ಕರ್ನಾಟಕ

karnataka

ವಯಾಕಾಮ್​ 18 ಸಂಸ್ಥೆಗೆ ಮಹಿಳಾ ಐಪಿಎಲ್​ ಪ್ರಸಾರದ ಹಕ್ಕು.. ₹951 ಕೋಟಿ ರೂಪಾಯಿಗೆ ಬಿಡ್​

By

Published : Jan 16, 2023, 4:56 PM IST

viacom18 wins womens ipl media rights

ಮಹಿಳಾ ಐಪಿಎಲ್​ ಪ್ರಸಾರದ ಹಕ್ಕು- ವಯೋಕಾಮ್​ 18 ಸಂಸ್ಥೆಯ ಪಾಲು- ಮಾರ್ಚ್​ನಲ್ಲಿ ಮಹಿಳಾ ಐಪಿಎಲ್ ಸಾಧ್ಯತೆ- 951 ಕೋಟಿ ರೂಪಾಯಿಗೆ ಬಿಡ್​ ಮಾಡಿದ ಸಂಸ್ಥೆ

ಮುಂಬೈ:ಪುರುಷರ ಕ್ರಿಕೆಟ್​ನ ಇಂಡಿಯನ್​ ಪ್ರೀಮಿಯರ್​ ಲೀಗ್​ ಡಿಜಿಟಲ್​ ಪ್ರಸಾರ ಹಕ್ಕು ಪಡೆದಿದ್ದ ವಯಾಕಾಮ್​ 18 ಸಂಸ್ಥೆ, ಇದೀಗ ಮಹಿಳಾ ಐಪಿಎಲ್​ನ ಮಾಧ್ಯಮ ಹಕ್ಕುಗಳನ್ನು ಪಡೆದುಕೊಂಡಿದೆ. ಬರೋಬ್ಬರಿ 951 ಕೋಟಿ ರೂಪಾಯಿ ಬಿಡ್​ ಮಾಡಿರುವ ಸಂಸ್ಥೆ ಮೊದಲ 5 ವರ್ಷ ಗುತ್ತಿಗೆ ಪ್ರಸಾರದ ಹಕ್ಕು ತನ್ನದಾಗಿಸಿಕೊಂಡಿದೆ. ಈ ಮೂಲಕ ಬಿಸಿಸಿಐ ಪ್ರತಿ ಪಂದ್ಯಕ್ಕೆ 7.10 ಕೋಟಿ ರೂಪಾಯಿ ಗಳಿಸಲಿದೆ.

ಈ ಬಗ್ಗೆ ಟ್ವೀಟ್​ ಮಾಡಿ ಮಾಹಿತಿ ನೀಡಿರುವ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ಜಯ್​ ಶಾ, 2023 ರಿಂದ 2027 ರವರೆಗೆ ಮಹಿಳಾ ಐಪಿಎಲ್​ನ ಮಾಧ್ಯಮಗಳ ಹಕ್ಕುಗಳು viacom 18 ಸಂಸ್ಥೆಯ ಪಾಲಾಗಿದೆ. ಇದು ಮಹಿಳಾ ಕ್ರಿಕೆಟ್​ನ ಅಭ್ಯುದಯಕ್ಕೆ ನೆರವಾಗಲಿದೆ. ಇದಲ್ಲದೇ ಮಹಿಳಾ ಕ್ರಿಕೆಟ್​ಗೆ ಈ ದಿನ ಮಹತ್ವದ್ದು. ಪ್ರಸಾರ ಹಕ್ಕು ಪಡೆದಿದ್ದಕ್ಕೆ ವಯಾಕಾಮ್​ ಸಂಸ್ಥೆಗೆ ಅಭಿನಂದನೆಗಳು. 951 ಕೋಟಿ ರೂಪಾಯಿ ಒಪ್ಪಂದ ಮಾಡಿಕೊಂಡಿದೆ ಎಂದು ತಿಳಿಸಿದ್ದಾರೆ.

ಈ ವರ್ಷದ ಮಾರ್ಚ್​ನಲ್ಲಿ ಮಹಿಳಾ ಐಪಿಎಲ್ ನಡೆಯುವ ಸಾಧ್ಯತೆಗಳಿವೆ. 2023 ರಿಂದ 2027 ರವರೆಗೆ IPL ನ ಮಾಧ್ಯಮ ಹಕ್ಕುಗಳು viacom18 ಪಡೆದುಕೊಂಡಿದ್ದು, ಭಾರತದಲ್ಲಿ ಮಹಿಳಾ ಕ್ರಿಕೆಟ್​ನ ಸಬಲೀಕರಣ ಮತ್ತು ಔನ್ನತ್ಯಕ್ಕೆ ನೆರವಾಗಲಿದೆ. ಇದೊಂದು ದೊಡ್ಡ ಮತ್ತು ನಿರ್ಣಾಯಕ ನಡೆಯಾಗಿದೆ. ಮಹಿಳಾ ಐಪಿಎಲ್​ ಮಾಧ್ಯಮ ಹಕ್ಕುಗಳಿಗಾಗಿ ನಡೆದ ಬಿಡ್​ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದೆ. ಇದು ಕ್ರಿಕೆಟ್​ನಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿಸಲಿದೆ ಎಂದು ನಿರೀಕ್ಷಿಸಲಾಗಿದೆ.

ಶೀಘ್ರವೇ ಆಟಗಾರ್ತಿಯರ ಹರಾಜು:ಶೀಘ್ರದಲ್ಲೇ ಮಹಿಳಾ ಐಪಿಎಲ್ 2023 ಸೀಸನ್‌ಗಾಗಿ ಆಟಗಾರ್ತಿಯರ ಹರಾಜು ಪ್ರಕ್ರಿಯೆ ನಡೆಸಲಾಗುವುದು. ಮಹಿಳಾ ಐಪಿಎಲ್ ಋತುವಿನ ವೇಳಾಪಟ್ಟಿ ಕೂಡ ಇನ್ನೂ ಬಿಡುಗಡೆಯಾಗಿಲ್ಲ. ಮಹಿಳಾ ಲೀಗ್ ಈ ವರ್ಷದ ಮಾರ್ಚ್ 3 ರಿಂದ 26 ರವರೆಗೆ ನಡೆಯುವ ಸಾಧ್ಯತೆಯಿದೆ. ಈ ಋತುವಿನಲ್ಲಿ ಒಟ್ಟು 22 ಪಂದ್ಯಗಳು ನಡೆಸಲು ಯೋಜಿಸಲಾಗಿದೆ. ಇದೇ ಜನವರಿ 25 ರಂದು ಮಹಿಳಾ ಇಂಡಿಯನ್​ ಪ್ರೀಮಿಯರ್​ ಲೀಗ್​ನ 5 ಫ್ರಾಂಚೈಸಿಗಳನ್ನು ಅನಾವರಣಗೊಳಿಸಲಿದೆ.

ಈ ಹಿಂದೆ ಮಹಿಳಾ ಟಿ20 ಚಾಲೆಂಜ್ ಪಂದ್ಯಾವಳಿಯನ್ನು ಆಡಿಸಲಾಗಿತ್ತು. ಇದರಲ್ಲಿ ಒಟ್ಟು 3 ತಂಡಗಳು ಭಾಗವಹಿಸಿದ್ದವು. ಕೇವಲ 5 ಪಂದ್ಯಗಳಿಗೆ ಸೀಮಿತವಾಗಿದ್ದ ಟೂರ್ನಿ ಇದಾಗಿತ್ತು. ಮಹಿಳಾ ಐಪಿಎಲ್ ಕುರಿತು ಬಿಸಿಸಿಐ ನೀಡಿದ ಮಾಹಿತಿ ಪ್ರಕಾರ, ಡಬ್ಲ್ಯುಐಪಿಎಲ್- 2023 ದೇಶೀಯ ಮತ್ತು ಅಂತಾರಾಷ್ಟ್ರೀಯ ಆಟಗಾರ್ತಿಯರು ಭಾಗವಹಿಸಲಿದ್ದಾರೆ. ಫ್ರಾಂಚೈಸಿಗಳ ಎದುರಾಳಿ ತಂಡದ ಮೈದಾನದಲ್ಲಿ ಪಂದ್ಯಗಳನ್ನು ಆಯೋಜಿಸುವುದು ಸವಾಲಿನದ್ದಾಗಿದೆ. ಆದ್ದರಿಂದ ಮೊದಲ 10 ಪಂದ್ಯಗಳನ್ನು ಒಂದು ಮೈದಾನದಲ್ಲಿ ಹಾಗೂ ಉಳಿದ 10 ಪಂದ್ಯಗಳನ್ನು ಇನ್ನೊಂದು ಮೈದಾನದಲ್ಲಿ ನಡೆಸಲು ಯೋಜಿಸಲಾಗಿದೆ.

ಜನವರಿ 16 ರಂದು ಮಹಿಳಾ ಐಪಿಎಲ್​ನ ಮಾಧ್ಯಮ ಹಕ್ಕುಗಳಿಗಾಗಿ ಅರ್ಜಿ ಆಹ್ವಾನಿಸಲಾಗಿತ್ತು. ವಯಾಕಾಮ್ 18 ರ ಹೊರತಾಗಿ, ಸೋನಿ ಮತ್ತು ಡಿಸ್ನಿ ಕೂಡ ಮಾಧ್ಯಮ ಹಕ್ಕುಗಳನ್ನು ಖರೀದಿಸುವ ರೇಸ್‌ನಲ್ಲಿದ್ದವು.

ಪುರುಷರ ಐಪಿಎಲ್​ ಪ್ರಸಾರ ಹಕ್ಕು:ಪುರುಷರ ಇಂಡಿಯನ್​ ಪ್ರೀಮಿಯರ್​ ಲೀಗ್​(ಐಪಿಎಲ್​) ಕ್ರಿಕೆಟ್​​ ಟೂರ್ನಿಯ 2023 ರಿಂದ 2027 ರವರೆಗಿನ ಟಿವಿ ಪ್ರಸಾರದ ಹಕ್ಕನ್ನು ವಾಲ್ಟ್​ ಡಿಸ್ನಿ(ಸ್ಟಾರ್​) ಪಡೆದುಕೊಂಡರೆ, ಡಿಜಿಟಲ್​ ಪ್ರಸಾರದ ಹಕ್ಕನ್ನು ವಯಾಕಾಮ್​ 18 ಸಂಸ್ಥೆ ತನ್ನದಾಗಿಸಿಕೊಂಡಿತ್ತು. ಜೂನ್​ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ವಯಾಕಾಮ್​ 18, ಸೋನಿ, ಝೀ, ಡಿಸ್ನಿ ಸ್ಟಾರ್​ ಸಂಸ್ಥೆಗಳು ಭಾಗವಹಿಸಿದ್ದವು.

ಲೀಗ್​ನ ಟಿವಿ ಪ್ರಸಾರದ ಹಕ್ಕು 23575 ಕೋಟಿ, ಡಿಜಿಟಲ್​ ಹಕ್ಕು 20,500 ಕೋಟಿಗೆ ಹರಾಜಾಗಿದೆ. ಅಂದರೆ ಪ್ರತಿ ಪಂದ್ಯ ಕ್ರಮವಾಗಿ 57.5 ಮತ್ತು 50 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಇದರ ಒಟ್ಟು ಮೌಲ್ಯ 44,075 ಕೋಟಿ ರೂಪಾಯಿ ಆಗಿದೆ.

ಓದಿ:ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾಗೆ 'ವಿರಾಟ್‌' ಗೆಲುವು... ದಾಖಲೆಗಳ ಸುರಿಮಳೆ...

ABOUT THE AUTHOR

...view details