ಕರ್ನಾಟಕ

karnataka

ಅನಾಚಾರವೆಂಬುದು ಬಿಜೆಪಿ ಕಾಯಕ, ಅಭ್ಯಾಸ, ನಿತ್ಯದ ದಿನಚರಿ: ಜೆಡಿಎಸ್

By

Published : Oct 19, 2021, 11:58 AM IST

jds-tweets-back-to-bjps-attack-on-hd-kumaraswamy

ಆರ್​ಎಸ್​​ಎಸ್​ ಕುರಿತಂತೆ ಹೆಚ್​ಡಿಕೆ ಹೇಳಿಕೆ ಟೀಕಿಸಿದ್ದ ಬಿಜೆಪಿ ವಿರುದ್ಧ ಜೆಡಿಎಸ್​ ಸರಣಿ ಟ್ವೀಟ್ ಮೂಲಕ ಕಿಡಿ ಕಾರಿದೆ.

ಬೆಂಗಳೂರು: ಸ್ವಯಂಘೋಷಿತ ಸೇವಾ ಸಂಸ್ಥೆ ಆರ್​ಎಸ್​​ಎಸ್ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಎತ್ತಿದ ಪ್ರಶ್ನೆಗಳಿಗೆ ಉತ್ತರ ಹೇಳುವ ಬದಲು ಸತ್ಯವನ್ನು ದಾಟಿಸುವ ಹುನ್ನಾರದೊಂದಿಗೆ ಬಿಜೆಪಿಯು ದಾಸರ ಪದಗಳನ್ನು ಹೇಳುತ್ತಾ ಜನರ ದಿಕ್ಕು ತಪ್ಪಿಸುತ್ತಿದೆ ಎಂದು ಜೆಡಿಎಸ್ ತಿರುಗೇಟು ನೀಡಿದೆ.

ಸಮಾಜದ ಉದ್ದಾರಕ್ಕಾಗಿ ದಾಸಶ್ರೇಷ್ಠರು ಬರೆದ ಕೃತಿಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಹೀನ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ‘ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ’ ಎನ್ನುವುದು ಬಿಜೆಪಿಯ ಎಲುಬಿಲ್ಲದ ನಾಲಿಗೆಯ ಸಂಸ್ಕಾರವನ್ನು ಸಾರುತ್ತಿದೆ ಎಂದು ಟ್ವೀಟ್ ಮೂಲಕ ಟೀಕಿಸಿದೆ.

ಹೇಳುವುದು ಆಚಾರ, ಮಾಡುವುದು ಅನಾಚಾರ. ಜನರಿಗೆ ಗೊತ್ತಿದೆ ನಿಮ್ಮ ಸದಾನಂದ ಪರಿವಾರ. ರಾಜ್ಯದಲ್ಲಿ ಭ್ರಷ್ಟಾಚಾರ ಎಸಗಿ ಜೈಲಿಗೆ ಹೋಗಿ ಇತಿಹಾಸ ಸೃಷ್ಠಿಸಿದ ಮುಖ್ಯಮಂತ್ರಿ ಯಾವ ಪಕ್ಷದವರು? ಅವರ ಹಿಂದೆಯೇ ಹಿಂಡು ಹಿಂಡಾಗಿ ಜೈಲು ಕಂಬಿ ಎಣಿಸಿದ ಸಚಿವ ಶಿಖಾಮಣಿಗಳು ಯಾವ ಪಕ್ಷದವರು?

ಸಂಘ ಸಂಸ್ಕಾರ ಪಡೆದು ಸದನದಲ್ಲಿ ಅಶ್ಲೀಲ ದೃಶ್ಯಗಳನ್ನು ನೋಡಿದವರು ಯಾವ ಪಕ್ಷದವರು?, ಸಿಡಿ ಸುಳಿಯಲ್ಲಿ ಸಿಕ್ಕಿ ರಾಜೀನಾಮೆ ಕೊಟ್ಟ ಶೀಲವಂತರು ಯಾವ ಪಕ್ಷದವರು?, ನಿಮ್ಮ ನಾಯಕರ ಲೀಲೆಗಳು ಜನರಿಗೆ ಗೊತ್ತಿಲ್ಲ ಎನ್ನುವ ದರ್ಪವೇ? ಅನಾಚಾರವೆಂಬುದು ಬಿಜೆಪಿ ಕಾಯಕ, ಅಭ್ಯಾಸ, ನಿತ್ಯದ ದಿನಚರಿ ಮತ್ತು ಚಾಳಿ.

ಕುಮಾರಸ್ವಾಮಿ ಅವರು ಆರ್​​ಎಸ್ಎಸ್ ತರಬೇತಿ ನೀಡಿದ ಅಧಿಕಾರಿಗಳ ಬಗ್ಗೆ ಹೇಳಿದ್ದರೆ, ನೀವು ಯುಪಿಎಸ್​​ಸಿಗೆ ಸಮೀಕರಣ ಮಾಡಿ ಕೆಪಿಎಸ್​​​ಸಿ ಬಗ್ಗೆ ಎಗ್ಗಿಲ್ಲದೆ ಸುಳ್ಳು ಹೇಳುತ್ತಿದ್ದೀರಿ. ಸಾಂವಿಧಾನಿಕ ಸಂಸ್ಥೆಗಳನ್ನು ಗುಲಾಮರಂತೆ ಮಾಡಿಕೊಂಡಿರುವ ನಿಮಗೆ ಕೆಪಿಎಸ್​ಸಿ ಬಗ್ಗೆ ಮಾತನಾಡುವ ನೈತಿಕತೆ ಇದೆಯಾ? ಎಂದು ಜೆಡಿಎಸ್ ಪ್ರಶ್ನಿಸಿದೆ.

ಇದಕ್ಕೂ ಮೊದಲು ಬಿಜೆಪಿ ‘ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ತಮಗೆ ಬೇಕಾದವರಿಗೆ ಸರ್ಕಾರಿ ಹುದ್ದೆ ಕೊಡಿಸಿದ್ದು ಕನ್ನಡಿಗರಿಗೆ ಮಾಡಿದ ಮೋಸವಲ್ಲವೇ? ಇದರಿಂದಲೇ‌ ನಿಮ್ಮ ಸ್ವಜನ "ಪಕ್ಷ"ಪಾತ ಧೋರಣೆ ಅನಾವರಣವಾಗಿದೆ. ಸರ್ಕಾರಿ ಕೆಲಸ ನೀಡುವಲ್ಲಿಯೂ ಅಕ್ರಮ ಮಾಡಿದ ನೀವು ರಾಜ್ಯದ ಜನರಲ್ಲಿ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಟ್ವೀಟ್ ಮಾಡಿ ಆಗ್ರಹಿಸಿತ್ತು.

ಇದ್ರ ಜೊತೆಗೆ ಘಾತುಕತನವನು ಬಿಡದೆ ನಿರಂತರ ಗೀತೆಯನೋದಿದೊಡೇನು ಫಲ? ಪುರಂದರದಾಸರ ಈ ಪದ್ಯದ ಸಾಲು ಕುಮಾರಸ್ವಾಮಿ ಅವರಿಗೆ ಅಕ್ಷರಶಃ ಅನ್ವಯವಾಗುತ್ತದೆ. ನಿಮ್ಮ ತಪ್ಪು, ವೈರುಧ್ಯ, ಸಮಯಸಾಧಕತನವನ್ನು ಅನ್ಯರ ನಿಂದನೆಯ ಮೂಲಕ ಮುಚ್ಚಿಕೊಳ್ಳಲು ಸಾಧ್ಯವೇ? ಕಾಗೆ ಗಂಗಾ ಸ್ನಾನ ಮಾಡಿದರೆ ಬಿಳುಪಾಗುವುದೇ, ಕುಮಾರಸ್ವಾಮಿ? ಎಂದು ಪ್ರಶ್ನಿಸಿತ್ತು.

ಇದನ್ನೂ ಓದಿ:ಬಿಜೆಪಿ ನೋಟು.. ಕಾಂಗ್ರೆಸ್​​ಗೆ ವೋಟು.. ಕೋವಿಡ್​​ ಸಮಯದಲ್ಲಿ ನೀಡುವ ಹಣ ಈಗ ನೀಡ್ತಾರೆ: ಡಿಕೆಶಿ

ABOUT THE AUTHOR

...view details