ಕರ್ನಾಟಕ

karnataka

ರಾಜ್ಯದಲ್ಲಿ ಈ ವರ್ಷ 200 ಸ್ಟಾರ್ಟ್ ಅಪ್​ಗಳಿಗೆ ತಲಾ ರೂ. 50 ಲಕ್ಷದವರೆಗೆ ಮೂಲನಿಧಿ : ಅಶ್ವತ್ಥ್ ​ನಾರಾಯಣ

By

Published : Jan 16, 2022, 4:26 PM IST

ರಾಜ್ಯದಲ್ಲಿ ಎಲೆಕ್ಟ್ರಾನಿಕ್ ಉದ್ದಿಮೆಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಮುಂದಿನ ಐದು ವರ್ಷಗಳಲ್ಲಿ ಇಎಸ್​ಡಿಎಂ ನೀತಿಯಡಿ 5 ಸಾವಿರ ಕೋಟಿ ರೂ. ಸಬ್ಸಿಡಿ ಕೊಡಲಾಗುವುದು. ಇದರಲ್ಲಿ ಮೊದಲನೇ ವರ್ಷದಲ್ಲೇ 2 ಸಾವಿರ ಕೋಟಿ ರೂ. ನೆರವು ಒದಗಿಸಲಾಗಿದೆ ಎಂದು ತಿಳಿಸಿದರು..

ashwath-narayan
ಸಚಿವ ಡಾ. ಸಿ. ಎನ್ ಅಶ್ವತ್ಥ್​ನಾರಾಯಣ

ಬೆಂಗಳೂರು :ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸರ್ಕಾರ ನವೋದ್ಯಮಗಳಿಗೆ ಮತ್ತಷ್ಟು ಉತ್ತೇಜನ ನೀಡ್ತಿದೆ. ಹೆಚ್ಚುವರಿ 75 ಸೇರಿ ಈ ವರ್ಷ ರಾಜ್ಯದಲ್ಲಿ ಒಟ್ಟು 200 ನವೋದ್ಯಮಗಳಿಗೆ ಗರಿಷ್ಠ ತಲಾ 50 ಲಕ್ಷ ರೂ.ಗಳವರೆಗೆ ಮೂಲನಿಧಿ (ಸೀಡ್ ಫಂಡ್) ಕೊಡಲಾಗುವುದು ಎಂದು ಐಟಿ, ಬಿಟಿ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಸಿ. ಎನ್ ಅಶ್ವತ್ಥ್​ ನಾರಾಯಣ ಹೇಳಿದ್ದಾರೆ.

ವಿಧಾನಸೌಧದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ 'ಪ್ರಪ್ರಥಮ ರಾಷ್ಟ್ರೀಯ ನವೋದ್ಯಮ ದಿನ'ದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಈವರೆಗೆ ಸುಮಾರು 500 ಸ್ಟಾರ್ಟ್‌ಅಪ್​ಗಳಿಗೆ ಅನುದಾನ ಕೊಡಲಾಗಿದೆ. ಈ ರೀತಿ ಮೂಲನಿಧಿ ಕೊಡುವ ಉಪಕ್ರಮ ಬೇರಾವ ರಾಜ್ಯದಲ್ಲೂ ಇಲ್ಲ ಎಂದರು.

ಪ್ರಸ್ತುತ ಹಣಕಾಸು ವರ್ಷದಲ್ಲಿ ಈವರೆಗೆ ರಾಜ್ಯದಲ್ಲಿ ಉದ್ದಿಮೆಗಳ ಸ್ಥಾಪನೆಗಾಗಿ 1.60 ಲಕ್ಷ ಕೋಟಿ ರೂ. ವಿದೇಶಿ ಬಂಡವಾಳ ಹರಿದು ಬಂದಿದೆ. ಒಟ್ಟಾರೆ ದೇಶದಲ್ಲಿ ಆಗಿರುವ ಹೂಡಿಕೆಯಲ್ಲಿ ಶೇ.50ಕ್ಕಿಂತ ಹೆಚ್ಚು ಭಾಗ ಕರ್ನಾಟಕದಲ್ಲೇ ಆಗಿದೆ. ದೇಶದಲ್ಲಿ ಒಟ್ಟು 57 ಸಾವಿರ ನವೋದ್ಯಮಗಳಿವೆ.

ಈ ಪೈಕಿ 13 ಸಾವಿರಕ್ಕೂ ಹೆಚ್ಚು ಸ್ಟಾರ್ಟ್‌ಅಪ್​ಗಳು ರಾಜ್ಯದಲ್ಲೇ ನೆಲೆ ಹೊಂದಿವೆ. ರಾಜ್ಯದಲ್ಲಿ ಅನುಷ್ಠಾನಗೊಳಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿಯು ರಾಜ್ಯದ ಈ ಮುಂಚೂಣಿ ಸ್ಥಾನವನ್ನು ಕಾಯ್ದುಕೊಳ್ಳಲು ಪೂರಕವಾಗಿರಲಿದೆ ಎಂದು ವಿವರಿಸಿದರು.

ದೇಶವು ‘ವಿಶ್ವಗುರು’ವಾಗಿ ಹಾಗೂ`ಸೂಪರ್ ಪವರ್’ ಆಗಿ ಹೊರ ಹೊಮ್ಮುವಲ್ಲಿ ನವೋದ್ಯಮಗಳ ಪಾತ್ರ ನಿರ್ಣಾಯಕ ಎಂಬುದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಒತ್ತಿ ಹೇಳಿದ್ದಾರೆ. ಇದನ್ನು ಗಮನದಲ್ಲಿರಿಸಿಕೊಂಡು ರಾಜ್ಯದಲ್ಲಿ ಹಾರ್ಡ್‌ವೇರ್ ವಲಯವನ್ನೂ ದಕ್ಷವಾಗಿ ಬೆಳೆಸಲಾಗುವುದು.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಸ್ಥಾಪಿಸಿರುವ `ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಂಡ್ ರೋಬೋಟಿಕ್ಸ್ ಟ್ರಾನ್ಸ್​ಲೇಷನ್​ ಪಾರ್ಕ್’ (ಆರ್ಟ್ ಪಾರ್ಕ್) ಈ ದಿಸೆಯಲ್ಲಿ ರಾಜ್ಯ ಸರ್ಕಾರದ ಬದ್ಧತೆಗೆ ಒಂದು ಉದಾಹರಣೆಯಷ್ಟೇ ಎಂದು ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ಎಲೆಕ್ಟ್ರಾನಿಕ್ ಉದ್ದಿಮೆಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಮುಂದಿನ ಐದು ವರ್ಷಗಳಲ್ಲಿ ಇಎಸ್​ಡಿಎಂ ನೀತಿಯಡಿ 5 ಸಾವಿರ ಕೋಟಿ ರೂ. ಸಬ್ಸಿಡಿ ಕೊಡಲಾಗುವುದು. ಇದರಲ್ಲಿ ಮೊದಲನೇ ವರ್ಷದಲ್ಲೇ 2 ಸಾವಿರ ಕೋಟಿ ರೂ. ನೆರವು ಒದಗಿಸಲಾಗಿದೆ ಎಂದು ತಿಳಿಸಿದರು.

ರಾಜ್ಯ ಸ್ಟಾರ್ಟ್ಅಪ್​ ವಿಷನ್ ಗ್ರೂಪ್ ಮುಖ್ಯಸ್ಥ ಪ್ರಶಾಂತ್ ಪ್ರಕಾಶ್, ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ. ವಿ ರಮಣ ರೆಡ್ಡಿ, ಐಟಿ ಮತ್ತು ಬಿಟಿ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್ ಇದ್ದರು.

ರಾಜ್ಯದ 14 ನವೋದ್ಯಮಗಳಿಗೆ ಪ್ರಶಸ್ತಿ: ಅಖಿಲ ಭಾರತ ಮಟ್ಟದಲ್ಲಿ ಮೊದಲ ಬಾರಿಗೆ ನಡೆದ`ಸ್ಟಾರ್ಟ್ ಅಪ್ ಇಂಡಿಯಾ ನಾವೀನ್ಯತಾ ಸಪ್ತಾಹ’ದಲ್ಲಿ ವಿವಿಧ ವಲಯಗಳಲ್ಲಿ ರಾಜ್ಯದ 14 ನವೋದ್ಯಮಗಳು ಪ್ರಶಸ್ತಿ ಪುರಸ್ಕಾರಕ್ಕೆ ಪಾತ್ರವಾಗಿವೆ. ರಾಷ್ಟ್ರ ಮಟ್ಟದಲ್ಲಿ 46 ನವೋದ್ಯಮಗಳಿಗೆ ಪ್ರಶಸ್ತಿ ನೀಡಿದ್ದು, ಅವುಗಳಲ್ಲಿ ಸಿಂಹ ಪಾಲು (14) ಕರ್ನಾಟಕದ ಸಂಸ್ಥೆಗಳಿಗೆ ಸಿಕ್ಕಿದೆ ಎಂದು ಸಚಿವರು ಹೇಳಿದರು.

ನಫಾ ಇನ್ನೋವೇಷನ್ಸ್, ಉಂಬೋ ಇಡ್-ಟೆಕ್ (ಫಿನ್ಟೆಕ್), ಥಿಂಕರ್ ಬೆಲ್ ಲ್ಯಾಬ್ಸ್ (ಎಡುಟೆಕ್), ಸಿಂಪ್ಲೋಟೆಲ್ ಟೆಕ್ನಾಲಜೀಸ್ (ಪ್ರವಾಸ ಮತ್ತು ಆತಿಥ್ಯೋದ್ಯಮ), ಬ್ಲಿಂಕಿನ್ ಟೆಕ್ನಾಲಜೀಸ್ (ಆಗ್ಮೆಂಟೆಡ್ ರಿಯಾಲಿಟಿ), ಟ್ಯಾಗ್ ಬಾಕ್ಸ್ ಸೊಲ್ಯೂಷನ್ಸ್ (ಐಒಟಿ), ಶಾಪೋಸ್ ಸರ್ವೀಸಸ್, ಆತ್ರೇಯ ಗ್ಲೋಬಲ್ ಸೊಲ್ಯೂಷನ್ಸ್, ಝೆನ್ ಟ್ರಾನ್ ಲ್ಯಾಬ್ಸ್ ಪ್ರೈ.ಲಿ. (ಕೃಷಿ), ಲೀಡ್ ಸ್ಕ್ವೇರ್ಡ್ (ಗ್ರಾಹಕ ಸಂಬಂಧ), ಲಿಯೂಸಿನ್ ರಿಚ್ ಬಯೋ ಪ್ರೈ.ಲಿ. (ಜೀವವಿಜ್ಞಾನ), ಸ್ಟೆಲ್ ಆಪ್ಸ್ (ಪಶು ಸಂಗೋಪನೆ), 1ಬ್ರಿಡ್ಜ್ (ಲಾಜಿಸ್ಟಿಕ್ಸ್) ಮತ್ತು ಸ್ಟೆರಡಿಯನ್ ಸೆಮಿ (ಸಾರಿಗೆ ನಿರ್ವಹಣೆ)- ಇವು ಪುರಸ್ಕೃತ ಕಂಪನಿಗಳಾಗಿವೆ.

ಓದಿ:ನಾಡೋಜ ಡಾ. ಚೆನ್ನವೀರ ಕಣವಿ ಶೀಘ್ರ ಚೇತರಿಕೆಗೆ ಸಿಎಂ ಬೊಮ್ಮಾಯಿ ಪ್ರಾರ್ಥನೆ

TAGGED:

ABOUT THE AUTHOR

...view details