ETV Bharat / bharat

ಜೂನ್​ 15ರ ವರೆಗೆ ಪ್ರತಿಭಟನೆ ಸ್ಥಗಿತ, ಹೋರಾಟದಿಂದ ಹಿಂದೆ ಸರಿದಿಲ್ಲ: ಬಜರಂಗ್​ ಪೂನಿಯಾ

author img

By

Published : Jun 7, 2023, 7:44 PM IST

ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಕುಸ್ತಿಪಟುಗಳ ಜೊತೆ 6 ಗಂಟೆಗಳ ಕಾಲ ಸಭೆ ನಡೆಸಿದ್ದಾರೆ. ಇದರಲ್ಲಿ ಕುಸ್ತಿಪಟುಗಳ ಕೆಲವು ಬೇಡಿಕೆಗಳಿಗೆ ಸಚಿವರು ಒಪ್ಪಿಗೆ ಸೂಚಿಸಿದ್ದಾರೆ.

Bajrag Punia
ಬಜರಂಗ್​ ಪೂನಿಯಾ

ನವದೆಹಲಿ: ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರ ನಿವಾಸಕ್ಕೆ ತೆರಳಿ ಇಂದು ಆರು ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದರು. ಈ ವೇಳೆ, ಡಬ್ಲ್ಯುಎಫ್‌ಐ ಮುಖ್ಯಸ್ಥರ ವಿರುದ್ಧದ ಪ್ರಕರಣದ ತನಿಖೆ ಜೂನ್ 15ರೊಳಗೆ ಪೂರ್ಣಗೊಳ್ಳಲಿದೆ ಎಂಬ ಭರವಸೆಯನ್ನು ಸಚಿವರು ನೀಡಿದ್ದಾರೆ ಎಂದು ತಿಳಿದುಬಂದಿದೆ.

ಸಭೆಯ ನಂತರ, ಕುಸ್ತಿಪಟು ಬಜರಂಗ್ ಪುನಿಯಾ ಮಾತನಾಡಿ, ನಾವು ಜೂನ್ 15 ರವರೆಗೆ ಪ್ರತಿಭಟನೆ ಸ್ಥಗಿತಗೊಳಿಸಿದ್ದೇವೆ. ಆದರೆ ಆಂದೋಲನ ಇನ್ನೂ ಮುಗಿದಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದರು. ಮೇ 28 ರಂದು ಕುಸ್ತಿಪಟುಗಳ ವಿರುದ್ಧ ದಾಖಲಾದ ಎಫ್‌ಐಆರ್‌ಗಳನ್ನು ದೆಹಲಿ ಪೊಲೀಸರು ಹಿಂಪಡೆಯುವ ಭರವಸೆ ದೊರೆತಿದೆ ಎಂದು ಕುಸ್ತಿಪಟು ಸಾಕ್ಷಿ ಮಲಿಕ್ ಹೇಳಿದರು.

  • #WATCH | Government has assured us that police investigation will be completed before 15th June. We have requested that all FIRs against wrestlers should be taken back and he has agreed to it. If no action is taken by 15th June, we will continue our protest: Wrestler Bajrang… pic.twitter.com/1hi9Qp0RFY

    — ANI (@ANI) June 7, 2023 " class="align-text-top noRightClick twitterSection" data=" ">

ಬಜರಂಗ್​ ಪೂನಿಯಾ ಮುಂದುವರೆದು ಮಾತನಾಡಿ, ನಮ್ಮೊಂದಿಗೆ ಈ ಚರ್ಚೆಯನ್ನು ಮೊದಲೇ ಮಾಡಬೇಕಿತ್ತು. ದೇಶಕ್ಕಾಗಿ ಪದಕ​ ಗೆದ್ದವರನ್ನು ರಸ್ತೆಯಲ್ಲಿ ಬಂಧಿಸುವಂತೆ ನಡೆಸಿಕೊಳ್ಳಬಾರದಿತ್ತು. ನಾವು ಸಚಿವರ ಜೊತೆ ಚರ್ಚಿಸಿದ ವಿಷಯಗಳನ್ನು ನಮ್ಮನ್ನು ಬೆಂಬಲಿಸಿದ ಇತರ ಸಂಘಟನೆಗಳ ಮುಂದಿಟ್ಟು ಮಾತುಕತೆ ನಡೆಸುತ್ತೇವೆ. ನಮ್ಮೊಂದಿಗೆ ರೈತ ಮತ್ತು ಮಹಿಳಾ ಸಂಘಟನೆಗಳು ಕೈ ಜೋಡಿಸಿವೆ. ಅವರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ ಎಂದರು.

ಮಹತ್ವದ ಸಭೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಚಿವ ಅನುರಾಗ್ ಠಾಕೂರ್, "ನಾನು ಕುಸ್ತಿಪಟುಗಳೊಂದಿಗೆ ವಿಸ್ತೃತ ಚರ್ಚೆ ನಡೆಸಿದೆ. ಜೂನ್ 15ರೊಳಗೆ ತನಿಖೆ ಪೂರ್ಣಗೊಳಿಸಿ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ಕುಸ್ತಿಪಟುಗಳಿಗೆ ಭರವಸೆ ನೀಡಿದ್ದೇನೆ. ಮಹಿಳೆಯೊಬ್ಬರ ನೇತೃತ್ವದಲ್ಲಿಯೇ ಕುಸ್ತಿ ಫೆಡರೇಶನ್‌ನ ಆಂತರಿಕ ದೂರು ಸಮಿತಿ ರಚಿಸಲಾಗುತ್ತದೆ. ಕುಸ್ತಿಪಟುಗಳ ವಿರುದ್ಧದ ಎಲ್ಲ ಎಫ್‌ಐಆರ್‌ಗಳನ್ನೂ ಹಿಂಪಡೆಯುವ ಭರವಸೆ ನೀಡಲಾಗಿದೆ" ಎಂದು ತಿಳಿಸಿದರು. ಜೂನ್ 30ರೊಳಗೆ ಡಬ್ಲ್ಯುಎಫ್‌ಐ ಚುನಾವಣೆ ನಡೆಯಲಿದೆ. 3 ಅವಧಿ ಪೂರೈಸಿರುವ ಬ್ರಿಜ್ ಭೂಷಣ್ ಸಿಂಗ್ ಮತ್ತು ಅವರ ಸಹಚರರನ್ನು ಮರು ಆಯ್ಕೆ ಮಾಡಬಾರದು ಎಂದು ಕುಸ್ತಿಪಟುಗಳು ವಿನಂತಿಸಿದ್ದಾಗಿ ಸಚಿವರು ಮಾಹಿತಿ ನೀಡಿದರು.

ಇದಕ್ಕೂ ಮೊದಲು ಜನವರಿಯಲ್ಲಿ ಕುಸ್ತಿಪಟುಗಳ ಜೊತೆ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸಭೆ ನಡೆಸಿದ್ದು, ಬ್ರಿಜ್​ ಭೂಷಣ್​ ಸಿಂಗ್​ ವಿರುದ್ಧ ಕ್ರಮದ ಭರವಸೆ ನೀಡಿದ್ದರು. ಇದರಿಂದ ಕುಸ್ತಿಪಟುಗಳು ತಾತ್ಕಾಲಿಕವಾಗಿ ಪ್ರತಿಭಟನೆ ಕೈಬಿಟ್ಟಿದ್ದರು. ಬಳಿಕ ಲೈಂಗಿಕ ದೌರ್ಜನ್ಯ ಆರೋಪಗಳ ತನಿಖೆಗಾಗಿ ಭಾರತ ಒಲಿಂ‍‍‍ಪಿಕ್‌ ಸಂಸ್ಥೆಯು (ಐಒಎ) ಮಹಿಳಾ ಬಾಕ್ಸರ್‌ ಎಂ.ಸಿ. ಮೇರಿಕೋಮ್, ಕುಸ್ತಿಪಟು ಯೋಗೇಶ್ವರ್‌ ದತ್‌, ಆರ್ಚರಿ ಸ್ಪರ್ಧಿ ಡೋಲಾ ಬ್ಯಾನರ್ಜಿ ಮತ್ತು ಭಾರತ ವೇಟ್‌ಲಿಫ್ಟಿಂಗ್‌ ಫೆಡರೇಷನ್‌ ಅಧ್ಯಕ್ಷ ಸಹದೇವ್‌ ಯಾದವ್‌ ಅವರಿದ್ದ ಸಮಿತಿ ರಚಿಸಿತ್ತು.

ದೆಹಲಿ ಪೊಲೀಸರು ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ 10 ದೂರು​ ಮತ್ತು ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಈ ಪೈಕಿ ಒಂದು ಪ್ರಕರಣ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ದಾಖಲಾಗಿದೆ ಎಂಬುದು ಗಮನಾರ್ಹ.

ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ: ಪ್ರತಿಭಟನಾನಿರತ ಕುಸ್ತಿಪಟುಗಳ ಜೊತೆ ಕೇಂದ್ರ ಸರ್ಕಾರ ಚರ್ಚೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.