ಕರ್ನಾಟಕ

karnataka

ರಾಜ್ಯದ ವಿವಿಧೆಡೆ ಸಂಭವಿಸಿದ ರಸ್ತೆ ಅಪಘಾತ: ಒಟ್ಟು ಐವರು ಸಾವು

By

Published : Jul 14, 2023, 11:32 AM IST

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಒಟ್ಟು ಐವರು ಮೃತಪಟ್ಟ ಘಟನೆ ನಡೆದಿದೆ.

Many people died in road accidents
Many people died in road accidents

ಬೆಂಗಳೂರು (ಆನೇಕಲ್​): ಬೆಂಗಳೂರು-ತಮಿಳುನಾಡಿನ ಹೊಸೂರು ರಾಷ್ಟ್ರೀಯ ಹೆದ್ದಾರಿಯ ಅತ್ತಿಬೆಲೆ ಕೈಗಾರಿಕಾ ಪ್ರದೇಶದ ಬಳಿ ಬೈಕ್ ಸವಾರರಿಗೆ ವೇಗವಾಗಿ ಬಂದ ಲಾರಿಯೊಂದು ಹಿಂದಿಬಿಂದ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶುಕ್ರವಾರ ಬೆಳಗ್ಗೆ ಸಂಭವಿಸಿದೆ. ಮಂಗಮ್ಮನಪಾಳ್ಯ ನಿವಾಸಿ ಮಂಜಪ್ಪ(32) ಮೃತ ವ್ಯಕ್ತಿ. ಮತ್ತೋರ್ವನ ಗುರುತು ಪತ್ತೆಯಾಗಿಲ್ಲ.

ಮುಂದೆ ತೆರಳುತ್ತಿದ್ದ ಬೈಕ್ ಸವಾರರಿಗೆ ಹಿಂದಿನಿಂದ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೆದ್ದಾರಿಯಲ್ಲಿ ಇಬ್ಬರು ಒದ್ದಾಡುತ್ತಿದ್ದ ದೃಶ್ಯ ಕಂಡು ಲಾರಿ ಚಾಲಕ ಲಾರಿಯೊಂದಿಗೆ ಶರವೇಗದಲ್ಲಿ ಪರಾರಿಯಾಗಿದ್ದಾನೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಅತ್ತಿಬೆಲೆ ಪೊಲೀಸರು ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಹತ್ತಿರದ ಖಾಸಗಿ ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ. ಘಟನೆಯಿಂದ ಕೆಲಕಾಲ ಸ್ಥಗಿತಗೊಂಡಿದ್ದ ಹೆದ್ದಾರಿ ಸಂಚಾರವನ್ನು ಸುಗಮಗೊಳಿಸಿ ಪರಾರಿಯಾದ ಲಾರಿ ಚಾಲಕನಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

ಬೈಕ್ ಸವಾರ ಸಾವು:ಮಂಡ್ಯ ತಾಲೂಕಿನ ಹೊಳಲು ಗ್ರಾಮದ ಸಮೀಪ ಟ್ರ್ಯಾಕ್ಟರ್ ಹಾಗೂ ಬೈಕ್ ನಡುವೆ ಸಂಭವಿಸಿದ ಮತ್ತೊಂದು ಅಪಘಾತದಲ್ಲಿ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಮಂಡ್ಯ ತಾಲೂಕಿನ ಶಿವಳ್ಳಿ ಗ್ರಾಮದ ಬಸವರಾಜು (40) ಮೃತ ವ್ಯಕ್ತಿ. ಈತ ಮಂಡ್ಯದಲ್ಲಿ ಮೈಷುಗರ್ ಕಾರ್ಖಾನೆಯಲ್ಲಿ ಹೋಂ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದ. ತನ್ನ ಕೆಲಸ ಮುಗಿಸಿಕೊಂಡು ಮಂಡ್ಯದಿಂದ ಶಿವಳ್ಳಿಗೆ ಬೈಕಿನಲ್ಲಿ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಎದುರಿನಿಂದ ಕಬ್ಬು ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್​ ಡಿಕ್ಕಿ ಹೊಡೆದಿದೆ. ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಪಘಾತದಿಂದ ದೇಹ ಛಿದ್ರಗೊಂಡಿತ್ತು. ಮಂಡ್ಯ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಟಿಪ್ಪರ್​- ಬೈಕ್ ಮಧ್ಯೆ ಭೀಕರ ರಸ್ತೆ:ಇಂತಹದ್ದೇ ಮತ್ತೊಂದು ಘಟನೆ ಬೀದರ್​ ಜಿಲ್ಲೆಯಲ್ಲಿ ಸಂಭವಿಸಿದೆ. ಟಿಪ್ಪರ್​ ಹಾಗೂ ಬೈಕ್ ಮಧ್ಯೆ ಭೀಕರ ರಸ್ತೆ ಅಫಘಾತ ಸಂಭವಿಸಿದ್ದು ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ಕನಕಟ್ಟಾ ಹಾಗೂ ಮಾಣಿಕನಗರ ಮಧ್ಯೆ ರಸ್ತೆಯಲ್ಲಿ ಗುರುವಾರ ಘಟನೆ ಸಂಭವಿಸಿದೆ. ಬಸವಕಲ್ಯಾಣ ತಾಲೂಕಿನ ಇಸ್ಲಾಂಪೂರ ಗ್ರಾಮದ ರೋಹಿತ ಮಾಣಿಕ(23) ಮೃತ ದುರ್ದೈವಿ. ಅಪಘಾತದ ರಭಸಕ್ಕೆ ಬೈಕ್​ಗೆ ಬೆಂಕಿ ಹೊತ್ತಿಕೊಂಡಿದ್ದು ಘಟನೆಯಲ್ಲಿ ಶ್ರೀಕಾಂತ ಮತ್ತು ಶಿವಕುಮಾರ ಎಂಬುವವರು ತೀವ್ರ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಲಾಗಿದೆ. ಕನಕಟ್ಟಾ ಕಡೆಯಿಂದ ಹುಮನಾಬಾದ ಕಡೆಗೆ ಮೂವರು ಬೈಕ್​ನಲ್ಲಿ ಬರುತ್ತಿದ್ದಾಗ ಟಿಪ್ಪರ್​ ಡಿಕ್ಕಿಯಾಗಿದೆ. ಮೃತ ಬೈಕ್ ಸವಾರನ ತಲೆ ಛಿದ್ರವಾಗಿದೆ. ಅಲ್ಲದೆ ಅಪಘಾತಕ್ಕಿಡಾದ ಬೈಕ್ ಸ್ಥಳದಲ್ಲಿಯೇ ಬೆಂಕಿ ಹತ್ತಿ ಸುಟ್ಟು ಕರಲಾಗಿದೆ. ಸ್ಥಳಕ್ಕೆ ಸಿಪಿಐ ಶರಣಬಸಪ್ಪ ಕೋಡ್ಲಾ, ಪಿಎಸ್ಐ ಬಸವರಾಜ, ಎಎಸ್ಐ ಬಸವರಾಜ ಗೂಳೇದ ಭೇಟಿ ನೀಡಿದ್ದು, ಇಲ್ಲಿನ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕೂಲಿ ಕಾರ್ಮಿಕ ಸಾವು:ಡ್ರೈನೇಜ್ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕನೊಬ್ಬನ ಮೇಲೆ ಟ್ಯಾಂಕರ್ ಲಾರಿ ಮಗುಚಿ ಬಿದ್ದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾಸನದ ಭುವನಹಳ್ಳಿಯಲ್ಲಿ ನಡೆದಿದೆ. ಅಯ್ಯಪ್ಪ (22) ಮೃತ ದುರ್ದೈವಿ. ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕೆಲಸ ಮಾಡುತ್ತಿದ್ದಾಗ ಕಾಮಗಾರಿಯ ಕ್ಯೂರಿಂಗ್ ಮಾಡುವ ಉದ್ದೇಶದಲ್ಲಿ ನೀರು ಸರಬರಾಜು ಮಾಡಲು ವಾಟರ್ ಟ್ಯಾಂಕರ್ ಬಂದಿತ್ತು. ಚಾಲಕನ ನಿಯಂತ್ರಣ ತಪ್ಪಿದ ವಾಟರ್ ಟ್ಯಾಂಕರ್ ಹತ್ತಿರದಲ್ಲೇ ಕೆಲಸ ಮಾಡುತ್ತಿದ್ದ ಅಯ್ಯಪ್ಪನ ಮೇಲೆ ಪಲ್ಟಿಯಾಗಿ ಬಿದ್ದಿದೆ. ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟರೇ ಮತ್ತೊಬ್ಬ ಕೂಲಿ ಕಾರ್ಮಿಕ ದೊರೆಸ್ವಾಮಿ ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿಷಯ ತಿಳಿದ ಸಂಚಾರಿ ಠಾಣೆಯ ಪೊಲೀಸ್​ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ. ಈ ಬಗ್ಗೆ ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಸ್ತೆಯಲ್ಲಿ ಹೊತ್ತಿ ಉರಿದ ಗೂಡ್ಸ್ ವಾಹನ: ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ಆಂಜನೇಯ ದೇವಾಲಯದ ಸಮೀಪ ಟಾಟಾ ಎಸಿ ವಾಹನವೊಂದು ಇದ್ದಕ್ಕಿದ್ದಂತೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ನಡೆದಿದೆ‌. ಟಾಟಾ ಎಸಿ ವಾಹನವು ತಾಲೂಕಿನ ಅಜ್ಜೀಪುರ ಗ್ರಾಮದಿಂದ ಹನೂರು ಪಟ್ಟಣ ತೆರಳುತ್ತಿತ್ತು. ಬೆಂಕಿ ಕಾಣಿಸಿಕೊಂಡ ತಕ್ಷಣ ಚಾಲಕ ರಾಜು ಹಾಗೂ ಮಾಲೀಕ ಸಿದ್ದೇಗೌಡ ವಾಹನದಿಂದ ಇಳಿದು ತಮ್ಮ ಜೀವವನ್ನು ರಕ್ಷಿಸಿಕೊಂಡಿದ್ದಾರೆ. ಇಂಜಿನ್​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಈ ಅವಘಡ ಉಂಟಾಗಿದ್ದು, ಮಾಹಿತಿ ಅರಿತ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ಇದನ್ನೂ ಓದಿ:ಭರಚುಕ್ಕಿಯಲ್ಲಿ ಡೆಡ್ಲಿ ಸೆಲ್ಪಿ ಶೂಟ್.. ಪೋಟೋಗಾಗಿ ಪ್ರಾಣ ಪಣಕ್ಕಿಡುತ್ತಿರುವ ಪ್ರವಾಸಿಗರು!

ABOUT THE AUTHOR

...view details