ಕರ್ನಾಟಕ

karnataka

ಶಿಕ್ಷಣ ಸಂಸ್ಥೆಯಿಂದ ಸರ್ಕಾರಿ ಭೂ ಒತ್ತುವರಿ; ಸುಪ್ರೀಂ​ನಲ್ಲಿ ಅಫಿಡವಿಟ್ ಹಾಕಿ ಮುಂದಿನ ಕ್ರಮ: ಅಶೋಕ್

By

Published : Mar 4, 2021, 8:27 PM IST

ಹುಳಿಮಾವು ಗ್ರಾಮದಲ್ಲಿ ಇಸ್ಲಾಮಿಯಾ ಇನ್ಸ್​ಟ್ಯೂಟ್​ ಆಫ್ ಟೆಕ್ನಾಲಜಿ ಸಂಸ್ಥೆಯಿಂದ ಸರ್ಕಾರಿ ಭೂಮಿ ಒತ್ತುವರಿ ಕುರಿತಂತೆ ವಿಧಾನಪರಿಷತ್​ನಲ್ಲಿ ಬಿಜೆಪಿ ಸದಸ್ಯ ರವಿಕುಮಾರ್ ಕೇಳಿದ ಪ್ರಶ್ನೆಗೆ, ಕಂದಾಯ ಸಚಿವ ಆರ್​.ಆಶೋಕ್ ಉತ್ತರಿಸಿದರು.

Vidhana Parishad member questions land encroachment
ಶಿಕ್ಷಣ ಸಂಸ್ಥೆಯಿಂದ ಸರ್ಕಾರಿ ಭೂಮಿ ಒತ್ತುವರಿ

ಬೆಂಗಳೂರು : ಹುಳಿಮಾವು ಗ್ರಾಮದಲ್ಲಿ ಅತಿಕ್ರಮಣಗೊಂಡಿರುವ 5 ಎಕರೆ ಜಾಗ ಸರ್ಕಾರಕ್ಕೆ ಸೇರಿದ್ದಾಗಿದೆ. ಅದು ಸರ್ಕಾರಿ ಜಾಗ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಸದ್ಯ ಸುಪ್ರೀಂಕೋರ್ಟ್​ನಲ್ಲಿ ಪ್ರಕರಣದ ವಿಚಾರಣೆ ಬಾಕಿ ಇದ್ದು, ಅಲ್ಲಿ ಸರ್ಕಾರ ಅಫಿಡವಿಟ್ ಸಲ್ಲಿಸಿ ನಂತರ ಭೂಮಿ ವಶಪಡಿಸಿಕೊಳ್ಳುವ ಕುರಿತು ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ವಿಧಾನಪರಿಷತ್ ಕಲಾಪದಲ್ಲಿ ನಿಯಮ 330 ರ ಅಡಿ ವಿಷಯ ಪ್ರಸ್ತಾಪ ಮಾಡಿದ ಬಿಜೆಪಿ ಸದಸ್ಯ ರವಿಕುಮಾರ್, ಬೆಂಗಳೂರು ನಗರ ದಕ್ಷಿಣ ತಾಲೂಕಿನ ಬೇಗೂರು ಹೋಬಳಿಯ ಹುಳಿಮಾವು ಗ್ರಾಮದ ಸರ್ವೆ ನಂಬರ್ 63 ರಲ್ಲಿ ಐದು ಎಕರೆ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಇಸ್ಲಾಮಿಯಾ ಇನ್ಸ್​ಟ್ಯೂಟ್​ ಆಫ್ ಟೆಕ್ನಾಲಜಿ ಶಿಕ್ಷಣ ಸಂಸ್ಥೆ ಪ್ರಾರಂಭಿಸಿದೆ. ಸರ್ಕಾರಿ ಜಾಗ ಎಂದು ಬೋರ್ಡ್ ಹಾಕಿದ್ದರೂ, ಸಂಸ್ಥೆ ಆರಂಭಕ್ಕೆ ಅವಕಾಶ ಹೇಗೆ ನೀಡಲಾಗಿದೆ? ಸಂಸ್ಥೆ ಸ್ಥಾಪನೆಗೆ ಯಾರು ಅವಕಾಶ ನೀಡಿದರು? ಇದು ಸರ್ಕಾರದ ಜಾಗ ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ. ಆದರೂ ಇದಕ್ಕೆ ಶಿಕ್ಷಣ ಇಲಾಖೆ ಹೇಗೆ ಅನುಮತಿ ಕೊಟ್ಟಿತು? ಯಾರು ಆ ಅಧಿಕಾರಿ? ಒತ್ತುವರಿ ಜಾಗ ವಶಕ್ಕೆ ಹೈಕೋರ್ಟ್ ಆದೇಶವಿದೆ. ಆದರೂ ಒತ್ತುವರಿ ಯಾಕೆ ತೆರವು ಮಾಡಿಲ್ಲ, ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ. ಆದರೂ ಸರ್ಕಾರ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಸರ್ಕಾರದ ಗಮನ ಸೆಳೆದರು‌.

ಸುಪ್ರೀಂಕೋರ್ಟ್ ತೀರ್ಪು ಬರುವವರೆಗೂ ಹೈಕೋರ್ಟ್ ಆದೇಶ ಜಾರಿಯಲ್ಲಿರಲಿದೆ. ಹಾಗಾಗಿ ಒತ್ತುವರಿ ತೆರವು ಮಾಡಬೇಕಿತ್ತು, ಸರ್ಕಾರಿ ಭೂಮಿ ಎಂದು ನಾಮಫಲಕ ಇದ್ದರೂ, ಒತ್ತುವರಿ ಮಾಡಿದ್ದು ಯಾಕೆ? ಸರ್ಕಾರ ಕೂಡಲೇ ಒತ್ತವರಿ ತೆರವು ಮಾಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಸದಸ್ಯ ನಜೀರ್ ಅಹಮದ್ ಮಾತನಾಡಿ, ಅಲ್ಪಸಂಖ್ಯಾತರ ಮೊದಲ ಇಂಜಿನಿಯರಿಂಗ್ ಕಾಲೇಜು ಇದು. ಈ ಜಾಗ ಪ್ರೈಮರಿ ನೋಟಿಫಿಕೇಷನ್ ಆಗಿದೆ. ಫೈನಲ್ ನೋಟಿಫಿಕೇಷನ್ ಆಗಿಲ್ಲ. 1979-80 ರಿಂದ ಆ ಜಾಗದಲ್ಲಿ ಸಂಸ್ಥೆ ಇದೆ. ಸರ್ಕಾರದ ಆದೇಶವೇ ಇದೆ, ಯಾವುದೇ ಜಾಗದಲ್ಲಿ 30 ವರ್ಷ ಇದ್ದರೆ, ಅದು ಅವರ ಸ್ವತ್ತಾಗಲಿದೆ ಎಂದು ಜಾಗ ತೆರವಿಗೆ ಆಕ್ಷೇಪ ವ್ಯಕ್ತಪಡಿಸಿದರು.

ಇದನ್ನೂ ಓದಿ: ಈ ದೇಶದ ಪ್ರಧಾನಿಯೇ RSS​ನವರು, ಆ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ: ಸದನದಲ್ಲಿ ಸಿಎಂ ಗರಂ

ಇದಕ್ಕೆ‌ ಉತ್ತರ ನೀಡಿದ ಕಂದಾಯ ಸಚಿವ ಆರ್.ಅಶೋಕ್, 5 ಎಕರೆ ಜಾಗ ಅಕ್ರಮ ಒತ್ತುವರಿ ಮಾಡಿ ಶಿಕ್ಷಣ ಸಂಸ್ಥೆ ಪ್ರಾರಂಭ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಇದು ಸರ್ಕಾರಿ ಜಾಗ ಎಂದು ಈಗಾಗಲೇ ಹೈಕೋರ್ಟ್ ಆದೇಶ ನೀಡಿದೆ. ಆದರೆ, ತಕ್ಷಣವೇ ಕಟ್ಟಡದ ಡೆಮಾಲಿಷನ್ ಮಾಡುವುದು ಬೇಡ ಎಂದಿದೆ. ಈ ನಡುವೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಶಿಕ್ಷಣ ಸಂಸ್ಥೆ ಸುಪ್ರೀಂ ಕೋರ್ಟ್​ಗೆ ಹೋಗಿದೆ. ಮಾರ್ಚ್ 8 ರಂದು ವಿಚಾರಣೆಗೆ ಬರಲಿದೆ. ಅಲ್ಲಿ ಸರ್ಕಾರ ಅಫಿಡವಿಟ್ ಹಾಕಿ ಕಾನೂನು ಹೋರಾಟ ಮಾಡಲಿದೆ ಎಂದರು.

ಈ ನಡುವೆ ಸಂಸ್ಥೆಯವರು ಜಾಗ ನಮಗೇ ಮಂಜೂರು ಮಾಡಿ ಕೊಡಿ ಎಂದು ಮನವಿ ಮಾಡಿದ್ದಾರೆ. ಅದು ಸರ್ಕಾರದಲ್ಲಿ ಬಾಕಿ ಇದೆ. ಹಾಗಾಗಿ ಈ ವಿಚಾರದಲ್ಲಿ ಈಗ ಯಾವ ನಿರ್ಧಾರ ಹೇಳಲು ಸಾಧ್ಯವಿಲ್ಲ. ಸದ್ಯ ಹೈಕೋರ್ಟ್ ಇದು ಸರ್ಕಾರಿ ಜಾಗ ಎಂದು ತೀರ್ಪು ನೀಡಿದೆ. ಸರ್ಕಾರ ಸುಪ್ರೀಂ ಕೋರ್ಟ್​ನಲ್ಲಿ ಅಫಿಡವಿಟ್ ಹಾಕಿ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ABOUT THE AUTHOR

...view details