ಕರ್ನಾಟಕ

karnataka

'ಈ ಸಲವೂ ಕಪ್​ ನಮ್ಗಿಲ್ಲ': ಒಮ್ಮೆಯೂ ಪ್ರಶಸ್ತಿ ಗೆಲ್ಲದ ಆರ್​ಸಿಬಿ, ಅಭಿಮಾನಿಗಳಿಗೆ ಬರೀ ನಿರಾಶೆ

By

Published : May 22, 2023, 4:37 PM IST

16ನೇ ಆವೃತ್ತಿಯ ಐಪಿಎಲ್​ನಲ್ಲೂ ಆರ್​ಸಿಬಿ ಗ್ರೂಪ್ ಹಂತದಿಂದ ಹೊರಬೀಳುವ ಮೂಲಕ ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಶೆ ಮೂಡಿಸಿತು.

ಅಭಿಮಾನಿಗಳಿಗೆ ಬರೀ ನಿರಾಶೆ
ಅಭಿಮಾನಿಗಳಿಗೆ ಬರೀ ನಿರಾಶೆ

ಇಂಡಿಯನ್​ ಪ್ರೀಮಿಯರ್​ ಲೀಗ್​(ಐಪಿಎಲ್)​ ಕಪ್​ಗೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರಿಗೂ(ಆರ್​ಸಿಬಿ) ಅದೇಕೋ ಎಣ್ಣೆ- ಸೀಗೆಕಾಯಿ ಸಂಬಂಧ. ಅಂತಿಮ ಹಂತದವರೆಗೆ ಬಂದು ತಂಡ ಸೋಲು ಅನುಭವಿಸಿ ಕಪ್​ನಿಂದ ವಂಚಿತವಾಗುತ್ತದೆ. ತಂಡಕ್ಕಿರುವ 'ಚೋಕರ್ಸ್​ ಪಟ್ಟ' 16ನೇ ಆವೃತ್ತಿಯಲ್ಲೂ ಮುಂದುವರಿದಿದ್ದು, ಪ್ಲೇಫ್​ಗೇರದೇ ಲೀಗ್​ ಹಂತದಲ್ಲೇ ತಂಡ ಟೂರ್ನಿಯಿಂದ ಹೊರಬಿದ್ದಿದೆ.

ಈ ಬಾರಿಯಾದರೂ ​ತಂಡ ಕಪ್​ ಗೆಲ್ಲಲಿದೆ ಎಂಬ ಆರ್​ಸಿಬಿ ಅಭಿಮಾನಿಗಳ ಆಸೆ, ಮತ್ತೆ ನಿರಾಶೆಯಾಗಿಯೇ ಮುಂದುವರಿದಿದೆ. ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ರನ್​ಮಶಿನ್​ ವಿರಾಟ್​ ಕೊಹ್ಲಿ ಶತಕ ಬಾರಿಸಿದರೂ, ಫಲ ನೀಡಲಿಲ್ಲ. ಪಂದ್ಯದ ಬಳಿಕ ಕೊಹ್ಲಿ ಮುಖ ಹತಾಶೆ ಭಾವದಿಂದ ಕೂಡಿತ್ತು. ಸೋಲಿನ ನೋವು ಅವರಲ್ಲಿ ಕಾಣುತ್ತಿತ್ತು.

ಒಮ್ಮೆಯೂ ಕಪ್​ ಗೆಲ್ಲದ ಆರ್​ಸಿಬಿ:16 ಐಪಿಎಲ್​ ಸೀಸನ್​ಗಳಲ್ಲಿ ಆರ್​ಸಿಬಿ ಒಮ್ಮೆಯೂ ಕಪ್​ ಗೆದ್ದಿಲ್ಲ. ವಿಶ್ವದಲ್ಲಿಯೇ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಏಕೈಕ ಕ್ರಿಕೆಟ್​ ಕ್ಲಬ್​ ಇದಾಗಿದೆ. ಪ್ರತಿ ಆವೃತ್ತಿಯಲ್ಲಿ ಅಭಿಮಾನಿಗಳೂ 'ಈ ಸಲ ಕಪ್​ ನಮ್ದೇ' ಎಂಬ ಘೋಷವಾಕ್ಯ ಕೂಗಿದರೂ, ಕಪ್​ ಗೆಲುವು ಮಾತ್ರ ಮರೀಚಿಕೆಯಾಗಿದೆ. ಆರ್​ಸಿಬಿ ಇದುವರೆಗೂ ಮೂರು ಬಾರಿ(2009, 2011, 2016) ಫೈನಲ್​ ತಲುಪಿ, ಸೋಲು ಅನುಭವಿಸಿ ರನ್ನರ್​ ಅಪ್​ ಸ್ಥಾನ ಪಡೆದುಕೊಂಡಿದೆ. ತಂಡದ ಗರಿಷ್ಠ ಸಾಧನೆಯೂ ಇದೆ.

ಪ್ಲೇಆಫ್​ ಕನಸು ಭಗ್ನ:ಪ್ಲೇಆಫ್​ ಹಂತಕ್ಕೇರಲು ನಿನ್ನೆ ನಡೆದ ಮಹತ್ವದ ಪಂದ್ಯದಲ್ಲಿ ವಿರಾಟ್ ವಿರಾವೇಶದ ಹೊರತಾಗಿಯೂ ತಂಡ ಹೀನಾಯ ಸೋಲು ಕಂಡಿತು. ಗುಜರಾತ್ ತಂಡದ ಶುಭಮನ್​ ಗಿಲ್​ ಮನಮೋಹಕ್ಕೆ ಶತಕದಾಟದ ಮುಂದೆ ಆರ್​ಸಿಬಿ ಉಡೀಸ್ ಆಯಿತು. ಮೊದಲು ಬ್ಯಾಟ್​ ಮಾಡಿದ ಆರ್​ಸಿಬಿ ನಿಗದಿತ ಓವರ್​ಗಳಲ್ಲಿ ವಿರಾಟ್​ ಕೊಹ್ಲಿ ಶತಕದ ಬಲದಿಂದ 197 ರನ್​ ಗಳಿಸಿತು. ಚಿಕ್ಕ ಗ್ರೌಂಡ್​ನಲ್ಲಿ ಮೆರೆದಾಡಿದ ಗಿಲ್​ ಈ ಸೀಸನ್​ನಲ್ಲಿ 2ನೇ ಶತಕ ಸಿಡಿಸಿ ಗೆಲುವು ತಂದುಕೊಟ್ಟರು. ಇದರಿಂದ ಆರ್​ಸಿಬಿ ಪ್ಲೇಆಫ್​ ರೇಸ್​ನಿಂದ ಹೊರಬಿತ್ತು. ಪಾಯಿಂಟ್​ ಪಟ್ಟಿಯಲ್ಲಿ 6 ನೇ ಸ್ಥಾನಕ್ಕಿಳಿದು ಅಭಿಯಾನ ಮುಗಿಸಿತು.

ಕೊಹ್ಲಿ, ಗಿಲ್​ ಸತತ 2ನೇ ಶತಕ:16 ನೇ ಆವೃತ್ತಿಯ ಐಪಿಎಲ್​ನ ಹಲವು ದಾಖಲೆಗಳಿಗೆ ಪಾತ್ರವಾಗುತ್ತಿದೆ. ಫೈನಲ್​ ಸೇರಿದಂತೆ 4 ಪಂದ್ಯಗಳು ಬಾಕಿ ಇರುವಾಗಲೇ 11 ಶತಕಗಳು ದಾಖಲಾಗಿವೆ. ಇದರಲ್ಲಿ ವಿರಾಟ್ ಕೊಹ್ಲಿ ಮತ್ತು ಶುಭಮನ್​ ಗಿಲ್​ ರಲಾ 2 ಶತಕ ಬಾರಿಸಿದ್ದಾರೆ. ಇಬ್ಬರೂ ಆಡಿದ ಕೊನೆಯ ಎರಡೂ ಪಂದ್ಯಗಳಲ್ಲಿ ಸೆಂಚುರಿ ಸಾಧನೆ ಮಾಡಿದ್ದಾರೆ.

ವಿರಾಟ್​ ಶತಕದ ದಾಖಲೆ:ಇನ್ನೂ ವಿರಾಟ್​ ಕೊಹ್ಲಿ ಐಪಿಎಲ್​ ಇತಿಹಾದಲ್ಲಿಯೇ ಅತ್ಯಧಿಕ ಶತಕ ಬಾರಿಸಿದ ಆಟಗಾರ ಹೆಗ್ಗಳಿಕೆಗೆ ಪಾತ್ರರಾದರು. ಗುಜರಾತ್​ ವಿರುದ್ಧ 100 ರನ್​ ಬಾರಿಸುವ ಮೂಲಕ 7ನೇ ಸೆಂಚುರಿ ದಾಖಲಿಸಿ, ಟಿ20 ಮಾಸ್ಟರ್​ ಕ್ರಿಸ್​ಗೇಲ್​ ಹೆಸರಲ್ಲಿದ್ದ 6 ಶತಕಗಳ ದಾಖಲೆಯನ್ನು ಮುರಿದರು.

ಓದಿ:IPL​ ಇತಿಹಾಸದಲ್ಲೇ ಅತಿ ಹೆಚ್ಚು ಶತಕ ಸಿಡಿಸಿ ದಾಖಲೆ ಬರೆದ ರನ್ ಮಶಿನ್ ವಿರಾಟ್ ಕೊಹ್ಲಿ!

ABOUT THE AUTHOR

...view details