ಕರ್ನಾಟಕ

karnataka

ಸ್ಯಾಂಟ್ರೋ ರವಿ ಪ್ರಕರಣ ನ್ಯಾಯಾಂಗ ಇಲ್ಲವೇ ವಿಶೇಷ ತನಿಖಾ ತಂಡಕ್ಕೆ ವಹಿಸಿ: ರಾಜ್ಯಪಾಲರಿಗೆ ಕಾಂಗ್ರೆಸ್ ಮನವಿ

By

Published : Jan 12, 2023, 11:25 AM IST

Updated : Jan 12, 2023, 12:40 PM IST

ಸ್ಯಾಂಟ್ರೋ ರವಿಯನ್ನು ಬಂಧಿಸಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಎಲ್ಲಾ ಪ್ರಕರಣಗಳನ್ನು ರಾಜ್ಯ ಉಚ್ಛನ್ಯಾಯಾಲಯದ ನ್ಯಾಯಮೂರ್ತಿಗಳಿಂದ ಅಥವಾ ವಿಶೇಷ ತನಿಖಾ ತಂಡ ರಚಿಸಿ ತನಿಖೆಗೆ ವಹಿಸಬೇಕೆಂದು ಕೋರಿ ಯುವ ಕಾಂಗ್ರೆಸ್ ನಾಯಕರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

congress
ಯುವ ಕಾಂಗ್ರೆಸ್ ನಾಯಕರು

ಸ್ಯಾಂಟ್ರೋ ರವಿ ಪ್ರಕರಣ: ಮಾಧ್ಯಮಗಳೊಂದಿಗೆ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್

ಬೆಂಗಳೂರು: ಸ್ಯಾಂಟ್ರೋ ರವಿ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಇಲ್ಲವೇ ವಿಶೇಷ ತನಿಖಾ ತಂಡಕ್ಕೆ ವಹಿಸಬೇಕು ಎಂದು ಯುವ ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದಾರೆ. ರಾಜಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ನೇತೃತ್ವದ ಕಾಂಗ್ರೆಸ್ ನಿಯೋಗವು ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತು.

ರಾಜ್ಯಪಾಲರಿಗೆ ಸಲ್ಲಿಸಿದ ಮನವಿ ಪತ್ರದಲ್ಲೇನಿದೆ?: ಭ್ರಷ್ಟಾಚಾರ, ಪೊಲೀಸ್ ಅಧಿಕಾರಿಗಳ ವರ್ಗಾವಣೆ, ಅಕ್ರಮ ಹಣ ವಹಿವಾಟು, ಅನೈತಿಕ ಚಟುವಟಿಕೆ, ಅತ್ಯಾಚಾರ, ವೇಶ್ಯವಾಟಿಕೆ ದಂಧೆ ಹಾಗೂ ಸರ್ಕಾರದ ವಸತಿ ಗೃಹಗಳು ಮತ್ತು ರಾಜ್ಯದ ಪ್ರತಿಷ್ಠಿತ ಕುಮಾರಕೃಪ ಅತಿಥಿ ಗೃಹವನ್ನು ದುರ್ಬಳಕೆ ಮಾಡಿಕೊಂಡಿರುವ ಮಂಜುನಾಥ್.ಕೆ.ಎಸ್ ಅಲಿಯಾಸ್ ಸ್ಯಾಂಟ್ರೋ ರವಿ ಎಂಬ ಆರೋಪಿಯನ್ನು ಬಂಧಿಸಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಈ ಎಲ್ಲಾ ಪ್ರಕರಣಗಳನ್ನು ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಿಂದ ಅಥವಾ ವಿಶೇಷ ತನಿಖಾ ತಂಡ ರಚಿಸಿ ತನಿಖೆಗೆ ವಹಿಸಬೇಕೆಂದು ಕೋರಿದೆ. ಈ ಸಂಬಂಧ ನಿಯೋಗ ಮನವಿ ಪತ್ರವನ್ನು ಸಹ ರಾಜ್ಯಪಾಲರಿಗೆ ಸಲ್ಲಿಸಿತು.

ಕಾಂಗ್ರೆಸ್​ ಸಮಿತಿ ಮನವಿ ಪತ್ರ

1. ಕರ್ನಾಟಕ ರಾಜ್ಯ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳು, ಗೃಹ ಮಂತ್ರಿಗಳು ಹಾಗೂ ಅನೇಕ ಸಚಿವರೊಂದಿಗೆ ಮಂಜುನಾಥ್.ಕೆ.ಎಸ್.ಅಲಿಯಾಸ್ ಸ್ಯಾಂಟ್ರೋರವಿ ಸಂರ್ಪಕ ಹೊಂದಿದ್ದು, ಈತನಿಂದ ದೌರ್ಜನ್ಯಕ್ಕೆ ಒಳಗಾಗಿರುವ ಮಹಿಳೆ ಪೊಲೀಸರಿಗೆ ದೂರು ನೀಡಿದರೂ ಆಕೆಗೆ ಇದುವರೆಗೂ ನ್ಯಾಯ ಸಿಗದ ಕಾರಣ ತನಗೆ ಆದ ನೋವನ್ನು ಮಾಧ್ಯಮಗಳ ಮೂಲಕ ಬಹಿರಂಗಪಡಿಸಿದ್ದಾರೆ. ಹೀಗಾಗಿ, ಸಂತ್ರಸ್ತ ಮಹಿಳೆಗೆ ನ್ಯಾಯ ಒದಗಿಸಿಕೊಡಬೇಕೆಂದು ವಿನಂತಿಸುತ್ತೇವೆ.

2. ಸರ್ಕಾರದ ಮಂತ್ರಿಗಳ ಹಾಗೂ ಉನ್ನತ ಪೊಲೀಸ್ ಅಧಿಕಾರಿಗಳ ಜೊತೆ ನನಗೆ ನೇರ ಸಂಪರ್ಕವಿದೆ. ಪೊಲೀಸ್ ಇಲಾಖೆಯ ವರ್ಗಾವಣೆಯಲ್ಲಿ ನಾನು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದು ಪೊಲೀಸ್ ಅಧಿಕಾರಿಯೊಂದಿಗೆ ದೂರವಾಣಿಯಲ್ಲಿ ಸ್ಯಾಂಟ್ರೋ ರವಿ ಸಂಭಾಷಣೆ ನಡೆಸಿರುವುದು ಈಗಾಗಲೇ ರಾಜ್ಯದ ಮಾಧ್ಯಮಗಳಲ್ಲಿ ಬಹಿರಂಗವಾಗಿ ಪ್ರಕಟವಾಗಿದೆ.

3. ಮುಖ್ಯಮಂತ್ರಿಗಳ ಗೃಹ ಕಚೇರಿಯ ಬಳಿ ಇರುವ ಕುಮಾರಕೃಪ ಅತಿಥಿ ಗೃಹದ ಅಧಿಕಾರಿಗಳೊಂದಿಗೆ ಈತ ಸಂಪರ್ಕವನ್ನಿಟ್ಟುಕೊಂಡು ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸಿರುತ್ತಾನೆ. ಇದನ್ನು ಸ್ವತಃ ಆತನೇ ಪೊಲೀಸ್‌ ಅಧಿಕಾರಿಗಳೊಂದಿಗೆ ನಡೆಸಿದ ಸಂಭಾಷಣೆಯಲ್ಲಿ ಬಹಿರಂಗ ಪಡಿಸಿದ್ದಾನೆ.

ಇದನ್ನೂ ಓದಿ:ಸ್ಯಾಂಟ್ರೋ ರವಿ ಪ್ರಕರಣ.. ನನ್ನ ರೀತಿಯಲ್ಲೇ ಎಷ್ಟೋ ಹುಡುಗಿಯರ ಜೀವನ ಹಾಳು ಮಾಡಿದ್ದಾನೆ: ದೂರುದಾರೆ ಆರೋಪ

4. ಈತನ ವಿರುದ್ಧ 21-01-2022 ರಲ್ಲಿ ಕೆಂಗೇರಿ ಗೇಟ್' ಉಪವಿಭಾಗದ ಸಹಾಯಕ ಪೊಲೀಸ್‌ ಆಯುಕ್ತರಿಗೆ ದೂರುದಾರರು ದೂರು ನೀಡಿದ್ದಾರೆ.

5. ದೂರಿನ ಬಗ್ಗೆ ಸ್ಪಷ್ಟನೆ ನೀಡಿರುವ ಮಂಜುನಾಥ್.ಕೆ.ಎಸ್.ರವಿ ಅಲಿಯಾಸ್ ಸ್ಯಾಂಟ್ರೋ ರವಿ, ನಾನು ಸುಮಾರು 3-4 ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಕಾರ್ಯಕರ್ತನಾಗಿ ಕೆಲಸ ಮಾಡಿಕೊಂಡಿರುತ್ತೇನೆ, ನನಗೆ ಬಿಜೆಪಿ ಪಕ್ಷದ ಸಂಸದರು, ಶಾಸಕರುಗಳು ಪರಿಚಯವಿದೆ ಎಂದು ತಿಳಿಸಿರುತ್ತಾನೆ.

6. ಸ್ಯಾಂಟ್ರೋ ರವಿ ಇಂದ ಕಿರುಕುಳಕ್ಕೊಳಗಾದ ಸಂತ್ರಸ್ತ ಮಹಿಳೆಗೆ ಪೊಲೀಸ್ ಇಲಾಖೆಯಿಂದ ಅನ್ಯಾಯವಾಗಿರುವ ಬಗ್ಗೆ ಈಗಾಗಲೇ ತನಿಖೆ ನಡೆಸಿ ಪೊಲೀಸ್ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಇದನ್ನೂ ಓದಿ:ಸ್ಯಾಂಟ್ರೋ ರವಿ ಬಂಧನಕ್ಕೆ ನಾಲ್ಕು ತಂಡ ರಚನೆ: ಎಡಿಜಿಪಿ ಅಲೋಕ್ ಕುಮಾರ್

7. ತನ್ನ ಮೊಬೈಲ್‌ನಿಂದಲೇ ಹಣದ ಮಾಹಿತಿಯನ್ನು ಭಾವಚಿತ್ರದೊಂದಿಗೆ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಾಕುವ ಮೂಲಕ ನಾನು ಅತ್ಯಂತ ಬಲಿಷ್ಠ ಎಂಬುದನ್ನು ತೋರಿಸಲು ಹಾಗೂ ಸರ್ಕಾರವೇ ನನ್ನ ಜೊತೆ ಇದೆ ಎಂಬುವುದಾಗಿ ಬಿಂಬಿಸಿಕೊಳ್ಳುತ್ತಿದ್ದಾನೆ.

8. ಮುಖ್ಯಮಂತ್ರಿಗಳು ಹಾಗೂ ಗೃಹ ಮಂತ್ರಿಗಳು ನನಗೆ ನೇರ ಸಂಪರ್ಕದಲ್ಲಿದ್ದಾರೆ. ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸುವುದಾಗಿ ಮಾಡಿಸಿದ್ದೇನೆಂದು ದೂರವಾಣಿಯಲ್ಲಿ ಸ್ಪಷ್ಟಪಡಿಸಿರುತ್ತಾನೆ. ಹಾಗೂ ಆತನು ಅಕ್ರಮ ಚಟುವಟಿಕೆಗಳಿಂದ ಕೋಟ್ಯಂತರ ರೂಪಾಯಿ ಹಣ ಪಡೆದಿರುವುದು ಹಾಗೂ ಸಂಬಂಧಪಟ್ಟ ಸಚಿವರಿಗೆ ಹಣ ನೀಡಿರುವ ಬಗ್ಗೆ ತನಿಖೆ ನಡೆಸಲು ಅವನ ಬಂಧನ ಅತಿಮುಖ್ಯವಾಗಿದೆ. ಸಂತ್ರಸ್ತ ಮಹಿಳೆಗೆ ನ್ಯಾಯ ಒದಗಿಸಿಕೊಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಅವನ ಅಕ್ರಮ ಚಟುವಟಿಕೆಗಳ ಬಗ್ಗೆ ಉಚ್ಛನ್ಯಾಯಾಲಯದ ನ್ಯಾಯಮೂರ್ತಿಗಳಿಂದ ಅಥವಾ ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸಿದರೆ ಇಡಿ, ತೆರಿಗೆ ಇಲಾಖೆ ಇವನ ವಿರುದ್ಧ ಪ್ರಕರಣ ದಾಖಲಿಸಲು ಅನುವಾಗುತ್ತದೆ. ಈ ಎಲ್ಲಾ ವಿಷಯವನ್ನು ಗಮನಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕೆಂದು ನಿಯೋಗ ವಿನಂತಿಸಿಕೊಂಡಿದೆ.

ಇದನ್ನೂ ಓದಿ:ಸ್ಯಾಂಟ್ರೋ ರವಿ, ಸೈಕಲ್ ರವಿ ಬಿಜೆಪಿ ಸರ್ಕಾರದ ಮುತ್ತು ರತ್ನಗಳಿದ್ದಂತೆ: ಡಿಕೆ ಶಿವಕುಮಾರ್

Last Updated :Jan 12, 2023, 12:40 PM IST

ABOUT THE AUTHOR

...view details