ಕರ್ನಾಟಕ

karnataka

ಮತದಾರರ ಗುರುತಿನ ಚೀಟಿ ದಾಖಲೆ ಕಳ್ಳತನ ಪ್ರಕರಣ.. ಸಿಎಂ ಬೊಮ್ಮಾಯಿಯೇ ಕಿಂಗ್ ಪಿನ್: ಸುರ್ಜೇವಾಲಾ

By

Published : Nov 19, 2022, 5:04 PM IST

ಚಿಲುಮೆ ಮತದಾರರ ಗುರುತಿನ ಚೀಟಿ ಅಕ್ರಮವಾಗಿ ದಾಖಲೆ ಸಂಗ್ರಹಿಸುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ 11 ಪ್ರಶ್ನೆಗಳನ್ನು ಮಾಡಿದ್ದು, ಮುಖ್ಯಮಂತ್ರಿಗಳ ವಿರುದ್ಧ ಕೇಸ್​ ಏಕೆ ದಾಖಲಾಗಿಲ್ಲ ಎಂದು ಪ್ರಶ್ನಿಸಿದ್ದಾರೆ.

Randeep Surjewala reaction about Theft of voter ID card document
ಸುರ್ಜೇವಾಲಾ

ಬೆಂಗಳೂರು:ಮತದಾರರ ಗುರುತಿನ ಚೀಟಿ ದಾಖಲೆ ಕಳ್ಳತನ ಪ್ರಕರಣದಲ್ಲಿ ಸಾಕಷ್ಟು ಮಹತ್ವದ ದಾಖಲೆಯನ್ನು ನಾವು ಬಿಡುಗಡೆ ಮಾಡುತ್ತಿದ್ದು, ಇದರಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇರವಾಗಿ ಕಿಂಗ್ ಪಿನ್ ಆಗಿ ಪಾತ್ರ ನಿರ್ವಹಿಸಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪಿಸಿದ್ದಾರೆ.

ಸಾವಿರಕ್ಕೂ ಹೆಚ್ಚು ಕರೆ ಮಾಡಿ ಮಾತನಾಡಿದ್ದಾರೆ. ಇದು ದೇಶದ ಇತಿಹಾಸದಲ್ಲೇ ಅತಿ ದೊಡ್ಡ ಹಗರಣವಾಗಿದ್ದು, ದಿನದಿಂದ ದಿನಕ್ಕೆ ಪ್ರತಿ ಗಂಟೆ ಸಾಕಷ್ಟು ದಾಖಲೆಗಳು ಹೊರ ಬೀಳುತ್ತಿವೆ. ರಾಜ್ಯ ಸರ್ಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವರುಗಳ ಹೆಸರು ಹೊರಬರುತ್ತಿದೆ. ನಾವು ಇಂದು 11 ಹೊಸ ಪ್ರಶ್ನೆ ಕೇಳಲು ಬಯಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಸಿಎಂ ವಿರುದ್ಧ ಏಕೆ ಪ್ರಕರಣ ದಾಖಲಾಗಿಲ್ಲ?: ಚಿಲುಮೆ ಮತದಾರರ ಗುರುತಿನ ಚೀಟಿ ಅಕ್ರಮವಾಗಿ ದಾಖಲೆ ಸಂಗ್ರಹಿಸುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಯಾಕೆ ಪ್ರಕರಣ ದಾಖಲಾಗಿಲ್ಲ. ಈ ಅಕ್ರಮಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನೇರವಾಗಿ ಭಾಗಿಯಾಗಿದೆ ಎಂಬ ದಾಖಲೆ ನೀಡಿದ್ದೇವೆ. ಆದರೆ, ಇದರಲ್ಲಿ ಯಾವುದೇ ಆಧಾರ ಇಲ್ಲ ಎಂದು ಸರ್ಕಾರ ದೂರುತ್ತಿದೆ. ನಮ್ಮ ಆರೋಪ ಸಿಎಂ ವಿರುದ್ಧವೇ ಆಗಿರುವಾಗ ಅವರೇ ಅದನ್ನು ತಿರಸ್ಕರಿಸುತ್ತಾರೆ ಎಂದರು.

ಕನ್ನಡಿಗರ ಹಕ್ಕನ್ನು ಕಸಿದುಕೊಳ್ಳುವ ಕಾರ್ಯವನ್ನು ಸಿಎಂ ಮಾಡುತ್ತಿದ್ದಾರೆ. ಚಿಲುಮೆ ಹಾಗೂ ಡಿಎಪಿ ಹೊಂಬಾಳೆ ಸಂಸ್ಥೆ ವಿರುದ್ಧ, ಕೃಷ್ಣಪ್ಪ, ರವಿಕುಮಾರ್, ನರಸಿಂಹಮೂರ್ತಿ, ಐಶ್ವರ್ಯ, ವಿರುದ್ಧ ಯಾಕೆ ಎಫ್ಐಆರ್ ದಾಖಲಾಗಿಲ್ಲ. 28 ವಿಧಾನಸಭೆ ಕ್ಷೇತ್ರದ ಮತದಾರರ ಕೋಟ್ಯಂತರ ಮಂದಿಯ ದಾಖಲೆ ಕಳ್ಳತನವಾಗಿದೆ ಇದಕ್ಕೆ ಹೊಣೆ ಯಾರು? ಚಿಲುಮೆಗೆ ಯಾರು ಅನುದಾನ ನೀಡುತ್ತಿದ್ದಾರೆ ಎಂದು ಸಿಎಂ ಸ್ಪಷ್ಟಪಡಿಸುತ್ತಿಲ್ಲ. ಉಚಿತವಾಗಿ ಬಿಬಿಎಂಪಿ ಪರವಾಗಿ ಕೆಲಸ ಮಾಡುತ್ತಿದೆ? ಎಂದು ಪ್ರಶ್ನಿಸಿದ್ದಾರೆ.

15 ಸಾವಿರ ಸಿಬ್ಬಂದಿ ನೇಮಕ ಮಾಡಿಕೊಂಡಿದ್ದು ನಿಜವೇ? ಈ ಸಂಬಂಧ ಜಾಹೀರಾತು ನೀಡಿದ್ದು ಸತ್ಯವೇ? ಚಿಲುಮೆ ತನ್ನ ಕಾರ್ಯಕ್ಕೆ ಉಪ ಗುತ್ತಿಗೆಯನ್ನು ಬೇರೊಂದು ಸಂಸ್ಥೆಗೆ ನೀಡಿದ್ದಾಗಿ ಒಂದು ಸಹಿ ಮಾಡದ ಪತ್ರ ಇದೆ. ಇದರ ಸತ್ಯಾಸತ್ಯತೆ ಏನು? ಇದರಲ್ಲಿ ಮತದಾರರು, ಸರ್ವೇದಾರರಿಗೆ ನಿಗದಿತ ಹಣ ನೀಡುವ ವಿಚಾರ ಪ್ರಸ್ತಾಪವಾಗಿದೆ. ಇದರ ಲೆಕ್ಕಾಚಾರ ಹಾಕಿದರೆ ಕೋಟ್ಯಂತರ ರೂ. ಆಗಲಿದೆ. ಇದಕ್ಕೆ ಹಣ ಎಲ್ಲಿಂದ ಬಂತು. ಸಿಬಿಐ, ಸಿಐಡಿ ಯಾಕೆ ಸುಮ್ಮನಿವೆ? ಎಂದು ಕೇಳಿದ್ದಾರೆ.

ಇದನ್ನೂ ಓದಿ :ಚಿಲುಮೆ ಶೈಕ್ಷಣಿಕ ಸಂಸ್ಥೆಯ ವಿರುದ್ಧ ತನಿಖೆ ನಡೆಸಲು ರಾಜ್ಯ ಚುನಾವಣಾ ಆಯೋಗದಿಂದ ತನಿಖಾಧಿಕಾರಿ ನೇಮಕ

ಚಿಲುಮೆಗೆ ಅನುದಾನ ಕೊಟ್ಟವರು ಯಾರು?:ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಬಿಬಿಎಂಪಿ ಆಯುಕ್ತರು ಈ ಬಗ್ಗೆ ಯಾಕೆ ವಿಷಯ ಗೊತ್ತಿದ್ದೂ ಸುಮ್ಮನಿರುವುದು? ಸಿಎಂ ಹಾಗೂ ಬಿಬಿಎಂಪಿ ಜಂಟಿಯಾಗಿ ಪತ್ರ ಬರೆದು ಮಹದೇವಪುರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಮನೆಯ ನಾಗರಿಕರು ನಿಮ್ಮ ಮನೆಗೆ ಬರುವ ಬಿಬಿಎಂಪಿ ಸಿಬ್ಬಂದಿಗೆ ಮತದಾರರಾಗಿ ಮಾಹಿತಿ ಒದಗಿಸಬೇಕು ಎಂದಿದೆ.

ಸ್ಥಳೀಯ ನಿವಾಸಿಗಳ ಹಿತರಕ್ಷಣಾ ಸಮಿತಿ, ಅಪಾರ್ಟ್ಮೆಂಟ್ ಅಸೋಸಿಯೇಷನ್​​ಗಳಿಗೆ ಪತ್ರ ಬರೆದು, ಮಾಹಿತಿ ಒದಗಿಸುವಂತೆ ಯಾಕೆ ಮನವಿ ಮಾಡಲಾಗಿದೆ. ಒಂದೆಡೆ ಸಿಎಂ ಈ ಆರೋಪ ಆಧಾರ ರಹಿತ ಎಂದಿದ್ದಾರೆ. ಇನ್ನೊಂದೆಡೆ ಮಾಜಿ ಶಾಸಕ ನಂದೀಶ್ ರೆಡ್ಡಿ 18 ಲಕ್ಷ ರೂ. ಮೊತ್ತವನ್ನು ಚಿಲುಮೆ ಸಂಸ್ಥೆಗೆ ಪಾವತಿ ಮಾಡಿದ್ದಾರೆ. ಇದರ ಅರ್ಥವೇನು ಎಂಬ ಪ್ರಶ್ನೆ ಸರ್ಕಾರಕ್ಕೆ ಮಾಡಿದರು.

ಇಂತಹ ಅಕ್ರಮಕ್ಕೆ ಯಾರು ಹೊಣೆಗಾರರು? ಮುಖ್ಯ ಚುನಾವಣಾ ಆಯುಕ್ತರಿಗೆ ನಾವು ಇಂದು ಪ್ರತಿಭಟನೆ ನಡೆಸಿ, ಮನವಿ ಪತ್ರ ನೀಡಿದ್ದೇವೆ. ಡಿಜಿಟಲ್ ಸಮೀಕ್ಷೆಗೆ ನಾವು ಸೂಚಿಸಿಲ್ಲ ಎಂದಿದ್ದಾರೆ. ಅಲ್ಲಿಗೆ ಸಿಎಂ ಬಸವರಾಜ್ ಬೊಮ್ಮಾಯಿ ನೇರವಾಗಿ ಶಾಮೀಲಾಗಿದ್ದಾರೆ. ಇವರು ನೇರವಾಗಿ ಕಿಂಗ್ ಪಿನ್. ಇವರ ಬಂಧನ ಆಗಬೇಕು. ಕೂಡಲೇ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ಆಗಬೇಕು. ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ :ಮತದಾರರ ಮಾಹಿತಿ ಅಕ್ರಮ ಸಂಗ್ರಹ ಆರೋಪ.. ಕೇಂದ್ರ ಚುನಾವಣೆ ಆಯೋಗಕ್ಕೆ ಕಾಂಗ್ರೆಸ್ ದೂರು

ABOUT THE AUTHOR

...view details