ಕರ್ನಾಟಕ

karnataka

ಕೆರೂರಲ್ಲಿ ಗುಂಪು ಘರ್ಷಣೆ: ಹಳೇ ದ್ವೇಷ, ಯುವತಿಯರನ್ನು ಚುಡಾಯಿಸಿದ್ದೇ ಗಲಾಟೆಗೆ ಕಾರಣ

By

Published : Jul 7, 2022, 12:20 PM IST

ಕೆರೂರ ಗಲಾಟೆ​-4 ಪ್ರತ್ಯೇಕ ಪ್ರಕರಣಗಳು ದಾಖಲು-ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ್​ ಮಾಹಿತಿ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯ ಪ್ರಕಾಶ್
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯ ಪ್ರಕಾಶ್

ಬಾಗಲಕೋಟೆ: ಬುಧವಾರ ಬಾದಾಮಿ ತಾಲೂಕಿನ ಕೆರೂರ ಪಟ್ಟಣದಲ್ಲಿ ಎರಡು ಗುಂಪಿನ ಯುವಕರ ಮಧ್ಯೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೇ ದ್ವೇಷ ಹಾಗು ಯುವತಿಯರನ್ನ ಚೂಡಾಯಿಸಿದ್ದೇ ಮೂಲ ಕಾರಣ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯ ಪ್ರಕಾಶ್​ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆರೂರ ಗಲಾಟೆಗೆ ಸಂಬಂಧಿಸಿದಂತೆ 4 ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಈ ಕುರಿತು ಎರಡೂ ಗುಂಪಿನ 18 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

ಗಲಾಟೆ ಪ್ರಕರಣದ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ್

ನಿನ್ನೆ ಎರಡು ಕೋಮಿನ ಯುವಕರ ಮಧ್ಯೆ ಗಲಾಟೆಯಾಗಿ ನಾಲ್ವರಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಲಾಟೆಯಲ್ಲಿ ಒಂದು ಗುಂಪಿನ 3 ಜನ, ಮತ್ತೊಂದು ಗುಂಪಿನ ಓರ್ವನಿಗೆ ಗಾಯವಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಾಳೆ ರಾತ್ರಿ 8 ಗಂಟೆವರೆಗೆ ಸೆಕ್ಷನ್​ 144 ಜಾರಿ ಮಾಡಲಾಗಿದೆ. ಜನರು ಅನಾವಶ್ಯಕವಾಗಿ ಕಾನೂನು ಕೈಗೆತ್ತಿಕೊಳ್ಳಬಾರದು ಹಾಗೂ ಪೊಲೀಸ್​ ಇಲಾಖೆಗೆ ಸಹಕರಿಸಬೇಕು ಎಂದು ಎಸ್ ​ಪಿ ಮನವಿ ಮಾಡಿದ್ದಾರೆ.

ಯುವತಿಯರನ್ನ ಚುಡಾಯಿಸುತ್ತಿದ್ದ ವಿಚಾರಕ್ಕೆ ಗಲಾಟೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಯಾರೂ ತಪ್ಪು ಸಂದೇಶ ರವಾನೆ ಮಾಡಬಾರದು. ಇದೊಂದು ಹಳೇ ದ್ವೇಷ ಮತ್ತು ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳವಾಗಿದೆ. ಬೇರೆ ಯಾವುದೇ ಕಾರಣವಿಲ್ಲ ಎಂದು ಸ್ಪಷ್ಟಪಡಿಸಿದರು.

ಘಟನೆಯಿಂದ ಒಂದು ಬೈಕ್ ಮತ್ತು ತಳ್ಳುವ ಗಾಡಿ ಸುಟ್ಟುಹೋಗಿದೆ. 6 ಬೈಕ್​ಗಳು ಜಖಂಗೊಂಡಿವೆ. ಸ್ಥಳದಲ್ಲಿ ಬಿಗಿ ಪೊಲೀಸ್​ ಭದ್ರತೆ ಕೈಗೊಳ್ಳಲಾಗಿದೆ. ಈಗಾಗಲೇ ಇನ್ನಷ್ಟು ಆರೋಪಿಗಳ ಪತ್ತೆಗೆ ತಂಡ ರಚನೆ ಮಾಡಲಾಗಿದ್ದು, ಉಳಿದ ಆರೋಪಿಗಳನ್ನ ಬಂಧಿಸಿ ವಿಚಾರಣೆ ಮಾಡುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ:ಯುವಕರ ಮಧ್ಯೆ ಗಲಾಟೆ: ಇಬ್ಬರಿಗೆ ಚಾಕುವಿನಿಂದ ಇರಿತ

ABOUT THE AUTHOR

...view details