ETV Bharat / bharat

ಚಂದ್ರನ ದಕ್ಷಿಣ ಧ್ರುವದಲ್ಲಿ 8 ಮೀಟರ್‌ ದೂರ ಕ್ರಮಿಸಿದ ರೋವರ್ ಪ್ರಜ್ಞಾನ್: ಇಸ್ರೋ

author img

By ETV Bharat Karnataka Team

Published : Aug 25, 2023, 10:23 PM IST

Chandrayaan-3 Pragyan Rover: ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್‌ನಿಂದ ಹೊರಬಂದಿರುವ ರೋವರ್ ಪ್ರಜ್ಞಾನ್ ಸುಮಾರು ಎಂಟು ಮೀಟರ್‌ಗಳಷ್ಟು ದೂರ ಕ್ರಮಿಸಿದೆ ಎಂದು ಇಸ್ರೋ ತಿಳಿಸಿದೆ.

Chandrayaan 3: Pragyan rover traverses 8 metres on lunar surface, its payloads turned on
ಚಂದ್ರನ ದಕ್ಷಿಣ ಧ್ರುವದಲ್ಲಿ 8 ಮೀಟರ್‌ ದೂರ ಕ್ರಮಿಸಿದ ರೋವರ್ ಪ್ರಜ್ಞಾನ್: ಇಸ್ರೋ ಮಾಹಿತಿ

ಬೆಂಗಳೂರು: ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದಿರುವ ಚಂದ್ರಯಾನ-3ರ ಲ್ಯಾಂಡರ್​ ಹಾಗೂ ರೋವರ್ ಬಗ್ಗೆ ಇಸ್ರೋ ಶುಕ್ರವಾರ ಹೊಸ ಮಾಹಿತಿ ಹಂಚಿಕೊಂಡಿದೆ. ವಿಕ್ರಮ್ ಲ್ಯಾಂಡರ್​ನಿಂದ ಹೊರ ಬಂದಿರುವ ರೋವರ್ ಪ್ರಜ್ಞಾನ್ ಸುಮಾರು 8 ಮೀಟರ್‌ಗಳಷ್ಟು ದೂರವನ್ನು ಯಶಸ್ವಿಯಾಗಿ ಕ್ರಮಿಸಿದೆ. ಅದರ ಉಪಕರಣಗಳು ಕಾರ್ಯಾರಂಭಿಸಿವೆ ಎಂದು ಇಸ್ರೋ ಮಾಹಿತಿ ಒದಗಿಸಿದೆ.

  • Chandrayaan-3 Mission:

    All planned Rover movements have been verified. The Rover has successfully traversed a distance of about 8 meters.

    Rover payloads LIBS and APXS are turned ON.

    All payloads on the propulsion module, lander module, and rover are performing nominally.…

    — ISRO (@isro) August 25, 2023 " class="align-text-top noRightClick twitterSection" data=" ">

"ರೋವರ್ ಚಲನವಲನಗಳನ್ನು ಪರಿಶೀಲಿಸಲಾಗಿದೆ. ರೋವರ್ ಸುಮಾರು 8 ಮೀಟರ್‌ಗಳಷ್ಟು ದೂರವನ್ನು ಯಶಸ್ವಿಯಾಗಿ ಕ್ರಮಿಸಿತು. ಇದರಲ್ಲಿರುವ ಪೇಲೋಡ್‌ಗಳಾದ (ವೈಜ್ಞಾನಿಕ ಸಾಧನಗಳು) ಎಲ್​ಐಬಿಎಸ್​ (LIBS) ಮತ್ತು ಎಪಿಎಕ್ಸ್​ಎಸ್​ (APXS) ಕಾರ್ಯಾರಂಭಿಸಿವೆ'' ಎಂದು ಸಂಜೆ ಟ್ವೀಟ್​ ಮಾಡಿದೆ. ಮುಂದುವರೆದು, "ಪ್ರೊಪಲ್ಷನ್ ಮಾಡ್ಯೂಲ್, ಲ್ಯಾಂಡರ್ ಮಾಡ್ಯೂಲ್ ಮತ್ತು ರೋವರ್‌ನಲ್ಲಿನ ಎಲ್ಲ ಪೇಲೋಡ್‌ಗಳೂ ಕಾರ್ಯನಿರ್ವಹಿಸುತ್ತಿವೆ" ಎಂದೂ ತಿಳಿಸಿದೆ.

ಆಲ್ಫಾ ಪಾರ್ಟಿಕಲ್ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ (Alpha Particle X-Ray Spectrometer-APXS) ರಾಸಾಯನಿಕ ಸಂಯೋಜನೆ ಗುರುತಿಸುವ ಗುರಿ ಹೊಂದಿದೆ. ಚಂದ್ರನ ಮೇಲ್ಮೈಯ ಖನಿಜ ಸಂಯೋಜನೆಯನ್ನು ಇದು ಕಂಡುಹಿಡಿಯಲಿದೆ. ಲೇಸರ್ ಇಂಡ್ಯೂಸ್ಡ್ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೋಪ್ (Laser-Induced Breakdown Spectroscope-LIBS) ಚಂದ್ರನ ಲ್ಯಾಂಡಿಂಗ್ ಪ್ರದೇಶದ ಸುತ್ತಲೂ ಚಂದ್ರನ ಮಣ್ಣು ಮತ್ತು ಬಂಡೆಗಳ ಧಾತುರೂಪದ ಸಂಯೋಜನೆಗಳನ್ನು (Mg, Al, Si, K, Ca, Ti, Fe) ಪತ್ತೆ ಹಚ್ಚಲು ಪ್ರಯತ್ನಿಸುತ್ತದೆ.

ಆಗಸ್ಟ್​ 23ರಂದು ಸಂಜೆ 6 ಗಂಟೆ 4 ನಿಮಿಷಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಮೃದುವಾಗಿ ವಿಕ್ರಮ್‌ ಲ್ಯಾಂಡರ್​ ಅನ್ನು ಇಸ್ರೋ ಇಳಿಸುವಲ್ಲಿ ಯಶಸ್ವಿಯಾಯಿತು. ಈ ಮೂಲಕ ದಕ್ಷಿಣ ಧ್ರುವದಲ್ಲಿ ಉಪಗ್ರಹ ಇಳಿಸಿದ ಏಕೈಕ ಹಾಗೂ ಪ್ರಥಮ ರಾಷ್ಟ್ರವೆಂಬ ಹಿರಿಮೆ ಭಾರತದ್ದಾಗಿದೆ. ಗುರುವಾರ, ಲ್ಯಾಂಡರ್ ಮಾಡ್ಯೂಲ್ ಉಪಕರಣಗಳಾದ ಎಲ್​ಐಎಸ್ಎ (ILSA), ರಂಭಾ (RAMBHA) ಮತ್ತು ಚೇಸ್ಟ್ (ChaSTE) ಕಾರ್ಯಾರಂಭ ಮಾಡಿವೆ. ರೋವರ್ ಮೊಬಿಲಿಟಿ ಕಾರ್ಯಾಚರಣೆಗಳು ಸಹ ಪ್ರಾರಂಭವಾಗಿವೆ ಎಂದು ಇಸ್ರೋ ಹೇಳಿತ್ತು.

ಎಲ್​ಐಎಸ್ಎ ಚಂದ್ರನ ಲ್ಯಾಂಡಿಂಗ್ ಪ್ರದೇಶದ ಸುತ್ತಲಿನ ಭೂಕಂಪನ ಚಟುವಟಿಕೆಗಳನ್ನು ಅಳೆಯುತ್ತದೆ. ರಂಭಾ ಪ್ಲಾಸ್ಮಾ ಪರಿಸರವನ್ನು ಅಧ್ಯಯನ ಮಾಡುತ್ತದೆ. ಚಂದ್ರನ ಮೇಲ್ಮೈ ಥರ್ಮೋಫಿಸಿಕಲ್ ಪ್ರಯೋಗ (Chandra's Surface Thermophysical Experiment - ChaSTE )ವು ಚಂದ್ರನ ಮೇಲ್ಮೈ ಉಷ್ಣ ಗುಣಲಕ್ಷಣಗಳನ್ನು ಅಳೆಯುತ್ತದೆ. ಶುಕ್ರವಾರ ಬೆಳಗ್ಗೆ ಲ್ಯಾಂಡರ್ ಇಮೇಜರ್ ಕ್ಯಾಮರಾದಲ್ಲಿ ಸೆರೆಯಾದ ವಿಕ್ರಮ್ ಲ್ಯಾಂಡರ್​ನಿಂದ ಪ್ರಜ್ಞಾನ್ ರೋವರ್ ಹೊರ ಬರುತ್ತಿರುವ ವಿಡಿಯೋವನ್ನು ಇಸ್ರೋ ಬಿಡುಗಡೆ ಮಾಡಿತ್ತು.

ಇದನ್ನೂ ಓದಿ: ಲ್ಯಾಂಡರ್ ಸೆರೆಹಿಡಿದ ಚಂದ್ರನ ಚಿತ್ರಗಳ ವಿಡಿಯೋ ಬಿಡುಗಡೆಗೊಳಿಸಿದ ಇಸ್ರೋ-ನೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.