರು, ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಯಾವುದೇ ಉತ್ತರ ನೀಡದೇ ತೆರಳಿದ್ದಾರೆ. ಹಾಸನ ಕ್ಷೇತ್ರದ ಟಿಕೆಟ್ ಬಗ್ಗೆ ನನಗೇನು ಗೊತ್ತಿಲ್ಲ ಎಂದು ಹೆಚ್.ಡಿ.ರೇವಣ್ಣ ಹೇಳಿದ್ದಾರೆ.

ನಾಳೆ ಜೆಡಿಎಸ್ ಸಭೆ: ಪಂಚರತ್ನ ರಥಯಾತ್ರೆ ಮೂಲಕ ಪಕ್ಷ ಸಂಘಟನೆಯಲ್ಲಿ ತೊಡಗಿರುವ ಹೆಚ್.ಡಿ.ಕುಮಾರಸ್ವಾಮಿ, ನಾಳೆ ಈಗಾಗಲೇ ಘೋಷಣೆ ಮಾಡಿರುವ ಚುನಾವಣಾ ಅಭ್ಯರ್ಥಿಗಳ ಜೊತೆ ಸಭೆ ನಡೆಸಲಿದ್ದಾರೆ. 90ಕ್ಕೂ ಹೆಚ್ಚು ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದ್ದು, ಅಭ್ಯರ್ಥಿಗಳು ಕ್ಷೇತ್ರದಲ್ಲಿ ನಡೆಸುತ್ತಿರುವ ಪ್ರಚಾರ ಕಾರ್ಯದ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. ರಥಯಾತ್ರೆಯ ಬಳಿಕ ಕ್ಷೇತ್ರದಲ್ಲಿ ನಡೆಯುತ್ತಿರುವ ಬದಲಾವಣೆ ಮತ್ತು ಜನರ ಅಭಿಪ್ರಾಯಗಳಲ್ಲಿನ ಬದಲಾವಣೆ ಕುರಿತು ಪರಾಮರ್ಶೆ ನಡೆಸಲಿದ್ದಾರೆ.

ಇದನ್ನೂಓದಿ:ಜಲಜೀವನ್ ಮಿಷನ್ ಯೋಜನೆಯಲ್ಲಿ ಅವ್ಯವಹಾರ, ಲೋಕಾಯುಕ್ತಕ್ಕೆ ದೂರು: ಮಾಜಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ

ABOUT THE AUTHOR

...view details