ಕರ್ನಾಟಕ

karnataka

ಬಾಗಲಕೋಟೆಯ 7 ಕ್ಷೇತ್ರದಲ್ಲಿಯೂ ಬಿಜೆಪಿ ಗೆಲುವು ಖಚಿತ: ಅಮಿತ್​ ಶಾ

By

Published : May 8, 2023, 6:47 AM IST

ಹುನಗುಂದ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ ಪರವಾಗಿ ಭಾನುವಾರ ಅಮಿತ್​ ಶಾ ಪ್ರಚಾರ ನಡೆಸಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ

ಬಾಗಲಕೋಟೆ : ಹುನಗುಂದ ಮತಕ್ಷೇತ್ರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡುತ್ತಾ, ಕಾಂಗ್ರೆಸ್ ಪಕ್ಷವನ್ನು ಟೀಕಿಸಿ ರಾಹುಲ್ ಅವರನ್ನು 'ರಾಹುಲ್ ಬಾಬಾ' ಎಂದು ವ್ಯಂಗ್ಯವಾಡಿದರು. ಕ್ಷೇತ್ರದ ಅಭ್ಯರ್ಥಿ ದೊಡ್ಡನಗೌಡ ಪಾಟೀಲ ಪರ ಅವರು ಮತಬೇಟೆ ನಡೆಸಿದರು. ಇಲಕಲ್ಲ ಪಟ್ಟಣದ ವೀರಮಣಿ ಕ್ರೀಡಾಂಗಣದಲ್ಲಿ ಬಿಜೆಪಿ ಪ್ರಚಾರ ಸಭೆ ನಡೆಯಿತು.

2024ರಲ್ಲಿ ಮತ್ತೆ ಮೋದಿ ಅವರು ಪ್ರಧಾನ ಮಂತ್ರಿ ಆಗಬೇಕೇ? ಬೇಡವೇ?. ಹಾಗಾದರೆ, ಎಲ್ಲರೂ ಜೋರಾಗಿ ಜೈಕಾರ ಹಾಕಿ ಎಂದು ಹೇಳುತ್ತಾ ಭಾಷಣ ಆರಂಭಿಸಿದ ಶಾ, ಕೂಡಲ ಸಂಗಮನಾಥ, ಮಲ್ಲಿಕಾರ್ಜುನ, ಬಾದಾಮಿ ಬನಶಂಕರಿ, ಸಿದ್ದೇಶ್ವರ ಸ್ವಾಮೀಜಿ ಹಾಗೂ ಜಗಜ್ಯೋತಿ ಬಸವೇಶ್ವರ ಈ ನೆಲದಲ್ಲಿ ಸಾಕಷ್ಟು ಕ್ರಾಂತಿ ಮಾಡಿದ್ದಾರೆ. ಇಂತಹ ಮಹಾನ್ ವ್ಯಕ್ತಿಗಳಿಗೆ ಪ್ರಮಾಣ ಮಾಡಿ ಭಾಷಣ ಪ್ರಾರಂಭಿಸುತ್ತೇನೆ ಎಂದರು. ಮಾತು ಮುಂದುವರೆಸಿ, ಬಾಗಲಕೋಟೆ ಜಿಲ್ಲೆಯ 7 ಕ್ಷೇತ್ರದಲ್ಲಿಯೂ ಬಿಜೆಪಿ ಗೆಲುವು ಖಚಿತ ಎಂದರು.

ಲಿಂಗಾಯತ ಸಮುದಾಯದ ಬಗ್ಗೆ ಮಾತನಾಡುವ ಕಾಂಗ್ರೆಸ್ ವಿರುದ್ಧ ವಾಗ್ದಾಳಿ‌ ನಡೆಸಿದ ಅವರು, ಲಿಂಗಾಯತ ಮುಖ್ಯಮಂತ್ರಿ ಮಾಡಿ ಅಪಮಾನ ಮಾಡಿದ್ದಾರೆ. ದೇವರಾಜ ಅರಸು, ಎಸ್.ನಿಜಲಿಂಗಪ್ಪ ಅವರನ್ನು ಅಪಮಾನಿಸಿದ್ದಾರೆ. ಆದರೆ ಬಿಜೆಪಿ ಯಡಿಯೂರಪ್ಪ, ಬೊಮ್ಮಯಿಯವರನ್ನು ಮುಖ್ಯಮಂತ್ರಿ ಮಾಡಿ ಗೌರವಯುತವಾಗಿ ನಡೆಸಿಕೊಂಡಿದೆ ಎಂದು ತಿಳಿಸಿದರು.

ಪ್ರಣಾಳಿಕೆಯಲ್ಲಿ ಹೇಳಿರುವಂತೆ ವರ್ಷದಲ್ಲಿ ಮೂರು ಬಾರಿ ಉಚಿತ ಗ್ಯಾಸ್​, ಆಹಾರ ಧಾನ್ಯ, ಹಾಲು ಬಡವರಿಗೆ ನೀಡುತ್ತೇವೆ. ಬಾಗಲಕೋಟೆಯಲ್ಲಿ ಹೊಸ‌ ವಿಮಾನ ನಿಲ್ದಾಣ, ಹೊಸ ವಿಶ್ವವಿದ್ಯಾಲಯ, ಜಿಲ್ಲಾ ಸರ್ಕಾರಿ ಆಸ್ಪತ್ರೆ ಅಭಿವೃದ್ಧಿ ಮಾಡುತ್ತೇವೆ. ಹಂಪಿ, ಬಾದಾಮಿ, ಪಟ್ಟದಕಲ್ಲು, ವಿಜಯಪುರದ ಐತಿಹಾಸಿಕ ಕೇಂದ್ರಗಳ ಅಭಿವೃದ್ಧಿಯನ್ನು ಕೆಂದ್ರ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಜಾಮೀನಿನ ಮೇಲೆ ಹೊರಗಿದ್ದಾರೆ. ಇಂಥವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಇವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ ಎಂದು ಜೆ.ಪಿ.ನಡ್ಡಾ ಕಾಂಗ್ರೆಸ್ ನಾಯಕರ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ನಗರದಲ್ಲಿ ತಾಲೂಕು ಬಿಜೆಪಿ ಘಟಕದ ವತಿಯಿಂದ ಭಾನುವಾರ ಬಿಜೆಪಿ ಅಭ್ಯರ್ಥಿ ಎಂ.ಎಸ್.ಸೋಮಲಿಂಗಪ್ಪ ಪರ ಆಯೋಜಿಸಲಾದ ರೋಡ್ ಶೋನಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸ್ಮೃತಿ ಇರಾನಿ ಮತಯಾಚನೆ:ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲೋಕಿಕೆರೆ ನಾಗರಾಜ್ ಪರ ಅವರ ಕ್ಷೇತ್ರದಲ್ಲಿ ಭಾನುವಾರ ಬೃಹತ್ ರೋಡ್ ಶೋ ಮಾಡಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತಯಾಚಿಸಿದರು. ಡಬಲ್ ಇಂಜಿನ್ ಸರ್ಕಾರದ ಸಾಧನೆಗಳನ್ನು ಮತದಾರರಿಗೆ ಮನದಟ್ಟು ಮಾಡುವ ಮೂಲಕ ಪ್ರಧಾನಿ ಮೋದಿಯವರ ಹೆಸರಿನಲ್ಲಿ ಮತ ಕೇಳಿದರು. ದಾವಣಗೆರೆ ನಗರದ ಅರುಣ ಟಾಕೀಸ್‌ನಿಂದ ಆರಂಭವಾದ ರೋಡ್ ಶೋ ವಿನೋಬಾ ನಗರ ತಲುಪಿತು.

ದಕ್ಷಿಣ ಮತಕ್ಷೇತ್ರದಲ್ಲೂ ಸ್ಮೃತಿ ಇರಾನಿ, ಬಿಜೆಪಿ ಅಭ್ಯರ್ಥಿ ಬಿ.ಜಿ.ಅಜಯ್ ಕುಮಾರ್ ಪರ ಅಬ್ಬರದ ಪ್ರಚಾರ ನಡೆಸಿದರು. ನಗರದ ಶಿವಾಜಿ ವೃತ್ತದಿಂದ ಆರಂಭವಾದ ರೋಡ್ ಶೋ ಕಾಳಿಕಾ ದೇವಿ ರಸ್ತೆ, ಜಾಲಿ ನಗರ, ಬಾರ್ಲೈನ್ ರಸ್ತೆ, ವಸಂತ ಟಾಕೀಸ್, ಹೊಂಡದ ವೃತ್ತಕ್ಕೆ ತಲುಪಿ ಅರುಣ ವೃತ್ತದಲ್ಲಿ ಕೊನೆಗೊಳಿಸಲಾಯಿತು.

ಇದನ್ನೂ ಓದಿ :ಕಾಂಗ್ರೆಸ್ ಕರ್ನಾಟಕವನ್ನು ಭಾರತದಿಂದ ಪ್ರತ್ಯೇಕಿಸಲು ನೋಡುತ್ತಿದೆ: ಪ್ರಧಾನಿ ಮೋದಿ

ABOUT THE AUTHOR

...view details