ಕರ್ನಾಟಕ

karnataka

Wrestlers Protest: ಬ್ರಿಜ್‌ ಭೂಷಣ್‌ ಪ್ರಕರಣದಲ್ಲಿ ಮೂರು ರಾಷ್ಟ್ರಗಳಿಂದ ಸಿಸಿಟಿವಿ ದೃಶ್ಯಾವಳಿ ಕೇಳಿದ ದೆಹಲಿ ಪೊಲೀಸರು

By

Published : Jun 12, 2023, 8:30 PM IST

ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯದ ಕುರಿತು ದೆಹಲಿ ಪೊಲೀಸರು ಖಜಕಿಸ್ತಾನ್, ಮಂಗೋಲಿಯಾ ಮತ್ತು ಇಂಡೋನೇಷ್ಯಾದಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ತರಿಸಿಕೊಳ್ಳಲು ಮುಂದಾಗಿದ್ದಾರೆ.

Delhi Police seek CCTV footage from Kazakhstan, Mongolia, Indonesia in Brij Bhushan case
ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌

ನವದೆಹಲಿ:ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ವಿರುದ್ಧದ ಲೈಂಗಿಕ ದೌರ್ಜನ್ಯದ ಆರೋಪದ ಕುರಿತು ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ಮೂರು ದೇಶಗಳ ಸಹಕಾರ ಕೋರಿದ್ದಾರೆ. ಖಜಕಿಸ್ತಾನ್, ಮಂಗೋಲಿಯಾ ಮತ್ತು ಇಂಡೋನೇಷ್ಯಾದ ಕುಸ್ತಿ ಫೆಡರೇಶನ್‌ಗಳಿಗೆ ದೆಹಲಿ ಪೊಲೀಸರು ನೋಟಿಸ್ ಕಳುಹಿಸಿದ್ದು, ಅಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಚಿತ್ರೀಕರಿಸಿದ ವಿಡಿಯೋಗಳು, ಸಿಸಿಟಿವಿ ದೃಶ್ಯಗಳು ಮತ್ತು ಫೋಟೋಗಳನ್ನು ಕೇಳಿದ್ದಾರೆ.

ಈ ದೇಶಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಮಹಿಳಾ ಕುಸ್ತಿಪಟುಗಳು ಸಂಸದರ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ದೆಹಲಿ ಪೊಲೀಸರು ಜೂನ್ 15ರೊಳಗೆ ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಸಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಸಾಕ್ಷ್ಯಗಳನ್ನು ಸಂಗ್ರಹಿಸುವ ಕಾರಣಕ್ಕಾಗಿ ಈ ಕ್ರಮವನ್ನು ಕೈಗೊಂಡಿದ್ದಾರೆ. 2022ರಲ್ಲಿ ಮಂಗೋಲಿಯಾದಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕುಸ್ತಿಪಟು ಬ್ರಿಜ್‌ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಶೋಷಣೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

2016ರಲ್ಲಿ ಮಂಗೋಲಿಯಾದಲ್ಲಿ ನಡೆದ ಚಾಂಪಿಯನ್‌ಶಿಪ್‌ ವೇಳೆ ದೌರ್ಜನ್ಯದ ಬಗ್ಗೆ ಮತ್ತೋರ್ವ ಮಹಿಳಾ ಕುಸ್ತಿಪಟು ಆಪಾದನೆ ಮಾಡಿದ್ದಾರೆ. ಮೂರನೇ ಕುಸ್ತಿಪಟು 2018ರಲ್ಲಿ ಇಂಡೋನೇಷ್ಯಾದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಬ್ರಿಜ್ ಭೂಷಣ್ ಸಿಂಗ್ ಕಿರುಕುಳ ನೀಡಿದ್ದಾರೆ ಎಂದು ದೂರಿದ್ದಾರೆ. ಮೂರನೇ ಕುಸ್ತಿಪಟು ಖಜಕಿಸ್ತಾನ್​ನಲ್ಲಿ ಕಿರುಕುಳದ ಆರೋಪವನ್ನೂ ಮಾಡಿದ್ದಾರೆ.

ಈ ಪ್ರಕರಣದಲ್ಲಿ ಜೂನ್ 15 ಅಥವಾ ಅದಕ್ಕೂ ಮೊದಲು ನ್ಯಾಯಾಲಯಕ್ಕೆ ಚಾರ್ಜ್​ಶೀಟ್ ಸಲ್ಲಿಸಲು ದೆಹಲಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಆರೋಪ ಮಾಡಿದ ಎಲ್ಲ ಆಟಗಾರ್ತಿಯರ ಹೊರತಾಗಿ ಪ್ರತಿಭಟನಾನಿರತ ಮಹಿಳಾ ಕುಸ್ತಿಪಟುಗಳು, ತರಬೇತುದಾರರು ಮತ್ತು ರೆಫರಿಗಳು ಸೇರಿದಂತೆ 230ಕ್ಕೂ ಹೆಚ್ಚು ಜನರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಇದಲ್ಲದೇ ಆರೋಪಿ ಸಂಸದರ ಸಹೋದ್ಯೋಗಿಗಳು, ಕುಸ್ತಿ ಒಕ್ಕೂಟದ ಪದಾಧಿಕಾರಿಗಳು, ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ನೌಕರರ ಹೇಳಿಕೆಯನ್ನೂ ಪೊಲೀಸರು ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ:ಜೂನ್​ 15ರ ವರೆಗೆ ಪ್ರತಿಭಟನೆ ಸ್ಥಗಿತ, ಹೋರಾಟದಿಂದ ಹಿಂದೆ ಸರಿದಿಲ್ಲ: ಬಜರಂಗ್​ ಪೂನಿಯಾ

ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ:ದೆಹಲಿಯ ಜಂತರ್​ ಮಂತರ್​ನಲ್ಲಿ 39 ದಿನಗಳ ಕಾಲ ಕುಸ್ತಿಪಟುಗಳು ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಮೇ 28ರಂದು ಸಂಸತ್​ ಭವನ ಉದ್ಘಾಟನೆಯಂದು ಪ್ರತಿಭಟನಾ ಮೆರವಣಿಗೆ ಹೊರಟಿದ್ದ ಕುಸ್ತಿಪಟುಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ನಂತರ ಕುಸ್ತಿಪಟು ತಮ್ಮ ಪದಕಗಳನ್ನು ಗಂಗೆಯಲ್ಲಿ ಅರ್ಪಿಸುವುದಾಗಿ ಹೇಳಿದ್ದರು. ಆದರೆ, ರೈತ ಮುಖಂಡ ರಾಕೇಶ್​ ಟಿಕಾಯತ್ ಮನವಿಯ ಮೇರೆಗೆ ಪದಕಗಳನ್ನು ವಿಸರ್ಜಿಸದೆ ಬ್ರಿಜ್‌ ಭೂಷಣ್‌ ಬಂಧನಕ್ಕೆ ಗಡುವು ನೀಡಿದ್ದರು.

ಇದರ ನಂತರ ಕೇಂದ್ರ ಸಚಿವ ಅನುರಾಗ್​ ಠಾಕೂರ್​ ಕುಸ್ತಿಪಟುಗಳೊಂದಿಗೆ ಸುಮಾರು ಆರು ಗಂಟೆಗಳ ಕಾಲ ಸಭೆ ನಡೆಸಿ, ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರು. ಅದರಂತೆ 15ರೊಳಗೆ ಪ್ರಕರಣದ ಚಾರ್ಜ್​ಶೀಟ್ ಸಲ್ಲಿಸುವುದಾಗಿಯೂ ಭರವಸೆ ನೀಡಿದ್ದರು. ಹೀಗಾಗಿ ಪೊಲೀಸರು ಹೆಚ್ಚಿನ ಸಾಕ್ಷ್ಯಗಳನ್ನು ಕಲೆ ಹಾಕುತ್ತಿದ್ದಾರೆ.

ಇದನ್ನೂ ಓದಿ:Wrestlers Protest: ಸಮಸ್ಯೆಗೆ ಸಂಪೂರ್ಣ ಪರಿಹಾರ ಸಿಕ್ಕಲ್ಲಿ ಏಷ್ಯನ್​ ಗೇಮ್ಸ್​ನಲ್ಲಿ ಭಾಗವಹಿಸುತ್ತೇವೆ - ಸಾಕ್ಷಿ ಮಲ್ಲಿಕ್​

ABOUT THE AUTHOR

...view details