ಕರ್ನಾಟಕ

karnataka

ಮನಮೋಹನ್ ಸಿಂಗ್ ಅಕ್ಕಿ ಕೊಟ್ಟಿದ್ದು, ಬಿಜೆಪಿ ಹೆಸರೇಳಲು ಪ್ರಕಾಶ್ ರಾಥೋಡ್ ನಕಾರ: ಕಾಂಗ್ರೆಸ್ ಬಿಜೆಪಿ ಜಟಾಪಟಿ

By

Published : Jul 11, 2023, 3:33 PM IST

Updated : Jul 11, 2023, 5:56 PM IST

ವಿಧಾನ ಪರಿಷತ್ ಕಲಾಪದಲ್ಲಿ ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಪ್ರಕಾಶ್ ರಾಥೋಡ್ ಮಾತನಾಡಿ, ಗ್ಯಾರಂಟಿ ಯೋಜನೆಗಳನ್ನು ಸಮರ್ಥಿಸಿಕೊಳ್ಳುತ್ತ ಪ್ರತಿಪಕ್ಷಗಳನ್ನು ಟೀಕಿಸಿದರು. ಈ ವೇಳೆ ಬಿಜೆಪಿ ಕಾಂಗ್ರೆಸ್ ಸದಸ್ಯರ ನಡುವೆ ಜಟಾಪಟಿ ನಡೆಯಿತು.

Legislative Council
ವಿಧಾನಪರಿಷತ್ ಕಲಾಪ

ವಿಧಾನಪರಿಷತ್ ಕಲಾಪ

ಬೆಂಗಳೂರು:ಮನಮೋಹನ್ ಸಿಂಗ್ ಸರ್ಕಾರ ಆಹಾರ ಭದ್ರತಾ ಕಾಯ್ದೆ ಜಾರಿ ಮಾಡಿದ ನಂತರ ಕೇಂದ್ರ ಸರ್ಕಾರ ಐದು ಕೆಜಿ ಅಕ್ಕಿ ಕೊಡುತ್ತಿದೆ ಎಂದು ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಪದೇ ಪದೆ ಪ್ರಸ್ತಾಪ ಮಾಡಿದರು. ಈ ವೇಳೆ ಅವರು ಬಿಜೆಪಿ ಸರ್ಕಾರದ ಹೆಸರು ಪ್ರಸ್ತಾಪಿಸಲು ನಿರಾಕರಿಸಿದ ಹಿನ್ನೆಲೆ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ತೀವ್ರ ಜಟಾಪಟಿ ನಡೆಯಿತು.

ವಿಧಾನ ಪರಿಷತ್ ಕಲಾಪದಲ್ಲಿ ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಮಾತನಾಡಿದ ಪ್ರಕಾಶ್ ರಾಥೋಡ್, ಗ್ಯಾರಂಟಿ ಯೋಜನೆಗಳನ್ನು ಸಮರ್ಥಿಸಿಕೊಳ್ಳುತ್ತಲೇ ಪ್ರತಿಪಕ್ಷಗಳನ್ನು ಟೀಕಿಸಿದರು. ಬಜೆಟ್ ಅಧಿವೇಶನ ಪ್ರತಿಪಕ್ಷ ನಾಯಕರಿಲ್ಲದೇ ನಡೆಸುತ್ತಿದ್ದೇವೆ ಎಂದಿದ್ದಕ್ಕೆ ಆಡಳಿತ ಪಕ್ಷದ ಸದಸ್ಯರು ಶೇಮ್ ಶೇಮ್ ಎಂದು ಅಣಕಿಸಿದರು. ಇದಕ್ಕೆ ಕೆರಳಿದ ಬಿಜೆಪಿ ಸದಸ್ಯರು 10 ವರ್ಷದಿಂದ ಕೇಂದ್ರದಲ್ಲಿ ಪ್ರತಿಪಕ್ಷವೇ ಇಲ್ಲ ಎಂದು ಟೀಕಿಸಿದರು.

ನಂತರ ವಿಷಯ ಸಚಿವರ ಗೈರಿನತ್ತ ಹೊರಳಿತು, ಸಚಿವರ ಗೈರಿಗೆ ಪ್ರತಿಪಕ್ಷಗಳು ಟೀಕೆ ಮಾಡಿದವು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಸಭಾಪತಿ ಪೀಠದಲ್ಲಿದ್ದ ಉಪಸಭಾಪತಿ ಪ್ರಾಣೇಶ್, ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕಾದವರ ಹೆಸರು ಓದಿದರು ಇದರಲ್ಲಿ ಎಂ ಬಿ ಪಾಟೀಲ್, ಶಿವಾನಂದ ಪಾಟೀಲ್, ದಿನೇಶ್ ಗುಂಡೂರಾವ್, ಸತೀಶ್ ಜಾರಕಿಹೊಳಿ, ಕೃಷ್ಣಬೈರೇಗೌಡ, ಈಶ್ವರ ಖಂಡ್ರೆ, ವೆಂಕಟೇಶ್, ಎಂ ಸಿ ಸುಧಾಕರ್, ಡಿ. ಸುಧಾಕರ್, ಶಿವರಾಜ್ ತಂಗಡಗಿ ಇರಬೇಕಿತ್ತು. ಈಶ್ವರ ಖಂಡ್ರೆ ಮತ್ತು ಸುಧಾಕರ್ ಮಾತ್ರ ಉಪಸ್ಥಿತರಿದ್ದರು. 10 ಜನರಲ್ಲಿ 8 ಸಚಿವರು ಗೈರಾಗಿದ್ದರು. ಈ ರೀತಿ ಆಗದಂತೆ ನೋಡಿಕೊಳ್ಳಿ ಎಂದು ಸರ್ಕಾರಿ ಮುಖ್ಯ ಸಚೇತಕರಿಗೆ ಸೂಚಿಸಿದರು.

ನಂತರ ಮಾತು ಮುಂದುವರೆಸಿದ ಪ್ರಕಾಶ್ ರಾಥೋಡ್, ಅನ್ನ ಭಾಗ್ಯ ಯೋಜನೆಯ ವಿವರ ನೀಡಿದರು. 10 ಕೆಜಿ ಅಕ್ಕಿ ನೀಡುವ ಯೋಜನೆ ಪ್ರಸ್ತಾಪ ಮಾಡಿದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಬಿಜೆಪಿ ಸದಸ್ಯರು ಅಕ್ಕಿ ವಿಚಾರದಲ್ಲಿ ಸರ್ಕಾರ ಸುಳ್ಳು ಹೇಳುತ್ತಿದೆ. ಕೇಂದ್ರ ಸರ್ಕಾರ ಐದು ಕೆಜಿ ಅಕ್ಕಿ ಕೊಡುತ್ತಿದೆ. ಆದರೆ ಕೇಂದ್ರದ ಹೆಸರು ಹೇಳಲು ಇವರಿಗೆ ಆಗುತ್ತಿಲ್ಲ, ಇವರು 10 ಕೆಜಿ ಕೊಡಬೇಕು. ಆದರೆ ಐದು ಕೆಜಿಯ ಹಣ ಕೊಡುತ್ತಿದ್ದಾರೆ. ಇವರು ಒಂದು ಕೆಜಿಯೂ ಕೊಡುತ್ತಿಲ್ಲ ಎಂದು ಟೀಕಿಸಿದರು.

ಪ್ರತಿ ಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್​ ಸದಸ್ಯ ಪ್ರಕಾಶ್ ರಾಥೋಡ್, ನನ್ನ ಹೇಳಿಕೆಗೆ ನಾನು ಬದ್ಧನಿದ್ದೇನೆ, ಆಹಾರ ಭದ್ರತಾ ಕಾಯ್ದೆ ಬಂದ ನಂತರ ಕೇಂದ್ರ ಸರ್ಕಾರ ಐದು ಕೆಜಿ ಕೊಡುತ್ತಿದೆ. ಸಿದ್ದರಾಮಯ್ಯ ಸಿಎಂ ಆದಾಗ ಎರಡು ಕೆಜಿ ಸೇರಿಸಿ ಏಳು ಕೆಜಿ ಕೊಟ್ಟಿದ್ದೆವು. ಈಗ 10 ಕೆಜಿ ಕೊಡಲಿದ್ದೇವೆ. ಐದು ಕೆಜಿ ಮನಮೋಹನ್ ಸಿಂಗ್ ಕೊಟ್ಟಿದ್ದರು. ನಾವು ಈಗ ಅದಕ್ಕೆ ಐದು ಕೆಜಿ ಸೇರಿಸಿ ಕೊಡಲಿದ್ದೇವೆ ಎಂದು ಸಮರ್ಥಿಸಿಕೊಂಡರು.
ನಂತರ ಉಚಿತ ವಿದ್ಯುತ್ ಯೋಜನೆ ಪ್ರಸ್ತಾಪಿಸಿ ರಾಜ್ಯಪಾಲರ ಮನೆಯಿಂದ ಸಾಮಾನ್ಯನ ಮನೆಗೂ 200 ಯೂನಿಟ್ ಫ್ರೀ ಕೊಡಲಿದ್ದೇವೆ ಎಂದರು. ಇತರ ಗ್ಯಾರಂಟಿ ವಿಷಯ ಪ್ರಸ್ತಾಪಿಸಿ ಸರ್ಕಾರವನ್ನು ಸಮರ್ಥಿಸಿಕೊಂಡರು.

ಯಶಸ್ವಿನಿಗೆ ಮತ್ತಷ್ಟು ಆಸ್ಪತ್ರೆ ಸೇರಿಸಲು ಕ್ರಮ..ಯಶಸ್ವಿನಿ ಯೋಜನೆಯಡಿ ನೋಂದಾಯಿಸಿಕೊಳ್ಳಲು ಹಲವು ಖಾಸಗಿ ಆಸ್ಪತ್ರೆಗಳು ದರ ಕಡಿಮೆ ಎನ್ನುವ ಕಾರಣಕ್ಕೆ ಹಿಂದೇಟು ಹಾಕುತ್ತಿದ್ದು, ದರ ಪರಿಷ್ಕರಣೆ ಕುರಿತು ಪರಿಶೀಲನೆ ನಡೆಸಲಾಗುತ್ತದೆ. ಗ್ರಾಮೀಣ ಜನರ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ ಸ್ಪಷ್ಟಪಡಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಪ್ರತಾಪ ಸಿಂಹ ನಾಯಕ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಹಳಷ್ಟು ಆಸ್ಪತ್ರೆಗಳು ದರ ಕಡಿಮೆ ಇದೆ ಎಂದು ನೋಂದಾಯಿಸಿಕೊಳ್ಳುತ್ತಿಲ್ಲ. ದರ ಪರಿಷ್ಕರಣೆ ಮಾಡಬೇಕು. ಆ ನಿಟ್ಟಿನಲ್ಲಿ ಪರಿಶೀಲನೆ ನಡೆಸುತ್ತಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಜನರು ನೋಂದಾಯಿಸಬೇಕು. ಅದಕ್ಕೂ ಆದ್ಯತೆ ನೀಡಲಿದ್ದೇವೆ ಎಂದು ಭರವಸೆ ನೀಡಿದರು.

ಇದನ್ನೂಓದಿ:ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ವಿಧಾನಸಭೆಯಲ್ಲಿ ಗದ್ದಲ: ಆಡಳಿತ ಪ್ರತಿಪಕ್ಷದ ನಡುವೆ 'ವ್ಯಾಪಾರ' ವಾಗ್ವಾದ

Last Updated : Jul 11, 2023, 5:56 PM IST

ABOUT THE AUTHOR

...view details