ಕರ್ನಾಟಕ

karnataka

ಪೇ ಸಿಎಂ ಪೋಸ್ಟರ್​​.. ಕಾಂಗ್ರೆಸ್, ಬಿಜೆಪಿಯಿಂದ ಪರ-ವಿರೋಧದ ಅಭಿಪ್ರಾಯ ವ್ಯಕ್ತ

By

Published : Sep 21, 2022, 3:37 PM IST

ಪೇ ಸಿಎಂ ಪೋಸ್ಟರ್

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರವಿರುವ ಪೇ ಸಿಎಂ ಶೀರ್ಷಿಕೆಯ ಪೋಸ್ಟರ್‌ಗಳನ್ನು ಬೆಂಗಳೂರು ನಗರದಾದ್ಯಂತ ಅಂಟಿಸಲಾಗಿದೆ. ಇದಕ್ಕೆ ಕಾಂಗ್ರೆಸ್​ ಮತ್ತು ಬಿಜೆಪಿಯಿಂದ ಪರ ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಬೆಂಗಳೂರು: ಕಾಂಗ್ರೆಸ್ ಪಕ್ಷ ಹೊಸದಾಗಿ ಆರಂಭಿಸಿರುವ ಪೇ ಸಿಎಂ ಅಭಿಯಾನಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಪರ-ವಿರೋಧದ ಹೇಳಿಕೆಗಳು ವ್ಯಕ್ತವಾಗಿವೆ. ಬೆಂಗಳೂರಿನ ವಿಧಾನಸೌಧದ ಕೆಂಗಲ್ ಗೇಟ್​ನಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಹಾಗೂ ಬಿಜೆಪಿ ಜನಪ್ರತಿನಿಧಿಗಳು, ಸರ್ಕಾರ ಮತ್ತು ಸಿಎಂ ಪರ- ವಿರೋಧವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಧಾನಪರಿಷತ್ ಸದಸ್ಯ ರವಿಕುಮಾರ್ ಮಾತನಾಡಿ, ಮೊಬೈಲ್​ನಲ್ಲಿ ಕಾಂಗ್ರೆಸ್​ನವರು ಪೇ ಸಿಎಂ ಅಂತ ಅಭಿಯಾನ ಮಾಡ್ತಿದಾರೆ. ಕಾಂಗ್ರೆಸ್​ನವರು ಭಾರತ್ ಜೋಡೋ ಯಾತ್ರೆ ಮೊದಲು ಪೇ ಮಾಡಿ. ಸಿದ್ದರಾಮಯ್ಯ ಕಾರು ಹಾಗೂ ವಾಚುಗಳಿಗೆ ಪೇ ಮಾಡಿ. ಅಲ್ಲದೇ ರಮೇಶ್ ಕುಮಾರ್ ಹೇಳಿದ್ದರಲ್ಲ ತಲೆಮಾರು ಕುಳಿತು ತಿನ್ನುವಷ್ಟು ಮಾಡಿದ್ದೇವೆ ಅಂತಾ ಅದಕ್ಕೆ ಪೇ ಮಾಡಿ. ಕಾಂಗ್ರೆಸ್ ಇರುವವರೆಗೆ ಭ್ರಷ್ಟಾಚಾರ ನಡೆಯಲಿದೆ, ಕಾಂಗ್ರೆಸ್ ಹೋಗುವವರೆಗೆ ಭ್ರಷ್ಟಾಚಾರ ಹೋಗಲ್ಲ ಎಂದು ಕಿಡಿಕಾರಿದರು.

ಕಾಂಗ್ರೆಸ್​ ಹತಾಶ:ಸಚಿವ ಬಿ ಸಿ ನಾಗೇಶ್ ಮಾತನಾಡಿ, ತುಂಬಾ ವರ್ಷಗಳ ಕಾಲ ಅಧಿಕಾರ ಅನುಭವಿಸಿದ ಅಭ್ಯಾಸ ಇದ್ದು, ಕಳೆದ ಎಂಟು ವರ್ಷಗಳಲ್ಲಿ ಏನು ಸಿಗದೆ ಕಾಂಗ್ರೆಸ್​ನವರು ಹತಾಶರಾಗಿದ್ದಾರೆ. ಕಾಂಗ್ರೆಸ್​ಗೆ ಹಗರಣದ ಇತಿಹಾಸ ಇರುವುದು. ಈ ರೀತಿಯ ಕೆಳಮಟ್ಟದ ಯೋಚನೆ ಕಾಂಗ್ರೆಸ್​ಗೆ ಒಳ್ಳೆಯದಲ್ಲ. ಬಿಜೆಪಿಯವರನ್ನು ಬಟ್ಟೆ ಬಿಚ್ಚಿಸಿ ನಿಲ್ಲಿಸೋಣ ಎಂದು ಅಂದುಕೊಂಡಿರಬಹುದು. ಆದರೆ ಅದು ಆಗಲ್ಲ. ಶಿಕ್ಷಕರ ನೇಮಕಾತಿ ಕಾಂಗ್ರೆಸ್ ಕಾಲದಲ್ಲಿ ಆಗಿದೆ ಎಂದು ತಿರುಗೇಟು ನೀಡಿದರು.

ಜನರ ಮುಂದೆ ಕಾಂಗ್ರೆಸ್ ಬೆತ್ತಲು: ಕುಡಚಿ ಶಾಸಕ ಪಿ ರಾಜೀವ್ ಮಾತನಾಡಿ, 75 ವರ್ಷದ ಸ್ವಾತಂತ್ರ್ಯದಲ್ಲಿ 60 ವರ್ಷ ಆಳ್ವಿಕೆ ಮಾಡಿದ್ದು, ಕಾಂಗ್ರೆಸ್​ ಮಾತ್ರ. ಕೇವಲ 10 ರಿಂದ 15 ವರ್ಷ ಬೇರೆ ಪಕ್ಷ ಆಡಳಿತಕ್ಕೆ ಬಂದ್ರೆ ಕಾಂಗ್ರೆಸ್‌ನವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಈ ರೀತಿ ಪೇ ಸಿಎಂ ಎಂದು ಅಂಟಿಸಿದರೆ ಜನರಿಗೆ ಯಾವ ಸಂದೇಶ ಕೊಡ್ತಿದ್ದೀರಾ?. ಇದು ಕಾಂಗ್ರೆಸ್‌ನ ಅಧಃಪತನವಾಗ್ತಿರುವುದಕ್ಕೆ ಉದಾಹರಣೆ. ಈ ರೀತಿ ಮಾಡಿ ರಾಜ್ಯದ ಜನರ ಮುಂದೆ ಕಾಂಗ್ರೆಸ್ ಬೆತ್ತಲಾಗಿದೆ ಎಂದರು.

ರಾಷ್ಟ್ರದಲ್ಲಿಯೇ ಅತ್ಯಂತ ಭ್ರಷ್ಟ ಸರ್ಕಾರ: ಪೇ-ಸಿಎಂ ಅಭಿಯಾನ ಕುರಿತು ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ಇದು ಜನ ಪ್ರೇರಿತ ಅಭಿಯಾನವಾಗಿದೆ. ಇದು 40% ಕಮಿಷನ್ ಸರ್ಕಾರ ಅನ್ನುವುದು ತಿಳಿದಿದೆ. ರಾಷ್ಟ್ರದಲ್ಲಿ ಅತ್ಯಂತ ಭ್ರಷ್ಟ ಸರ್ಕಾರ ಇದು. ಬೇರೆ ರಾಜ್ಯಗಳಿಗೆ ತೆರಳಿದಾಗಲೂ 40% ಸರ್ಕಾರ ಅಂತ ಸ್ವಾಗತಿಸುತ್ತಿದ್ದಾರೆ. ಇವರ ಭ್ರಷ್ಟಾಚಾರ ಬಿಟ್ಟು ಜನಪರ ಆಡಳಿತ ನೀಡುವ ಬದಲು ಕಾಂಗ್ರೆಸ್ ವಿರುದ್ಧ ಆರೋಪ ಸರಿಯಲ್ಲ. ಇದು‌ ಸಾಮಾನ್ಯ ಜನ ಮಾಡುತ್ತಿರುವ ಅಭಿಯಾನ, ಕಾಂಗ್ರೆಸ್ ಜನರ ಪರವಾಗಿ ಇರಲಿದೆ. ಉತ್ತಮ ಆಡಳಿತ ನೀಡಲು ಬಿಜೆಪಿ ಯವರು ಮುಂದಾಗಲಿ, ಭಾವನಾತ್ಮಕ ವಿಚಾರ ಮುಂದಿಟ್ಟು, ಜನರನ್ನು ಮರುಳು ಮಾಡುವುದು ಬೇಡ ಎಂದು ಹೇಳಿದರು.

ಸಚಿವ ಬಿಸಿ ಪಾಟೀಲ್ ಮಾತನಾಡಿ, ಹಿಂದೆ ಎಸಿಬಿ ಸೃಷ್ಟಿಸಿ ಲೋಕಾಯುಕ್ತ ಸ್ಥಗಿತಗೊಳಿಸಲಾಗಿತ್ತು. ಇದೀಗ ಪೇ ಸಿಎಂ ಪ್ರಚಾರ ಮಾಡಿ ತಾವು ಸರಿ, ಸಿಎಂ ತಪ್ಪು ಎಂದು ಹೇಳಲು ಹೊರಟಿದ್ದಾರೆ. ಕಾಂಗ್ರೆಸ್​ನವರ ಕಾರ್ಯಕ್ಕೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಇದನ್ನೂ ಓದಿ: ಬೆಂಗಳೂರಿನ ಗೋಡೆಗಳ ಮೇಲೆ 'PAYCM' ಪೋಸ್ಟರ್​.. ದುಷ್ಕರ್ಮಿಗಳ ವಿರುದ್ಧ ಎಫ್ಐಆರ್

ರಾಜ್ಯದಲ್ಲಿ ನಿರಂತರ ಭ್ರಷ್ಟಾಚಾರ: ಮಾಜಿ ಸಚಿವ ಪ್ರಿಯಾಂಕ್​ ಖರ್ಗೆ ಮಾತನಾಡಿ, ರಾಜ್ಯದಲ್ಲಿ ನಿರಂತರ ಭ್ರಷ್ಟಾಚಾರ ನಡೆಯುತ್ತಿದೆ ಎಂದು ನಾವು ಹೇಳುತ್ತಲೇ ಬಂದಿದ್ದೇವೆ. ಗುತ್ತಿಗೆದಾರ ಸಂಘ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಸಹ ಆರೋಪ ಮಾಡಿವೆ. ಈಗಲೂ ಸರ್ಕಾರ ಏನು ನಡದೇ ಇಲ್ಲ ಎಂಬ ರೀತಿ ಇದೆ. ಸುಗಮವಾಗಿ ಸರ್ಕಾರ ನಡೆಯುತ್ತಿದೆ ಎನ್ನುತ್ತಿದೆ. ಸಿಎಂ ಹುದ್ದೆ ಮಾರಾಟಕ್ಕಿದೆ ಎಂದು ನಾವು ಹೇಳಿದಾಗ ಬಿಜೆಪಿ ಅವರು ಯಾರು ಮಾತನಾಡಲಿಲ್ಲ. ಬಿಜೆಪಿ ಸರ್ಕಾರದ ಮೇಲೆ ನಾವು ಮಾಡಿರುವ ಯಾವ ಹಗರಣವನ್ನು ಅಲ್ಲಗಳೆಯುವ ಕಾರ್ಯವನ್ನು ಸರ್ಕಾರ ಮಾಡುತ್ತಿಲ್ಲ ಎಂದು ಕಿಡಿಕಾರಿದರು.

ಈ ಕಾಂಗ್ರೆಸ್ ಅಭಿಯಾನ ಕುರಿತು ಪ್ರತಿಕ್ರಿಯೆ ನೀಡಲು ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವರು ನಿರಾಕರಿಸಿದ್ದಾರೆ.

ABOUT THE AUTHOR

...view details