ಕರ್ನಾಟಕ

karnataka

ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಗಲಭೆ ಆರೋಪಿಯ ಜಾಮೀನು ಅರ್ಜಿ ತಿರಸ್ಕರಿಸಿದ ಹೈಕೋರ್ಟ್​

By

Published : Jun 13, 2023, 7:31 AM IST

Updated : Jun 13, 2023, 8:23 AM IST

2020 ರಲ್ಲಿ ನಡೆದ ಬೆಂಗಳೂರು ನಗರದ ಕೆ.ಜಿ. ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆ ಆರೋಪಿಯ ಜಾಮೀನು ಅರ್ಜಿಯನ್ನು ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ ಅಡಿ ದಾಖಲಾಗಿರುವ ಅಪರಾಧವಾಗಿರುವುದರಿಂದ ಹೈಕೋರ್ಟ್​ ತಿರಸ್ಕರಿಸಿದೆ.

High Court
ಹೈಕೋರ್ಟ್​

ಬೆಂಗಳೂರು:ದೇಶದ್ರೋಹದಂತಹ ಗಂಭೀರ ಸ್ವರೂಪದ ಹಾಗೂ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣಾ ಕಾಯಿದೆ (ಯುಎಪಿಎ) ಅಡಿ ದಾಖಲಾಗಿರುವ ಅಪರಾಧ ಪ್ರಕರಣಗಳಲ್ಲಿ ಬೇಲ್ ಇಸ್ ರೂಲ್ (ಬೇಲ್ ಒಂದು ನಿಯಮ) ಮಂತ್ರ ಪಠಿಸಲಾಗದು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, 2020 ರಲ್ಲಿ ಬೆಂಗಳೂರಿನಲ್ಲಿ ನಡೆದ ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಗಲಭೆಯ ಆರೋಪಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ವಿಶೇಷ ನ್ಯಾಯಾಲಯ ತಮ್ಮ ಜಾಮೀನು ಅರ್ಜಿ ತಿರಸ್ಕರಿಸಿದ್ದ ಕ್ರಮ ಪ್ರಶ್ನಿಸಿ ಗಲಭೆ ಪ್ರಕರಣದ ಆರೋಪಿ ಇಮ್ರಾನ್ ಆಹಮದ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ ಅವರಿದ್ದ ವಿಭಾಗೀಯಪೀಠ ಈ ಆದೇಶ ಮಾಡಿದೆ.

ಮೊದಲಿಗೆ ಆರೋಪಿ ಎದುರಿಸುತ್ತಿರುವಂತಹ ಗಂಭೀರ ಅಪರಾಧಗಳ ವಿಚಾರ ಬಂದಾಗ ಬೇಲ್ ರೂಲ್ ಮಂತ್ರ ಮೈಲು ದೂರು ನಿಲುತ್ತದೆ. ಎರಡನೇಯದಾಗಿ ಈ ಪ್ರಕರಣದಲ್ಲಿ ದೇಶ ದ್ರೋಹದಂತಹ ಗಂಭೀರ ಸ್ವರೂಪದ ಅಪರಾಧಗಳನ್ನು ಹತ್ತಿಕ್ಕಲು ಸಂಸತ್ ಶಾಸನ ರೂಪಿಸಿರುವುದು ಪರಿಗಣಿಸಬೇಕಾಗುತ್ತದೆ. ಮೂರನೇಯದಾಗಿ ಈ ಪ್ರಕರಣದ ಆರೋಪವನ್ನು ಸಾಬೀತುಪಡಿಸುವ ಹೊಣೆ ಪ್ರಾಸಿಕ್ಯೂಷನ್ ಮೇಲಿರಲಿದೆ. ಅಲ್ಲದೇ, ಸಂವಿಧಾನದ ಪ್ರಕಾರ ವೈಯಕ್ತಿಕ ಸ್ವಾತಂತ್ರ್ಯ ಇದ್ದರೂ ಸಮಾಜದ ಒಟ್ಟಾರೆ ಹಿತದೃಷ್ಟಿ ಮತ್ತು ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ಜಾಮೀನು ನೀಡಲಾಗದು ಎಂದು ನ್ಯಾಯಪೀಠ ತಿಳಿಸಿದೆ.

ನಿತ್ಯ ವಿಚಾರಣೆ ನಡೆಸಲು ನಿರ್ದೇಶನ:ಪ್ರಕರಣದಲ್ಲಿ ಹಲವು ಆರೋಪಿಗಳ ಜಾಮೀನು ಅರ್ಜಿಗಳನ್ನು ಇತರ ನ್ಯಾಯಪೀಠಗಳು ವಜಾಗೊಳಿಸಿರುವ ಅಂಶವನ್ನು ಉಲ್ಲೇಖಿಸಿರುವ ನ್ಯಾಯಪೀಠ, ಪ್ರಸ್ತುತ ಪ್ರಕರಣದಲ್ಲಿ ಆರೋಪಿಗಳಿಗೆ ತ್ವರಿತ ನ್ಯಾಯ ಕೇಳುವ ಎಲ್ಲಾ ಸಾಂವಿಧಾನಿಕ ಹಕ್ಕು ಇದೆ. ಇದು ತ್ವರಿತ ವಿಚಾರಣೆಗೆ ಹೇಳಿ ಮಾಡಿಸಿದ ಪ್ರಕರಣ. ಸಾಧ್ಯವಾದರೆ ಪ್ರತಿದಿನ ವಿಚಾರಣೆ ನಡೆಸಬೇಕು ಎಂದು ಪೀಠ ಹೇಳಿದೆ.

ಸುಪ್ರೀಂಕೋರ್ಟ್‌ನ ಹಲವು ತೀರ್ಪುಗಳನ್ನು ಉಲ್ಲೇಖಿಸಿರುವ ನ್ಯಾಯಾಪೀಠ, ಸಾಂವಿಧಾನಿಕ ಖಾತ್ರಿ ಹಕ್ಕುಗಳಲ್ಲಿ ಮಾವನ ಹಕ್ಕೂ ಸಹ ಸೇರಿದೆ. ಅರ್ಜಿದಾರರನ್ನು ಜಾಮೀನಿನ ಮೇಲೆ ಹೊರಗೆ ಬಿಟ್ಟರೆ ಅದರಿಂದ ಸಮಾಜದ ಮೇಲಾಗುವ ಪರಿಣಾಮಗಳ ಬಗ್ಗೆೆ ನಮಗೂ ಅರಿವಿದೆ. ಆತನನ್ನು ಬಿಡುಗಡೆ ಮಾಡುವುದರಿಂದ ನ್ಯಾಯಾಂಗ ಬಂಧನದಲ್ಲಿ ಮುಂದುವರಿಸಿ ನ್ಯಾಯ ಕೊಡಿಸುವುದು ಸೂಕ್ತ ಎಂದು ಪೀಠ ತಿಳಿಸಿದೆ.

ವಿಚಾರಣೆ ವೇಳೆ ಎನ್ಐಎ ಪರವಾದ ಮಂಡಿಸಿದ ವಕೀಲರು, ಇದೊಂದು ಅತ್ಯಂತ ಗಂಭೀರ ಪ್ರಕರಣ ಇದರಲ್ಲಿ ಯುಎಪಿಎ ಅಡಿ ಪ್ರಕರಣ ದಾಖಲಿಸಿ ತನಿಖೆಯನ್ನು ಪೂರ್ಣಗೊಳಿಸಿ ಈಗಾಗಲೇ ಆರೋಪ ಪಟ್ಟಿ ಸಲ್ಲಿಸಿದೆ. ಪ್ರಕರಣದ ಇತರ ಆರೋಪಿಗಳಿಗೂ ಈಗಾಗಲೇ ಜಾಮೀನು ತಿರಿಸ್ಕರಿಸಲಾಗಿದೆ. ಹಾಗಾಗಿ ಈ ಪ್ರಕರಣದಲ್ಲೂ ಸಹ ತಿರಸ್ಕರಿಸಬೇಕು ಎಂದು ಕೋರಿದ್ದರು.

ಪ್ರಕರಣದ ಹಿನ್ನೆಲೆ ನೋಡುವುದಾದರೆ:2020ರಲ್ಲಿ ನಗರದ ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಗಲಭೆ ನಡೆದಿತ್ತು. ದುಷ್ಕರ್ಮಿಗಳು ಪೊಲೀಸ್ ಠಾಣೆಗೆ ನುಗ್ಗಿ ಬೆಂಕಿ ಹಚ್ಚಿದ್ದರು. ಅಲ್ಲದೆ, ವ್ಯಾಪಕ ಪ್ರಮಾಣದ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟ ಮಾಡಿದ್ದರು. ಮೊದಲು ಪೊಲೀಸರು ನಡೆಸುತ್ತಿದ್ದ ತನಿಖೆಯನ್ನು ನಂತರ 2022ರ ಸೆ.20ರಂದು ಎನ್ಐಎಗೆ ವಹಿಸಲಾಗಿತ್ತು. ಆ ಪ್ರಕರಣದಲ್ಲಿ ಅರ್ಜಿದಾರನು 22ನೇ ಆರೋಪಿಯಾಗಿದ್ದು, ಆತನ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ.

ಇದನ್ನೂ ಓದಿ:ಕಾರಾಗೃಹದಲ್ಲಿ ವಿಶೇಷ ಆತಿಥ್ಯ ಆರೋಪ: ಪ್ರಕರಣ ರದ್ದು ಕೋರಿ ಶಶಿಕಲಾ ಹೈಕೋರ್ಟ್‌ಗೆ ಅರ್ಜಿ

Last Updated :Jun 13, 2023, 8:23 AM IST

ABOUT THE AUTHOR

...view details