ಕರ್ನಾಟಕ

karnataka

ಸಿಗಂದೂರು ದೇವಸ್ಥಾನದ ಹೆಸರಲ್ಲಿ ಸರ್ಕಾರಿ ಭೂಮಿ ಒತ್ತುವರಿ : ಹೈಕೋರ್ಟ್​ಗೆ ಜಿಲ್ಲಾಧಿಕಾರಿ ವರದಿ

By

Published : Jan 20, 2021, 6:25 PM IST

ದೇವಾಲಯದ ಹೆಸರಿನಲ್ಲಿ ಸಾರ್ವಜನಿಕರಿಂದ ಸಾವಿರಾರು ಕೋಟಿ ರೂ. ಹಣ ಸಂಗ್ರಹಿಸಿದ್ದು, ವಾರ್ಷಿಕ ಐದು ಕೋಟಿ ಮಾತ್ರ ಲೆಕ್ಕಪತ್ರದಲ್ಲಿ ತೋರಿಸಿದ್ದಾರೆ. ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ. ಒತ್ತುವರಿಯಾಗಿರುವ ಅರಣ್ಯ ಭೂಮಿಯನ್ನು ತೆರವುಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಹಾಗೂ ದೇವಸ್ಥಾನದ ಆಡಳಿತವನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳುವಂತೆ ಆದೇಶಿಸಬೇಕು..

Government land Illegal use Sigandoor Temple news
ಸಿಗಂದೂರು ದೇವಸ್ಥಾನದ ಹೆಸರಲ್ಲಿ ಸರ್ಕಾರಿ ಭೂಮಿ ಒತ್ತುವರಿ

ಬೆಂಗಳೂರು :ಪ್ರಸಿದ್ಧ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಹೆಸರಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿ, ಆ ಜಾಗದಲ್ಲಿ ಕಲ್ಯಾಣ ಮಂಟಪ, ರೆಸ್ಟೋರೆಂಟ್‌ಗಳನ್ನು ನಿರ್ಮಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಹೈಕೋರ್ಟ್‌ಗೆ ವರದಿ ಸಲ್ಲಿಸಿದ್ದಾರೆ.

ಓದಿ: ಸಿಗಂದೂರು ದೇವಸ್ಥಾನ ವಿವಾದ : ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್ ಸೂಚನೆ

ಈ ಕುರಿತು ಸಾಗರ ತಾಲೂಕಿನ ಲಕ್ಷ್ಮಿ ನಾರಾಯಣ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿ, ಕಳಸವಳ್ಳಿ ಗ್ರಾಮದ ಸರ್ವೆ ನಂಬರ್ 65ರಲ್ಲಿನ 12.16 ಎಕರೆ ಪ್ರದೇಶವನ್ನು ದೇವಸ್ಥಾನದ ಹೆಸರಲ್ಲಿ ಒತ್ತುವರಿ ಮಾಡಲಾಗಿದೆ.

ಆ ಜಾಗದಲ್ಲಿ ಅಕ್ರಮವಾಗಿ ಕಲ್ಯಾಣ ಮಂಟಪ, ರೆಸ್ಟೋರೆಂಟ್ ಸೇರಿ ಹಲವು ಕಟ್ಟಡಗಳನ್ನು ನಿರ್ಮಿಸಲಾಗಿದೆ. ಈ ಸಂಬಂಧ ಸ್ಥಳೀಯ ತಹಶೀಲ್ದಾರ್ ಸ್ಥಳ ಪರಿಶೀಲಿಸಿ, ಸರ್ವೆ ನಡೆಸಿ ಒತ್ತುವರಿ ಜಾಗ ಗುರುತಿಸಿದ್ದಾರೆ. ಹಾಗೆಯೇ, ಅಕ್ರಮವಾಗಿ ನಡೆಸುತ್ತಿರುವ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ನಿಲ್ಲಿಸಿದ್ದಾರೆ ಎಂದು ತಿಳಿಸಿದರು. ಹೇಳಿಕೆ ದಾಖಲಿಸಿಕೊಂಡ ಪೀಠ, ಒತ್ತುವರಿ ತೆರವು ಮಾಡುವ ಸಂಬಂಧ ಕ್ರಮಕೈಗೊಂಡು ಜಿಲ್ಲಾಧಿಕಾರಿ 1 ತಿಂಗಳಲ್ಲಿ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಫೆಬ್ರವರಿ 23ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ ದೇವಸ್ಥಾನದ ಟ್ರಸ್ಟಿ ಪರ ವಾದಿಸಿದ ವಕೀಲರು, ಸರ್ಕಾರದ ವರದಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು. ಅರ್ಜಿದಾರರ ಪರ ವಕೀಲರು ವಾದಿಸಿ, ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿರುವ ರೆಸ್ಟೋರೆಂಟ್ ಹಾಗೂ ಕಲ್ಯಾಣ ಮಂಟಪಗಳಿಂದ ಸಂಗ್ರಹಿಸಲಾಗಿರುವ ಬಾಡಿಗೆಯನ್ನು ವಸೂಲಿ ಮಾಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ದೇವಸ್ಥಾನದ ಟ್ರಸ್ಟಿ ಆಕ್ಷೇಪಣೆ ಸಲ್ಲಿಸುವುದಾಗಿ ಹೇಳಿದ್ದಾರೆ. ಅವರು ಆಕ್ಷೇಪಣೆ ಸಲ್ಲಿಸಿದ ಬಳಿಕ ಈ ಕುರಿತು ನಿರ್ಧರಿಸುವುದಾಗಿ ತಿಳಿಸಿತು.

ಅರ್ಜಿದಾರರ ಕೋರಿಕೆ :ಶಿವಮೊಗ್ಗದ ಸಾಗರ ತಾಲೂಕಿನ ಕಳಸವಳ್ಳಿ ಗ್ರಾಮದ ಸರ್ವೇ ನಂಬರ್ 65ರಲ್ಲಿನ ಸರ್ಕಾರಿ ಅರಣ್ಯ ಭೂಮಿಯನ್ನು ದೇವಸ್ಥಾನದ ಹೆಸರಿನಲ್ಲಿ ಒತ್ತುವರಿ ಮಾಡಲಾಗಿದೆ. ಒತ್ತುವರಿಯಾಗಿರುವ ಅರಣ್ಯ ಭೂಮಿಯನ್ನು ತೆರವು ಮಾಡಲು ಜಿಲ್ಲಾಡಳಿತ ಕ್ರಮಕೈಗೊಂಡಿಲ್ಲ. ದೇವಾಲಯದ ಹೆಸರಿನಲ್ಲಿ ಸಾರ್ವಜನಿಕರಿಂದ ಸಾವಿರಾರು ಕೋಟಿ ರೂ. ಹಣ ಸಂಗ್ರಹಿಸಿದ್ದು, ವಾರ್ಷಿಕ ಐದು ಕೋಟಿ ಮಾತ್ರ ಲೆಕ್ಕಪತ್ರದಲ್ಲಿ ತೋರಿಸಿದ್ದಾರೆ. ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ. ಒತ್ತುವರಿಯಾಗಿರುವ ಅರಣ್ಯ ಭೂಮಿಯನ್ನು ತೆರವುಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಹಾಗೂ ದೇವಸ್ಥಾನದ ಆಡಳಿತವನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳುವಂತೆ ಆದೇಶಿಸಬೇಕು ಎಂದು ಕೋರಿದ್ದಾರೆ.

ABOUT THE AUTHOR

...view details