ಕರ್ನಾಟಕ

karnataka

ಚಂದ್ರನ ದಕ್ಷಿಣ ಧ್ರುವದಲ್ಲಿ ಸಲ್ಫರ್ ಪತ್ತೆ ಹಚ್ಚಿದ ಪ್ರಜ್ಞಾನ್​ ರೋವರ್.. ಹೈಡ್ರೋಜನ್​ಗಾಗಿ ಹುಡುಕಾಟ - ಇಸ್ರೋ ಹೊಸ ಮಾಹಿತಿ

By ETV Bharat Karnataka Team

Published : Aug 29, 2023, 8:49 PM IST

Updated : Aug 29, 2023, 9:09 PM IST

Chandrayaan-3 Mission: ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3ರ ಪ್ರಜ್ಞಾನ್​ ರೋವರ್ ಸಲ್ಫರ್ ಪತ್ತೆ ಹಚ್ಚಿದೆ. ಹೈಡ್ರೋಜನ್​ಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಇಸ್ರೋ ಟ್ವೀಟ್​ ಮಾಡಿದೆ.

ISRO's latest update: Pragyan rover detects Sulphur, other elements on Moon
ಚಂದ್ರನ ದಕ್ಷಿಣ ಧ್ರುವದಲ್ಲಿ ಸಲ್ಫರ್ ಪತ್ತೆ ಹಚ್ಚಿದ ಪ್ರಜ್ಞಾನ್​ ರೋವರ್... ಹೈಡ್ರೋಜನ್​ಗಾಗಿ ಹುಡುಕಾಟ - ಇಸ್ರೋ ಹೊಸ ಮಾಹಿತಿ

ಬೆಂಗಳೂರು: ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತದ ಚಂದ್ರಯಾನ-3ರ ಪ್ರಜ್ಞಾನ್​ ರೋವರ್​ ತನ್ನ ಕಾರ್ಯಾಚರಣೆಯನ್ನು ಮುಂದುವರೆಸಿದೆ. ಚಂದ್ರನ ಮೇಲ್ಮೈಯಲ್ಲಿ ಸಲ್ಫರ್ ಇರುವುದನ್ನು ರೋವರ್​ನ ಎಲ್​ಐಬಿಎಸ್​ (LIBS) ಪತ್ತೆ ಹಚ್ಚಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಂಗಳವಾರ ಸಂಜೆ ತಿಳಿಸಿದೆ.

ಆಗಸ್ಟ್​ 23ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್​ಅನ್ನು ಇಸ್ರೋ​ ವಿಜ್ಞಾನಿಗಳು ಯಶಸ್ವಿಯಾಗಿ ಇಳಿಸಿದ್ದಾರೆ. ನಂತರ ಲ್ಯಾಂಡರ್​ನಲ್ಲಿದ್ದ ಪ್ರಜ್ಞಾನ್​ ರೋವರ್​ ಹೊರ ಬಂದು ತನ್ನ​ ಸಂಚಾರ ಆರಂಭಿಸಿದೆ. ಈ ಮೂಲಕ ಚಂದ್ರನ ಮೇಲೆ ವೈಜ್ಞಾನಿಕ ಅಧ್ಯಯನಗಳನ್ನು ರೋವರ್​ ನಡೆಸುತ್ತಿದೆ. ಇದಕ್ಕಾಗಿ ರೋವರ್​ನಲ್ಲಿ ಪೆಲೋಡ್​ಗಳನ್ನು ಅಳವಡಿಸಲಾಗಿದ್ದು, ಅವು ಉತ್ತಮವಾಗಿ ಕಾರ್ಯ ನಿರ್ವಹಿಸುವ ಮೂಲಕ ಚಂದ್ರಯಾನ-3ರ ಪ್ರಮುಖ ಉದ್ದೇಶಗಳು ಸಾಕಾರಗೊಳ್ಳುತ್ತಿವೆ.

ಇದನ್ನೂ ಓದಿ:ಚಂದ್ರನ ದಕ್ಷಿಣ ಧ್ರುವದಲ್ಲಿ 8 ಮೀಟರ್‌ ದೂರ ಕ್ರಮಿಸಿದ ರೋವರ್ ಪ್ರಜ್ಞಾನ್: ಇಸ್ರೋ

ಪ್ರಮುಖವಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇದುವರೆಗೂ ಯಾವುದೇ ಬಾಹ್ಯಾಕಾಶ ನೌಕೆ ಇಳಿದಿಲ್ಲ. ಶತಮಾನಗಳಿಂದ ಬೆಳಕನ್ನೇ ಕಾಣದ ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತವೇ ಪ್ರಥಮ ಬಾರಿಗೆ ತನ್ನ ಗಗನನೌಕೆ ಇಳಿಸಿ ಅಧ್ಯಯನ ಕೈಗೊಳ್ಳುತ್ತಿದೆ. ಈ ಕುರಿತು ಮಂಗಳವಾರ ಇಸ್ರೋ ಟ್ವೀಟ್​ ಮಾಡಿ ಮತ್ತಷ್ಟು ಹೊಸ ಮಾಹಿತಿಯನ್ನು ಹಂಚಿಕೊಂಡಿದೆ.

ಚಂದ್ರಯಾನ-3 ಮಿಷನ್ : ಸ್ಥಳದಲ್ಲಿ ವೈಜ್ಞಾನಿಕ ಪ್ರಯೋಗಗಳು ಮುಂದುವರೆದಿವೆ. ರೋವರ್‌ನಲ್ಲಿರುವ ಲೇಸರ್-ಇಂಡ್ಯೂಸ್ಡ್ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೋಪ್ (Laser-Induced Breakdown Spectroscope - LIBS) ಉಪಕರಣವು ದಕ್ಷಿಣ ಧ್ರುವದ ಸಮೀಪವಿರುವ ಚಂದ್ರನ ಮೇಲ್ಮೈಯಲ್ಲಿ ಸಲ್ಫರ್ (S) ಎಂದರೆ ಗಂಧಕ ಇರುವಿಕೆಯನ್ನು ನಿಸ್ಸಂಶಯವಾಗಿ ದೃಢಪಡಿಸಿದೆ ಎಂದು ಇಸ್ರೋ ಬಹಿರಂಗ ಪಡಿಸಿದೆ. ಇದೇ ಮೊಟ್ಟ ಮೊದಲ ಬಾರಿಗೆ ಸಲ್ಫರ್​ ಪತ್ತೆ ಹಚ್ಚಲಾಗಿದ್ದು, ಆರ್ಬಿಟರ್‌ಗಳಲ್ಲಿರುವ ಉಪಕರಣಗಳಿಂದಲೂ ಇದು ಸಾಧ್ಯವಾಗಿರಲಿಲ್ಲ ಎಂದು ತಿಳಿಸಿದೆ.

ಅಲ್ಲದೇ, ನಿರೀಕ್ಷೆಯಂತೆ ಚಂದ್ರನ ಮೇಲ್ಮೈಯಲ್ಲಿ ಕ್ಯಾಲ್ಸಿಯಂ (Ca), ಕಬ್ಬಿಣ (Fe), ಕ್ರೋಮಿಯಂ (Cr), ಟೈಟಾನಿಯಂ (Ti), ಮ್ಯಾಂಗನೀಸ್ (Mn), ಸಿಲಿಕಾನ್ (Si), ಮತ್ತು ಆಮ್ಲಜನಕ (O) ಇರುವಿಕೆಯ ಬಗ್ಗೆ ಮಾಹಿತಿ ನೀಡಿದೆ. ಹೈಡ್ರೋಜನ್ (H) ಎಂದರೆ ಜಲಜನಕ ಇರುವಿಕೆ ಬಗ್ಗೆ ಹುಡುಕಾಟ ನಡೆಯುತ್ತಿದೆ ಎಂದು ಇಸ್ರೋ ತಿಳಿಸಿದೆ. ಬೆಂಗಳೂರಿನ ಇಸ್ರೋದ ಎಲೆಕ್ಟ್ರೋ ಆಪ್ಟಿಕ್ಸ್ ಸಿಸ್ಟಮ್ಸ್ ಪ್ರಯೋಗಾಲಯದಲ್ಲಿ ಎಲ್​ಐಬಿಎಸ್​ ಉಪಕರಣವನ್ನು ಅಭಿವೃದ್ಧಿಪಡಿಸಲಾಗಿದೆ ಎಂದೂ ಇಸ್ರೋ ಹೇಳಿದೆ.

ಚಂದ್ರಯಾನ-3ರ ಲ್ಯಾಂಡರ್​ ಇಳಿದ ಪ್ರದೇಶವನ್ನು ಶಿವಶಕ್ತಿ ಪಾಯಿಂಟ್​ ಎಂದು ಪ್ರಧಾನಿ ಮೋದಿ ಹೆಸರಿಸಿದ್ದಾರೆ. ಈ ಹಿಂದೆ ಚಂದ್ರನ ಮೇಲ್ಮೈಯ 10 ಸೆಂಟಿ ಮೀಟರ್​ ಆಳದಲ್ಲಿ ತಾಪಮಾನ ಏರಿಳಿತಗಳನ್ನು ತಿಳಿಸುವ ಗ್ರಾಫ್ ಅನ್ನು ಇಸ್ರೋ ಹಂಚಿಕೊಂಡಿತ್ತು.

ಇದನ್ನೂ ಓದಿ:Chandrayaan-3: ಶಿವಶಕ್ತಿ ಪಾಯಿಂಟ್​ನಲ್ಲಿ 3x4 ವ್ಯಾಸದ ಕುಳಿ ಚಿತ್ರ ಕಳುಹಿಸಿದ ರೋವರ್​.. ಪಥ ಬದಲಿಸಿ ಅಧ್ಯಯನ ಮುಂದುವರಿಕೆ

Last Updated : Aug 29, 2023, 9:09 PM IST

ABOUT THE AUTHOR

...view details