ಕರ್ನಾಟಕ

karnataka

ಜಾತಿ ನಿಗಮ-ಮಂಡಳಿ ಸ್ಥಾಪನೆ ವಿವಾದ: ಮಾ. 31ಕ್ಕೆ ವಿಚಾರಣೆ ನಿಗದಿ ಮಾಡಿದ ಹೈಕೋರ್ಟ್

By

Published : Mar 17, 2021, 8:58 PM IST

ವೀರಶೈವ-ಲಿಂಗಾಯತ ಅಭಿವೃದ್ಧಿ ಮಂಡಳಿ, ಮರಾಠ ಅಭಿವೃದ್ಧಿ ನಿಗಮ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ, ಆರ್ಯವೈಶ್ಯ ಅಭಿವೃದ್ಧಿ ನಿಗಮ ಇನ್ನಿತರ ನಿಗಮ-ಮಂಡಳಿಗಳ ಸ್ಥಾಪನೆಗೆ ಸರ್ಕಾರ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಇಂದು ನಡೆಸಿತು. ಈ ವಿಷಯ ತುಂಬಾ ಸೂಕ್ಷ್ಮವಾಗಿದೆ. ಹಾಗಾಗಿ ಕೂಲಂಕಷವಾಗಿ ವಿಚಾರಣೆ ನಡೆಸಬೇಕೆಂದು ಹೇಳಿ ಮಾ. 31ಕ್ಕೆ ವಿಚಾರಣೆ ಮುಂದೂಡಿತು.

ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ರಾಜ್ಯದಲ್ಲಿ ನಿರ್ದಿಷ್ಟ ಜಾತಿ ಹಾಗೂ ಸಮುದಾಯಗಳ ಆಧಾರದಲ್ಲಿ ನಿಗಮ-ಮಂಡಳಿಗಳನ್ನು ಸ್ಥಾಪಿಸಿರುವ ಸರ್ಕಾರದ ಕ್ರಮ ಪ್ರಶ್ನಿಸಿರುವ ಅರ್ಜಿಗಳಲ್ಲಿ ಸೂಕ್ಷ್ಮ ವಿಚಾರಗಳಿದ್ದು, ಕೂಲಂಕಷವಾಗಿ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಹೈಕೋರ್ಟ್ ಹೇಳಿದೆ. ಅಲ್ಲದೇ ವಿಚಾರಣೆಯನ್ನು ಮಾ.31ಕ್ಕೆ ನಿಗದಿಪಡಿಸಿದೆ.

ವೀರಶೈವ-ಲಿಂಗಾಯತ ಅಭಿವೃದ್ಧಿ ಮಂಡಳಿ, ಮರಾಠ ಅಭಿವೃದ್ಧಿ ನಿಗಮ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ, ಆರ್ಯವೈಶ್ಯ ಅಭಿವೃದ್ಧಿ ನಿಗಮ ಇನ್ನಿತರ ನಿಗಮ-ಮಂಡಳಿಗಳ ಸ್ಥಾಪನೆಗೆ ಸರ್ಕಾರ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು. ವಕೀಲ ಎಸ್.ಬಸವರಾಜು ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಸರ್ಕಾರದ ಪರ ವಕೀಲರು ಎಲ್ಲ ಅರ್ಜಿಗಳಿಗೂ ಅನ್ವಯಿಸುವಂತೆ 128 ಪುಟಗಳ ಆಕ್ಷೇಪಣೆ ಸಲ್ಲಿಸಿ, ಸರ್ಕಾರದ ಕ್ರಮ ಸಮರ್ಥಿಸಿಕೊಂಡರು. ಬಳಿಕ ಅರ್ಜಿದಾರರ ಪರ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ವಾದಿಸಿ, ಚುನಾವಣೆಗಳಲ್ಲಿ ಮತ ಗಳಿಸುವ ಉದ್ದೇಶದಿಂದಲೇ ಜಾತಿ ಆಧಾರಿತ ನಿಗಮ ಮಂಡಳಿಗಳನ್ನು ಸ್ಥಾಪಿಸಲಾಗಿದೆ. ಜಾತಿ ಲೆಕ್ಕಾಚಾರದಲ್ಲಿ ನಿಗಮ-ಮಂಡಳಿ ಸ್ಥಾಪಿಸಿ, ಅವುಗಳಿಗೆ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿಯನ್ನು ಜಾತಿ ಲೆಕ್ಕದಲ್ಲೇ ನೇಮಕ ಮಾಡಲು ಮುಂದಾಗಿದೆ. ಈ ಮೂಲಕ ಸರ್ಕಾರವೇ ಜಾತಿ ಪದ್ಧತಿ ಆಚರಣೆಗೆ ಮುಂದಾಗಿರುವುದು ಸಂವಿಧಾನದ ಜಾತ್ಯತೀತ ಕಲ್ಪನೆಗೆ ವಿರುದ್ಧವಾದುದು ಎಂದು ವಾದಿಸಿದರು.

ಓದಿ:ಸಿಗಂದೂರು ದೇವಸ್ಥಾನದಿಂದ ಅರಣ್ಯ ಒತ್ತುವರಿ: ಸ್ವಯಂ ಪ್ರೇರಿತವಾಗಿ ಬಿಟ್ಟುಕೊಡುವ ಬಗ್ಗೆ ನಿಲುವು ಕೇಳಿದ ಹೈಕೋರ್ಟ್

ಅಲ್ಲದೇ, ಸದ್ಯದಲ್ಲೇ ಚುನಾವಣೆ ಇರುವ ವಿಚಾರವನ್ನು ಪರಿಗಣಿಸಿ ಅರ್ಜಿಯನ್ನು ಶೀಘ್ರವಾಗಿ ವಿಚಾರಣೆಗೆ ತೆಗೆದುಕೊಳ್ಳಬೇಕು. ಅರ್ಜಿಯಲ್ಲಿ ಎತ್ತಿರುವ ಆಕ್ಷೇಪಣೆಗಳ ಬಗ್ಗೆ ಮೆರಿಟ್ ಮೇಲೆ ವಿಚಾರಣೆ ನಡೆಸಿದರೂ ಸರಿ ಅಥವಾ ಅಂತಿಮ ವಿಚಾರಣೆಗೆ ಪರಿಗಣಿಸಿದರೂ ಸರಿ, ತಮ್ಮ ವಾದ ಮಂಡಿಸಲು ಸಿದ್ಧರಿರುವುದಾಗಿ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಈ ವಿಚಾರ ತುಂಬಾ ಸೂಕ್ಷ್ಮವಾಗಿದ್ದು, ಕೂಲಂಕಷವಾಗಿ ವಿಚಾರಣೆ ನಡೆಸುವ ಅಗತ್ಯವಿದೆ. ಆದ್ದರಿಂದ ತಕ್ಷಣವೇ ಅರ್ಜಿ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ತಿಳಿಸಿ, ಮಾ. 31ಕ್ಕೆ ಅರ್ಜಿ ವಿಚಾರಣೆ ನಿಗದಿಪಡಿಸಿತು. ಇದೇ ವೇಳೆ ನಿಗಮ-ಮಂಡಳಿಗಳ ರಚನೆ ವಿಚಾರದಲ್ಲಿ ಸರ್ಕಾರ ಕೈಗೊಳ್ಳುವ ಕ್ರಮಗಳು ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತವೆ ಎಂದು ಡಿ. 14ರಂದು ನೀಡಿದ್ದ ಮಧ್ಯಂತರ ಆದೇಶವನ್ನು ಪೀಠ ವಿಸ್ತರಿಸಿತು.

ABOUT THE AUTHOR

...view details