ಕರ್ನಾಟಕ

karnataka

ಭಾರತ್ ಜೋಡೋ ಯಾತ್ರೆ.. ರಾಹುಲ್ ಗಾಂಧಿಗೆ 10 ಪ್ರಶ್ನೆಗಳ ಸವಾಲೆಸೆದ ರವಿಕುಮಾರ್

By

Published : Oct 2, 2022, 5:36 PM IST

Ravikumar challenged Rahul Gandhi

ಕಾಂಗ್ರೆಸ್​ನಿಂದ ಭಾರತ್ ಜೋಡೋ ಯಾತ್ರೆ ಮಾಡಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ 10 ಪ್ರಶ್ನೆಗಳನ್ನು ಕೇಳಿದ್ದಾರೆ.

ಬೆಂಗಳೂರು:ಭಾರತ್ ಜೋಡೋ ಯಾತ್ರೆ ಆರಂಭಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ 10 ಪ್ರಶ್ನೆಗಳನ್ನು ಕೇಳಿದ್ದಾರೆ. ಅಧಿಕಾರ ಅನುಭವಿಸಿದ 75 ವರ್ಷಗಳ ಬಳಿಕವಾದರೂ ಭಾರತವನ್ನು ಜೋಡಿಸುವ ಒಳ್ಳೆಯ ಕೆಲಸಕ್ಕೆ ಹೊರಟಿರುವ ನಿಮಗೆ ನಮಸ್ಕಾರಗಳು ಎಂದು ವ್ಯಂಗ್ಯವಾಡಿದ್ದಾರೆ.

ರಾಹುಲ್ ಗಾಂಧಿ ಮುಂದಿಟ್ಟಿರುವ ಪ್ರಶ್ನೆಗಳು:

1. ನಿಮ್ಮ ಪಾದಯಾತ್ರೆ ಪಾಪದ ಪ್ರಾಯಶ್ಚಿತ್ತದ್ದಾ? : ನಿಮ್ಮ ಕುಟುಂಬ ಪಕ್ಷ 1947ರಲ್ಲಿ ದೇಶವನ್ನು ವಿಭಜಿಸಿದ್ದಕ್ಕೆ, ಮುಸ್ಲಿಮರಿಗೆ ಪಾಕಿಸ್ತಾನ ಕೊಟ್ಟಿದ್ದಕ್ಕೆ, ಹಿಂದುಗಳಿಗೆ ಹಿಂದೂಸ್ತಾನವನ್ನು ಕೊಡದೇ ಇದ್ದಿದ್ದಕ್ಕೆ, ನೀವು ಮಾಡುತ್ತಿರುವುದು ದೇಶವಿಭಜನೆಯ ಪಾಪದ ಪ್ರಾಯಶ್ಚಿತ್ತದ ಪಾದಯಾತ್ರೆನಾ?. ಮೊದಲು ಕ್ಷಮೆಯಾಚಿಸಿ ಅನಂತರ ಪಾಪದ ಪ್ರಾಯಶ್ಚಿತ್ತ ಪಾದಯಾತ್ರೆ ಮಾಡಬೇಕಲ್ಲವೇ?. ಎಂದು ಕೇಳಿದ್ದಾರೆ.

2.ನಿಮ್ಮ ಒಡೆದು ಹೋಗಿರುವ ಮನಸ್ಸುಗಳಿಂದ, ಒಡೆದು ಹೋಗಿರುವ ನಿಮ್ಮ ಪಕ್ಷದಿಂದ ಭಾರತವನ್ನು ಜೋಡಿಸಲು ಸಾಧ್ಯನಾ?:ಅಖಂಡ ಭಾರತವನ್ನು ತುಂಡು ಮಾಡಿದ ನಿಮ್ಮ ಪಕ್ಷ ನಿಮ್ಮ ಕುಟುಂಬ ಹಾಗೂ ನೀವು 75 ವರ್ಷಗಳ ಬಳಿಕ ಈಗ "ಭಾರತ್ ಜೋಡೋ" ಮಾಡಲು ಹೊರಟಿದ್ದೀರಿ. ಅಭಿನಂದನೆಗಳು, ಆದರೆ ಭಾರತವನ್ನು ತುಂಡರಿಸುವ ನಿಮ್ಮ ಪಕ್ಷದಿಂದ ನಿಮ್ಮ ಕುಟುಂಬದಿಂದ ಭಾರತವನ್ನು ಜೋಡಿಸಲು ಸಾಧ್ಯವಾ? ಪ್ರಾಮಾಣಿಕವಾಗಿ ಉತ್ತರಿಸಿ?.

3.1919ರ ಖಿಲಾಫತ್ ಚಳವಳಿಯಿಂದ ಹಿಡಿದು ಭಾರತ-ಪಾಕಿಸ್ತಾನ, ಭಾರತ-ಬಾಂಗ್ಲಾ, ಕಾಶ್ಮೀರಕ್ಕೆ 370ನೇ ವಿಧಿ, ವಂದೇ ಮಾತರಂ ವಿಭಜನೆ, ಹೀಗೆ ಮೊನ್ನೆಯ ಸಿ.ಎ.ಎ. ಕಾಯ್ದೆವರೆಗೆ ನಿಮ್ಮದು ಹಿಂದೂಗಳನ್ನು ಅನಾಥರನ್ನಾಗಿಸುವ ಭಾರತದ ಐಕ್ಯತೆಯನ್ನು ಭಗ್ನಗೊಳಿಸಿದ ತೋಡೋ ಯಾತ್ರೆ ಇದಲ್ಲವೇ?

ಯುವಕರು ರಾಜಕಾರಣಕ್ಕೆ ಬಂದು ದಶಕಗಳೇ ಆಗಿವೆ. ಜೆಎನ್​ಯುನಲ್ಲಿ ಭಾರತ ಬರ್ಬಾದ್ ಆಗಲಿ (ಭಾರತ್ ತೇರೆ ತುಕಡೆ ಹೋಂಗೆ, ಕಾಶ್ಮೀರ ಸ್ವತಂತ್ರವಾಗಲಿ, ಕಾಶ್ಮೀರ್ ಕೋ ಚಾಹಿಯೇ ಆಜಾದಿ) ಎಂಬ ಇತ್ಯಾದಿ ಘೋಷಣೆಗಳನ್ನು ಕೂಗಿದ ಯುವಕರ ದಾರಿ ತಪ್ಪಿಸಿದ ಕನ್ಹಯ್ಯಾ ಕುಮಾರ್ ಅಂಥವರನ್ನು ಪಕ್ಷಕ್ಕೆ ಸೇರಿಸಿಕೊಂಡಿರಿ. ಸದಾ ಭಾರತವನ್ನು ಪ್ರಾದೇಶಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ, ತುಂಡು ಮಾಡುತ್ತಾ ಬಂದಿರುವ ನಿಮ್ಮ ಪಕ್ಷಕ್ಕೆ, ಕುಟುಂಬಕ್ಕೆ ಸಿದ್ಧಾಂತಕ್ಕೆ, ನಾಯಕತ್ವಕ್ಕೆ ಕಾರ್ಯಕರ್ತರಿಗೆ ನಿಮಗೆ ಎಂದಾದರೂ ಭಾರತವನ್ನು ಜೋಡಿಸಿರುವ ಅನುಭವ ಇದೆಯಾ? ಇದ್ದರೆ ತಿಳಿಸಿ.

4.ದೇಶವನ್ನು ಲೂಟಿ ಮಾಡಿದವರು ನಿಮ್ಮ ಪಕ್ಷ, ನಿಮ್ಮ ಕುಟುಂಬದವರಲ್ಲವೇ?..ನೆಹರೂ ಅವರ ಸಚಿವಸಂಪುಟಕ್ಕೆ ಶ್ಯಾಮಪ್ರಸಾದ್ ಮುಖರ್ಜಿ ಅವರು ರಾಜೀನಾಮೆ ನೀಡಿದ್ದು ಏಕೆ? ಅಂಬೇಡ್ಕರ್ ಅವರು ನಾನು ಜೀವಂತ ಇರುವವರೆಗೂ ಕಾಂಗ್ರೆಸ್ ಪಕ್ಷ ಸೇರಲಾರೆ, ಕಾಂಗ್ರೆಸ್ ಎನ್ನುವುದು ಒಂದು ಉರಿಯುವ ಮನೆ ಎಂದಿದ್ದು ಏಕೆ? ಉತ್ತರಿಸುವಿರಾ? ಕಾಶ್ಮೀರದ ಬಗ್ಗೆ ಹಿಂದೂಕೋಡ್ ಬಿಲ್ ಬಗ್ಗೆ ನಿಮ್ಮ ಅಜ್ಜ ನೆಹರೂ, ನಿಮ್ಮ ಪಕ್ಷ ಕಾಂಗ್ರೆಸ್ ಯಾವ ನಿಲುವು ತಳೆಯಿತೆಂಬ ಇತಿಹಾಸದ ಬಗ್ಗೆ ತಿಳಿಸುವಿರಾ? 1947ರಲ್ಲಿ ಅಧಿಕಾರ ಸಿಕ್ಕೊಡನೆ ದಲಿತರನ್ನು ದೇಶದ ಗಡಿಯಲ್ಲಿನ ಹಿಂದುಗಳನ್ನು ಕಡೆಗಣಿಸಿದಿರಿ. ಮುಸ್ಲಿಂ ಲೀಗ್​ನೊಂದಿಗೆ ಕಮ್ಯುನಿಸ್ಟ್ ರೊಂದಿಗೆ ಅಧಿಕಾರ ಹಂಚಿಕೊಂಡು ದೇಶವನ್ನು ಲೂಟಿ ಮಾಡಿದವರು. ನಿಮ್ಮ ಪಕ್ಷ, ನಿಮ್ಮ ಕುಟುಂಬದವರಲ್ಲವೇ? ಎಂದು ಪ್ರಶ್ನಿಸಿದ್ದಾರೆ.

5. ನಿಮ್ಮದು "ಒಳಗೆ ಭಾರತ ತೋಡೋ ಹೊರಗೆ ಭಾರತ ಜೋಡೋ ಒಳಗೆ ಭ್ರಷ್ಟಚಾರದ ಪರ ಹೊರಗೆ ಭ್ರಷ್ಟಚಾರ ವಿರೋಧಿ" ಇಂತಹ ಆತ್ಮ ವಂಚನೆ ನಿಮಗೇಕೆ?

ನಿಮ್ಮದು "ಒಳಗೆ ಭಾರತ ತೋಡೋ ಹೊರಗೆ ಭಾರತ ಜೋಡೋ ಒಳಗೆ ಭ್ರಷ್ಟಚಾರ ಪರ, ಹೊರಗೆ ಭ್ರಷ್ಟಚಾರ ವಿರೋಧಿ" ಈ ವಂಚನೆಯೇಕೆ? ಇಂಥ ಎಡಬಿಡಂಗಿತನ ಬುದ್ಧ-ಬಸವಣ್ಣನವರ ನಾಡಿನಲ್ಲಿ ನಡೆಯುವುದಿಲ್ಲ. ಈ ನಿಮ್ಮ ನಾಟಕವನ್ನು ಅಂಬೇಡ್ಕರ್ ವಾದಿಗಳು, ಶ್ಯಾಮಪ್ರಸಾದ ಮುಖರ್ಜಿ ವಾದಿಗಳು ಸಹಿಸುವುದಿಲ್ಲ ಎಂಬುದು ನಿಮಗೆ ಗೊತ್ತೇ?

6. ಕರ್ನಾಟಕದಲ್ಲಿ ನಿಮ್ಮ ಪಕ್ಷದ ಡಿ.ಕೆ.ಶಿವಕುಮಾರ್- ಸಿದ್ಧರಾಮಯ್ಯ ಅವರನ್ನು ಜೋಡಿಸಲಾಗದ ನಿಮಗೆ ಭಾರತವನ್ನು ಜೋಡಿಸಲು ಸಾಧ್ಯವೇ? ನೀವು ಕರ್ನಾಟಕದ ಕಾಂಗ್ರೆಸನ್ನು ಜೋಡಿಸಬಲ್ಲಿರಾ?

ನೀವು ದಾವಣಗೆರೆಯಲ್ಲಿ ಡಿಕೆಶಿ ಅವರಿಗೆ ಸಿದ್ದರಾಮಯ್ಯ ಅವರನ್ನು ಅಪ್ಪಿಕೊಳ್ಳಲು ಬಹಿರಂಗವಾಗಿ ಹೇಳಿದಿರಿ. ಮನವಿಲ್ಲದ ಮನದಲ್ಲಿ ಡಿಕೆಶಿ ಅಪ್ಪಿದರು, ಸಿದ್ದು ಡಿಚ್ಚಿ ಕೊಡುತ್ತಿದ್ದಾರೆ. ಡಿಕೆಶಿ ಬಂಡೆ ಸಿಡಿಸುತ್ತಿದ್ದಾರೆ. ಪಾಪ ಜನನಾಯಕ ಸಿದ್ದರಾಮಯ್ಯ ಅವರು ನಿಮ್ಮನ್ನು ಸಿದ್ಧರಾಮೋತ್ಸವಕ್ಕೆ ಕರೆದು ಗೌರವಿಸಿದರು. ಆದರೆ ನಿಮ್ಮ ಪಕ್ಷ ಭಾರತ ಜೋಡೋ ಯಾತ್ರೆಯ ಸಭೆಗೆ ಸಿದ್ಧರಾಮಯ್ಯ ಅವರನ್ನೇ ಕರೆಯಲಿಲ್ಲ. ಅವರು ನನ್ನನ್ನು ಕರೆದಿಲ್ಲ ನಾನ್ಯಾಕೆ ಬರಲಿ ಎಂದು ಸಿಡಿಮಿಡಿಗೊಂಡರು. ಇದು ಹಿರಿಯ ನಾಯಕರಿಗೆ ಕರ್ನಾಟಕದ ದೊಡ್ಡ ಕುರುಬ ಸಮುದಾಯಕ್ಕೆ ಮಾಡಿದ ಅಗೌರವವಲ್ಲವೇ?

7. ಭಾರತೀಯರು ಕಾಂಗ್ರೆಸ್ ಮುಕ್ತ ಭಾರತವನ್ನು ಬಯಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನೇ ಜೋಡಿಸಲಾರದ ನಿಮ್ಮಿಂದ ಭಾರತವನ್ನು ಜೋಡಿಸುವುದು ಸಾಧ್ಯವೇ? ಕಾಂಗ್ರೆಸ್ ಜೋಡೋ ಯಾತ್ರೆಗೇಕೆ ಭಾರತ ಜೋಡೋ ಎಂದು ಕರೆದಿದ್ದೀರಿ?

ಕಾಂಗ್ರೆಸ್ ಛೋಡೋ ಯಾತ್ರೆ ಮೊನ್ನೆಯ ಕಪಿಲ್ ಸಿಬಲ್, ಗುಲಾಂ ನಬಿ ಆಜಾದ್, ಕರ್ನಾಟಕದ ಸಿ.ಎಂ. ಇಬ್ರಾಹಿಂ ಅವರ ವರೆಗೆ ನಿರಂತರವಾಗಿ ಪ್ರತಿ ರಾಜ್ಯದಲ್ಲಿ ನಿಮ್ಮ ನಾಯಕರುಗಳಿಂದ ಕಾಂಗ್ರೆಸ್ ಛೋಡೋ ನಡೆಯುತ್ತಿದೆ. ಅದನ್ನು ಅರ್ಥಮಾಡಿಕೊಳ್ಳುವಲ್ಲಿ ಕಾಂಗ್ರೆಸ್ ಸೋತಿದೆ. ಆದರೆ ನೀವು ಭಾರತ ಜೋಡೋ ಅನ್ನುತ್ತಿದ್ದೀರಿ. ಅದು ನಿಮ್ಮದೇ ಪಕ್ಷದ ಹಿರಿಯ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ನಾಯಕರಿಗೆ ಕಾಂಗ್ರೆಸ್ ಛೋಡೋ ಎಂದಂತೆ ಕೇಳಿಸುತ್ತಿದೆ. ಭಾರತೀಯರು ಕಾಂಗ್ರೆಸ್ ಮುಕ್ತ ಭಾರತವನ್ನು ಬಯಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನೇ ಜೋಡಿಸಲಾರದ ನಿಮ್ಮಿಂದ ಭಾರತವನ್ನು ಜೋಡಿಸುವುದು ಸಾಧ್ಯವೇ? ಕಾಂಗ್ರೆಸ್ ಜೋಡೋ ಯಾತ್ರೆಗೇಕೆ ಭಾರತಜೋಡೋ ಎಂದು ಕರೆದಿದ್ದೀರಿ? ಭಾರತವೆಂದರೆ ಕಾಂಗ್ರೆಸ್ ಅಲ್ಲ ಕಾಂಗ್ರೆಸ್ ಎಂದರೆ ಭಾರತ ಅಲ್ಲ, ಅಲ್ಲವೇ? ಸೂಕ್ಷ್ಮವಾಗಿ ಯೋಚಿಸಿ. ಪಕ್ಷಕ್ಕಿಂತ ದೇಶಮುಖ್ಯ ಮೊದಲು ಪೂರ್ಣವಾಗಿ ಭಾರತದ ಪ್ರಜೆಯೇ ಆಗಿರದ ನೀವು "ವಿದೇಶದಲ್ಲಿ ಜೀವ ಭಾರತದಲ್ಲಿ ದೇಹ" ಎಂಬ ಸ್ಥಿತಿ ಇದೆ.

8. ಆತ್ಮಸಾಕ್ಷಿಯಿಂದ ಹೇಳಿ ಇದು ನಿಮ್ಮ ಆತ್ಮವಂಚನೆಯ ಪಾದಯಾತ್ರೆ ಅಲ್ಲವೇ?

ನಿಮ್ಮ ಪಕ್ಷದ ಇತಿಹಾಸ ನೋಡಿದರೆ ಅಂದಿನ ಮೂರ್ತಿ ಭಂಜಕರಿಗೂ ಇಂದಿನ ಭಾರತ ಭಂಜಕರಿಗೂ ಏನು ವ್ಯತ್ಯಾಸವಿದೆ? ಮೂರ್ತಿ ಭಂಜಕರಂತೆ ನೀವು ಭಾರತ ಭಂಜಕರಾಗಬಾರದಲ್ಲವೇ?. 370ನೆ ವಿಧಿ ತೆಗೆದಿದ್ದನ್ನು ಸಿ.ಎ.ಎ ಕಾನೂನು ತಂದದ್ದನ್ನು ವಿರೋಧಿಸಿದಿರಿ, ಸೈನ್ಯದ ನೈತಿಕ ಸ್ಥೈರ್ಯವನ್ನು ಕುಗ್ಗುಸ್ತೀರಿ, ಕಾಶ್ಮೀರದ ಹಿಂದುಗಳ ಹತ್ಯೆಗಳನ್ನು ಕಡೆಗಣಿಸ್ತೀರಿ, ಒಳಗೊಳಗೇ ಭಯೋತ್ಪಾದಕರನ್ನು ಬೆಂಬಲಿಸ್ತೀರಿ, ದೇಶದಲ್ಲಿ ಹಿಂದುಗಳ ಹತ್ಯೆಯಾದಾಗ ಮೌನವಾಗಿ ಸಂಭ್ರಮಿಸ್ತೀರಿ, ಬಿಜೆಪಿಯನ್ನು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ವಿರೋಧಿಸುವುವುದಕ್ಕಾಗಿ ದೇಶವನ್ನೇ ವಿರೋಧಿಸುವ ದೇಶದ್ರೋಹದ ಮಟ್ಟಕ್ಕೂ ಇಳಿಯುತ್ತೀರಿ ಬಾಯಲ್ಲಿ ಮಾತ್ರ ಭಾರತಜೋಡೋ ಎನ್ನುತ್ತೀರಿ. ಎದೆಯಲ್ಲಿ ಭಾರತ ವಿಭಜಕರಾಗಿದ್ದೀರಿ. ಆತ್ಮಸಾಕ್ಷಿಯಿಂದ ಹೇಳಿ ಇದು ನಿಮ್ಮ ಆತ್ಮವಂಚನೆಯ ಪಾದಯಾತ್ರೆ ಅಲ್ಲವೇ?.

9. ನಿಮಗೆ ನಿಮ್ಮ ಪಕ್ಷಕ್ಕೆ ಭಾರತವನ್ನು ಜೋಡಿಸುವ ಪ್ರಾಮಾಣಿಕ ಉದ್ದೇಶವಿದ್ದರೆ ಮುಂದಿನ ಚುನಾವಣೆಯಲ್ಲಿ ಸಮಾನತೆಯನ್ನು ತರಲು ಹಿಂದು-ಮುಸ್ಲಿಂ ಸಮಾನರೆಂಬ ಕಾನೂನನ್ನು ತರುತ್ತೇವೆ ಎಂದು ಘೋಷಿಸುತ್ತೀರಾ?

ಭಾರತದಲ್ಲಿ ಮತಾಂತರವನ್ನು ಬೆಂಬಲಿಸುತ್ತ ಕ್ರಿಶ್ಚಿಯನ್ ಭಾರತ ಮಾಡಲು ಹೊರಟಿರುವ ನೀವು ಮತಾಂತರವನ್ನು ನಿಷೇಧಿಸುವಿರಾ? ಮುಸ್ಲಿಂ ಮಾತುಗಳಿಂದ ಅಧಿಕಾರವನ್ನು ಹಿಡಿಯಬೇಕೆಂದು ಭಾರತದ ಮುಸ್ಲಿಂ ಮಹಿಳೆಯರು ಬುರ್ಕಾದಲ್ಲೇ ಇರಬೇಕು. ಮದರಸಾದಲ್ಲೇ ಇರಬೇಕು. ಜಿಹಾದಿ ಮನೋಭಾವದವರು ಹಿಂದುಗಳನ್ನು ಕೊಲ್ಲುತ್ತಿರಬೇಕೆಂಬ ನಿಲುವಿನಿಂದಿರುವ ನಿಮ್ಮ ಪಕ್ಷ ಗೋಹತ್ಯೆ ನಿಷೇಧ, ಬುರ್ಕಾ ಹಿಜಾಬ್ ನಿಷೇಧ, ತಲಾಖ್ ನಿಷೇಧ, ಮದರಸಾದಲ್ಲಿ ಆಧುನಿಕ ಶಿಕ್ಷಣ ನೀಡಬಾರದು ಎನ್ನುವ ನಿಮ್ಮ ದೇಶ ವಿಭಜನೆಯ ಭಾವನೆಗಳನ್ನು ಹೊಂದಿರುವ ಪಕ್ಷ ಭಾರತದಲ್ಲಿ ಸಮಾನತೆಯನ್ನು ತರಬಲ್ಲದೇ? ಎಂದು ಕೇಳಿದ್ದಾರೆ.

10. ನೀವು ಈಗಾಗಲೇ ಪ್ರತ್ಯೇಕತೆಯ ಬೀಜ ಬಿತ್ತಿ, ಭಾರತದಲ್ಲಿ ರಕ್ತಪಾತಕ್ಕೆ ಕಾರಣರಾಗಿದ್ದೀರಿ.

ಮುಸ್ಲಿಂ ಲೀಗ್ ಕಮ್ಯುನಿಸ್ಟ್ ಹಾಗೂ ದೇಶವಿರೋಧಿಗಳ ಸಹವಾಸದಿಂದ ನಿಮ್ಮ ಪಕ್ಷ ದೇಶದ ಜನರ ವಿಶ್ವಾಸವನ್ನು ಕಳೆದುಕೊಂಡಿದೆ. ನಿಮ್ಮಲ್ಲಿರುವ ನಾಯಕರೇ ಕಾಂಗ್ರೆಸ್ ಛೋಡೋ ಯಾತ್ರೆ ಆರಂಭಿಸಿದ್ದಾರೆ. ಈಗ ನಿಮ್ಮೊಡನೆ ಭಾರತವನ್ನು ಜೋಡಿಸುವ ಯಾವ ಸಿದ್ಧಾಂತ ಯಾವ ಆದರ್ಶವಾದಿ ಪಕ್ಷ ಯಾವ ಪ್ರಾಮಾಣಿಕತೆ ನಿಮಗಿದೆ?.

ಇದನ್ನೂ ಓದಿ:ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ಅಂತರ.. ಬಾಂಧವ್ಯ ಹೆಚ್ಚಿಸಲು ಹಿರಿಯ ಕಾಂಗ್ರೆಸಿಗರ ಪ್ರಯತ್ನ

ಭಾರತದ ಬಹುಸಂಖ್ಯಾತ ಹಿಂದೂಗಳನ್ನು ಬಲಿಕೊಡುತ್ತ ಮುಸ್ಲಿಮರ ಮೂಗಿಗೆ ತುಪ್ಪ ಸವರುತ್ತಾ ದಲಿತರನ್ನು ಬಳಸಿ ಬಿಸಾಕುತ್ತ ಬಂದ ನಿಮ್ಮ ಪಕ್ಷ ಮತ್ತು ನೀವು ಹಿಂದುಗಳ, ಮುಸ್ಲಿಮರ, ದೀನದಲಿತರ, ಬಡವರ ನಂಬಿಕೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದೀರಿ. ನಿಮ್ಮ ವೋಟ್ ಬ್ಯಾಂಕ್ ರಾಜಕಾರಣ ಮುಗಿದು ಹೋಗಿದೆ. ಭಾರತವನ್ನು ಜೋಡಿಸುವ ಯಾವ ಸಿದ್ಧಾಂತ, ಯಾವ ಆದರ್ಶವಾದಿ, ಪಕ್ಷ ಯಾವ ಪ್ರಾಮಾಣಿಕ ಅನುಭವಿ ನಾಯಕರಿದ್ದಾರೆ? ಕಾಂಗ್ರೆಸ್​ಅನ್ನೇ ಜೋಡಿಸಲಾಗದ ನೀವು ಈಗ ಭಾರತವನ್ನು ಜೋಡಿಸುವ ಯಾತ್ರೆ ನಡೆಸುತ್ತಿರುವುದು ದೇಶದ ಜನರ, ಪಕ್ಷದ ಕಾರ್ಯಕರ್ತರನ್ನು ವಂಚಿಸುವ ಒಂದು ನಾಟಕ ಎಂದೆನಿಸುವುದಿಲ್ಲವೇ? ಇವುಗಳಿಗೆ ಆತ್ಮಸಾಕ್ಷಿಯಿಂದ ಪ್ರಾಮಾಣಿಕವಾಗಿ ಉತ್ತರಿಸಿ ಎಂದು ಬಿಜೆಪಿ ವಕ್ತಾರ ರವಿಕುಮಾರ್​ ಆಗ್ರಹಿಸಿದ್ದಾರೆ.

ABOUT THE AUTHOR

...view details