ಕರ್ನಾಟಕ

karnataka

ಯತೀಂದ್ರ ಸಿದ್ದರಾಮಯ್ಯ ವಿಡಿಯೋ ವೈರಲ್ ವಿಚಾರ: ರಾಜ್ಯ ಸರ್ಕಾರದ ವಸೂಲಿ ಬಿಸ್ನೆಸ್ ಹಾದಿಬೀದಿಗೆ ಬಂದಿದೆ ಎಂದ ಹೆಚ್‌ಡಿಕೆ

By ETV Bharat Karnataka Team

Published : Nov 16, 2023, 11:43 AM IST

Updated : Nov 16, 2023, 12:33 PM IST

ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ತಂದೆಯ ಹೆಸರಲ್ಲಿ ಪುತ್ರನ ಆಡಳಿತ ಎಂದೆಲ್ಲ ಈ ಹಿಂದೆ ಹೆಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದರು. ಇದೀಗ ಯತೀಂದ್ರ ಸಿದ್ದರಾಮಯ್ಯ ಮಾತನಾಡಿರುವ ವಿಡಿಯೋ ವೈರಲ್‌ ಆಗಿದ್ದು, ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸುತ್ತಿದೆ.

ಹೆಚ್​.ಡಿ ಕುಮಾರಸ್ವಾಮಿ
ಹೆಚ್​.ಡಿ ಕುಮಾರಸ್ವಾಮಿ

ಬೆಂಗಳೂರು:ರಾಜ್ಯ ಸರ್ಕಾರದ ವಸೂಲಿ ಬಿಸ್ನೆಸ್ ಹಾದಿಬೀದಿಗೆ ಬಂದಿದೆ ಎಂದು ಸಿಎಂ ಸಿದ್ದರಾಮಯ್ಯ ಮತ್ತು ಅವರ ಪುತ್ರ ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್‌ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಇತ್ತೀಚೆಗೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಯತೀಂದ್ರ ಸಿದ್ದರಾಮಯ್ಯ ಮಾತನಾಡಿರುವ ವಿಡಿಯೋವೊಂದು ವೈರಲ್‌ ಆಗಿತ್ತು ಈ ವಿಡಿಯೋದಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರು, "ಯಾಕೆ ಯಾವುದ್ಯಾವುದೋ ಕೊಡ್ತಾ ಇದ್ದೀರಿ?. ನಾನು ಯಾವುದು ನಾಲ್ಕೈದು ಕೊಟ್ಟಿದ್ದೀನೋ ಅಷ್ಟು ಮಾತ್ರ ಮಾಡಿ" ಅಂತ ಹೇಳಿರುವುದು ದಾಖಲಾಗಿದೆ. ಇದೇ ವಿಡಿಯೋವನ್ನು ಹೆಚ್‌.ಡಿ.ಕುಮಾರಸ್ವಾಮಿ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿ ಟೀಕಾಪ್ರಹಾರ ನಡೆಸಿದ್ದಾರೆ. "ನೈತಿಕತೆ, ಮೌಲ್ಯ, ಸಾಮಾಜಿಕ ನ್ಯಾಯದ ಡೋಂಗಿ ಹರಿಕಾರನ ಅಸಲಿ ಮುಖ ಅದೇ ಹಾದಿಬೀದಿಯಲ್ಲಿ ಹರಾಜಾಗಿದೆ. ಕರ್ನಾಟಕದ ಕಲೆಕ್ಷನ್ ಕಿಂಗ್ ಅಪ್ಪ, ಪ್ರಿನ್ಸ್ ಮಗ ಸೇರಿ ಸಿಎಂ ಸಚಿವಾಲಯವನ್ನು ಸುಲಿಗೆ ಅಡ್ಡಾ ಮಾಡಿಕೊಂಡಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಪುರಾವೆ ಬೇಕಿಲ್ಲ" ಎಂದು ಕಿಡಿ ಕಾರಿದ್ದಾರೆ.

"ಸಾರ್ವಜನಿಕ ಸಭೆಯಲ್ಲೇ ಎಗ್ಗಿಲ್ಲದೆ, ನಾಚಿಕೆ ಬಿಟ್ಟು ವರ್ಗಾವಣೆ ದಂಧೆ ನಡೆಸುವ ಮುಖ್ಯಮಂತ್ರಿ, ಮತ್ತವರ ಸುಪುತ್ರ, ಸಿಎಂ ಕಚೇರಿಯ ಪರ್ಸಂಟೇಜ್ ಪಟಾಲಂ ರಾಜ್ಯದ ಪ್ರತಿಷ್ಠೆಯನ್ನು ಹಣಕ್ಕಾಗಿ ಮಾರಿಕೊಂಡಿದೆ. ಬೀದಿಯಲ್ಲಿಯೇ ಇಷ್ಟಾದರೆ, ನಾಲ್ಕು ಗೋಡೆಗಳ ಮಧ್ಯೆ ಇನ್ನೆಷ್ಟು ವ್ಯವಹಾರ ನಡೆಸುತ್ತಿರಬಹುದು? ರಾಜ್ಯದ ಮುಖ್ಯಮಂತ್ರಿಗೇ ಧಮ್ಕಿ ಹಾಕಿ, "ನಾನು ಹೇಳಿದವರಷ್ಟನ್ನೇ ಮಾಡಿ" ಎನ್ನುವ ಈ ವ್ಯಕ್ತಿ ಮುಖ್ಯಮಂತ್ರಿ ಮಗನೋ?" ಎಂದು ಹೆಚ್‌ಡಿಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಸ್ವತಃ ಮುಖ್ಯಮಂತ್ರಿಯೇ ಫೋನ್ ಕೊಡುವಷ್ಟು ಪ್ರಭಾವಿಯಾದ ಆ ಭಾರಿ ಆಸಾಮಿ ಯಾರು? ಇಷ್ಟಕ್ಕೂ ಆ ಮಹದೇವ ಎನ್ನುವ ವ್ಯಕ್ತಿ ಯಾರು? ಹಿಂದೊಮ್ಮೆ ನಾನೇ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದೆ. ಕುಮಾರಸ್ವಾಮಿ ಸುಳ್ಳು ಹೇಳ್ತಾ ಇದ್ದಾರೆ, ಅವರು ಹೇಳೋದು 99.9999% ಸುಳ್ಳು. ಅವರಿಗೆ ನಾನು ಉತ್ತರ ಕೊಡಲ್ಲ. ಅವರು ಹಿಟ್ ಆ್ಯಂಡ್ ರನ್ ಎಂದಿದ್ದ ಸಿಎಂ ಸಿದ್ದರಾಮಯ್ಯ ಈಗ ಏನು ಹೇಳುತ್ತಾರೆ?" ಎಂದು ಹೆಚ್​ಡಿಕೆ ಕುಟುಕಿದ್ದಾರೆ.

"ಈಗ ಹೇಳಿ ಸಿದ್ದರಾಮಯ್ಯನವರೇ, ನೀವು, ನಿಮ್ಮ ಮಗ ಎಷ್ಟು ಪರ್ಸೆಂಟ್‌ಗೆ ಹುದ್ದೆಗಳನ್ನು ಮಾರಿದ್ದೀರಿ? ಅದರಲ್ಲಿ ನಿಮಗೆಷ್ಟು? ನಿಮ್ಮ ಮಗನಿಗೆಷ್ಟು? ನಿಮ್ಮ ಕಚೇರಿಯ ಪರ್ಸಂಟೇಜ್ ಪಟಾಲಂಗೆ ಎಷ್ಟು? ನಾನು ಹೇಳಿದ್ದೆಲ್ಲಾ ಸುಳ್ಳು ಸುಳ್ಳು ಎಂದು ಸಲೀಸಾಗಿ ಹೇಳುತ್ತೀರಲ್ಲ? ಸತ್ಯ ಎದ್ದು ಎದುರಿಗೇ ಕೂತಿದೆ. ಏನು ಹೇಳುತ್ತೀರಿ? ವಿಡಿಯೋದಲ್ಲಿರುವ ವಿಷಯ ಸುಳ್ಳೋ, ನಿಜವೋ ನಾಡಿನ ಜನ ತೀರ್ಮಾನ ಮಾಡುತ್ತಾರೆ. ಅದರ ಸಾಧಕ-ಬಾಧಕ ನಾನೇ ಎದುರಿಸುತ್ತೇನೆ. ಸಾರ್ವಜನಿಕ ಸಭೆಯಲ್ಲೇ ನಿಮ್ಮ 'ಸುಲಿಗೆಪುತ್ರ' ಕಾಸಿಗಾಗಿ ಹುದ್ದೆ ವ್ಯವಹಾರವನ್ನು ಬಟಾಬಯಲು ಮಾಡಿ ನಿಮ್ಮ ವಸೂಲಿ ದಂಧೆಯನ್ನು ಬೆತ್ತಲು ಮಾಡಿದ್ದಾರೆ. ಇದಕ್ಕೆ ಅಹಿಂದ ಮಹಾಪುರುಷರಾದ ತಾವೇ ರಾಜ್ಯದ ಜನರಿಗೆ ಉತ್ತರ ಕೊಡಬೇಕು."

"ನಿಮ್ಮಿಂದ ಉತ್ತರವಷ್ಟೇ ಅಲ್ಲ, ನಿಮಗೆ ಮಾನ ಮರ್ಯಾದೆ ಬಹಳ ಜಾಸ್ತಿ ಅಲ್ಲವೇ? ನೈತಿಕ ಮೌಲ್ಯಗಳಂತೂ ದುಪಟ್ಟು ಜಾಸ್ತಿ, ಹೌದಲ್ಲವೇ? ಅದಕ್ಕೆ ಬೆಲೆ ಕೊಟ್ಟು ರಾಜೀನಾಮೆ ಕೊಡಿ. ನಿಮಗೆ ಉಳಿದಿರುವುದು ಸಿಎಂ ಕಚೇರಿ ಖಾಲಿ ಮಾಡುವುದಷ್ಟೇ. ಕೂಡಲೇ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ಕೊಡಿ" ಎಂದು ಹೆಚ್‌.ಡಿ.ಕುಮಾರಸ್ವಾಮಿ ಆಗ್ರಹಿಸಿದ್ಧಾರೆ.

ಇದನ್ನೂ ಓದಿ:ಡಿಕೆಶಿ ಸಿಎಂ ಆಗುವುದಾದರೆ ಜೆಡಿಎಸ್ ಶಾಸಕರ ಬೆಂಬಲ, ಹೆಚ್​ಡಿಕೆ ಮಾತು ನಂಬಲು ನಾವೇನು ದಡ್ಡರೇ?: ಡಿಸಿಎಂ

Last Updated : Nov 16, 2023, 12:33 PM IST

ABOUT THE AUTHOR

...view details